ವಿಪಕ್ಷ ನಾಯಕ ಸ್ಥಾನ: ಸಿದ್ದರಾಮಯ್ಯ ಪರ ಹಿರಿಯ ಮುಖಂಡರ ಒಲವು
ಬೆಂಗಳೂರು, ಅ. 6: ವಿಧಾನಸಭೆ ಪ್ರತಿಪಕ್ಷದ ನಾಯಕನ ಆಯ್ಕೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಪರಮೇಶ್ವರ್, ಹಿರಿಯ ಶಾಸಕ ಎಚ್.ಕೆ. ಪಾಟೀಲ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಪಕ್ಷದ ಹಿರಿಯ ಮುಖಂಡರೊಂದಿಗೆ ಎಐಸಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ರವಿವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಧಾನಸಭೆ, ವಿಧಾನ ಪರಿಷತ್ ವಿಪಕ್ಷಗಳ ನಾಯಕರು, ಉಪ ನಾಯಕರು, ಮುಖ್ಯ ಸಚೇತನ ಸ್ಥಾನಗಳಿಗೆ ಮಧುಸೂದನ್ ಮಿಸ್ತ್ರಿ ಅವರು ಪಕ್ಷದ ಅರವತ್ತುಕ್ಕೂ ಹೆಚ್ಚು ನಾಯಕರ ಸಲಹೆ ಪಡೆದಿದ್ದಾರೆಂದು ಗೊತ್ತಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಮಧುಸೂದನ್ ಮಿಸ್ತ್ರಿ ಮುಖಂಡರ ಅಭಿಪ್ರಾಯಗಳನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದು ಪರ ಒಲವು: ವಿಪಕ್ಷ ನಾಯಕನ ಸ್ಥಾನಕ್ಕೆ ಬಹುತೇಕ ಮುಖಂಡರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರ ಪರ ಒಲವು ವ್ಯಕ್ತವಾಗಿದೆ. ಆದರೆ,ಕೆಲ ಮುಖಂಡರು ‘ಸರ್ವಾಧಿಕಾರಿ ಧೋರಣೆಯುಳ್ಳ’ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನವನ್ನು ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ಹಿರಿಯ ಮುಖಂಡರಾದ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿ ಎಚ್.ಕೆ.ಪಾಟೀಲ್, ಶಾಸಕರಾದ ಎಂ.ಬಿ.ಪಾಟೀಲ್, ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಸ್.ಆರ್.ಪಾಟೀಲ್, ರಮಾನಾಥ ರೈ, ಮೇಲ್ಮನೆ ಸದಸ್ಯ ಐವಾನ್ ಡಿಸೋಜಾ, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಮಂದಿಯ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
‘ಪಕ್ಷದಲ್ಲಿ ಗುಂಪುಗಾರಿಕೆಗೆ ಪ್ರೋತ್ಸಾಹಿಸುವ, ಸರ್ವಾಧಿಕಾರಿ ಧೋರಣೆಯುಳ್ಳ ಸಿದ್ದರಾಮಯ್ಯಗೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಪಕ್ಷ ನಾಯಕ ಸ್ಥಾನವನ್ನು ನೀಡದೆ ಬೇರೆಯವರಿಗೆ ನೀಡಬೇಕು. ಈಗಲೇ ಅವರಿಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಪಕ್ಷ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕೆಲ ಮುಖಂಡರು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಅಭಿಪ್ರಾಯ ಹೇಳಿದ್ದೇವೆ: ‘ವಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಿದ್ದು, ವರಿಷ್ಠರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಭವಿಷ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಪಕ್ಷ ಸಂಘಟನೆಗೆ ಅನುಕೂಲ ಆಗುವ ದೃಷ್ಟಿಯಿಂದ ನಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಿದ್ದೇವೆ’ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
