ಚಿಲ್ಲರೆ ವ್ಯಾಪಾರಿಗಳಿಗೆ ಕಿರುಕುಳ ತಪ್ಪಿಸಲು ಆಗ್ರಹ
ಬೆಂಗಳೂರು, ಅ.17: ರಾಜ್ಯದಲ್ಲಿ ಚಿಲ್ಲರೆ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ರಾಜ್ಯ ಸಣ್ಣ ಬೀಡಿ, ಸಿಗರೇಟು ಮಾರಾಟಗಾರರ ಸಂಘ ಆಗ್ರಹಿಸಿದೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್.ಮುರಳಿಕೃಷ್ಣ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅನಗತ್ಯ ಕಿರುಕುಳ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ 2 ಲಕ್ಷ ಚಿಲ್ಲರೆ ವ್ಯಾಪಾರಿಗಳು ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿನಿತ್ಯ ಬಡ ಚಿಲ್ಲರೆ ವ್ಯಾಪಾರಿಗಳ ಮೇಲೆ ಆಗುತ್ತಿರುವ ಕಿರುಕುಳದಿಂದ ರಕ್ಷಣೆ ನೀಡಬೇಕೆಂದು ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಹಾಗೂ ಆರೋಗ್ಯ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಸಣ್ಣ, ಅತಿ ಸಣ್ಣ, ಮಧ್ಯಮ ಗಾತ್ರದ ಚಿಲ್ಲರೆ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಇಂತಹ ಬಡ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಾ, ದಿನನಿತ್ಯ ಕಿರುಕುಳ ನೀಡುತ್ತಾರೆ ಎಂದು ಆಪಾದಿಸಿದರು.
ದಿನದಲ್ಲಿ 15 ಗಂಟೆಗಳ ಕಾಲ ನಿಂತು ವ್ಯಾಪಾರ ನಡೆಸಿದರೆ, ಬರುವ ಆದಾಯ ಕೇವಲ 300 ರಿಂದ 400 ರೂ. ಮಾತ್ರ. ಆದರೂ ಅನಗತ್ಯ ಕಿರುಕುಳದಿಂದ ಸಮಾರು 2 ಲಕ್ಷ ಸಣ್ಣ ವ್ಯಾಪಾರಿಗಳು, ತೊಂದರೆ ಎದುರಿಸುವಂತಾಗಿದೆ. ಅವರನ್ನು ನಂಬಿಕೊಂಡ ಸುಮಾರು 10 ಲಕ್ಷ ಕುಟುಂಬದವರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಮುರುಳಿ ಕೃಷ್ಣ ಅವರು ಅಧಿಕಾರಿಗಳು ಬಡ ವ್ಯಾಪಾರಿಗಳ ಬದುಕನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಾಕ್ಸ್
ಕಾನೂನು ಉಲ್ಲಂಘನೆಯಾಗಿದೆ ಎಂಬ ನೆಪದಲ್ಲಿ ತನ್ನ ವ್ಯಾಪಾರಸ್ಥರ ಬಳಿ ಬರುವ ಅಧಿಕಾರಿಗಳು ಇದಕ್ಕಿದ್ದಂತೆ ಅಂಗಡಿಯ ಉತ್ಪನ್ನಗಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ ವಾಪಾಸ್ಸು ನೀಡುವಾಗ ಅರ್ಧದಷ್ಟು ಉತ್ಪನ್ನಗಳು ಮಾತ್ರವೇ ನೀಡುತ್ತಿದ್ದು, ಇದರಿಂದ ಬಹಳಷ್ಟು ಚಿಲ್ಲರೆ ವ್ಯಾಪಾರಿಗಳು ಬದುಕು ನಡೆಸುವುದೇ ದುಸ್ತರವಾಗಿದೆ.
-ಬಿ.ಎನ್.ಮುರಳಿಕೃಷ್ಣ, ರಾಜ್ಯ ಬೀದಿ ಮಾರಾಟಗಾರರ ಸಂಘದ ಅಧ್ಯಕ್ಷ