ನೀತಿ ಸಂಹಿತೆ ಜಾರಿಗೆ ಕಾಂಗ್ರೆಸ್ ಪಟ್ಟು

Update: 2019-09-30 14:44 GMT

ಬೆಂಗಳೂರು, ಸೆ.30: ಉಪ ಚುನಾವಣೆ ಸಂಬಂಧಿಸಿದಂತೆ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿದೆ.

ಸೋಮವಾರ ನಗರದ ಶೇಷಾದ್ರಿ ರಸ್ತೆಯ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಸಲ್ಲಿಕೆ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ನಿಯೋಗ, ಈ ಕೂಡಲೇ ನೀತಿ ಸಂಹಿತೆ ಜಾರಿಗೊಳಿಸಿ ಎಂದು ಒತ್ತಾಯಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಎಲ್ಲ ಪಕ್ಷದ, ಎಲ್ಲ ಅಭ್ಯರ್ಥಿಗಳ ಸ್ಪರ್ಧೆಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ. ಆದರೆ, ಆಯೋಗ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಪರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ ಆಯೋಗದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಆಪಾದಿಸಿದರು.

ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯೊಂದು ಈ ರೀತಿ ಪಕ್ಷಪಾತಿಯಾಗಿ ನಡೆದುಕೊಂಡಾಗ ನ್ಯಾಯ ಕೇಳಲು ಯಾರ ಬಳಿ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಆಯೋಗ ಕೂಡಲೇ ನೀತಿ ಸಂಹಿತೆ ಜಾರಿ ಮಾಡಬೇಕು. ಇಲ್ಲವೇ, ಪ್ರಸಕ್ತ ವೇಳಾಪಟ್ಟಿ ರದ್ದುಪಡಿಸಿ ಹೊಸ ವೇಳಾಪಟ್ಟಿ ಪ್ರಕಟಿಸಿ, ನೀತಿ ಸಂಹಿತೆ ಜಾರಿಗೆ ತರಲಿ. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲ ಇರುವುದಿಲ್ಲ ಎಂದು ತಿಳಿಸಿದರು.

ಚುನಾವಣಾ ಆಯೋಗ ಅಸಹಾಯಕತೆ ಪ್ರದರ್ಶಿಸದೇ ಸಂವಿಧಾನ ಬದ್ಧವಾಗಿ ಕೆಲಸ ಮಾಡಲಿ. ಪ್ರಜಾತಂತ್ರದ ಕಗ್ಗೂಲೆ ತಡೆಯಲಿ. ಇಲ್ಲದಿದ್ದಲ್ಲಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಆಯೋಗದ ವಿರುದ್ಧವೇ ಬೃಹತ್ ಹೋರಾಟ ಮಾಡಲಾಗವುದು. ಈ ವಿಚಾರದ ಗಂಭೀರತೆಯನ್ನು ದೆಹಲಿಯ ಮಟ್ಟದಲ್ಲೂ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News