ಜಲ್ಲಿಕಟ್ಟು-ಮನುಷ್ಯನ ಕೊಳಕಿಗೆ ಹಿಡಿದ ಕನ್ನಡಿ

Update: 2019-10-12 18:34 GMT

ತೊಂಬತ್ತು ನಿಮಿಷಗಳ ಅವಧಿಯ ಕತೆಯಿಲ್ಲದ ಚಿತ್ರದಲ್ಲಿ ಹಲವಾರು ಕತೆಗಳನ್ನು ಹೆಣೆಯುವ ದೃಶ್ಯ ಸಾಧ್ಯತೆಗಳನ್ನು ಜಲ್ಲಿಕಟ್ಟು ತೆರೆದಿಟ್ಟಿದೆ. ಉನ್ನತ ಗುಣಮಟ್ಟದ ತಾಂತ್ರಿಕತೆ, ಕಡಿಮೆ ಮಾತುಗಳ, ಕಲಾತ್ಮಕ ನಿರ್ದೇಶನದಿಂದ ಅತ್ಯುತ್ತಮ ಕಲಾಕೃತಿಯಾಗಿದೆ. ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸುವ ಅಪರೂಪದ ಚಿತ್ರಗಳ ಪಟ್ಟಿಗೆ ಸೇರಿದೆ. ಇದು ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ನವೀನ ಪ್ರಯೋಗ; ಒಂದು ಯಶಸ್ವೀ ಪ್ರಯೋಗ.

ಮಲಯಾಳಂ ಭಾಷೆಯ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿಯ ಚಿತ್ರಗಳಲ್ಲಿ ಮೂಡುವ ದೃಶ್ಯದ ಕ್ಷಣಗಳು ಹಾಗೆ ಸುಮ್ಮನೆ ಚಲಿಸುವುದಿಲ್ಲ. ಚದುರಿದಂತೆ ಕಂಡರೂ ಒಟ್ಟು ಸಿನೆಮಾದಲ್ಲಿ ಎಲ್ಲೆಲ್ಲಿಯೂ ಸಂಬಂಧಗಳ ಜಾಲದಲ್ಲಿ ಹೆಣೆದುಕೊಂಡು ಅರ್ಥಗಳನ್ನು ಕಲ್ಪಿಸುತ್ತವೆ. ಈ ನಿರ್ದೇಶಕನ ಹಿಂದಿನ ‘ಅಂಗಮಾಲೈ ಡೈರೀಸ್’ ಮತ್ತು ‘ಈ.ಮಾ.ಯಾ’ ಚಿತ್ರಗಳನ್ನು ನೋಡಿದ್ದರೆ ಉನ್ಮಾದಗೊಂಡ ಜನಸಮೂಹ ನಿರತವಾಗುವ ದೊಂಬಿ, ಪುಂಡಾಟಿಕೆಯನ್ನು ಚಿತ್ರೀಕರಿಸುವ ಕುಶಲತೆ ಆತನಿಗೆ ದಕ್ಕಿರುವುದು ಮನದಟ್ಟಾಗುತ್ತದೆ. ಆ ಚಿತ್ರಗಳ ಹಾದಿಯಲ್ಲಿಯೇ ಸಾಗುವ, ಈಗಾಗಲೇ ಅಂತರ್‌ರಾಷ್ಟ್ರೀಯ ಉತ್ಸವಗಳಲ್ಲಿ ಸದ್ದು ಮಾಡಿರುವ ‘ಜಲ್ಲಿಕಟ್ಟು’ ಚಿತ್ರವು ಸಮೂಹ ಸನ್ನಿಗೆ ಒಳಗಾದ ಜನರ ಉನ್ಮಾದ, ರಾಗ ದ್ವೇಷಗಳು, ಅಕರಾಳ-ವಿಕರಾಳಗಳಿಗೆ ಕನ್ನಡಿ ಹಿಡಿಯುತ್ತದೆ. ದೃಶ್ಯಗಳು, ಶಬ್ದಗಳ ಮೂಲಕವೇ ಉನ್ನತ ಕಲಾಕೃತಿಯಾಗಿರುವ ಜಲ್ಲಿಕಟ್ಟು ಪ್ರಧಾನವಾಗಿ ಮನುಷ್ಯ ಮತ್ತು ಮೃಗದ ನಡುವಿನ ಸಂಘರ್ಷ. ಆದರೆ ಇಲ್ಲಿ ಮನುಷ್ಯರ್ಯಾರು, ಮೃಗ ಯಾವುದು ಎಂದು ನಿರ್ಧರಿಸುವುದು ಪ್ರೇಕ್ಷಕನಿಗೆ ಬಿಟ್ಟ ವಿಚಾರ.

