ಮೂಡಲಪಾಯ ಯಕ್ಷಗಾನ ಕಲೆ ಉಳಿವಿಗೆ ಸಿಎಂರೊಂದಿಗೆ ಚರ್ಚೆ: ಎ.ಜೆ.ಸದಾಶಿವ

Update: 2019-10-17 17:15 GMT

ಬೆಂಗಳೂರು, ಅ.17: ಮೂಡಲಪಾಯ ಯಕ್ಷಗಾನ ಕಲೆ ಉಳಿಯಬೇಕಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹೇಳಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕರ್ನಾಟಕ ಸಂಘ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮೂಡಲಪಾಯ ಯಕ್ಷಗಾನ: ಅಂದು-ಇಂದು’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೂಡಲಪಾಯ ಯಕ್ಷಗಾನದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆದರೆ, ಇಂಥ ಅದ್ಭುತವಾದ ಕಲೆ ಜನರಿಂದ ದೂರು ಉಳಿಯಬಾರದು. ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸಚಿವ ಸಿ.ಟಿ.ರವಿ ಮನಸ್ಸು ಮಾಡಿದರೆ ಇದೆಲ್ಲವೂ ಸಾಧ್ಯವಾಗುತ್ತದೆ ಎಂದರು.

ಬಣ್ಣ ಹಚ್ಚೋದು ಕಷ್ಟದ ಕೆಲಸ. ನಾಟಕದಲ್ಲಿ ಅಭಿನಯಿಸಿದ್ದಕ್ಕೆ ನಮ್ಮ ಅಜ್ಜಿ ಬೆಂಗಳೂರಿಗೆ ಕಳುಹಿಸಿದರು. ಆದರೆ, ಬಣ್ಣದ ಲೋಕದ ಆಕರ್ಷಣೆ ನಿಲ್ಲಲಿಲ್ಲ. ಅಣ್ಣ ಬೈದದ್ದರಿಂದ ಆರು ವರ್ಷ ನಾಟಕದೆಡೆಗೆ ಮುಖ ಮಾಡಲಿಲ್ಲ. ನಂತರ ಯಯಾತಿ ನಾಟಕದಲ್ಲಿ ಅಭಿನಯಿಸಿದೆ. ಯಾವುದೇ ಕಲೆ ಮನುಷ್ಯನಲ್ಲಿನ ಎಲ್ಲಾ ಕ್ರೋಧ, ಮದ, ಮತ್ಸರಗಳನ್ನು ತೆಗೆದು ಹಾಕುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಶೈಕ್ಷಣಿಕ ನಿರ್ದೇಶಕ ಡಾ.ಹಿ.ಶಿ. ರಾಮ ಚಂದ್ರೇಗೌಡ ಮಾತನಾಡಿ, ಸಮಾಜದಲ್ಲಿ ಸಾಂಸ್ಕೃತಿಕ ನಾಯಕತ್ವವನ್ನು ಕಟ್ಟುವ ಅನಿವಾರ್ಯತೆ ಇದೆ. 20ನೆ ಶತಮಾನ ಕಟ್ಟುವ ಶತಮಾನವಾದರೆ, ಇಂದು ಒಡೆಯುವ ಶತಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಮಿತಿಮೀರಿದಾಗ ವೌಲ್ಯಗಳು ಕುಸಿಯುತ್ತವೆ. ಇಂಥ ಸಂದರ್ಭದಲ್ಲಿ ವೌಲ್ಯಗಳನ್ನು ಉಳಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ದೇಶವನ್ನು ಪ್ರತಿನಿಧಿಸುವ ಸಾಹಿತಿಗಳು, ಚಿಂತಕರು, ಕಲಾವಿದರು, ವಿಜ್ಞಾನಿಗಳು ಕಲೆಯನ್ನು ಕಟ್ಟಿ ಬೆಳೆಸಬೇಕು. ಪುರಾಣಗಳನ್ನು ಒಡೆಯದೆ ಪಠ್ಯಗಳನ್ನು ಪುನರ್ ರಚಿಸಬೇಕು ಎಂದು ಅಭಿಪ್ರಾಯಪಟ್ಟರು.

ಇಂದು ಕಲಿಯುವವರು ಬರುತ್ತಿಲ್ಲ. ಸಂಗೀತ ಪ್ರಿಯರು ಕೇವಲ ಕೇಳುವುದರಲ್ಲೇ ತಲ್ಲೀನರಾಗಿದ್ದಾರೆ ಹೊರತು, ಕಲಿಕೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಈವರೆಗೆ ಅನೇಕ ಪ್ರಯೋಗಗಳು ನಡೆದಿದ್ದರೂ ಅದಕ್ಕೆ ಉತ್ತಮ ವೇದಿಕೆ ಸಿಗುತ್ತಿಲ್ಲ. ನಾವಿಂದು ಸ್ತಬ್ಧಗೊಂಡಿದ್ದೇವೆ. ನಮ್ಮಲ್ಲಿ ಅನ್ವೇಷಣಾ ಮನೋಭಾವ ಮರೆಯಾಗಿದೆ ಎಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಮಾತನಾಡಿ, ಮೂಡಲಪಾಯವನ್ನು ಯಕ್ಷಗಾನ ಎನ್ನಬೇಕೇ? ಇಲ್ಲವೇ ಬಯಲಾಟ ಎಂದು ಕರೆಯಬೇಕೇ? ಅದು ಶಾಸ್ತ್ರೀಯವೇ ಅಥವಾ ಜಾನಪದವೇ ಎಂಬ ಗೊಂದಲ ಕಲಾವಿದರು ಸೇರಿದಂತೆ ತಜ್ಞರಲ್ಲೂ ಇದೆ. ಜಾನಪದ ವಿದ್ವಾಂಸರನ್ನು ಹೊರತುಪಡಿಸಿದರೆ ವಿದ್ಯಾವಂತರಿಗೆ ಇದರ ಬಗ್ಗೆ ಅರಿವಿಲ್ಲ. ಕರಾವಳಿ ಯಕ್ಷಗಾನದಷ್ಟೇ ಪ್ರಾಚೀನ ಕಲಾ ಪ್ರಕಾರವಾಗಿದ್ದರೂ ಪ್ರಾಯೋಗಿಕ ದೃಷ್ಟಿಯಿಂದ ಹಿಂದೆ ಉಳಿದಿದೆ. ಈ ಪ್ರಕಾರವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರು ‘ಮೂಡಲಪಾಯ ಯಕ್ಷಗಾನ: ವಸ್ತು-ವೈವಿಧ್ಯ’, ಮಲ್ಲಿಕಾರ್ಜುನ ಮಹಾಮನೆ ‘ಮೂಡಲಪಾಯ ಯಕ್ಷಗಾನ ಮತ್ತು ರಂಗಭೂಮಿ: ಅನ್ವಯಿಕ ಸಾಧ್ಯತೆ’, ಡಾ.ಮೀರಸಾಬಿಹಳ್ಳಿ ಶಿವಣ್ಣ ‘ಮೂಡಲಪಾಯ ಯಕ್ಷಗಾನ: ಅಂದು-ಇಂದು-ಮುಂದು’ ಕುರಿತಂತೆ ವಿಚಾರ ಮಂಡಿಸಿದರು. ಈ ವೇಳೆ ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ.ರಾಜೇಗೌಡ ಹೊಸಹಳ್ಳಿ, ಕನ್ನಡಪರ ಹೋರಾಟಗಾರ ಎಂ.ತಿಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News