ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಅ.16: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ.ಸರೋಜಿನಿ ಮಹಿಷಿ ವರದಿಯನ್ನು ನ.1ರೊಳಗೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಯುವ ಸೇನೆ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಯಲ್ಲಿ ಸರೋಜಿನಿ ಮಹಿಷಿ ವರದಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವರದಿಯ ಜಾರಿಯಿಂದ ಮಾತ್ರ ರಾಜ್ಯದಲ್ಲಿ ಸಮಸ್ತ ಜನರಿಗೂ ಉದ್ಯೋಗ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡು ವರದಿಯ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೇಂದ್ರ ಮಂತ್ರಿಯಾಗಿದ್ದ ಡಾ.ಸರೋಜಿನಿ ಮಹಿಷಿ, ಸ್ಥಳೀಯರಿಗೆ ಉದ್ಯೋಗ ನೀತಿಯನ್ನು ಪ್ರತಿಪಾದಿಸಿ ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀೀಸಲಾತಿ ನೀಡುವಂತೆ ವರದಿಯನ್ನು ತಯಾರಿಸಿ ಸರಕಾರಕ್ಕೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ವರದಿಯನ್ನು ಜಾರಿಮಾಡುವಂತಹ ಮಹತ್ವದ ಕಾರ್ಯಕ್ಕೆ ಯಾರು ಮುಂದಾಗುತ್ತಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಅಧ್ಯಕ್ಷ ಹರೀಶ್ ಆರೋಪಿಸಿದ್ದಾರೆ.
ಡಾ. ಸರೋಜಿನಿ ಮಹಿಷಿ ವರದಿಯಂತೆ ಶೇ.90ರಷ್ಟು ಮೀಸಲಾತಿ ಕಲ್ಪಿಸಿ ಕನ್ನಡಿಗರಿಗೆ ಸ್ಥಳೀಯ ಐಟಿ, ಬಿಟಿ ಕಂಪನಿಗಳಲ್ಲಿ ಉನ್ನತ ಹುದ್ದೆ ಸಿಗುವಂತೆ ನೋಡಿಕೊಳ್ಳಬೇಕು. ರಾಮಕೃಷ್ಣ ಹೆಗಡೆ ನಂತರ ಬಂದ ಎಲ್ಲಾ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇದಿಕೆ ಮುಖಂಡರಾದ ಪ್ರವೀಣ್ ಕುಮಾರ್, ಜಯದೇವ ಸೇರಿದಂತೆ ಉಪಸ್ಥಿತರಿದ್ದರು
ಹಕ್ಕೊತ್ತಾಯಗಳು
-ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು.
-ಸರಕಾರಿ, ಅರೆ ಸರಕಾರಿ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು.
-ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು.