ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹತ್ಯೆಗೆ ವಿಫಲ ಯತ್ನ ?

Update: 2019-10-18 13:27 GMT

ಬೆಂಗಳೂರು, ಅ.18: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಮೇಲೆ ಯುವಕನೋರ್ವ ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಇಲ್ಲಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭೈರತಿ ಗ್ರಾಮದ 35 ವರ್ಷದ ಶಿವಕುಮಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ಸುಮಾರು 4:30ರ ಸುಮಾರಿಗೆ ಶಾಸಕ ಭೈರತಿ ಸುರೇಶ್ ಅವರು, ಭೈರತಿ ಗ್ರಾಮದ ನಿವಾಸದಿಂದ ಕಾರಿನಲ್ಲಿ ಹೊರಗೆ ಬರುತ್ತಿದ್ದಾಗ, ಕಾರು ಬೈಕ್‌ವೊಂದಕ್ಕೆ ಸ್ಪರ್ಶಿಸಿದೆ. ಇದರಿಂದ ಸಿಟ್ಟುಗೊಂಡ ಯುವಕ ಚಾಕುವಿನಿಂದ ದಾಳಿ ನಡೆಸಿ, ಹತ್ಯೆಗೈಯಲು ಮುಂದಾಗಿದ್ದಾನೆ ಎನ್ನಲಾಗಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕರ ಭದ್ರತಾ ಸಿಬ್ಬಂದಿ, ಯುವಕನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪರಿಚಯಸ್ಥ: ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್, ಶಿವಕುಮಾರ್ ಪರಿಚಯಸ್ಥ ಯುವಕ. ಅವರ ಮನೆಯವರನ್ನು ಬಲ್ಲೆ. ಆದರೆ, ಈತ ಮಾತ್ರ ಸ್ವಲ್ಪಪೋಲಿಯಾಗಿದ್ದ. ಏಕಾಏಕಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿರುವ ಕಾರಣ ಗೊತ್ತಿಲ್ಲ. ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬರಬಹುದು ಎಂದರು.

ಘಟನೆಯಲ್ಲಿ ಶಾಸಕ ಭೈರತಿ ಸುರೇಶ್ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಆರೋಪಿ ಶಿವಕುಮಾರ್‌ನನ್ನು ವಶಕ್ಕೆ ಪಡೆದಿರುವ ಕೊತ್ತನೂರು ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

-ಭೀಮಾಶಂಕರ್ ಗುಳೇದ್, ಈಶಾನ್ಯ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News