ಚಿತ್ರದ ಆರಂಭದ ದೃಶ್ಯಗಳೇ ಇದರ ನಿರೂಪಣೆ ಭಿನ್ನವಾಗಿರುವುದಕ್ಕೆ ಸೂಚನೆ ನೀಡುತ್ತವೆ. ಗೋಡೆ ಗಡಿಯಾರದ ಟಿಕ್.. ಟಿಕ್ ಶಬ್ದಕ್ಕೆ ಅನುಗುಣವಾಗಿ ವಿವಿಧ ವಯೋಮಾನದ ಗಂಡು-ಹೆಣ್ಣುಗಳ ಕಣ್ಣು ರೆಪ್ಪೆಗಳು ತೆರೆದುಕೊಳ್ಳುತ್ತವೆ. ಬದುಕಲು ಪ್ರಯಾಸಪಡುವ, ದೀರ್ಘ ಉಸಿರೆಳೆದು ಬಸವಳಿಯುವ ಮುದುಕ ಮುದುಕಿಯರ ಬೊಚ್ಚು ಬಾಯಿ, ಗಂಟಲ ನರಗಳ ಸಮೀಪದ ದೃಶ್ಯಗಳು. ಈ ಲಯಬದ್ಧ ದನಿಗಳಿಗೆ ತಾಳ ಹಾಕುವಂತೆ ಕೋಣನ ಮಾಂಸವನ್ನು ಕತ್ತರಿಸುವ ಮಚ್ಚಿನೇಟುಗಳು. ಮಾಂಸದಂಗಡಿಯ ಮುಂದೆ ನೆರೆದ ಖರೀದಿದಾರರು. ಮಾಂಸ ಕತ್ತರಿಸುವ ಕಸಾಯಿಗಳ ಕೌಶಲ್ಯ, ಅರ್ಥ, ಸಂಬಂಧವೇ ಇಲ್ಲದ ಜನರ ಗುಜುಗುಜು. ಒಬ್ಬಬ್ಬರದೂ ಒಂದೊಂದು ಭಾವ. ಅಲ್ಲಿಂದಾಚೆಗೆ ಹಳ್ಳಿಯ ಮನೆಯೊಳಗಡೆ ಬದುಕುವ ಹೆಣ್ಣುಗಳು. ಅವರವರ ಲೋಕದಲ್ಲಿ, ಯಾರಿಗೂ ಸಂಬಂಧವಿಲ್ಲದಂತೆ, ತಲ್ಲೀನವಾಗಿರುವ ಹೆಣ್ಣುಗಳ ಜಗತ್ತು. ಇಲ್ಲೆಲ್ಲಾ ಕ್ರಮೇಣ ಆವರಿಸಿಕೊಳ್ಳುವುದು ಅರಾಜಕತೆ. ಹಾಗೆ ನೋಡಿದರೆ ಇಲ್ಲಿ ಕತೆಯೆಂಬುದಿಲ್ಲ. ಮನುಷ್ಯರ ಅರ್ಥವಿಲ್ಲದ ವರ್ತನೆಗಳು, ಹುಚ್ಚಾಟಗಳೇ ಎಲ್ಲ. ಇಂಥ ಚದುರಿದ ದೃಶ್ಯಗಳು ಮತ್ತು ಶಬ್ದದ ಮೂಲಕವೇ ದರ್ಶನವೊಂದನ್ನು ಕಟ್ಟುವ ಪೆಲ್ಲಿಸ್ಸೆರಿಯ ಪ್ರತಿಭೆ ಅಸಾಧಾರಣವಾದದ್ದು. ಒಳ್ಳೆಯ ಚಿತ್ರಕ್ಕೆ ಉತ್ತಮ ಕತೆಯೇ ಆಧಾರ ಎಂಬ ಸ್ವೀಕೃತ ನೀತಿಯನ್ನು ಮುರಿದು ಹಾಕಿರುವ ಪೆಲ್ಲಿಸ್ಸೆರಿ, ಸಿನೆಮಾ ಎನ್ನುವುದು ದೃಶ್ಯದಲ್ಲಿ ಕತೆ ಕಟ್ಟುವ ವಿಧಾನವೇ ಹೊರತು ಕತೆಯ ವಿವರಗಳಿಗೆ ದೃಶ್ಯ ಜೋಡಿಸುವುದಲ್ಲವೆಂಬುದನ್ನು ನಿರೂಪಿಸಿದ್ದಾರೆ.

