ಕರ್ನಾಟಕ ಮೂಲದ ಸರಕಾರಿ ಬ್ಯಾಂಕುಗಳ ವಿಲೀನ: ರಾಜ್ಯದ ಆರ್ಥಿಕತೆಗೆ ಧಕ್ಕೆ?

Update: 2019-10-10 18:30 GMT

ಯಾವುದೇ ದೇಶದ ಮತ್ತು ಅಲ್ಲಿನ ರಾಜ್ಯದ ಆರ್ಥಿಕತೆಯ ಮೇಲೆ ಹಣಕಾಸು ಸಂಸ್ಥೆಗಳು ಗಾಢವಾದ ಪ್ರಭಾವವನ್ನು ಬೀರುತ್ತವೆ. ಬ್ಯಾಂಕುಗಳು ಅರ್ಥವ್ಯವಸ್ಥೆಗೆ ನೀಡುವ ಬೆಂಬಲವನ್ನು ಕೆಲವು ಮಾನಕಗಳ ಮೂಲಕ ನಾವು ಅರಿತುಕೊಳ್ಳಬಹುದು. ಅವುಗಳ ಶಾಖೆಗಳು, ಅವುಗಳ ವ್ಯವಹಾರ, ಅವು ನೀಡುವ ಸಾಲ, ಆದ್ಯತಾರಂಗಗಳಿಗೆ ಒದಗಿಸುವ ಸಹಾಯ ಮತ್ತು ಅವುಗಳು ನೀಡಿದ ಉದ್ಯೋಗಾವಕಾಶಗಳು-ಈ ಸಂಸ್ಥೆಗಳ ಕೊಡುಗೆಯನ್ನು ಗುರುತಿಸುವುದರಲ್ಲಿ ಮುಖ್ಯವಾಗುತ್ತವೆ. ಬ್ಯಾಂಕುಗಳ ವಿಲೀನದ ಬಳಿಕ ಈ ವಿಷಯಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ಆಗುವುದು ಸ್ವಾಭಾವಿಕ.

ಈಗ ಸರಕಾರಿ ರಂಗದ ಬ್ಯಾಂಕುಗಳ ವಿಲೀನೀಕರಣ ತಡೆ ಇಲ್ಲದೆ ಸಾಗುತ್ತಿದೆ. ನರೇಂದ್ರ ಮೋದಿಯವರ ಹಿಂದಿನ ಅಧಿಕಾರಾವಧಿಯಲ್ಲಿ ಎರಡು ಪ್ರಕ್ರಿಯೆಗಳು ನಡೆದಿದ್ದವು. 2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಐದು ಸಹವರ್ತಿ ಬ್ಯಾಂಕುಗಳನ್ನು- ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಸಹಿತ- ಎಸ್‌ಬಿಐ ಜೊತೆಗೆ ವಿಲೀನಗೊಳಿಸಲಾಯಿತು. 2018-19ರಲ್ಲಿ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಹುಟ್ಟಿ ಬೆಳೆದ, ಲಾಭದಲ್ಲಿದ್ದ ವಿಜಯ ಬ್ಯಾಂಕನ್ನು ನಷ್ಟ ಅನುಭವಿಸುತ್ತಿದ್ದ ಗುಜರಾತಿನ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಳಿಸಲಾಯಿತು. ಈಗ ಕರಾವಳಿಯ ಇನ್ನೆರಡು ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನು ಕಳಕೊಳ್ಳಲಿವೆ. 113 ವರ್ಷ ಇತಿಹಾಸ ಇರುವ ಕಾರ್ಪೊರೇಶನ್ ಬ್ಯಾಂಕನ್ನು ಮುಂಬೈಯ ಯೂನಿಯನ್ ಬ್ಯಾಂಕಿನ ಜೊತೆಗೂ, 95 ವರ್ಷದ ಇತಿಹಾಸ ಹೊಂದಿದ ಸಿಂಡಿಕೇಟ್ ಬ್ಯಾಂಕನ್ನು ಕರಾವಳಿಯಲ್ಲಿ ಆರಂಭಗೊಂಡು ರಾಜ್ಯದ ರಾಜಧಾನಿಯಲ್ಲಿ ಕೇಂದ್ರ ಕಚೇರಿ ಇರುವ ಕೆನರಾ ಬ್ಯಾಂಕಿನ ಜೊತೆಗೂ ವಿಲೀನಗೊಳಿಸುವ ಕಾರ್ಯ ಆರಂಭವಾಗಿದೆ.

