ಜೀವನದ ಸವಾಲು ಎದುರಿಸಲು ಸನ್ನದ್ಧರಾಗಿ: ಪರಿಷತ್‌ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ

Update: 2019-10-20 18:18 GMT

ಬೆಂಗಳೂರು, ಅ. 20: ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರೂ ಸಮರ್ಥರಾಗಿರಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಎಫ್‌ಕೆಸಿಸಿಐನ ಸರ್.ಎಂ.ವಿ ಸಭಾಂಗಣದಲ್ಲಿ ಆರ್ಯವೈಶ್ಯ ಮಹಾಸಭೆಯ ವಾಸವಿ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಯುಪಿಎಸ್‌ಸಿ ತರಬೇತಿ ತರಗತಿಗಳ ಮೊದಲ ತಂಡದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ನಿಲ್ಲಬೇಕು. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳು ಒಂದು ನಿಜವಾದ ಸವಾಲು ಇದ್ದಂತೆ. ಅಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದರು.

ಐಎಎಸ್ ಆಧಿಕಾರಿ ವಸಂತ ಕುಮಾರ ಮಾತನಾಡಿ, ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದಿರಬೇಕು. ಅಲ್ಲದೇ ಪ್ರತಿಯೊಂದು ಕ್ಷೇತ್ರದ ಜ್ಞಾನ ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಸತತ ಪ್ರಯತ್ನವಿದ್ದರೆ ಎಲ್ಲವೂ ಸಾಧ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಆರ್.ಪಿ ರವಿಶಂಕರ್ ಮಾತನಾಡಿ, ಆರ್ಯ ವೈಶ್ಯ ಸಂಸ್ಥೆ ವತಿಯಿಂದ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಆರ್ಯ ವೈಶ್ಯ ಸಮಾಜದ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ದಿನಕ್ಕೆ 5 ಗಂಟೆಯಂತೆ 7 ತಿಂಗಳ ಕಾಲ ಉಚಿತ ತರಬೇತಿ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷ ಬಿ.ವಿ.ನಾಗೇಶ್ವರ ರಾವ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಪ್ರದೀಪ್, ಕಾರ್ಯದರ್ಶಿ ಮಾನಂದಿ ಸುರೇಶ್, ಜಿ.ವಿ ಗೋಪಾಲ್ ರಾವ್, ಬಿ.ವಿ ನಾಗೇಶ್ವರ ರಾವ್, ಪಿ.ಸಿ.ಬಾಲರಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News