ಆರ್‌ಸಿಇಪಿ ಒಪ್ಪಂದದಿಂದ ಯಾರಿಗೆ ಲಾಭ?

Update: 2019-10-21 18:22 GMT

ಚೀನಾ ಈಗ ಆಕ್ರಮಣಕಾರಿ ಹೆಜ್ಜೆಗಳನ್ನು ಇಡತೊಡಗಿದೆ. ಆರ್‌ಸಿಇಪಿ ವ್ಯಾಪಾರಿ ಪಾಲುದಾರಿಕಾ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದೆ. ಅದರಂತೆ ಮೋದಿ ನೇತೃತ್ವದ ಭಾರತದ ಕೇಂದ್ರ ಸರಕಾರ ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಈ ಒಪ್ಪಂದದಿಂದ ಭಾರತಕ್ಕೆ ಇದರಿಂದ ಭಾರೀ ಲಾಭವಾಗುತ್ತದೆ, ಚೀನಾದೊಂದಿಗೆ ಇರುವ ವ್ಯಾಪಾರ ಕೊರತೆಯನ್ನು ಇದರಿಂದ ಸರಿಪಡಿಸಬಹುದು ಎಂದೆಲ್ಲಾ ಬೊಗಳೆ ಬಿಡಲಾಗುತ್ತಿದೆ. ಈ ಒಪ್ಪಂದದಿಂದ ಗರಿಷ್ಠವಾಗಿ ಚೀನಾಕ್ಕೆ ಲಾಭದಾಯಕವಾಗುತ್ತದೆಯೇ ಹೊರತು ಭಾರತಕ್ಕಲ್ಲ ಎನ್ನುವುದನ್ನು ಸರಕಾರ ಜಾಣತನದಿಂದ ಮರೆಮಾಚುತ್ತಿದೆ.


ನಮ್ಮ ನೆರೆಯ ದೇಶ ಚೀನಾ ಮೊನ್ನೆ ಅಕ್ಟೋಬರ್ 1ರಂದು ತನ್ನ ದೇಶ ರೂಪುಗೊಂಡ 70ನೇ ದಿನಾಚರಣೆಯನ್ನು ಆಚರಿಸಿತು. 1949ರ ಅಕ್ಟೋಬರ್ 1ರಂದು ಚೀನಾದ ಬೀಜಿಂಗ್‌ನ ತಿಯನಾನ್ಮೆನ್ ಚೌಕದಲ್ಲಿ ಚೀನಾದ ಕ್ರಾಂತಿಕಾರಿ ನಾಯಕ ಮಾವೋ ಝೆಡಾಂಗ್ ಚೀನಾವನ್ನು ಜನತೆಯ ಗಣರಾಜ್ಯವಾಗಿ ಘೋಷಣೆ ಮಾಡಿದ್ದರು. ಚೀನಾ ತನ್ನ ಹಳೆಯ ವಸಾಹತು ಹಾಗೂ ಊಳಿಗಮಾನ್ಯ ನೊಗಗಳನ್ನು ಕಿತ್ತೊಗೆದು ನವ ಪ್ರಜಾತಾಂತ್ರಿಕ ಕ್ರಾಂತಿಯನ್ನು ಯಶಸ್ಸುಗೊಳಿಸಿ ಸ್ವಾತಂತ್ರ್ಯವಾಯಿತು ಎಂದು ಸಾರಿದ್ದರು. 1945ರ ವರೆಗೆ ಜಪಾನಿ ಆಕ್ರಮಣದಲ್ಲಿ ಚೀನಾ ಇತ್ತು. ಚೀನಾ ಕಮ್ಯೂನಿಸ್ಟ್ ಪಕ್ಷವು ಚಿಯಾಂಗ್ ಕೈಷೇಕ್‌ನ ಕ್ಯೋಮಿಂಟಾಂಗ್ ಪಕ್ಷದೊಂದಿಗೆ ಐಕ್ಯರಂಗ ರಚಿಸಿಕೊಂಡು ಜಪಾನಿ ಆಕ್ರಮಣದ ವಿರುದ್ಧ ಸಶಸ್ತ್ರವಾಗಿ ಹೋರಾಡಿ ಜಪಾನಿ ಆಕ್ರಮಣವನ್ನು ಸೋಲಿಸಿತ್ತು. ಇದು ಎರಡನೇ ಮಹಾಯುದ್ಧ್ದದ ಕಾಲದಲ್ಲಿ ಫ್ಯಾಶಿಸಂನ ಆಕ್ರಮಣವು ವಿಶ್ವದ ಪೂರ್ವ ಭಾಗಕ್ಕೆ ವಿಸ್ತರಿಸುವುದನ್ನು ತಡೆದಿತ್ತು. ಹಾಗೆಯೇ ಅಮೆರಿಕದ ಹಿಡಿತ ಚೀನಾದ ಮೇಲೆ ಆಗುವುದನ್ನು ಕೂಡ ತಡೆದಿತ್ತು.

