ಇಥಿಯೋಪಿಯಾ ಪ್ರಧಾನಿ ಅಬೀ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ
ಓಸ್ಲೊ(ನಾರ್ವೆ),ಅ.11: ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧನೆಗೆ ಪ್ರಯತ್ನಗಳಿಗಾಗಿ,ವಿಶೇಷವಾಗಿ ನೆರೆಯ ಎರಿಟ್ರಿಯಾದೊಂದಿಗೆ ಗಡಿ ಬಿಕ್ಕಟ್ಟನ್ನು ಬಗೆಹರಿಸಲು ತನ್ನ ನಿರ್ಧಾರಕ ಉಪಕ್ರಮಕ್ಕಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ (43) ಅವರನ್ನು 2019ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ಶುಕ್ರವಾರ ಘೋಷಿಸಿದೆ.
2018,ಎಪ್ರಿಲ್‌ನಲ್ಲಿ ಇಥಿಯೋಪಿಯಾದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆರೇ ತಿಂಗಳಲ್ಲಿ ಬದ್ಧವೈರಿ ಎರಿಟ್ರಿಯಾದೊಂದಿಗೆ ಶಾಂತಿಯನ್ನು ಸಾಧಿಸಿದ್ದ ಅಲಿ,ಭಿನ್ನಮತೀಯರನ್ನು ಜೈಲುಗಳಿಂದ ಬಿಡುಗಡೆಗೊಡಿಸಿದ್ದರು. ಸರಕಾರದ ದೌರ್ಜನ್ಯಗಳಿಗೆ ಕ್ಷಮೆ ಯಾಚಿಸಿದ್ದ ಅವರು,ತನ್ನ ಪೂರ್ವಾಧಿಕಾರಿಗಳಿಂದ ‘ಭಯೋತ್ಪಾದಕರು’ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು ದೇಶಭ್ರಷ್ಟರಾಗಿದ್ದ ಸಶಸ್ತ್ರ ಗುಂಪುಗಳನ್ನು ತಾಯ್ನಾಡಿಗೆ ಮರಳಿ ಸ್ವಾಗತಿಸಿದ್ದರು.
ತೀರ ಇತ್ತೀಚಿಗೆ ಮುಂದಿನ ವರ್ಷದ ಮೇ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಗಾಗಿ ಪೂರ್ವ ಸಿದ್ಧತೆಗೆ ಚಾಲನೆ ನೀಡಿದ ವೇಳೆ ಅವರು ದೇಶದ ಆರ್ಥಿಕತೆಯನ್ನು ಹೆಚ್ಚಿಸುವ ತನ್ನ ದೂರದೃಷ್ಟಿಯನ್ನು ಪ್ರಕಟಿಸಿದ್ದರು.
ಇಥಿಯೋಪಿಯಾದ ಬೆಷಾಷಾ ಪಟ್ಟಣದಲ್ಲಿ ಮುಸ್ಲಿಂ ತಂದೆ ಮತ್ತು ಕ್ರಿಶ್ಚಿಯನ್ ತಾಯಿಗೆ ಜನಿಸಿದ್ದ ಅಲಿ ವಿದ್ಯುತ್ ಮತ್ತು ನಲ್ಲಿ ನೀರಿನ ಸೌಕರ್ಯವಿಲ್ಲದಿದ್ದ ಮನೆಯಲ್ಲಿ ಚಾಪೆಯೂ ಇಲ್ಲದೆ ನೆಲದ ಮೇಲೆಯೇ ಮಲಗಿ ಬೆಳೆದಿದ್ದರು. ಕಳೆದ ತಿಂಗಳು ರೇಡಿಯೊ ಸಂದರ್ಶನವೊಂದರಲ್ಲಿ ಅವರು,‘ನಾವು ನದಿಯಿಂದ ನೀರನ್ನು ಹೊತ್ತು ತರುತ್ತಿದ್ದೆವು. ಏಳನೇ ತರಗತಿಯವರೆಗೂ ವಿದ್ಯುಚ್ಛಕ್ತಿ ಅಥವಾ ಡಾಮರು ರಸ್ತೆಯನ್ನು ನಾನು ನೋಡಿಯೇ ಇರಲಿಲ್ಲ ’ಎಂದು ಹೇಳುವ ಮೂಲಕ ತಾನು ದೇಶದ ಪ್ರಧಾನಿಯಾಗಿದ್ದರೂ ತನ್ನ ಬೇರುಗಳನ್ನು ಮರೆತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.
ಆಡಳಿತಾರೂಢ ಇಥಿಯೋಪಿಯನ್ ಪೀಪಲ್ಸ್ ರೆವೊಲ್ಯೂಷನರಿ ಡೆಮಾಕ್ರಾಟಿಕ್ ಫ್ರಂಟ್ 1991ರಲ್ಲಿ ಡರ್ಗ್ ಮಿಲಿಟರಿ ಜುಂಟಾದಿಂದ ಅಧಿಕಾರವನ್ನು ಕಿತ್ತುಕೊಂಡ ಬಳಿಕ ಅದು ಸೃಷ್ಟಿಸಿದ್ದ ಅಧಿಕಾರ ವ್ಯವಸ್ಥೆಗಳ ಮೂಲಕ ಅಲಿ ತನ್ನ ಜೀವನದಲ್ಲಿಯ ತ್ವರಿತ ಹೆಜ್ಜೆಗಳನ್ನು ಹಾಕಿದ್ದರು. ತಂತ್ರಜ್ಞಾನದ ಬಗ್ಗೆ ಒಲವು ಹೊಂದಿದ್ದ ಅವರು ಹದಿಹರೆಯದಲ್ಲಿಯೇ ರೇಡಿಯೊ ಆಪರೇಟರ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.
ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಹುದ್ದೆಗೇರಿದ್ದ ಅವರು ಸರಕಾರವನ್ನು ಸೇರಿದಾಗ ಮೊದಲು ಇಥಿಯೋಪಿಯಾದ ಸೈಬರ್ ಗುಪ್ತಚರ್ಯೆ ಘಟಕ ಇನ್‌ಫಾರ್ಮೇಷನ್ ನೆಟ್‌ವರ್ಕ್ ಸೆಕ್ಯುರಿಟಿ ಏಜೆನ್ಸಿಯ ಸ್ಥಾಪಕ ಮುಖ್ಯಸ್ಥರಾಗಿದ್ದರು.ಬಳಿಕ ಸಂಪುಟದಲ್ಲಿ ಸಚಿವರಾಗಿದ್ದ ಅವರು ತನ್ನ ತವರು ಪ್ರದೇಶ ಒರೊಮಿಯಾದಲ್ಲಿ ಪಕ್ಷದ ಅಧಿಕಾರಿಯಾಗಿದ್ದರು.