ಫೋನ್ ಕದ್ದಾಲಿಕೆ ಪ್ರಕರಣ: ಮುಂದುವರಿದ ಅಲೋಕ್ ಕುಮಾರ್ ವಿಚಾರಣೆ
Update: 2019-09-27 16:48 GMT
ಬೆಂಗಳೂರು, ಸೆ.27: ಭಾರೀ ಸಂಚಲನ ಮೂಡಿಸಿದ್ದ ಫೋನ್ ಕದ್ದಾಲಿಕೆ ಆರೋಪ ಪ್ರಕರಣ ಸಂಬಂಧ ರಾಜ್ಯ ಸಶಸ್ತ್ರ ಮೀಸಲು ಪಡೆಯ ಎಜಿಡಿಪಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಇಲ್ಲಿನ ಕೆ.ಕೆ ಗೆಸ್ಟ್ ಹೌಸ್‌ಗೆ ಆಗಮಿಸಿದ ಅಲೋಕ್ ಕುಮಾರ್ ಅವರು, ಸಿಬಿಐ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಪ್ರಕರಣ ಸಂಬಂಧ ಹಲವು ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.
ಸಿಬಿಐ ಅಧಿಕಾರಿಗಳಿಗೆ ಪೆನ್‌ಡ್ರೈವ್ ಪ್ರಮುಖ ಸಾಕ್ಷಿಯಾಗಿದ್ದು, ಅದಕ್ಕಾಗಿ ಹುಡುಕಾಟ ನಡೆಸಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಅಲೋಕ್ ಅವರಿಗೆ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಮಿರ್ಜಾ ಅಲಿ ಆಡಿಯೋ ಸಂಭಾಷಣೆಯನ್ನು ಪೆನ್‌ಡ್ರೈವ್‌ನಲ್ಲಿ ಕಾಪಿ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಪೆನ್‌ಡ್ರೈವ್‌ಗಾಗಿ ಶೋಧ ಕಾರ್ಯ ಹಾಗೂ ಅಲೋಕ್ ಕುಮಾರ್ ವಿಚಾರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.