ತೊಂಬತ್ತು ನಿಮಿಷಗಳ ಅವಧಿಯ ಕತೆಯಿಲ್ಲದ ಚಿತ್ರದಲ್ಲಿ ಹಲವಾರು ಕತೆಗಳನ್ನು ಹೆಣೆಯುವ ದೃಶ್ಯ ಸಾಧ್ಯತೆಗಳನ್ನು ಜಲ್ಲಿಕಟ್ಟು ತೆರೆದಿಟ್ಟಿದೆ. ನನ್ನ ಅನುಭವ ಮಿತಿಯಲ್ಲಿ ಹೇಳುವುದಾದರೆ ಇದು ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ನವೀನ ಪ್ರಯೋಗ; ಒಂದು ಯಶಸ್ವೀ ಪ್ರಯೋಗ ಎಂದನಿಸುತ್ತದೆ. ಆಸಂಗತದಲ್ಲಿ ಸಂಗತವನ್ನು, ಅರಾಜಕತೆಯಲ್ಲಿ ಕ್ರಮಬದ್ಧತೆಯನ್ನು ಕಾಣಿಸುವ ನಿರ್ದೇಶಕನ ಜಾಣ್ಮೆಗೆ ತಲೆದೂಗದಿರಲು ಸಾಧ್ಯವೇ ಇಲ್ಲ.

ಮೊದಲೇ ಹೇಳಿದಂತೆ ಇಲ್ಲಿ ಕತೆಯೆಂಬುದು ಇಲ್ಲ. ವಾರ್ಕೆ ಅಥವಾ ವಾರ್ಕೆಯಾಚ್ಚನ್ ಎಂಬಾತ ಕೇರಳದ ಒಂದು ಹಳ್ಳಿಯಲ್ಲಿ ಕೋಣವನ್ನು ಕಡಿದು ಮಾರಾಟ ಮಾಡುವ ಕಸಾಯಿ. ಅವನಿಗೆ ಸಹಾಯಕ ಆ್ಯಂಟನಿ. ಒಂದು ರಾತ್ರಿ ಬೆಳಗಿನ ಜಾವ ಕೋಣವೊಂದನ್ನು ಕಡಿಯುವ ಸಿದ್ಧತೆಯಲ್ಲಿದ್ದಾಗ ಕರೆಂಟು ಹೋಗಿ, ಕೋಣ ಕಟುಕರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತದೆ. ಆತನ ಮಾಂಸದ ಮೇಲೆ ಅವಲಂಬಿತವಾಗಿರುವ ಇಡೀ ಊರ ಜನರು ಪರಾರಿಯಾಗಿರುವ ಕೋಣವನ್ನು ಹಿಡಿಯಲು ಸಜ್ಜಾಗುತ್ತಾರೆ. ಅಲ್ಲಿಂದ ಊಹೆಗೂ ನಿಲುಕದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಬಗೆಬಗೆಯ ಜನರ ವಿಕಾರಗಳ ಅಭಿವ್ಯಕ್ತಿಗೆ ಕೋಣವನ್ನು ಹಿಡಿಯುವುದೊಂದು ನೆಪವಾಗುತ್ತದೆ. ಹಳ್ಳಿಯಲ್ಲಿರುವ ಪ್ರತಿಯೊಬ್ಬ ಗಂಡಸಿನ ಪೌರುಷದ ಸಾಬೀತಿಗೆ ಅದೊಂದು ಅವಕಾಶ ಒದಗಿಸುತ್ತದೆ. ಬಗೆ ಬಗೆಯ ಆಯುಧಗಳು, ಸಾಧನಗಳ ಜೊತೆಗೆ ಮನುಷ್ಯರ ಅಹಂಕಾರಗಳು ಹೊರಗೆ ಬರುತ್ತವೆ. ಸದಾ ಸಿಡಿಯುವ, ಕಾಲು ಕೆರೆದು ಜಗಳಕ್ಕೆ ಸಿದ್ಧವಾಗುವ, ಉದ್ವೇಗಗೊಳ್ಳುವ, ಉನ್ಮಾದಕ್ಕೀಡಾಗುವ ಜನರು ಕಾರಣವಿಲ್ಲದೇ ಹೊಡೆದಾಡುತ್ತಾರೆ. ಯಾರು ಯಾವಾಗ ಯಾರ ಪರ ನಿಲ್ಲುತ್ತಾರೆ ಎಂಬುದೇ ಆ ಉನ್ಮಾದದ ಪರಿಸ್ಥಿತಿಯಲ್ಲಿ ಅರಿವಾಗದಂತೆ ಮನುಷ್ಯರ ಹುಚ್ಚು ವರ್ತನೆಗಳು ಒಂದಾದ ಮೇಲೊಂದರಂತೆ ಪ್ರೇಕ್ಷಕನ ಮೇಲೆ ದಾಳಿ ಇಡುತ್ತವೆ. ಪೌರುಷತ್ವವನ್ನು ತೋರುವ ನೆಪದ ಹಿಂದೆ ಇರುವ ದ್ವೇಷಗಳು, ಅಪನಂಬಿಕೆಗಳು, ಕ್ರೂರ ಭಾವನೆಗಳು ಒಂದೊಂದಾಗಿ ಹೊರಬರುತ್ತವೆ. ಪುರುಷಾಹಂಕಾರ ಮತ್ತು ಹಿಂಸೆಗಳು ಜೊತೆ ಜೊತೆಯಾಗಿ ಸೃಷ್ಟಿಸುವ ಕ್ರೌರ್ಯವು ತೆರೆ ತೆರೆಯಾಗಿ ಅಪ್ಪಳಿಸುತ್ತದೆ.

ತೆರೆಯ ಮೇಲೆ ಬಿಚ್ಚಿಕೊಳ್ಳುವ ಮನುಷ್ಯನ ಮೃಗೀಯ ಗುಣಗಳ ಉನ್ಮಾದದ ಮಡುವಿನಲ್ಲಿ ಬಿದ್ದು ಒದ್ದಾಡುವ ಅನುಭವ ಪ್ರೇಕ್ಷಕನಾಗುವ ರೀತಿಯಲ್ಲಿ ನಿರ್ದೇಶಕ ಸಿನೆಮಾ ಕೌಶಲ್ಯಗಳನ್ನು ಬಳಸಿದ್ದಾನೆ. ಚಿತ್ರದ ಆರಂಭದಲ್ಲಿ ದೀರ್ಘವಾಗಿ ಉಸಿರು ಎಳೆದು ಬಿಡುಗಡೆ ಬಯಸುವ ವ್ಯಕ್ತಿಯ ಪಾಡೇ ಚಿತ್ರ ನೋಡುವ ನಮ್ಮದಾಗುತ್ತದೆ. ಒರಟಾದ ದೃಶ್ಯಗಳು, ಉನ್ಮಾದದಲ್ಲಿಯೂ ಸೃಷ್ಟಿಯಾಗುವ ಹಾಸ್ಯ ಪ್ರಸಂಗಗಳು, ನೆಪ ಸಿಕ್ಕಿದ ತಕ್ಷಣ ಒಬ್ಬರನ್ನೊಬ್ಬರು ಹಣಿಯಲು ಯತ್ನಿಸುವ ಮನುಷ್ಯರ ವರ್ತನೆಗಳನ್ನು ಸಂಯೋಜಿಸಿ ಸೃಷ್ಟಿಸಿರುವ ಲಿಜೋ ಅವರ ಮಾಂತ್ರಿಕತೆ ಎಣೆಯಿಲ್ಲದ್ದು. ಚಿತ್ರವೊಂದಕ್ಕೆ ಮಾಂತ್ರಿಕ ಗುಣವನ್ನು ತರಲು ಬಗೆ ಬಗೆಯ ವರ್ಣಗಳು, ಸುಂದರ ತೋಟಗಳು, ಆಕಾಶ, ಜಲಪಾತ, ಸಂಗೀತ-ಇವು ಯಾವುವೂ ಅಗತ್ಯವಿಲ್ಲ; ಮನುಷ್ಯರ ಸಂಚಾರ ಭಾವಗಳನ್ನು ಸೂಕ್ತ ರೀತಿಯಲ್ಲಿ ಸೆರೆ ಹಿಡಿದರೆ ಮಾಂತ್ರಿಕತೆ ಸೃಷ್ಟಿಯಾಗುತ್ತದೆಂಬುದನ್ನು ಲಿಜೋ ರುಜುವಾತುಪಡಿಸಿದ್ದಾರೆ.

