363 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ
ಬೆಂಗಳೂರು, ಸೆ. 27: ಕಲಬುರಗಿ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ 254 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ 109 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಲಬುರಗಿ ಜಿಲ್ಲಾ ಸಲಹಾ ಸಮಿತಿಯು(ಕೆಕೆಆರ್‌ಡಿಬಿ) ಅನುಮೋದನೆ ನೀಡಲಾಯಿತು.
ಶುಕ್ರವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆ ಮೈಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 100 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 151 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 54 ಕೋಟಿ ರೂ., ಸಾಮಾಜಿಕೇತರ ವಲಯಕ್ಕೆ 54 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ. ಡಾ.ನಂಜುಂಡಪ್ಪವರದಿ ಆಧಾರದಡಿ ಈ ಪ್ರದೇಶದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಮಂಡಳಿಯ ವ್ಯಾಪ್ತಿಯಲ್ಲಿ ಒಟ್ಟು 41 ಕ್ಷೇತ್ರಗಳು ಒಳಪಡುತ್ತಿವೆ. 1,500ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ನಿಯಮಾನುಸಾರ ಈ ಯೋಜನೆಯಡಿ ಬೃಹತ್ ಯೋಜನೆಗಳಾಗಿದ್ದರೂ 3 ವರ್ಷಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.
ವಿಳಂಬ ಮಾಡದೆ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ಮಂಡಳಿಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ ತಾಂತ್ರಿಕವಾಗಿ ಸದೃಢಗೊಳಿಸಲಾಗುವುದು. ಕಾಮಗಾರಿಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಗೋವಿಂದ ಕಾರಜೋಳ ಸೂಚಿಸಿದರು.
ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ಬಸವರಾಜ್ ಮತ್ತಿಮುಡ, ರಾಜಕುಮಾರ್ ಪಾಟೀಲ್ ಟೆಲ್ಕೂರ್, ಸುಭಾಷ್ ಗುತ್ತೇದಾರ್, ಡಾ.ಅವಿನಾಶ್ ಜಾದವ್, ಡಾ.ಅಜೇಯಸಿಂಗ್, ಎಂ.ವೈ. ಪಾಟೀಲ್, ತಿಪ್ಪಣ್ಣ ಕಮ್ಮತನೂರ್, ಕನೀಝ್ ಫಾತಿಮ, ಜಿಲ್ಲಾಧಿಕಾರಿ ಡಿ.ಶರತ್, ಜಿ.ಪಂ.ಸಿಇಓ ಡಾ.ಪಿ.ರಾಜ ಸಭೆಯಲ್ಲಿ ಉಪಸ್ಥಿತರಿದ್ದರು.