ವಿಲೀನಗಳ ಪ್ರಮುಖ ಉದ್ದೇಶ ಬ್ಯಾಂಕುಗಳ ಗಾತ್ರವನ್ನು ಬೆಳೆಸುವುದು. ಬ್ಯಾಂಕುಗಳು ದೊಡ್ಡದಾದಷ್ಟೂ ಅವುಗಳ ದಕ್ಷತೆ ಹೆಚ್ಚುತ್ತದೆ, ಅವುಗಳಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ ಮತ್ತು ತಮಗೆ ಬೇಕಾದ ಸಂಪನ್ಮೂಲಗಳನ್ನು (ಬಂಡವಾಳವನ್ನು) ತಾವೇ ಕ್ರೋಡೀಕರಿಸಿಕೊಳ್ಳಲು ಸಾಧ್ಯ ಎಂಬ ವಾದಗಳನ್ನು ಮುಂದಿಡಲಾಗುತ್ತದೆ. ಆದರೆ ವಸ್ತು ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎಂಬುದು ಅನುಭವವೇದ್ಯ. 2007-08ರಲ್ಲಿ ಅಮೆರಿಕದಲ್ಲಿ ಸಂಭವಿಸಿದ ಆರ್ಥಿಕ ಕ್ಷೋಭೆಗೆ ಮುಖ್ಯ ಕಾರಣ ಆ ದೇಶದ ದೈತ್ಯಗಾತ್ರದ ಬ್ಯಾಂಕುಗಳು ನಡೆಸುತ್ತಿದ್ದ ಅವ್ಯವಹಾರಗಳು ಎಂದು ಬಲ್ಲವರ ಅಭಿಪ್ರಾಯ. ಆಗ ಒಬಾಮಾ ಅವರ ಸರಕಾರವು, ಮುಳುಗಡೆಯಾಗಲಿದ್ದ ಸಂಸ್ಥೆಗಳಿಗೆ ಸರಕಾರದ ತಿಜೋರಿಯಿಂದ ಬಿಲಿಯಗಟ್ಟಲೆ ಡಾಲರುಗಳ ಸಹಾಯಧನವನ್ನು ನೀಡಿ ಅವುಗಳನ್ನು ಉಳಿಸಬೇಕಾಗಿ ಬಂತು. ಗಾತ್ರಕ್ಕೂ ದಕ್ಷತೆಗೂ ಸಂಬಂಧವಿಲ್ಲ ಎನ್ನುವುದಕ್ಕೆ ಅದು ಜ್ವಲಂತ ಉದಾಹರಣೆ.

ಯಾವುದೇ ದೇಶದ ಮತ್ತು ಅಲ್ಲಿನ ರಾಜ್ಯದ ಆರ್ಥಿಕತೆಯ ಮೇಲೆ ಹಣಕಾಸು ಸಂಸ್ಥೆಗಳು ಗಾಢವಾದ ಪ್ರಭಾವವನ್ನು ಬೀರುತ್ತವೆ. ಬ್ಯಾಂಕುಗಳು ಅರ್ಥವ್ಯವಸ್ಥೆಗೆ ನೀಡುವ ಬೆಂಬಲವನ್ನು ಕೆಲವು ಮಾನಕಗಳ ಮೂಲಕ ನಾವು ಅರಿತುಕೊಳ್ಳಬಹುದು. ಅವುಗಳ ಶಾಖೆಗಳು, ಅವುಗಳ ವ್ಯವಹಾರ, ಅವು ನೀಡುವ ಸಾಲ, ಆದ್ಯತಾರಂಗಗಳಿಗೆ ಒದಗಿಸುವ ಸಹಾಯ ಮತ್ತು ಅವುಗಳು ನೀಡಿದ ಉದ್ಯೋಗಾವಕಾಶಗಳು-ಈ ಸಂಸ್ಥೆಗಳ ಕೊಡುಗೆಯನ್ನು ಗುರುತಿಸುವುದರಲ್ಲಿ ಮುಖ್ಯವಾಗುತ್ತವೆ. ಬ್ಯಾಂಕುಗಳ ವಿಲೀನದ ಬಳಿಕ ಈ ವಿಷಯಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ಆಗುವುದು ಸ್ವಾಭಾವಿಕ. ಈ ಬದಲಾವಣೆಗಳು ಯಾವುವು ಮತ್ತು ಅವುಗಳ ಪರಿಣಾಮವೇನು?