ಚೀನಾ ಇಂದು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಸುಮಾರು 140 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಜಾಗತಿಕವಾಗಿ ವಿಸ್ತೀರ್ಣದಲ್ಲಿ ಮೂರನೇ ಅತೀ ದೊಡ್ಡ ದೇಶವಾಗಿದೆ. 2018ರ ಅಂಕಿ ಅಂಶದ ಪ್ರಕಾರ ಚೀನಾ 13.28 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ಕೊಳ್ಳುವ ಶಕ್ತಿಯ ಮಾನದಂಡದ ಪ್ರಕಾರ ಚೀನಾ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಜಗತ್ತಿನ ಅತೀ ದೊಡ್ಡ ವಸ್ತು ಹಾಗೂ ಸೇವೆಗಳ ರಫ್ತುದಾರ ದೇಶವಾಗಿದ್ದರೆ ಜಗತ್ತಿನ ಎರಡನೇ ಅತೀ ದೊಡ್ಡ ಆಮದು ಮಾಡಿಕೊಳ್ಳುವ ದೇಶ. ಜಾಗತಿಕವಾಗಿ ಅತೀ ದೊಡ್ಡ ಸೈನಿಕ ಶಕ್ತಿಯಿರುವ ಚೀನಾ, ಎರಡನೇ ಅತೀ ದೊಡ್ಡ ರಕ್ಷಣಾ ಆಯವ್ಯಯವನ್ನು ಹೊಂದಿರುವ ದೇಶವಾಗಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಚೀನಾ ಜಾಗತಿಕ ಬೆಳವಣಿಗೆಗಳ ಮೇಲೆ ನಿರ್ಣಾಯಕ ಪ್ರಭಾವ ಬೀರುವ ದೇಶವಾಗಿದೆ.

ಚೀನಾ ಇಂದು ಮೊಬೈಲ್‌ಗಳು, ಗಣಕ ಯಂತ್ರಗಳು ಸೇರಿದಂತೆ ವಿದ್ಯುನ್ಮಾನ ಕ್ಷೇತ್ರದಿಂದ ಹಿಡಿದು ಕ್ಷಿಪಣಿ ತಂತ್ರಜ್ಞಾನದವರೆಗೆ ಮಕ್ಕಳ ಗೊಂಬೆಗಳಿಂದ ಹಿಡಿದು ಕಬ್ಬಿಣ ಸಿಮೆಂಟು, ಆಟೊಮೊಬೈಲ್‌ಗಳವರೆಗೆ ಅಕ್ಕಿ, ಗೋದಿ, ಮೊದಲಾದ ಕೃಷಿ ಉತ್ಪನ್ನಗಳವರೆಗೆ ಜಗತ್ತಿನ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಚೀನಾದ ವ್ಯಾಪಾರ ವಹಿವಾಟು ಅಮೆರಿಕದೊಂದಿಗೆ ಶೇ. 17ರಷ್ಟು ಮಿಗತೆಯನ್ನು ಹೊಂದಿದೆ. ಅಂದರೆ ಚೀನಾದಿಂದ ಅಮೆರಿಕಕ್ಕೆ ರಫ್ತಾಗುವ ಪ್ರಮಾಣ ಹೆಚ್ಚಿದ್ದು, ಅಮೆರಿಕದಿಂದ ಚೀನಾಕ್ಕೆ ಆಮದಾಗುವ ಪ್ರಮಾಣವು ಕಡಿಮೆಯಿದೆ. ಅಮೆರಿಕ ಚೀನಾದೊಡನೆ ವ್ಯಾಪಾರಿ ಯುದ್ಧದಲ್ಲಿ ತೊಡಗಿದ ಮೇಲೂ ಚೀನಾ ಅಮೆರಿಕದೊಂದಿಗೆ ವ್ಯಾಪಾರದಲ್ಲಿ 351.76 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಮಿಗತೆಯನ್ನು ಹೊಂದಿದೆ.

