ಬಿಐಎಎಲ್‌ ನಿಂದ 'ಪ್ಲಾಸ್ಟಿಕ್ ಬೇಕು' ಅಭಿಯಾನ: ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ರಸ್ತೆ ಯೋಜನೆಗೆ ಚಾಲನೆ

Update: 2019-09-28 18:35 GMT

ಬೆಂಗಳೂರು, ಸೆ.28: ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್) ಪ್ಲಾಸ್ಟಿಕ್ ಬೇಕು ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದು, ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಬೇಡ ಎಂದು ಎಲ್ಲೆಡೆ ಘೋಷಿಸಲಾಗುತ್ತಿದೆ. ಅಲ್ಲದೆ, ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ನಡುವೆ ಬಿಐಎಎಲ್ ಪ್ಲಾಸ್ಟಿಕ್ ಪಡೆಯುತ್ತಿದ್ದು, ಅದನ್ನು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.

50 ಕಿ.ಮೀ.ಪ್ಲಾಸ್ಟಿಕ್ ರಸ್ತೆ: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್, 2ನೇ ರನ್ ವೇ ನಿರ್ಮಿಸಲಾಗುತ್ತಿದೆ. ಅದಕ್ಕೆ ಸಂಪರ್ಕಿಸುವ ರಸ್ತೆಗಳು, ವಾಹನ ನಿಲುಗಡೆ ತಾಣಕ್ಕೆ ಸಂಪರ್ಕಿಸುವ ರಸ್ತೆಗಳ ದುರಸ್ತಿ ಮತ್ತು ಹೊಸದಾಗಿ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

50 ಕಿ.ಮಿ. ಉದ್ದದ ರಸ್ತೆಗಳಿಗೆ ಬಿಟುಮಿನ್ ಜತೆಗೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಪ್ರತಿ 50 ಕೆ.ಜಿ. ಬಿಟುಮಿನ್ ಮಿಕ್ಸ್‌ನಲ್ಲಿ 4ರಿಂದ 6 ಕೆ.ಜಿ. ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಪ್ರತಿ 1 ಕಿ.ಮಿ. ರಸ್ತೆ ನಿರ್ಮಾಣಕ್ಕೆ 1 ಟನ್ ಪ್ಲಾಸ್ಟಿಕ್ ಅವಶ್ಯಕತೆಯಿದ್ದು, ಇಡೀ ಯೋಜನೆಗೆ 50 ಟನ್ ಪ್ಲಾಸ್ಟಿಕ್ ಬಳಸಲಾಗುತ್ತಿದೆ.

ಪ್ಲಾಸ್ಟಿಕ್ ಸಂಗ್ರಹ: ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಪ್ಲಾಸ್ಟಿಕ್‌ಗಾಗಿ ಬಿಐಎಎಲ್ ಪ್ಲಾಸ್ಟಿಕ್ ಬೇಕು ಅಭಿಯಾನ ಆರಂಭಿಸಿದೆ. ಈಗಾಗಲೇ ಬಿಬಿಎಂಪಿಯಿಂದ 8 ಟನ್ ಪ್ಲಾಸ್ಟಿಕ್ ಪಡೆಯಲಾಗಿದೆ. ಉಳಿದ ಪ್ಲಾಸ್ಟಿಕ್‌ಗಾಗಿ ಐಟಿಸಿ ಸಂಸ್ಥೆ ನೆರವು ಪಡೆಯಲಾಗುತ್ತಿದೆ.

ಬಿಐಎಎಲ್ ದತ್ತು ಪಡೆದಿರುವ ಬೆಟ್ಟಕೋಟೆ, ವಿಜಯಪುರ, ಅರದೇಶನಹಳ್ಳಿ ಸರಕಾರಿ ಶಾಲೆಗಳು ಹಾಗೂ ದೇವನಹಳ್ಳಿ ತಾಲೂಕಿನ 5 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತದೆ. ಅದರ ಜತೆಗೆ ಉತ್ತರ ಬೆಂಗಳೂರಿನ ಖಾಸಗಿ ಶಾಲೆ, ನಿವಾಸಿಗಳ ಸಂಘದ ನೆರವನ್ನು ಕೋರಲಾಗಿದೆ. ಐಟಿಸಿ ಸಂಸ್ಥೆ ಬೆಂಗಳೂರಿನ ವಿವಿಧ ಶಾಲೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಕಾರ್ಯ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News