ಸೂಕ್ತ ನೆರೆ ಪರಿಹಾರಕ್ಕೆ ಒತ್ತಾಯ: 25 ಬಿಜೆಪಿ ಸಂಸದರ 'ತಿಥಿ' ಮಾಡಿದ ಪ್ರತಿಭಟನಾಕಾರರು !

Update: 2019-10-05 14:44 GMT

ಬೆಂಗಳೂರು, ಅ.5: ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದಿರುವುದನ್ನು ಖಂಡಿಸಿ, ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳು, ಶಾಸ್ತ್ರೋಕ್ತವಾಗಿ ಬಿಜೆಪಿ ಸಂಸದರ ಅಣಕು ತಿಥಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಕನ್ನಡ ಸಂಘಟನೆಗಳ ಸದಸ್ಯರು, 25 ಜನ ಸಂಸದರ ಭಾವಚಿತ್ರವಿಟ್ಟು ಹಾರ ಹಾಕಿ ತಿಥಿ ಕಾರ್ಯ ಮಾಡಿದರು. ಅಷ್ಟೇ ಅಲ್ಲದೆ, ಸಾಮೂಹಿಕ ಕೇಶಮುಂಡನ ಮಾಡಿಸಿಕೊಂಡರು.

ರಾಜ್ಯದಲ್ಲಿ 38 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ, ಕೇಂದ್ರ ಸರಕಾರ ಕೇವಲ 1,200 ಕೋಟಿ ಮಧ್ಯಂತರ ಪರಿಹಾರ ಧನ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ತಿಂಗಳ ಬಳಿಕ, ಸ್ವಲ್ಪ ಮೊತ್ತದ ಹಣ ಬಿಡುಗಡೆಗೊಳಿಸಿರುವ ಕೇಂದ್ರದ ಕ್ರಮ ಸರಿಯಲ್ಲ. ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಆಗಬೇಕಿತ್ತು. ಆದರೆ, ರಾಜ್ಯ ಸಂಸದರು ಧ್ವನಿಗೂಡಿಸದ ಕಾರಣ, ಕೇಂದ್ರ ಸರಕಾರ, ನೆರೆ ಸಂತ್ರಸ್ತರ ಕಡೆ ಗಮನ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಶನಿವಾರ ಸಂಜೆ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ್ದು, ಕೆಲವರನ್ನು ವಶಕ್ಕೆ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News