ಅಮೆರಿಕದಲ್ಲಿ ಕಾರ್ಪೊರೇಟ್ ಜಗತ್ತಿನ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಚೀನಾದೊಂದಿಗೆ ವ್ಯಾಪಾರ ಸಮರ ತೀವ್ರಗೊಳಿಸಲಾಗಿದೆ. ಆದರೆ ಅಮೆರಿಕದ ಆರ್ಥಿಕತೆಯಲ್ಲಿ ಚೀನಾದ ಪಾಲು ಗಣನೀಯ ಪ್ರಮಾಣದಲ್ಲಿರು ವುದರಿಂದಾಗಿ ಅದು ಸದ್ಯಕ್ಕೆ ದೊಡ್ಡ ಪರಿಣಾಮವನ್ನು ಬೀರಲು ಸಾಧ್ಯವಾಗಿಲ್ಲ. ಅದರಿಂದ ಡೊನಾಲ್ಡ್ ಟ್ರಂಪ್‌ಗೆ ಒಂದು ಮಟ್ಟದ ರಾಜಕೀಯ ಲಾಭ ದೊರೆತಿರಬಹುದು. ಸಣ್ಣ ಪ್ರಮಾಣದಲ್ಲಿ ಚೀನಾಕ್ಕೆ ಆರ್ಥಿಕ ನಷ್ಟವಾಗಿರಬಹುದು. ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ಮಧ್ಯೆಯೂ ಚೀನಾ ಸಾಪೇಕ್ಷ ಸ್ಥಿರತೆಯನ್ನು ಕಾಪಾಡಿಕೊಂಡು ಬರುತ್ತಿರುವ ದೇಶ. ಆದರೆ ಜಿಡಿಪಿ ಬೆಳವಣಿಗೆ ದರ 1978ರಿಂದಲೂ ಶೇ. 6ಕ್ಕಿಂತಲೂ ಕಡಿಮೆಯಾಗಲಿಲ್ಲ. ಚೀನಾ ಜಾಗತೀಕರಣಕ್ಕೆ ತೆರೆದುಕೊಂಡಿದ್ದರೂ ಅದು ತನ್ನ ದೇಶದ ಉದ್ದಿಮೆ, ಕೃಷಿ ವ್ಯವಹಾರಗಳನ್ನು ಸಾಕಷ್ಟು ರಕ್ಷಣಾತ್ಮಕವಾಗಿಯೇ ಇರಿಸಿಕೊಂಡಿದೆ. ಚೀನಾದ ಈ ಸಾಧನೆಗೆ ಹಿಂದಿನ ಸಮಾಜವಾದಿ ವ್ಯವಸ್ಥೆಯ ನಿರ್ಮಾಣ ಸಂದರ್ಭದ ದೇಶ ಕಟ್ಟುವ ಜನರ ಸ್ಫೂರ್ತಿ ಮುಖ್ಯ ಕಾರಣವೆನ್ನಬಹುದು. ಸಮಾಜವಾದಿ ವ್ಯವಸ್ಥೆಯ ನಿರ್ಮಾಣವೆಂದಾಗ ಅದರಲ್ಲಿ ಇಡೀ ಜನಸಮೂಹವನ್ನು ಒಳಗೊಳಿಸುತ್ತಾ, ಒಳಗೊಂಡು ಸಾಧಿಸಬೇಕಾಗುತ್ತದೆ.