ವ್ಯವಹಾರ ಮತ್ತು ಸಾಲದ ನೀತಿಗಳು:

ಒಂದು ಬ್ಯಾಂಕಿನ ವ್ಯವಹಾರದ ನೀತಿಗಳು ಆರ್‌ಬಿಐಯ ನಿರ್ದೇಶನಗಳಿಗೆ ಅನುಗುಣವಾಗಿರಬೇಕು. ಹಾಗಿದ್ದೂ ಅನೇಕ ವಿಷಯಗಳ ಬಗ್ಗೆ ಪ್ರತಿಯೊಂದು ಬ್ಯಾಂಕಿಗೂ ಸ್ವಯಮಧಿಕಾರ ಇದೆ. ಸೇವಾ ಶುಲ್ಕ ವಿಧಿಸುವ, ಉಳಿತಾಯ ಖಾತೆಯಲ್ಲಿ ಉಳಿಸಬೇಕಾದ ಕನಿಷ್ಠ ಮೊತ್ತ, ತಿಂಗಳಿಗೆ ಎಷ್ಟು ಬಾರಿ ನಗದು ಹಣವನ್ನು ಹಿಂಪಡೆಯಬಹುದು, ಹಣವನ್ನು ಒಂದೂರಿನಿಂದ ಇನ್ನೊಂದೂರಿಗೆ ವರ್ಗಾಯಿಸುವ ಶುಲ್ಕ-ಇವುಗಳನ್ನೆಲ್ಲಾ ಆಯಾಯಾ ಬ್ಯಾಂಕಿನ ನಿರ್ದೇಶಕ ಮಂಡಳಿ ನಿರ್ಧರಿಸುತ್ತದೆ. ಬ್ಯಾಂಕಿನ ಮುಖ್ಯ ಕಚೇರಿ ಯಾವ ರಾಜ್ಯದಲ್ಲಿದೆಯೋ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಈ ನೀತಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ.

ಸಾಲದ ನೀತಿಯ ಕುರಿತಂತೆ ಸರಕಾರ ಮತ್ತು ಆರ್‌ಬಿಐಗಳ ಧೋರಣೆಗಳು ಏನಿದ್ದರೂ, ಬ್ಯಾಂಕಿನ ಲಾಭದಾಯಕತೆಯನ್ನು ಹೊಂದಿಕೊಂಡು ಬ್ಯಾಂಕಿನ ನಿರ್ದೇಶಕ ಮಂಡಳಿ ನಿರ್ಧಾರಗಳನ್ನು ಮಾಡುತ್ತದೆ. ಆಗ ತನ್ನ ಮುಖ್ಯಕಚೆೇರಿಯ ಹೊರಗಿರುವ ಇನ್ನೊಂದು ರಾಜ್ಯದ ಆರ್ಥಿಕ ಪರಿಸ್ಥಿತಿ ಬ್ಯಾಂಕಿಗೆ ಗೌಣವಾಗುತ್ತದೆ. ಇದರ ಪ್ರಭಾವ ಮುಖ್ಯವಾಗಿ ಕೃಷಿ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆ, ಸಮಾಜದ ಅಂಚಿನಲ್ಲಿರುವ ಮಂದಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಮೂಲಸೌಕರ್ಯಗಳು-ಮುಂತಾದ ರಂಗಗಳಿಗೆ ಕೊಡಮಾಡುವ ಸಾಲದ ಮೇಲಾಗುತ್ತದೆ.

ಶಾಖೆಗಳ ವಿಸ್ತರಣೆ ಮತ್ತು ಮುಚ್ಚುವಿಕೆ:

ಹಿಂದೆ ಬ್ಯಾಂಕುಗಳು ವಿಲೀನಗೊಂಡಾಗ ವೆಚ್ಚ ಉಳಿಸಬೇಕೆಂಬ ಕಾರಣದಿಂದ ಶಾಖೆಗಳನ್ನು ಮುಚ್ಚಲಾಗಿತ್ತು ಇಲ್ಲವೇ ಒಂದು ಶಾಖೆಯನ್ನು ಇನ್ನೊಂದು ಶಾಖೆಯ ಜೊತೆ ವಿಲೀನಗೊಳಿಸಲಾಗಿತ್ತು. ಅದೇ ಕ್ರಮವನ್ನು ಈಗಿನ ಪ್ರಕ್ರಿಯೆಯಲ್ಲಿಯೂ ನಾವು ನಿರೀಕ್ಷಿಸಬಹುದು. ಈ ಧೋರಣೆಗೆ ಬಲಿಯಾಗುವುದು ಗ್ರಾಮೀಣ ಮತ್ತು ಯಾವುದೇ ಸೌಕರ್ಯಗಳಿಲ್ಲದ ಊರಿನಲ್ಲಿರುವ ಶಾಖೆಗಳು. ಅಂತಹ ಸನ್ನಿವೇಶದಲ್ಲಿ ಆ ಊರಿನ ಮಂದಿ ಬ್ಯಾಂಕು ಸೌಲಭ್ಯಗಳಿಂದ ವಂಚಿತರಾಗಬಹುದು. ಅದರ ದೂರಗಾಮಿ ಪ್ರಭಾವ ಲೇವಾದೇವಿಯ ಮರುಪ್ರವೇಶ. ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಸಣ್ಣ ಪುಟ್ಟ ಉದ್ದಿಮೆದಾರರಿಗೆ, ಸಣ್ಣ ರೈತರಿಗೆ ಸಾಲ ನೀಡಲು ಹಿಂದೇಟು ಹಾಕಿದ್ದರಿಂದ ಸ್ಥಳೀಯ ಲೇವಾದೇವಿಗಾರರ ಮೊರೆಹೊಕ್ಕ ಸಣ್ಣ ಸಾಲಗಾರರು ಶೋಷಣೆಯನ್ನು ಅನುಭವಿಸಿ ಸಂಕಷ್ಟಕ್ಕೆ ಈಡಾದುದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬೇಕು.

ಸಿಬ್ಬಂದಿಯ ನೇಮಕಾತಿ ಮತ್ತು ವರ್ಗಾವಣೆ:

ಬ್ಯಾಂಕುಗಳು ವಿಲೀನಗೊಂಡಾಗ ಕೆಲವು ಪ್ರದೇಶಗಳಲ್ಲಿ ಸಿಬ್ಬಂದಿಯ ಹೆಚ್ಚಳವಾಗುತ್ತದೆ. ಆಗ ಅವರನ್ನು ವರ್ಗಾಯಿಸುವುದು ಅನಿವಾರ್ಯ. ಮಾತ್ರವಲ್ಲ ವಿಲೀನದಿಂದ ಉಂಟಾದ ಹೊಸ ಬ್ಯಾಂಕಿನಲ್ಲಿ (ಹೆಸರು ಒಂದೇ ಇದ್ದರೂ) ಸಿಬ್ಬಂದಿಯ ಮಿಗತೆಯಾಗುತ್ತದೆ ಎಂದು ಹೇಳಿ ಹೊಸ ನೇಮಕಾತಿಯ ಪ್ರಕ್ರಿಯೆಯನ್ನು ತಡೆಹಿಡಿಯಲಾಗುತ್ತದೆ. ನಿವೃತ್ತರಾದಾಗ ಉಂಟಾಗುವ ಹುದ್ದೆಗಳನ್ನೂ ಬ್ಯಾಂಕುಗಳು ಭರ್ತಿಮಾಡುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಹೊಸ ಉದ್ಯೋಗಾವಕಾಶಗಳು ಕುಂಠಿತವಾಗುತ್ತವೆ.

ಹೊಸ ಉದ್ಯೋಗಿಗಳ ನೇಮಕಾತಿಯಲ್ಲಿಯೂ ಯಾವ ರಾಜ್ಯದಲ್ಲಿ ಬ್ಯಾಂಕಿನ ಪ್ರಧಾನ ಕಚೇರಿ ಇದೆಯೋ ಅಲ್ಲಿನವರಿಗೆ ಆದ್ಯತೆ ನೀಡಲಾಗುತ್ತದೆ. ಕೇಂದ್ರೀಯ ನೇಮಕಾತಿ ಮಂಡಳಿಯೇ ನೇಮಕಾತಿಯ ಪ್ರಕ್ರಿಯೆಯನ್ನು ಮಾಡುವುದಾದರೂ ಬ್ಯಾಂಕಿನ ಹಿರಿಯ ಅಧಿಕಾರಿಗಳ ಶರತ್ತುಗಳಿಗೆ ಅನುಗುಣವಾಗಿಯೇ ಅದನ್ನು ನಡೆಸಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಯುವಕ, ಯುವತಿಯರಿಗೆ ಸರಕಾರಿ ಕ್ಷೇತ್ರದ ಬ್ಯಾಂಕುಗಳಲ್ಲಿನ ಉದ್ಯೋಗ ಕನಸಿನ ಗಂಟಾಗಬಹುದು.

ಇತ್ತೀಚೆಗೆ ಬ್ಯಾಂಕುಗಳು ವೃತ್ತಿಪರರನ್ನು (ತಜ್ಞರನ್ನು), ತಳದಿಂದ ಎರಡನೆಯ ಅಥವಾ ಮೂರನೆಯ ಸ್ತರದಲ್ಲಿ ನೇರವಾಗಿ ನೇಮಕ ಮಾಡುತ್ತಿವೆ. ಆ ನೇಮಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾಡಲಾಗುವುದಿಲ್ಲ. ನೇರವಾಗಿ ವೃತ್ತಿಶಿಕ್ಷಣ ಕಾಲೇಜುಗಳಿಂದ ಸಂದರ್ಶನದ ಮೂಲಕ ಆರಿಸಿ ನೇಮಕಾತಿ ಮಾಡಲಾಗುತ್ತದೆ. ಅಲ್ಲಿಯೂ ರಾಜ್ಯದ ವೃತ್ತಿಪರರಿಗೆ (ಉದಾ: ಎಂಬಿಎ, ಎಂಎಸ್, ಎಂಸಿಎ, ಸಿಎ ಮುಂತಾದ ಸ್ನಾತಕೋತ್ತರ ಪದವಿ ಪಡೆದವರಿಗೆ) ಆದ್ಯತೆ ಸಿಗುವುದು ಕಷ್ಟವಾಗಲಿದೆ.

ದಕ್ಷಿಣದ ಬ್ಯಾಂಕುಗಳ ಕುರಿತಂತೆ ಮಲತಾಯಿ ಧೋರಣೆ:

ನಮ್ಮ ರಾಜ್ಯದ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿ ರಾಷ್ಟ್ರಮಟ್ಟಕ್ಕೇರಿದ ನಾಲ್ಕು ಬ್ಯಾಂಕುಗಳಿವೆ. ಅವೂ ಅಲ್ಲದೆ ಮೈಸೂರಿನ ಕೃಷ್ಣರಾಜ ಒಡೆಯರ ಕಾಲದಲ್ಲಿ ಎಂ.ವಿಶ್ವೇಶ್ವರಯ್ಯನವರ ಮುತುವರ್ಜಿಯಲ್ಲಿ ಆರಂಭವಾಗಿದ್ದ ಮೈಸೂರು ಬ್ಯಾಂಕು, 1956ರಲ್ಲಿ ಎಸ್‌ಬಿಐ ಸ್ಥಾಪನೆಗೊಂಡಾಗ ಅದರ ಸಹವರ್ತಿಯಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಎಂದು ಬದಲಾವಣೆಗೊಂಡಿತು. ಭಾರತದ ಇತರ ಯಾವುದೇ ರಾಜ್ಯಗಳಲ್ಲಿ (ಮತ್ತೂ ವಿಶೇಷವಾಗಿ ಒಂದು ಜಿಲ್ಲೆಯಲ್ಲಿ) ಇಷ್ಟೊಂದು ಬ್ಯಾಂಕುಗಳು ಹುಟ್ಟಿ ಬೆಳೆದು ರಾಷ್ಟ್ರಮಟ್ಟಕ್ಕೇರಿದ ದಾಖಲೆಗಳಿಲ್ಲ. ಮೈಸೂರು ಬ್ಯಾಂಕು ಸೇರಿದಂತೆ ಈ ಐದೂ ಬ್ಯಾಂಕುಗಳು ರಾಜ್ಯದ ಅರ್ಥವ್ಯವಸ್ಥೆಗೆ ನಿರಂತರವಾದ ಕೊಡುಗೆ ನೀಡಿವೆ. ಉಳಿದ ಅನೇಕ ರಾಜ್ಯಗಳಿಗಿಂತ ಆರ್ಥಿಕವಾಗಿ ಕರ್ನಾಟಕವು ಮುಂದಿದ್ದರೆ ಅದಕ್ಕೆ ಬ್ಯಾಂಕುಗಳು ಬಹುಮಟ್ಟಿಗೆ ಕಾರಣ.

ಹೀಗಿದ್ದೂ ಕೇಂದ್ರ ಸರಕಾರವು ಕರ್ನಾಟಕದ ಬ್ಯಾಂಕುಗಳ ಬಗ್ಗೆ ಮಲತಾಯಿ ಧೋರಣೆಯನ್ನು ಹೊಂದಿರುವುದು ನಿಸ್ಸಂದೇಹ. ಧೋರಣೆಗೆ ಸಾಕ್ಷಿಯಾಗಿ ನಾಲ್ಕು ವಿಷಯಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

1.ನಿರ್ದೇಶಕ ಮಂಡಳಿಯ ನೇಮಕಾತಿ

2.ಹಿರಿಯ ಅಧಿಕಾರಿಗಳ ನೇಮಕಾತಿ

3.ಹಿಂದಿ ಭಾಷೆಯ ಕಡ್ಡಾಯ ಹೇರಿಕೆ

4.ತಳಮಟ್ಟದ ಉದ್ಯೋಗಿಗಳ ನೇಮಕಾತಿ

ಮೊದಲಿನ ಎರಡು ವಿಷಯಗಳ ಬಗ್ಗೆ ಮಾಹಿತಿ ಆಯಾಯ ಬ್ಯಾಂಕುಗಳ ವಾರ್ಷಿಕ ವರದಿಗಳಲ್ಲಿಯೇ ಲಭಿಸುತ್ತದೆ. ಅವುಗಳಲ್ಲಿ ಕೊಡಲಾದ ಹೆಸರುಗಳನ್ನು ಪರಿಶೀಲಿಸಿದರೆ ಕಾಣುವ ಅಂಶ ಅಂದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ನಮ್ಮ ರಾಜ್ಯದ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ನಿರ್ದೇಶಕ ಮಂಡಳಿಗೆ ಕರ್ನಾಟಕದ ಮೂಲದ ನಿರ್ದೇಶಕರನ್ನು ನೇಮಿಸಿಲ್ಲ. ಬ್ಯಾಂಕಿನ ಅತ್ಯಂತ ಹಿರಿಯ ಅಧಿಕಾರಿಗಳಾದ ಪೂರ್ಣಕಾಲಿಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿ ಇಲ್ಲಿನ ಅಧಿಕಾರಿಗಳನ್ನು ನೇಮಿಸಿಲ್ಲ. ಮೋದಿ ಸರಕಾರ ಬಂದ ಮೇಲೆ ಅಧ್ಯಕ್ಷರ ಪದವಿಯನ್ನು ಅಂಶಕಾಲಿಕವಾಗಿ ಮಾಡಲಾಯಿತು. ಈ ಅಂಶಕಾಲಿಕ ಅಧ್ಯಕ್ಷ ಸ್ಥಾನಕ್ಕೂ ಯಾವ ಬ್ಯಾಂಕಿನಲ್ಲಿಯೂ ನಮ್ಮ ರಾಜ್ಯದವರನ್ನು ನೇಮಿಸಿಲ್ಲ. ಬಹುತೇಕ ಮಂದಿ ಉತ್ತರ ಭಾರತದವರೇ ಈ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಬ್ಯಾಂಕುಗಳ ತವರೂರು ಎನಿಸಿರುವ ನಮ್ಮ ರಾಜ್ಯದಲ್ಲಿ ಬ್ಯಾಂಕಿಂಗ್ ತಜ್ಞರಿಗೆ ಬರಗಾಲವೇ, ಅಲ್ಲ ಕೇಂದ್ರ ಸರಕಾರದ ಮಲತಾಯಿ ಧೋರಣೆಯೇ?

ಸರಕಾರಿ ರಂಗದ ಒಂದು ಬ್ಯಾಂಕಿನಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ ಅನುಭವದ ಹಿನ್ನೆಲೆಯಲ್ಲಿ ಎರಡು ಘಟನೆಗಳನ್ನು ಕರ್ನಾಟಕದ ಜನರ ಮುಂದಿಡಲು ಬಯಸುತ್ತೇನೆ. ಕರಾವಳಿಯ ಒಂದು ಬ್ಯಾಂಕಿನ ಅಧ್ಯಕ್ಷರು (ಅವರು ಹಿಂದಿ ಭಾಷಿಗರು), ಆ ಬ್ಯಾಂಕಿನ ಮನೋರಂಜನಾ ಕ್ಲಬ್ಬಿನ ಪದಾಧಿಕಾರಿಗಳು ನವೆಂಬರ್ ಒಂದರಂದು ಬ್ಯಾಂಕಿನ ಸಿಬ್ಬಂದಿ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಬೇಕೆಂದು ವಿನಂತಿಸಿದಾಗ ‘‘ಈ ಬ್ಯಾಂಕಿಗೆ ನಿಮ್ಮ ರಾಜ್ಯ ನೀಡಿದ ಕೊಡುಗೆ ಏನು?’’ ಎಂಬ ಉದ್ಧಟತನ ತೋರಿಸಿದ್ದರು. ಅವರು ಅಧ್ಯಕ್ಷರಾಗಿ ಬಂದ ಹೊಸತರಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ದೂರದ ಮುಂಬೈಗೆ ವರ್ಗಾಯಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಅಧಿಕಾರಿಗಳು ಒಟ್ಟಾಗಿ ಅದನ್ನು ವಿರೋಧಿಸಿದ್ದೂ ಅಲ್ಲದೆ ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಮನವಿ ನೀಡಿ ಒತ್ತಡ ಹೇರಿ ನಿರ್ಧಾರವನ್ನು ಕೈಬಿಡುವಂತೆ ಮಾಡಲಾಯಿತು. ಬ್ಯಾಂಕಿನ ಪ್ರಧಾನ ಕಚೆೇರಿ ಮಂಗಳೂರಿನಲ್ಲಿಯೇ ಮುಂದುವರಿಯಿತು. ಈ ವರ್ತನೆಗಳು ಅವರ ಮನೋಭಾವವನ್ನು ಪ್ರತಿಬಿಂಬಿಸುತ್ತವೆ.                                                                        