‘ಪಕ್ಷ ಸಂಘಟನೆ ದೃಷ್ಟಿಯಿಂದ ಪ್ರಾದೇಶಿಕ, ಜಾತಿವಾರು ಪ್ರಾತಿನಿಧ್ಯ ಅಗತ್ಯ. ವಿಪಕ್ಷ ನಾಯಕ ಸ್ಥಾನ ಆಯ್ಕೆ ಸಂಬಂಧ ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡಲಿದೆ. ನಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಶೀಘ್ರದಲ್ಲೆ ವಿಪಕ್ಷ ನಾಯಕನ ಸ್ಥಾನಕ್ಕೆ ವರಿಷ್ಠರು ಸೂಕ್ತ ವ್ಯಕ್ತಿಯನ್ನು ಪ್ರಕಟಿಸಲಿದೆ’ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸಹಿ ಸಂಗ್ರಹ: ವಿಪಕ್ಷ ನಾಯಕ ಸ್ಥಾನವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ನೀಡಬೇಕೆಂದು ಅವರ ಬೆಂಬಲಿಗ ಶಾಸಕರು ಹಾಗೂ ಮುಖಂಡರು ಅವರ ಪರ ಸಹಿ ಸಂಗ್ರಹಕ್ಕೆ ಮುಂದಾಗಿದ್ದು, ಆ ಪ್ರತಿಯನ್ನು ವರಿಷ್ಠರಿಗೆ ರವಾನಿಸಲಿದ್ದಾರೆಂದು ಗೊತ್ತಾಗಿದೆ.
ಪರ-ವಿರೋಧ ಅಭಿಪ್ರಾಯಗಳನ್ನು ಆಲಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ನಿಮ್ಮೆಲ್ಲರ ಅಭಿಪ್ರಾಯ ಮತ್ತು ಸಲಹೆಗಳನ್ನು ಹೈಕಮಾಂಡ್‌ಗೆ ತಲುಪಿಸುತ್ತೇನೆ. ವಿಪಕ್ಷ ನಾಯಕನ ಸ್ಥಾನಕ್ಕೆ ವರಿಷ್ಠರು ಶೀಘ್ರವೇ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಮಿಸ್ತ್ರಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
‘ವಿಪಕ್ಷ ನಾಯಕನ ಸ್ಥಾನದ ಬಗ್ಗೆ ನಮ್ಮ ಅಭಿಪ್ರಾಯ ಕೇಳಿದ್ದು, ನಮ್ಮ ಅಭಿಪ್ರಾಯ ತಿಳಿದ್ದೇವೆ. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ನಮ್ಮ ಅಭಿಪ್ರಾಯ ನೀಡಿದ್ದು, ಕೆಲವು ಹೆಸರನ್ನು ನಾವು ಸೂಚಿಸಿದ್ದೇವೆ . ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದ. ಪಕ್ಷದಲ್ಲಿ ಮೂಲ-ವಲಸಿಗರೆಂಬ ಬೇಧವಿಲ್ಲ. ಹೊಸದಾಗಿ ಬಂದ ಸಿದ್ದರಾಮಯ್ಯರನ್ನೆ ಒಪ್ಪಿಕೊಂಡು ಸಿಎಂ ಮಾಡಿದ್ದೆವು’
-ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ
‘ಪಕ್ಷ ಸಂಘಟನೆ ದೃಷ್ಠಿಯಿಂದ ಹಲವು ಅಭಿಪ್ರಾಯ ತಿಳಿಸಿದ್ದೇವೆ. ಅಧಿಕಾರ ಹಂಚಿಕೆಯ ಬಗ್ಗೆಯೂ ಚರ್ಚೆಯಾಗಿದೆ. ಸಾಮೂಹಿಕ ನಾಯಕತ್ವದ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯ ಹೈಕಮಾಂಡ್‌ಗೆ ತಿಳಿಸಲಿದ್ದು, ವರಿಷ್ಠರು ವಿಪಕ್ಷ ನಾಯಕನ ಆಯ್ಕೆ ಸಂಬಂಧ ತೀರ್ಮಾನ ಕೈಗೊಳ್ಳಲಿದೆ’
-ಎಚ್.ಕೆ.ಪಾಟೀಲ್ ಮಾಜಿ ಸಚಿವ(ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ)