ನಕಲಿ ಸ್ವಾಧೀನ ಪ್ರಮಾಣ ಪತ್ರ ವಿತರಣೆ ಆರೋಪ: ದೂರು ಸಲ್ಲಿಕೆ
ಬೆಂಗಳೂರು, ಅ.16: ನಕಲಿ ಸ್ವಾಧೀನ ಪ್ರಮಾಣ ಪತ್ರ ವಿತರಿಸಿರುವ ಐದು ಬಿಲ್ಡರ್‌ಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಮತ್ತು ಬಿಎಂಟಿಎಫ್ ಪೊಲೀಸರಿಗೆ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.
ರಾಜರಾಜೇಶ್ವರಿ ನಗರ ವಲಯದಲ್ಲಿ ನೂರಕ್ಕೂ ಹೆಚ್ಚು ನಕಲಿ ಸ್ವಾಧೀನ ಪ್ರಮಾಣ ಪತ್ರವನ್ನು ವಿತರಿಸುವ ಮೂಲಕ ಅಮಾಯಕರನ್ನು ಕೂಡ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ರಾಜರಾಜೇಶ್ವರಿ ನಗರ ವಲಯ ವಾರ್ಡ್ ಸಂಖ್ಯೆ 198 ರಲ್ಲಿ 132, ಮತ್ತೊಂದು ಪ್ರಕರಣದಲ್ಲಿ 87 ಯೂನಿಟ್‌ಗಳು ವಾರ್ಡ್ 130ರಲ್ಲಿ 13 ಯೂನಿಟ್‌ಗಳು, ವಾರ್ಡ್ 160 ರಲ್ಲಿ 3 ಯೂನಿಟ್‌ಗಳು ಪಶ್ಚಿಮ ವಲಯ ವಾರ್ಡ್ 127 ರಲ್ಲಿ 12 ಯೂನಿಟ್‌ಗಳಿಗೆ ಸಂಬಂಧಪಟ್ಟಂತೆ ನಕಲಿ ಸ್ವಾಧೀನ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಬೆಸ್ಕಾಂ ಸಂಸ್ಥೆಯ ವಿದ್ಯುತ್ ಸಂಪರ್ಕಗಳನ್ನು ನೀಡುವ ಸಂಬಂಧ ದಾಖಲೆಗಳನ್ನು ಪರಿಶೀಲಿಸುವ ವೇಳೆ ಈ ಎಲ್ಲ ಸ್ವಾಧೀನ ಅನುಭವ ಪತ್ರಗಳು ನಕಲಿ ಎಂದು ಪತ್ತೆಯಾಗಿದೆ ಎಂದು ಆಪಾದಿಸಿದ್ದಾರೆ. ಈ ಪ್ರಕರಣಗಳಲ್ಲಿ ಎಡಿಟಿಪಿ ಸಹಿಗಳನ್ನು ನಕಲು ಮಾಡಿರುವ ವಂಚಕರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜರಾಜೇಶ್ವರಿ ನಗರ ವಲಯದಲ್ಲಿ ಸಾರ್ವಜನಿಕರಿಗೆ ನಕಲಿ ಸ್ವಾಧೀನ ಪ್ರಮಾಣ ಪತ್ರ ನೀಡುವ ಮೂಲಕ ಪಾಲಿಕೆಗೆ ಕೋಟ್ಯಂತರ ರೂ. ಶುಲ್ಕವನ್ನು ವಂಚಿಸಿರುವ ಪ್ರಕರಣವನ್ನು ಎನ್.ಆರ್. ರಮೇಶ್ ಅವರು ಬಯಲಿಗೆ ಎಳೆದಿದ್ದರು. ಎಡಿಟಿಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ನೌಕರರು ಈ ನಕಲಿ ಸ್ವಾಧೀನ ಪ್ರಮಾಣ ಪತ್ರ ವಿತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 2 ವರ್ಷಗಳ ಹಿಂದೆ ರಾಜರಾಜೇಶ್ವರಿ ನಗರ ವಲಯದ ನಗರ ಯೋಜನೆ ಇಲಾಖೆ ಕಚೇರಿಯಲ್ಲಿ 5 ಮಂದಿ ಪಾಲಿಕೆ ನೌಕರರು ನಕಲಿ ಸ್ವಾಧೀನ ಪ್ರಮಾಣ ಪತ್ರವನ್ನು ಮುದ್ರಿಸುತ್ತಿರುವಾಗಲೇ ಬಿಎಂಟಿಎಫ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಐದು ಪ್ರಕರಣಗಳಲ್ಲಿ ಸುಮಾರು 240ಕ್ಕೂ ಹೆಚ್ಚು ಅಮಾಯಕ ಜನರನ್ನು ವಂಚಿಸಲಾಗಿತ್ತು.