ಕಳೆದ ನಾಲ್ಕೈದು ವರ್ಷಗಳಲ್ಲಿ ಇನ್ನೊಂದು ಬದಲಾವಣೆಯೂ ಕಂಡುಬಂದಿದೆ. ಹೊಸತಾಗಿ ನೇಮಕಾತಿಗೊಂಡ ತಳಮಟ್ಟದ, ಕಿರಿಯ ಅಧಿಕಾರಿಗಳಲ್ಲಿಯೂ ಬಹುತೇಕ ಬೇರೆ ರಾಜ್ಯದ ಅಭ್ಯರ್ಥಿಗಳನ್ನೇ ಕಾಣಬಹುದು. ಕರ್ನಾಟಕದ ಸಣ್ಣ ಸಣ್ಣ ಪಟ್ಟಣಗಳಲ್ಲಿ, ಅನೇಕ ಗ್ರಾಮೀಣ ಪ್ರದೇಶದ ಶಾಖೆಗಳಲ್ಲಿ ಕನ್ನಡವೇ ಬಾರದ ಅಧಿಕಾರಿಗಳನ್ನು ನಾವು ಕಾಣುತ್ತೇವೆ. ಕರ್ನಾಟಕದ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲವೇ ಅಥವಾ ನೇಮಕಾತಿ ಪ್ರಕ್ರಿಯೆಗಳಲ್ಲಿ ನಮ್ಮ ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಇದರಿಂದಾಗಿ ಕನ್ನಡ ಮಾತ್ರ ಬರುವ ಗ್ರಾಹಕರು ಬ್ಯಾಂಕುಗಳೊಂದಿಗೆ ಹೇಗೆ ವ್ಯವಹರಿಸಬೇಕು? ಕರ್ನಾಟಕ ಮೂಲದ ಬ್ಯಾಂಕುಗಳ ಮೇಲೆ ಹಿಂದಿಯ ಬಳಕೆಗೋಸ್ಕರ ನಿರಂತರ ಒತ್ತಡ ಹೇರಲಾಗುತ್ತಿದೆ. ಶಾಖೆಗಳಲ್ಲಿ, ಮುಖ್ಯ ಕಚೆೇರಿಗಳಲ್ಲಿ, ಪ್ರಚಾರ ಸಾಮಗ್ರಿ ಗಳಲ್ಲಿ, ಗ್ರಾಹಕರ ಉಪಯೋಗಕ್ಕೆಂದೇ ಇರುವ ಬರವಣಿಗೆ ನಮೂನೆಗಳಲ್ಲಿ ರಾಜ್ಯದ ಭಾಷೆಯನ್ನು ನೀವು ಕಂಡರೆ ಅದು ಪವಾಡ. ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ರಾಜ್ಯಮಟ್ಟದ ಬ್ಯಾಂಕುಗಳ ಸಮಿತಿ (State Level Bankers’ Committee)ಯ ಜಾಲತಾಣದಲ್ಲಿಯೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಮಾತ್ರ ಕಾಣಸಿಗುತ್ತವೆ. ಹಿಂದಿಯೇತರ ರಾಜ್ಯಗಳಲ್ಲಿರುವ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ವ್ಯವಹಾರದಲ್ಲಿ ಬಳಸಬೇಕೆಂಬ ನಿಯಮವಿದೆ. ಇದರ ಹೊರತಾಗಿಯೂ ರಾಜ್ಯದ ಆಡುಭಾಷೆಯಾದ ಕನ್ನಡಕ್ಕೆ ಕನ್ನಡನಾಡಿನಲ್ಲಿಯೇ ಹುಟ್ಟಿ ಮೇಲೆ ಬಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಂದು ತೀವ್ರವಾದ ದುರ್ಗತಿ ಬಂದುದನ್ನು ನಾವು ಕಾಣಬಹುದು.

ರಾಜ್ಯದ ಆರ್ಥಿಕತೆಗೆ ಪೆಟ್ಟು?

