ಮಹಿಳಾ ಉದ್ಯಮಿಗಳಿಗೆ ಸರಕಾರದಿಂದ ಸಕಲ ನೆರವು: ಡಿಸಿಎಂ ಅಶ್ವಥ ನಾರಾಯಣ್
ಬೆಂಗಳೂರು, ಸೆ.26: ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಇಂದಿನ ನಮ್ಮ ಆದ್ಯತೆಯಾಗಿದೆ. ನೀವು ಉದ್ಯಮ ರಂಗದಲ್ಲಿರುವವರು ಒಬ್ಬರನ್ನೊಬ್ಬರು ಬೆಂಬಲಿಸಿ ಹಾಗೂ ಮತ್ತೊಬ್ಬರ ಯಶಸ್ಸಿಗೆ ನೆರವಾಗಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ತಿಳಿಸಿದರು.
ಗುರುವಾರ ನಗರದ ಎಫ್‌ಕೆಸಿಸಿಐನಲ್ಲಿ ನಡೆದ ಇ-ಮರ್ಜ್ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಉದ್ಯಮ ರಂಗದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.
ಪರಸ್ಪರ ಸಹಕಾರದಿಂದ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗಲು ನೆರವಾಗುತ್ತದೆ ಹಾಗೂ ದೇಶದ ಆರ್ಥಿಕ ಸ್ಥಿತಿಯೂ ಸದೃಢವಾಗುತ್ತದೆ. ನಾವು ಕೂಡ ಸರಕಾರದ ಕಡೆಯಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ಧರಿದ್ದೇವೆ. ಮಹಿಳೆಯರು ಸರಕಾರದ ಸವಲತ್ತುಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಸ್ವತಂತ್ರವಾಗಿ ಕಾಲೂರಬಹುದಾಗಿದೆ ಎಂದು ಅವರು ತಿಳಿಸಿದರು.
ಅಕರ್ಮ್ಯಾಕ್ಸ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಾ ರಾಕೇಶ್ ಮಾತನಾಡಿ, ಪುರುಷರಿಗೆ ಸಂಪರ್ಕಗಳನ್ನ ಬೆಳೆಸಿಕೊಳ್ಳುವುದು ಮತ್ತು ಅವುಗಳನ್ನ ಬಳಸಿಕೊಳ್ಳುವುದು ತುಂಬಾ ಸಲೀಸು. ಆದರೆ, ಮಹಿಳೆಯರಿಗೆ ಅದು ಅಷ್ಟು ಸುಲಭ ಸಾಧ್ಯವಲ್ಲ ಎಂದರು.
ಸಂಪರ್ಕಗಳನ್ನ ಗಳಿಸುವುದೆಂದರೆ ಅದೊಂದು ಹರಸಾಹಸ. ಸಂಪರ್ಕಗಳನ್ನ ಬೆಳೆಸಿಕೊಳ್ಳುವುದೆಂದರೆ ಎಲ್ಲೆಲ್ಲಿ ಕಾರ್ಯಕ್ರಮಗಳು ನಡೆಯುತ್ತವೆಯೋ ಅವುಗಳಲ್ಲಿ ಭಾಗವಹಿಸುವುದು, ಜನರನ್ನ ಪರಿಚಯ ಮಾಡಿಕೊಳ್ಳುವುದಲ್ಲ. ಅದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದರು.
ಸಂಪರ್ಕಗಳನ್ನು ಸದೃಢಗೊಳಿಸಬೇಕೆಂದರೆ ಸರಿಯಾಗಿ ತಯಾರಿ ಮಾಡಿಕೊಂಡಿರಬೇಕು, ಕಂಫರ್ಟ್ ಝೋನ್‌ನಿಂದ ಹೊರಗೆ ಬರಬೇಕು, ನಮ್ಮದೇ ಆದ ಕೌಶಲ್ಯಗಳನ್ನ ಬಳಸಬೇಕು ಮತ್ತು ನಿರ್ದಿಷ್ಟ ತಂತ್ರಗಾರಿಕೆ ಹೆಣೆಯಬೇಕು. ಹಾಗಾದಾಗ ನಮ್ಮ ಸಂಪರ್ಕಗಳು ಕೈತಪ್ಪಿಹೋಗುವುದಿಲ್ಲ ಎಂದು ಸ್ನೇಹಾ ರಾಜೇಶ್ ಹೇಳಿದರು.
ಬಹಳಷ್ಟು ಮಂದಿ ಸಂಪರ್ಕ ಯಾಕೆ ಮುಖ್ಯ ಎಂದು ಪ್ರಶ್ನಿಸುತ್ತಾರೆ. ಸಂಪರ್ಕಗಳಿಂದ ಅವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಕೆಲಸಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುವಂತೆ ಮಾಡುತ್ತವೆ. ಅವರು ತಮ್ಮ ಗೌರವ ಹೆಚ್ಚಿಸಿಕೊಳ್ಳುವುದಕ್ಕಾಗಿ ಮಹಿಳಾ ಉದ್ಯಮಿಗಳಿಗೆ ನೆರವಾಗುತ್ತಾರೆ ಹಾಗೂ ಬಂಡವಾಳ ಹರಿದು ಬರುವಂತೆ ಮಾಡುತ್ತಾರೆ. ಉದ್ಯಮದ ಚಟುವಟಿಕೆಗಳಲ್ಲಿ ಲಿಂಗ ತಾರತಮ್ಯವನ್ನ ಹೋಗಲಾಡಿಸಲು ಸಂಪರ್ಕಗಳು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಂಗೀತಾ ರೆಡ್ಡಿ (ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಅಪೋಲೊ ಆಸ್ಪತ್ರೆ), ಸಾರಾ ಗ್ರೀನ್‌ಗ್ರಾಸ್(ಆರ್ಥಿಕ ಅಧಿಕಾರಿ, ಯುಎಸ್ ರಾಯಭಾರಿ ಕಚೇರಿ, ಚೆನ್ನೈ), ಏರಿಯಲ್ ಸೈಡ್‌ಮನ್(ಉಪ ರಾಯಭಾರಿ, ರಾಯಭಾರಿ ಕಚೇರಿ ಇಸ್ರೇಲ್), ಸಿ.ಆರ್.ಜನಾರ್ದನ್(ಅಧ್ಯಕ್ಷರು ಎಫ್‌ಕೆಸಿಸಿಐ), ಎಂ.ಎಂ.ಗಿರಿ (ಅಧ್ಯಕ್ಷರು ಪಿಐಎ), ಇಮರ್ಜ್ ಅಧ್ಯಕ್ಷೆ ರಾಜಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.