ಮುಂಜಾವಿನ ಕತ್ತಲಲ್ಲಿ ಆರಂಭವಾಗುವ ಚಿತ್ರ, ದಿನದಲ್ಲಿ ಬೆಳೆದು, ಮತ್ತೆ ರಾತ್ರಿಯಲ್ಲಿ ಪಂಜು, ದೀಪಗಳ ಬೆಳಕಿನ ವಿನ್ಯಾಸದಲ್ಲಿ, ಸುರಿವ ಮಳೆಯಲ್ಲಿ ಮನುಷ್ಯನ ಭಾವಗಳ ವಿರಾಟ್ ಲೀಲೆಗಳನ್ನು ಸೆರೆಹಿಡಿಯುತ್ತದೆ. ಸಾಹಿತ್ಯದ ಪರಿಭಾಷೆಯಲ್ಲಿ ಬರುವ ಪ್ರಜ್ಞಾ ಪ್ರವಾಹ ತಂತ್ರ ಇಲ್ಲಿ ದೃಶ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಪಡೆದಂತೆ ಕಾಣುತ್ತದೆ. ತಪ್ಪಿಸಿಕೊಂಡ ಕೋಣದ ಹುಡುಕಾಟದ ಸಾಹಸಗಳಿಗೆ ಪ್ರೇಕ್ಷಕ ತೆರೆದುಕೊಳ್ಳುತ್ತಿದ್ದಂತೆ, ಚಿತ್ರವು ಅನೇಕ ಅರ್ಥಗಳನ್ನು ಹೊಳೆಸುತ್ತಾ ಹೋಗುತ್ತದೆ. ಪರಾರಿಯಾದ ಅಸಹಾಯಕ ಕೋಣವನ್ನು ಬೆನ್ನಟ್ಟುವ ದೃಶ್ಯ ಆರಂಭವಾಗುತ್ತಿದ್ದಂತೆ ಆರಂಭದಲ್ಲಿ ಚದುರಿದಂತೆ, ಅರ್ಥ ಸಂಬಂಧವಿಲ್ಲದಂತೆ ಕಂಡ ಮುಖಗಳ ಮನುಷ್ಯ ಸಂಬಂಧಗಳು ಒಂದೊಂದಾಗಿ ಕೂಡಿಕೊಳ್ಳುತ್ತವೆ. ಆ್ಯಂಟನಿ ಕೇವಲ ತನ್ನ ಮಚ್ಚಿನಲ್ಲಿ ಮಾಂಸ ಕತ್ತರಿಸುವವನಲ್ಲ. ವೀರನೆಂದು ಕೊಚ್ಚಿಕೊಳ್ಳುವ ಕುಟ್ಟಾಚ್ಚನ್ ಎಂಬ ಬೇಟೆಗಾರನನ್ನು ಆತ ಹಣೆಯಬೇಕಿದೆ. ಕುಟ್ಟಾಚ್ಚನ್ ತನ್ನ ಖ್ಯಾತಿಯನ್ನು ಉಳಿಸಿಕೊಳ್ಳಬೇಕಾದ ಒತ್ತಡವಿದೆ. ಕಾಣೆಯಾಗಿರುವ ಕೋಣವನ್ನು ಹಿಡಿದು ಕೊಲ್ಲುವ ಜವಾಬ್ದಾರಿಯನ್ನು ತಾನೇ ಮೈಮೇಲೆ ಹಾಕಿಕೊಂಡಿದ್ದಾನೆ. ಇಲ್ಲಿ ಕೋಣವನ್ನು ಬೆನ್ನಟ್ಟುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಹಿನ್ನೆಲೆಗಳಿವೆ. ಭಾವನೆಗಳಿವೆ. ಅಹಂಕಾರವಿದೆ. ಕೋಣವನ್ನು ಬೆನ್ನಟ್ಟುವ ಕಾರ್ಯಾಚರಣೆಯಲ್ಲಿ ಅವರ ನಿಜಮುಖಗಳು ಹೊರಬರುತ್ತವೆ. ಮನುಷ್ಯ ಮತ್ತು ಮೃಗದ ನಡುವಿನ ವ್ಯತ್ಯಾಸಗಳೇ ಮರೆಯಾಗತೊಡಗುತ್ತವೆ.

ಇಲ್ಲಿ ಯಾವುದೇ ಒಂದು ಪಾತ್ರಕ್ಕೆ ಒತ್ತು ನೀಡಿಲ್ಲ. ಯಾಕೆಂದರೆ ಇದು ಒಂದೆರಡು ಪಾತ್ರಗಳ ಕತೆಯಲ್ಲ. ಹಲವಾರು ಪಾತ್ರಗಳ ಕತೆ. ಪ್ರಾಯಶಃ ಇದು ಮನುಕುಲದ ವಿಕೃತಗಳ ಒಟ್ಟಾರೆ ಕತೆ. ಚಿತ್ರದ ಅಂತಿಮ ಕ್ಷಣಗಳಲ್ಲಿ ಸರ್ರಿಯಲಿಸ್ಟಿಕ್ ಆದ ಒಂದು ದೃಶ್ಯವಿದೆ. ಕೆಸರಲ್ಲಿ ಹೂತ ಕೋಣವನ್ನು ತಾನು ಮೊದಲು ಹಿಡಿದೆ ಎಂದು ಸಾಬೀತುಪಡಿಸಲು ಪೈಪೋಟಿಗೆ ಬಿದ್ದವರಂತೆ ಕೆಸರುಮಯವಾದ ಜನರು ಕೋಣನ ಸುತ್ತ ಮುಗಿಬೀಳುತ್ತಾರೆ. ಆ ಸ್ಪರ್ಧೆಯಲ್ಲಿ ಒಬ್ಬರನ್ನೊಬ್ಬರು ಏರಿ ಕೊಳಕಿನ ಗೋಪುರ ನಿರ್ಮಿಸುತ್ತಾರೆ. ಮನುಷ್ಯರು ಭಾಷೆ ಮರೆತವರಂತೆ ಚೀರಾಡುತ್ತಾ, ಹೋರಾಡುತ್ತಾ ಮೇಲೆ ಮೇಲೆ ಬೀಳುತ್ತಾರೆ. ಕರ್ಕಶ ಚೀರಾಟವೇ ಮನುಷ್ಯರ ಭಾಷೆಯಾಗಿ ತೆರೆಯ ಮೇಲೆ ಪರಿವರ್ತನೆಯಾಗುತ್ತದೆ. ಏರಿದ ಗೋಪುರ ಕುಸಿದು ಕೊನೆಗೆ ಒಬ್ಬರನ್ನೊಬ್ಬರು ತಳ್ಳಾಡುತ್ತಾ ಕೆಸರಲ್ಲಿ ಹೂತು ಹೋಗುತ್ತಾರೆ. ಚಿತ್ರದ ಮಧ್ಯದಲ್ಲಿ ಮುದುಕನೊಬ್ಬ ಬೆಂಕಿ ಕಾಯಿಸಿಕೊಳ್ಳುತ್ತಾ ಹೇಳುವ-‘‘ಈ ಭೂಮಿಯಲ್ಲಿ ಒಂದು ಕಾಲದಲ್ಲಿ ಪ್ರಾಣಿಗಳೇ ಇದ್ದವು. ಈಗಲೂ ಇವೆ. ಎರಡು ಕಾಲುಗಳ ಈ ಜಂತುಗಳನ್ನು ನೋಡು.’’ ಮಾತುಗಳು ಕೊನೆಯಲ್ಲಿ ಅರ್ಥ ಕಂಡುಕೊಳ್ಳುತ್ತವೆ.