ಬ್ಯಾಂಕುಗಳು ಒಂದು ರಾಜ್ಯದಲ್ಲಿ ಕ್ರೋಡೀಕರಿಸಿದ ಸಂಪನ್ಮೂಲಗಳನ್ನು ಆ ರಾಜ್ಯದ ಜನರಿಗೆ ಸಾಲನೀಡಲು ಉಪಯೋಗಿಸುತ್ತವೆ. ಮಾತ್ರವಲ್ಲ, ರಾಜ್ಯದ ಜನಸಾಮಾನ್ಯರಿಗೆ ಮೂಲಸೌಕರ್ಯವನ್ನು ಒದಗಿಸುವ ಕುಡಿಯುವ ನೀರಿನ ಸರಬರಾಜು, ಒಳಚರಂಡಿ ವ್ಯವಸ್ಥೆ, ನಗರಾಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೊಳ್ಳುವ ಸ್ವಾಯತ್ತ ಸಂಸ್ಥೆಗಳಿಗೆ (ರಾಜ್ಯ ಮಂಡಳಿಗಳು) ಸಾಲ ನೀಡಲು ಅಥವಾ ಅವುಗಳ ಬಂಡವಾಳಕ್ಕೆ ವಿನಿಯೋಗಿಸುತ್ತವೆ. ಸಾಲದ ನೀತಿಗಳು ಬದಲಾದರೆ ವ್ಯಕ್ತಿಗಳಿಗೆ, ಉದ್ದಿಮೆಗಳಿಗೆ ಮತ್ತು ರಾಜ್ಯ ಸರಕಾರದ ಯೋಜನೆಗಳಿಗೆ ತೊಂದರೆಯಾಗುತ್ತದೆ; ರಾಜ್ಯಮಟ್ಟದಲ್ಲಿ ಬ್ಯಾಂಕುಗಳ ಸಹಾಯವಿಲ್ಲದೆ ಸಂಪನ್ಮೂಲಗಳ ಕೊರತೆಯಾದಾಗ ಮತ್ತೆ ಕೇಂದ್ರ ಸರಕಾರದಿಂದ ಸಹಾಯವನ್ನು ಕೇಳಬೇಕಾಗುತ್ತದೆ. ಸಮಸ್ಯೆಗಳನ್ನು ಗಮನದಲ್ಲಿರಿಸಿಯೇ ಅನೇಕ ವರ್ಷಗಳ ತನಕ ಪ್ರತ್ಯೇಕ ಬ್ಯಾಂಕುಗಳ ಅಸ್ತಿತ್ವವನ್ನು ಕೇಂದ್ರ ಸರಕಾರ ಉಳಿಸಿಕೊಂಡಿತ್ತು. ಈಗಿನ ಸರಕಾರದ ಬ್ಯಾಂಕುಗಳ ವಿಲೀನೀಕರಣದ ನೀತಿಯಿಂದ ರಾಜ್ಯಗಳ ಆರ್ಥಿಕ ಸ್ವಾಯತ್ತೆಗೆ ಮತ್ತಷ್ಟು ಭಂಗ ಬರುವುದು ನಿಚ್ಚಳ.

ನಮ್ಮ ರಾಜ್ಯದ ದುರದೃಷ್ಟವೆಂದರೆ ಇಲ್ಲಿಯೇ ಹುಟ್ಟಿ ಬೆಳೆದು ಇಲ್ಲಿನ ಆರ್ಥಿಕತೆಗೆ ಬೆನ್ನೆಲುಬಾದ ನಾಲ್ಕು ಸರಕಾರಿ ರಂಗದ ಬ್ಯಾಂಕುಗಳು ವಿಲೀನದ ಹೆಸರಿನಲ್ಲಿ ತಮ್ಮ ಅಸ್ತಿತ್ವವನ್ನು ಕಳಕೊಂಡಾಗ ಆ ಬಗ್ಗೆ ಇಲ್ಲಿನ ನಾಯಕರು, ಜನಪ್ರತಿನಿಧಿಗಳು ತಳೆದಿರುವ ಜಾಣ ಮೌನ. ಈಗಲೂ ಕಾಲ ಮಿಂಚಿಲ್ಲ. ಪ್ರಕ್ರಿಯೆಯು ಮೊದಲ ಹಂತದಲ್ಲಿ ಇದೆಯಷ್ಟೆ. ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಸರಕಾರಗಳೂ ಜನಪ್ರತಿನಿಧಿಗಳೂ ಅಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಟ್ಟಾಭಿ ಸೀತಾರಾಮಯ್ಯನವರು ಸ್ಥಾಪಿಸಿ ರಾಷ್ಟ್ರಮಟ್ಟಕ್ಕೆ ಬೆಳೆದ ಆಂಧ್ರ ಬ್ಯಾಂಕನ್ನು ಮುಂಬೈಯ ಯೂನಿಯನ್ ಬ್ಯಾಂಕಿನ ಜೊತೆಯಲ್ಲಿ ವಿಲೀನಗೊಳಿಸುವ ನಿರ್ಧಾರದ ವಿರುದ್ಧ ಧ್ವನಿಯೇರಿಸಿದ್ದಾರೆ. ಅವರಿಂದ ನಮ್ಮ ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳು ಪಾಠ ಕಲಿತು ಕ್ರಿಯಾಶೀಲರಾದರೆ ಕರ್ನಾಟಕದ ಅಸ್ಮಿತೆಯನ್ನು ಉಳಿಸಲು ಸಾಧ್ಯ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News

ಜಗದಗಲ
ಜಗ ದಗಲ