ಕಾಂಗ್ರೆಸ್ ಅನಾಹುತ ಸರಿಪಡಿಸುತ್ತಿರುವ ಮೋದಿ: ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ರಾಹಟ್ಕರ್
ಬೆಂಗಳೂರು, ಸೆ.26: ದೇಶದಲ್ಲಿ ಕಾಂಗ್ರೆಸ್ ಪಕ್ಷವು ಈವರೆಗೆ ಮಾಡಿದ ಅನಾಹುತವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರಿಪಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಿಜಯಾ ರಾಹಟ್ಕರ್ ತಿಳಿಸಿದರು.
ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಹಿಳಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತ್ರಿವಳಿ ತಲಾಕ್ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಇದು ವ್ಯಕ್ತವಾಗಿದೆ ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ ಇನ್ನೂ ಮೂರು ವರ್ಷಗಳ ಕಾಲ ಸ್ಥಿರವಾಗಿರುವಂತೆ ಮಾಡಬೇಕಿದೆ. ಸ್ವಚ್ಛ ಭಾರತದ ನಿರ್ಮಾಣದ ಭಾಗವಾಗಿ ನಾವು ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮನೆಯಲ್ಲಿ ಗೆದ್ದರೆ ನಾವಿರುವ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ, ನಾವೆಲ್ಲರೂ ಸಮಾಜದ ಸಾಮಾನ್ಯ ಮಹಿಳೆಯರನ್ನು ಪ್ರಮುಖ ವಾಹಿನಿಗೆ ತರುವ ಗಟ್ಟಿ ಕಾಳುಗಳು ಎಂದರು.
ತಮ್ಮ ಇಲಾಖೆಯನ್ನು ಉಪೇಕ್ಷಿಸುವ ವಾತಾವರಣವಿದ್ದರೂ ಒಳ್ಳೆಯ ಕೆಲಸ ಮಾಡುವ ಮೂಲಕ ತಮ್ಮದು ಉತ್ತಮ ಇಲಾಖೆ ಎಂದು ತೋರಿಸಿಕೊಡುತ್ತೇನೆ. ಅಂಗನವಾಡಿ ಕಾರ್ಯಕರ್ತರಿಗೆ ಕಾರ್ಯಭಾರ ಹೆಚ್ಚಿದೆ. ಅದನ್ನು ಕಡಿಮೆ ಮಾಡುವುದೂ ಸೇರಿದಂತೆ ಇಲಾಖೆಯ ಸುಧಾರಣೆ ಬಗ್ಗೆ ಪಕ್ಷದ ಕಾರ್ಯಕರ್ತೆಯರ ಪ್ರತ್ಯೇಕ ಸಭೆ ನಡೆಸುವುದಾಗಿ ಅವರು ತಿಳಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಇತ್ತೀಚಿನ ನೆರೆ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರವಾರದ ಶಾಸಕಿ ರೂಪಾಲಿ ನಾಯಕ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದು ವ್ಯಾಪಕ ಜನ ಮೆಚ್ಚುಗೆ ಗಳಿಸಿದೆ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಹಿಳೆಯರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಜ್ಯೋತಿ ಪುತ್ತೂರಾಯ, ಭಾರತಿ ಮಲ್ಲಿಕಾರ್ಜುನ, ಸವಿತಾ ಅಶೋಕ್, ಪ್ರಧಾನ ಕಾರ್ಯದರ್ಶಿ ಸುಜಾತಾ ಪಾಟೀಲ್, ರಾಜ್ಯ ಕಾರ್ಯದರ್ಶಿ ಲತಾ ಮತ್ತಿತರರು ಹಾಜರಿದ್ದರು.