ಈ ಚಿತ್ರದಲ್ಲಿ ಹೆಣ್ಣುಗಳಿಗೆ ಪ್ರಧಾನ ಸ್ಥಾನವಿಲ್ಲ. ಹೆಚ್ಚಿನ ಭಾಗ ಹೆಣ್ಣು ಪಾತ್ರಗಳು ಮನೆಯಲ್ಲಿ ವಾದ ಮಾಡುವ ದನಿಯಾಗಿ ಅಥವಾ ಹರಟೆ ಹೊಡೆಯುವ ಗುಸುಗುಸು ಶಬ್ದವಾಗಿ ತಮ್ಮ ಇರುವಿಕೆಯನ್ನು ಸಾರುತ್ತವೆ. ಪ್ರಾಣಿಯನ್ನು ಹಿಡಿಯುವ ಶೌರ್ಯದ ಕಾರ್ಯ ಎಂದಿನಂತೆ ಗಂಡಸರದೇ ಆಗಿದೆ. ಪ್ರಾಯಶಃ ಆಕ್ರಮಣಶೀಲ ಸ್ವಭಾವ, ಕ್ರೌರ್ಯ, ವಿನಾಶದ ಹಂಬಲ ಗಂಡಸರಲ್ಲಿ ಹುದುಗಿರುವ ಗುಣಗಳೆಂದು ಕೊಳಕು, ವಿಕಾರಗಳ ಸೃಷ್ಟಿಕರ್ತ ಗಂಡಸೇ ಎಂದು ಹೇಳಲು ನಿರ್ದೇಶಕ ಉದ್ದೇಶಪೂರ್ವಕವಾಗಿ ಹೆಣ್ಣುಪಾತ್ರಗಳನ್ನು ಅಂಚಿಗೆ ಸರಿಸಿರಬಹುದೇನೋ!

ನಿರ್ದೇಶಕನ ಕ್ರಿಯಾಶೀಲತೆಗೆ ಇಲ್ಲಿ ಛಾಯಾಗ್ರಹಣ ಮತ್ತು ಸಂಗೀತ ಹಾಗೂ ಧ್ವನಿ ವಿನ್ಯಾಸ ಪೂರಕವಾಗಿ ಕಾಣಿಕೆ ನೀಡಿರುವು ದರಿಂದ ಚಿತ್ರವೊಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ರಂಗನಾಥ್ ರವಿ ಅವರ ಧ್ವನಿ ವಿನ್ಯಾಸ, ಚಿತ್ರದ ಚಲನೆಗೆ ತಕ್ಕ ತೇಜಸ್ಸು ಒದಗಿಸಿದರೆ, ಗಿರೀಶ್ ಗಂಗಾಧರನ್ ಅವರು ಛಾಯಾಗ್ರಾಹಕ ರಾಗಿ ಸಂಯೋಜಿಸಿರುವ ದೃಶ್ಯಗಳು ಚಿತ್ರವನ್ನು ಒಂದು ಮಹಾನ್ ಬೇಟೆಯಂತೆ, ಮನುಷ್ಯ ಮತ್ತು ಮೃಗದ ನಡುವಿನ ವ್ಯತ್ಯಾಸಗಳು ಕರಗಿ ಹೋಗುವಂತೆ ದರ್ಶನವೊಂದನ್ನು ಕಟ್ಟುತ್ತವೆ. ಇದಕ್ಕೆ ಜೊತೆಯಾಗಿ ಪ್ರಶಾಂತ್ ಪಿಳ್ಳೈ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ಪರಿಣಾಮಗಳನ್ನು ಮತ್ತಷ್ಟು ಗಾಢವಾಗಿಸುತ್ತವೆ.

ಉನ್ನತ ಗುಣಮಟ್ಟದ ತಾಂತ್ರಿಕತೆ, ಕಡಿಮೆ ಮಾತುಗಳ, ಕಲಾತ್ಮಕ ನಿರ್ದೇಶನದಿಂದ ‘ಜಲ್ಲಿಕಟ್ಟು’ ಅತ್ಯುತ್ತಮ ಕಲಾಕೃತಿಯಾಗಿದೆ. ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸುವ ಅಪರೂಪದ ಚಿತ್ರಗಳ ಪಟ್ಟಿಗೆ ಜಲ್ಲಿಕಟ್ಟು ಸೇರಿದೆ. ಸಿನೆಮಾದಲ್ಲಿ ತಾತ್ವಿಕತೆಯನ್ನು ಹುಡುಕುವ ವಿಮರ್ಶಕರಿಗಾಗಲೀ, ಸಾಹಸ, ಮನರಂಜನೆಯನ್ನು ಬಯಸುವ ಸಾಮಾನ್ಯ ಪ್ರೇಕ್ಷಕರಿಗಾಗಲೀ ನಿರಾಸೆಯುಂಟುಮಾಡದ ಚಿತ್ರವಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News