ಮಕ್ಕಳ ಮೇಲೆ ಸಂಬಂಧಿಕರಿಂದಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ: ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕಾ
ಬೆಂಗಳೂರು, ಅ.13: ದೇಶದಲ್ಲಿ ಇಂದು ಮಕ್ಕಳು ತಮ್ಮ ಕುಟುಂಬದವರಿಂದಲೇ ಹೆಚ್ಚಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ತಂದೆಯಿಂದ, ಕುಟುಂಬದ ಸದಸ್ಯರಿಂದ, ಅಕ್ಕಪಕ್ಕದ ಮನೆಯವರಿಂದಲೇ ದೌರ್ಜನ್ಯಕ್ಕೆ ಒಳಗಾಗಿರುವ ಪ್ರಕರಣಗಳೇ ಹೆಚ್ಚು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕಾ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ಹೈಕೋರ್ಟ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಕುರಿತಂತೆ ‘ಕಾರ್ಯಾಚರಣೆ ನಿರ್ದಿಷ್ಟ ವಿಧಾನ ಮತ್ತು ಮಾರ್ಗದರ್ಶನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಕ್ಕಳ ಮೇಲೆ ನಡೆಯುವ ನಾನಾ ದೌರ್ಜನ್ಯಗಳ ಕುರಿತಂತೆ ಇರುವ ಕಾನೂನಿನ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ದೇಶದ ಶೇ.90ರಷ್ಟು ಮಕ್ಕಳು ಮತ್ತು ಶಿಕ್ಷಕರಿಗೆ ಮಕ್ಕಳ ಕಾನೂನುಗಳ ಬಗ್ಗೆ ಸರಿಯಾದ ಅರಿವಿರುವುದಿಲ್ಲ. ಪ್ರಸ್ತುತ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಕರಿಗೆ ಸಹ ಈ ವಿಷಯದ ಬಗ್ಗೆ ಜ್ಞಾನದ ಕೊರತೆ ಇರುವುದು ಬೇಸರದ ಸಂಗತಿ ಎಂದರು.
ಅರಿವಿನ ಕೊರತೆಯಿಂದಾಗಿ ಇಂದು ಮುಗ್ಧ ಮಕ್ಕಳು ತಾವು ಎದುರಿಸುವ ದೌರ್ಜನ್ಯಗಳನ್ನು ನಿಶ್ಯಬ್ಧರಾಗಿ, ಪ್ರತಿಕ್ರಿಯಿಸಲಾಗದೇ ಸಹಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿನ ಒಂದು ಜವಾಬ್ದಾರಿಯುತ ಸ್ಥಾನಮಾನದಲ್ಲಿರುವ ನಾವೆಲ್ಲರೂ ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಮತ್ತು ಮಕ್ಕಳಿಗೆ ನಿರ್ಭೀತವಾದ ಸಮಾಜವನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಆಯೋಗದ ವತಿಯಿಂದ ರೂಪಿಸಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಕುರಿತಂತೆ ಕಾರ್ಯಚರಣೆ ನಿರ್ದಿಷ್ಟ ವಿಧಾನ ಮತ್ತು ಮಾರ್ಗಸೂಚಿಯೂ ದೇಶಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ, ಇಂದು ದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ. ನಿರ್ಧರಿತ ಪ್ರಕರಣಗಳು ಶೇ.15 ರಿಂದ 21ರಷ್ಟು ಮಾತ್ರ ಇದೆ. ರಾಜ್ಯದ ಪ್ರತಿಯೊಂದು ಮಗುವಿಗೂ ಸರಿಯಾದ ಮತ್ತು ವೇಗವಾದ ನ್ಯಾಯ ಸಿಗಬೇಕು. ಇದು ಮಕ್ಕಳ ಹಕ್ಕು ಕೂಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಅಂತೋಣಿ ಸೆಬಾಸ್ಟಿಯನ್, ಯೂನಿಸೆಫ್ ನ ಸೋನಿ ಕುಟ್ಟಿ ಜಾರ್ಜ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.