ದೊಡ್ಡ ಬಿದರಕಲ್ಲು ಕೆರೆ ಕೋಡಿ ಒಡೆದು ನಾಲ್ಕು ಗ್ರಾಮಗಳು ಜಲಾವೃತ: ಬಿಬಿಎಂಪಿಯಿಂದ ತಾತ್ಕಾಲಿಕ ಪರಿಹಾರ ಕಾರ್ಯ
ಬೆಂಗಳೂರು, ಅ.10: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ದೊಡ್ಡ ಬಿದರಕಲ್ಲು ಕೆರೆ ಕೋಡಿ ಒಡೆದು ನಾಲ್ಕು ಗ್ರಾಮಗಳು ಜಲಾವೃತಗೊಂಡು ಸುತ್ತಮುತ್ತಲ ನಿವಾಸಿಗಳು ಪರದಾಡುವಂತಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬುಧವಾರ ತಡರಾತ್ರಿ ಏಕಾಏಕಿ ಕೆರೆ ಏರಿ ಕುಸಿದು ಬಿದ್ದು ಸುತ್ತಮುತ್ತಲ ಗ್ರಾಮಗಳಾದ ಭವಾನಿನಗರ, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರ ಬಡಾವಣೆ ಹಾಗೂ ಅಂದಾನಪ್ಪ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು 8 ಜೆಸಿಬಿಗಳ ಮೂಲಕ ಪರಿಹಾರ ಕಾರ್ಯ ಕೈಗೊಂಡರು. ಭಾರೀ ನೀರಿದ್ದ ಪರಿಣಾಮ ಏರಿ ಕುಸಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೂ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಸಿಬ್ಬಂದಿ ಪಂಪ್‌ಸೆಟ್‌ಗಳ ಮೂಲಕ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕಿದರು.
ಮೇಯರ್ ಗೌತಮ್ ಕುಮಾರ್, ಆಯುಕ್ತ ಅನಿಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಅನಿಲ್ ಕುಮಾರ್ ಕೆರೆ ನೀರು ನುಗ್ಗಿ ಮನೆಗಳಿಗೆ ಆಗಿರುವ ಅನಾಹುತವನ್ನು ಪರಿಶೀಲಿಸಿ ವರದಿ ನೀಡುವಂತೆ ಕಂದಾಯ ಪರಿವೀಕ್ಷಕರಿಗೆ ಸೂಚನೆ ನೀಡಿದ್ದೇನೆ. ಅದೇ ರೀತಿ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇತ್ತೀಚೆಗೆ ದೊಡ್ಡ ಬಿದರಕಲ್ಲು ಕೆರೆ ಬಿಬಿಎಂಪಿ ವ್ಯಾಪ್ತಿಗೆ ಬಂದಿರುವ ಹಿನ್ನೆಲೆಯಲ್ಲಿ ಕುಸಿತಗೊಂಡಿರುವ ಏರಿ ದುರಸ್ತಿ ಕಾರ್ಯ ಹಾಗೂ ಆಗಿರುವ ಅನಾಹುತವನ್ನು ಪಾಲಿಕೆಯಿಂದಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ಮಳೆಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಒತ್ತುವರಿ ಕಾರಣ: ದೊಡ್ಡ ಬಿದರಕಲ್ಲು ಕೆರೆ ಸುತ್ತಮುತ್ತಲ ಪ್ರದೇಶವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರವಾಗಿದ್ದ ಕೆರೆ ಕೋಡಿ ಒಡೆಯುವಂತಾಯಿತು. ಆದರೆ ಹೆಚ್ಚುವರಿ ನೀರು ಹೊರ ಹರಿದು ಹೋಗಲು ಸಾಧ್ಯವಿಲ್ಲದೆ ಇಡೀ ಕೆರೆ ಮಲಿನವಾಗಿತ್ತು. ಘಟನೆಗೆ ಕೆರೆ ಒತ್ತುವರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೇಯರ್ ವಿರುದ್ಧ ಘೋಷಣೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಮೇಯರ್ ಗೌತಮ್ ಕುಮಾರ್ ಅವರನ್ನು ಭವಾನಿ ನಗರದ ನಿವಾಸಿಗಳು ತರಾಟೆಗೆ ತೆಗೆದುಕೊಂಡು, ಅವರ ವಿರುದ್ಧ ಘೋಷಣೆ ಕೂಗಿದರು. ಕಳೆದ ಹಲವಾರು ವರ್ಷಗಳಿಂದ ನಾವು ರಸ್ತೆ ದುರಸ್ತಿಗೊಳಿಸಿ, ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.