ಶರಣಸಂಕುಲ

Update: 2019-10-10 18:30 GMT

ಚಳವಳಿಯ ಪ್ರಜ್ಞೆ ಇಲ್ಲದೆ ಶರಣ ಸಂಕುಲವನ್ನಾಗಲಿ, ಅನುಭವ ಮಂಟಪವನ್ನಾಗಲಿ ಸೃಷ್ಟಿಸುವುದು ಸಾಧ್ಯವಿಲ್ಲ. ಯುದ್ಧಗಳ ಜಗತ್ತಿನಲ್ಲಿ ಶರಣರ ಸಹಾಯದೊಂದಿಗೆ ಚಳವಳಿಯನ್ನು ಮೊದಲಿಗೆ ರೂಪಿಸಿದವರು ಬಸವಣ್ಣನವರು. ಹಿಂಸೆ ಮತ್ತು ಯುದ್ಧಕ್ಕೆ ವಿರುದ್ಧವಾಗಿರುವ ಚಳವಳಿಗಳು ಶೋಷಣೆಯಿಲ್ಲದ ಬದುಕಿನ ಪರವಾಗಿರುತ್ತವೆ. ರಾಜ್ಯಶಕ್ತಿಯ ಕ್ರೌರ್ಯದ ವಿರುದ್ಧ ಹೋರಾಡುತ್ತ ವಿಜಯ ಸಾಧಿಸುವಲ್ಲಿ ಚಳವಳಿಗಳು ಜನಸಾಮಾನ್ಯರ ಬಹು ಪರಿಣಾಮಕಾರಿ ಅಸ್ತ್ರಗಳಾಗಿವೆ. ವಚನ ಚಳವಳಿ ವಿಶ್ವದ ಮೊದಲ ಚಳವಳಿಯಾಗಿದೆ. ಈ ಚಳವಳಿಯ ಪ್ರಜ್ಞೆಯಿಂದಾಗಿಯೇ ಶರಣರು ಹೊಸ ಮಾನವೀಯ ವ್ಯವಸ್ಥೆ ರೂಪಿಸುವಲ್ಲಿ ತಲ್ಲೀನರಾದರು. ದಯೆಯ ಮೂಲಕ ಯುದ್ಧಗಳಿಲ್ಲದ ಜಗತ್ತಿನ ಕನಸುಗಾರರಾದರು. ವಚನ ಚಳವಳಿ ಎಂಬ ಈ ಸರ್ವೋದಯ ಚಳವಳಿಯಲ್ಲಿ ಬಸವಣ್ಣನವರ ಇಡೀ ಕುಟುಂಬದ ಜೊತೆ ಅಕ್ಕನಾಗಮ್ಮ ಮತ್ತು ಸೋದರಳಿಯ ಚನ್ನಬಸವಣ್ಣನವರೂ ಪಾಲ್ಗೊಂಡಿದ್ದರು.

 ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರಿಂದ ಕೂಡಿದ್ದ ಶರಣಸಂಕುಲವೆಂಬ ಸಮಾಜ ಹೊಸ ಜೀವನವಿಧಾನದಿಂದ ಕೂಡಿತ್ತು. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಮತೆ ಎಂಬುದು ಹಾಸುಹೊಕ್ಕಾಗಿತ್ತು. ಶರಣರು ಸ್ವತಂತ್ರರೂ ಧೀರರೂ ಆಗಿದ್ದರು. ಉಳ್ಳವರ ಮತ್ತು ಬಡವರ ಎರಡು ಬದುಕಿನ ಕ್ರಮಗಳನ್ನು ಗುರುತಿಸಿದ ಬಸವಣ್ಣನವರು ಬಡವರ ಉದ್ಧಾರಕ್ಕಾಗಿ ಪಟ್ಟ ಶ್ರಮ ಅನನ್ಯವಾಗಿದೆ. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಂದ ಕೂಡಿದ್ದ ಸಮಾಜದಿಂದ ಜನಸಮುದಾಯವನ್ನು ಎತ್ತಿ, ಸರ್ವಭೇದಗಳನ್ನು ನಿರಾಕರಿಸುವ ಶರಣ ಸಂಕುಲವೆಂಬ ವಿಶಿಷ್ಟ ಸಮಾಜವನ್ನು ಬಸವಾದಿ ಶರಣರು ರೂಪಿಸಿದರು. ಬಸವಧರ್ಮದಲ್ಲಿ ಸಂಕುಲವು ವಿಶಿಷ್ಟವಾದ ಪಾರಿಭಾಷಿಕ ಪದವಾಗಿದೆ. ಸಂಕುಲದಲ್ಲಿ ವರ್ಣ, ಕುಲ, ಜಾತಿ, ಲಿಂಗ ಮುಂತಾದ ಭೇದಗಳಿರುವುದಿಲ್ಲ. ಸರ್ವಸಮತ್ವವೇ ಸಂಕುಲದ ಜೀವಾಳವಾಗಿದೆ. ಬಡವ-ಶ್ರೀಮಂತ, ಹೆಣ್ಣು-ಗಂಡು ಮುಂತಾದ ಭೇದಗಳಿಂದ ಶರಣ ಸಂಕುಲ ಮುಕ್ತವಾಗಿತ್ತು. ಎಲ್ಲ ಕಾಯಕಜೀವಿಗಳು ಸಮಾನ ಗೌರವವನ್ನು ಹೊಂದಿದ್ದರು. ಶರಣ ಸಂಕುಲದಲ್ಲಿ ‘ಒಕ್ಕಮಿಕ್ಕ’ ಮತ್ತು ‘ಶಿವನ ಸೊಮ್ಮು’ ಪದಗಳು ಬಹಳ ಮುಖ್ಯವಾಗಿವೆ. ಶರಣರು ವೈಯಕ್ತಿಕವಾಗಿ ‘ಇಂದಿಂಗೆ ನಾಳಿಂಗೆ’ ಕೂಡಿಸಿ ಇಡುತ್ತಿರಲಿಲ್ಲ. ‘ಪಸರಕ್ಕನುವಿಲ್ಲ ಬಂದ ತತ್ಕಾಲಕ್ಕೆ ಉಂಟು’ ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕಜೀವಿಗಳಾಗಿದ್ದ ಶರಣರು ಭವಿಷ್ಯಕ್ಕಾಗಿ ಸಂಗ್ರಹ ಮಾಡಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ದೈನಂದಿನ ಬದುಕಿಗೆ ಕೊರತೆ ಇರಲಿಲ್ಲ. ಯಾರಿಗಾದರೂ ಆರ್ಥಿಕ ತೊಂದರೆಯಾದರೆ ಚಿಂತಿಸುವ ಅಗತ್ಯವಿರಲಿಲ್ಲ. ಏಕೆಂದರೆ ಬಸವಣ್ಣನವರು ತೊಂದರೆಗೊಳಗಾದವರಿಗೆ ಶಿವನಿಧಿಯನ್ನು ಸ್ಥಾಪಿಸಿದ್ದರು. ಶರಣರು ತಾವು ದುಡಿದು ಗಳಿಸಿದ್ದನ್ನು ಶಿವನ ಪ್ರಸಾದ ಎಂದು ಭಾವಿಸುತ್ತಿದ್ದರು. ದಾಸೋಹಂಭಾವದಿಂದ ಶಿವನಿಧಿಗೆ ಅರ್ಪಿಸಿ ಉಳಿದದ್ದರಲ್ಲಿ ಉಪಜೀವನ ಸಾಗಿಸುತ್ತಿದ್ದರು. ಹೀಗೆ ಶರಣಸಂಕುಲಕ್ಕೆ ಕೊಟ್ಟು ಉಳಿದದ್ದೇ ‘ಒಕ್ಕಮಿಕ್ಕ’ ವಸ್ತು. ಶರಣರದು ಬಾಹ್ಯದಲ್ಲಿ ಬಡವರ ಉಪಜೀವನವಾಗಿತ್ತು. ಆದರೆ ಆಂತರ್ಯದಲ್ಲಿ ಅವರು ಘನಮನ ಸಂಪನ್ನರಾಗಿದ್ದರು. ಅವರೊಳಗಿನ ಶ್ರೀಮಂತಿಕೆಯನ್ನು ಮೀರುವ ಸಾಮರ್ಥ್ಯ ಈ ಭೌತಿಕ ಜಗತ್ತಿನ ಶ್ರೀಮಂತರಿಗೆ ಇರಲಿಲ್ಲ. ಸಮಾಜವನ್ನು ಬಡವಾಗಿಡುವ ಶ್ರೀಮಂತಿಕೆಗೆ ದುರಂತ ಕಾಯ್ದಿರುತ್ತದೆ ಎಂಬುದು ಶರಣಸಂಕುಲದ ಸಂದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News