ಸಾಹಿತ್ಯದಲ್ಲಿ ಪ್ರಾದೇಶಿಕತೆ ಮರೆಯಾಗುತ್ತಿದೆ: ಡಾ.ಕೆ.ಪುಟ್ಟಸ್ವಾಮಿ

Update: 2019-10-20 17:47 GMT

ಬೆಂಗಳೂರು, ಅ.20: ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕತೆಯ ನೆಲೆಗಟ್ಟಿನಲ್ಲಿ ಕಥನ ಕಟ್ಟುವ ಕ್ರಮ ಮರೆಯಾಗುತ್ತಿದೆ ಎಂದು ಲೇಖಕ ಡಾ.ಕೆ. ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಬಿಎಂಶ್ರೀ ಕಲಾಭವನದ ಎಂವಿಸೀ ಸಭಾಂಗಣದಲ್ಲಿ ಬಿಎಂಶ್ರೀ ಪ್ರತಿಷ್ಠಾನ, ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶಾ. ಬಾಲುರಾವ್ ಯುವ ಬರಹಗಾರ ಮತ್ತು ಅನುವಾದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ಸಾಹಿತ್ಯದಲ್ಲಿ ಪ್ರಾದೇಶಿಕ ಸೊಗಡು ಮರೆಯಾಗುತ್ತಿದೆ. ಹೀಗಾಗಿ, ಪ್ರಾದೇಶಿಕ ಭಾಷೆಗಳ ವೈವಿಧ್ಯತೆ, ಅರ್ಥ ಸಾಧ್ಯತೆ ಹಾಗೂ ಅಭಿವ್ಯಕ್ತಿ ಗುರುತಿಸಿಕೊಳ್ಳುವ ಮೂಲಕ ಕಥೆ, ಕಾದಂಬರಿ, ಕಾವ್ಯ ರಚನೆ ಹಾಗೂ ಅನುವಾದಗಳು ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅನುವಾದ ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾದದ್ದು ಅಲ್ಲ. ಅದೊಂದು ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಣೆಯಾಗಿದೆ. ಹೀಗಾಗಿಯೇ ಬಿಎಂಶ್ರೀಯು ಭಾಷಾಂತರವನ್ನು ಮಾದರಿಯಾಗಿ ರೂಪಿಸಿದರು. ಅನುವಾದ ಕಾರ್ಯ ಚಟುವಟಿಕೆಯನ್ನು ಕ್ರೀಯಾಶೀಲವನ್ನಾಗಿಸಿದರು ಎಂದರು.

ಭಾಷಾಂತರದ ಮೂಲಕ ಕನ್ನಡ ಸಾಹಿತ್ಯ ಮಾತ್ರವಲ್ಲದೇ ಕನ್ನಡದ ಸಂವೇದನೆ, ಶಬ್ದಕೋಶ, ಅರ್ಥ ಸಾಧ್ಯತೆಗಳನ್ನ ವಿಸ್ತರಿಸುವ ಬಹುದೊಡ್ಡ ಚಟುವಟಿಕೆಗಳನ್ನ ಬಿಎಂಶ್ರೀ ತೋರಿಸಿಕೊಟ್ಟರು. ಅವರ ಪ್ರತಿಷ್ಠಾನ ಅನುವಾದಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಅನುವಾದಕರನ್ನ ಪೋಷಿಸುತ್ತಿರುವುದು ಶ್ಲಾಘನಿಯ ಕಾರ್ಯ ಎಂದು ನುಡಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಶಾ ಬಾಲುರಾವ್ ನೀಡಿದ್ದಾರೆ. ದಿಲ್ಲಿಯಲ್ಲಿದ್ದುಕೊಂಡೇ ಬೇರೆ ಬೇರೆ ಅನುವಾದದ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ವಿಸ್ತರಿಸಿದ್ದಾರೆ. ಅಲ್ಲದೆ, ಕನ್ನಡದ ಸೋಪಜ್ಞನತೆಗೆ ಹೊಸ ದಿಕ್ಕನ್ನು ತೋರಿಸಿಕೊಟ್ಟರು ಎಂದು ಹೇಳಿದರು.

ಬಾಲುರಾವ್ ಅಂತಹವರ ಹೆಸರಿನಲ್ಲಿ ಇಂದಿನ ಯುವ ಬರಹಗಾರರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಆಧುನಿಕತೆಯಲ್ಲಿ ಮರೆಯಾಗುತ್ತಿರುವ ಪ್ರಾದೇಶಿಕತೆಯನ್ನು ಹಿಡಿದಿಟ್ಟುಕೊಂಡಿರುವ ಬರಹಗಾರ ಸ್ವಾಮಿ ಪೊನ್ನಾಚಿಗೆ ಈ ಪ್ರಶಸ್ತಿ ದಕ್ಕಿರುವುದು ಸೂಕ್ತ ಎಂದು ತಿಳಿಸಿದರು.

ಯುವ ಬರಹಗಾರ ಸ್ವಾಮಿ ಪೊನ್ನಾಚಿ ಉತ್ತಮ ಕಥೆಗಳನ್ನು ರಚಿಸಿದ್ದಾರೆ. ಹಾಗೇನೆ ಸಂತೆ ನಾರಾಯಣ ಸ್ವಾಮಿ ಮೊಗಲರ ಕಾಲದ ಇತಿಹಾಸ ಸಾರುವಂತ ಜಹನಾರ ಕೃತಿಯನ್ನು ಕನ್ನಡಕ್ಕೆ ಸೊಗಸಾಗಿ ಅನುವಾದ ಮಾಡಿದ್ದಾರೆ. ಹೀಗಾಗಿ ಯುವ ಬರಹಗಾರರು, ಕಥೆಗಾರರು ಹಾಗೂ ಅನುವಾದಕರು ಪ್ರಾದೆಶಿಕತೆಯ ನೆಲೆಗಟ್ಟಿನಲ್ಲಿ ಕಥನ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪೊನ್ನಾಚಿ ಗ್ರಾಮದ ಯುವ ಬರಹಗಾರ ಸ್ವಾಮಿ ಪೊನ್ನಾಚಿ ರಚಿಸಿದ ಧೂಪದ ಮಕ್ಕಳು ಕೃತಿಗೆ 2019ನೇ ಸಾಲಿನ ಶಾ ಬಾಲುರಾವ್ ಯುವ ಬರಹಗಾರ ಪ್ರಶಸ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಸಂತೆ ನಾರಾಯಣ ಸ್ವಾಮಿ ಅನುವಾದಿಸಿದ ಜಹನಾರ ಕೃತಿಗೆ ಶಾ ಬಾಲುರಾವ್ ಅನುವಾದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಎಂ.ಎಚ್.ಕೃಷ್ಣಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News