ದೇಶ ಪ್ರೇಮ, ಮನುಷ್ಯ ಪ್ರೇಮಗಳೇ ಮೇಲುಗೈಯಲ್ಲಿರಬೇಕಾಗುತ್ತದೆ. ಚೀನಾ ತನ್ನ ದೇಶ ಕಟ್ಟುವ ಕೆಲಸವನ್ನು ಪ್ರಧಾನವಾಗಿ ಬಾಹ್ಯ ನೆರವಿಲ್ಲದೆ ಚೀನಾದ ಜನಸಾಮಾನ್ಯರಿಂದಲೇ ಮಾಡಿಕೊಂಡಿತು. ಆದರೆ 1972ರಲ್ಲಿ ಮಾವೋ ಝೆಡಾಂಗ್ ಮೃತರಾದ ನಂತರ ಚೀನಾ ಕಮ್ಯೂನಿಸ್ಟ್ ಪಕ್ಷದ ಡೆಂಗ್ ಕ್ಸೀಪಿಂಗ್‌ರಂತಹ ಸಮಾಜವಾದಿ ಮುಸುಕಿನ ಬಂಡವಾಳಶಾಹಿ ನಾಯಕತ್ವದ ಹಿಡಿತಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲಿಂದ ಚೀನಾ ಕಮ್ಯೂನಿಸ್ಟ್ ಪಕ್ಷದ ನಾಯಕರೇ ದೊಡ್ಡ ಬಂಡವಾಳಶಾಹಿಗಳಾಗಿ ಮಾರ್ಪಡಲಾರಂಭಿಸುತ್ತಾರೆ. ಚೀನಾ ಉದ್ದಿಮೆಗಳಲ್ಲಿ ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ನಾಯಕರ ಹಿಡಿತವಿದೆ. ಅವರು ಅಧಿಕಾರಿಗಳೋ, ನಿರ್ದೇಶಕರೋ ಆಗಿರುತ್ತಾರೆ. ಚೀನಾ ಈಗ ಸಮಾಜವಾದಿ ರಾಷ್ಟ್ರವೆಂದು ಹೇಳಿಕೊಳ್ಳುತ್ತದೆ. ಆದರೆ ಅದು ಮಾವೋ ಝೆಡಾಂಗ್ ನಿಧನದ ನಂತರ ಸಮಾಜವಾದಿ ವ್ಯವಸ್ಥೆಯ ನಿರ್ಮಾಣಕ್ಕೆ ತಿಲಾಂಜಲಿ ಕೊಟ್ಟು ಸಮಾಜವಾದಿ ಹೆಸರಿನಲ್ಲಿ ಬಂಡವಾಳವಾದ ವನ್ನು ಸ್ಥಾಪಿಸುತ್ತಾ ಬಂದ ದೇಶವಾಗಿದೆ. ಈಗ ಜಾಗತಿಕವಾಗಿಯೂ ಅದರ ಆರ್ಥಿಕ ಹಿಡಿತ ಹೆಚ್ಚಿದೆ. ದಕ್ಷಿಣ ಏಶ್ಯಾದ ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ದೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ವಿಯಟ್ನಾಮ್, ಮ್ಯಾನ್ಮಾರ್‌ಗಳಂತಹ ರಾಷ್ಟ್ರಗಳ ಮೇಲೆ ಚೀನಾದ ಹಿಡಿತ ನಿರ್ಣಾಯಕವಾಗಿದೆ.

ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳೊಂದಿಗೆ ಜಾಗತಿಕ ಮಾರುಕಟ್ಟೆಗಾಗಿನ ಪೈಪೋಟಿಯಲ್ಲಿ ಚೀನಾ ಮೇಲುಗೈಯಲ್ಲಿದೆ ಎನ್ನಬಹುದು. ಅಮೆರಿಕ ಸಂಯುಕ್ತ ಸಂಸ್ಥಾನದ ನೇತೃತ್ವದಲ್ಲಿ ಬ್ರೆಟ್ಟನ್ ವುಡ್ ಸಂಸ್ಥೆಗಳೆಂದು ಹೆಸರಾದ ಡಂಕೆಲ್, ಗ್ಯಾಟ್, ನಂತರ ವಿಶ್ವ ವ್ಯಾಪಾರಿ ಸಂಘಟನೆಗಳ ಮೂಲಕ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಜಾಗತಿಕವಾಗಿ ಜನಸಾಮಾನ್ಯರನ್ನು ಹಾಗೂ ಜಾಗತಿಕ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಾ ಬಂದಿದ್ದರೂ ಆರ್ಥಿಕ ಬಿಕ್ಕಟ್ಟು ಹಾಗೂ ಆರ್ಥಿಕ ಕುಸಿತಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಈಗಲೂ ಈ ಎಲ್ಲಾ ರಾಷ್ಟ್ರಗಳ ಆರ್ಥಿಕತೆಗಳು ಅಗತ್ಯಕ್ಕೆ ತಕ್ಕಂತಹ ಚೇತರಿಕೆ ಕಾಣಲಾರದೇ ಹೋಗಿವೆ. ಈ ಎಲ್ಲ ರಾಷ್ಟ್ರಗಳು ವ್ಯಾಪಕ ನಿರುದ್ಯೋಗ, ಬಡತನ, ಸಾಮಾಜಿಕ ಕ್ಷೋಭೆಗಳಿಂದ ತುಂಬತೊಡಗಿವೆ. ಅಮೆರಿಕ, ಫ್ರಾನ್ಸ್, ಯುಕೆ, ಜರ್ಮನಿ ಮೊದಲಾದೆಡೆ ನಡೆದ ‘ವಾಲ್ ಸ್ಟ್ರೀಟ್ ಆಕ್ರಮಿಸಿ’ ‘ಹಳದಿ ನಿಲುವಂಗಿ’ ಇತ್ಯಾದಿ ಭಾರೀ ಹಿಂಸಾಪೂರಿತ ಜನಾಂದೋಲನಗಳನ್ನು ನಾವು ಗಮನಿಸಬಹುದು.

ಕೆಲವೇ ಕಾರ್ಪೊರೇಟ್‌ಗಳು ಜಾಗತಿಕ ಸಂಪತ್ತಿನ ಒಡೆಯರಾಗಿ ಬಿಟ್ಟಿರುವುದರಿಂದಾಗಿ ಈ ರಾಷ್ಟ್ರಗಳು ಮರುಹೂಡಿಕೆ, ಉತ್ಪಾದನೆ ಹಾಗೂ ಲಾಭಗಳಿಕೆಗೆ ಅವಕಾಶವೇ ಇಲ್ಲದಂತಹ ಸ್ಥಿತಿಯಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ವಿಶ್ವಸಂಸ್ಥೆಯೂ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆ ನಗಣ್ಯವೆನ್ನುವ ಮಟ್ಟಕ್ಕೆ ಇಳಿದಿದೆ. ವಿಶ್ವಸಂಸ್ಥೆಗೆ ಅಮೆರಿಕ ತನ್ನ ನಿಗದಿತ ದೇಣಿಗೆಯನ್ನು ಕೂಡ ಕಡಿತಗೊಳಿಸಿದ್ದೂ ಅಲ್ಲದೇ ದೊಡ್ಡ ಮೊತ್ತ ಬಾಕಿ ಉಳಿಸಿದೆ. ವಿಶ್ವಸಂಸ್ಥೆ ತನ್ನ ನೌಕರರಿಗೆ ಸಂಬಳ ನೀಡಲಾಗದ ಸ್ಥಿತಿಗೆ ತಲುಪಿದೆ ಎಂದು ಅದರ ಪ್ರಧಾನ ಕಾರ್ಯದರ್ಶಿಯೇ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಅಮೆರಿಕ ತಾನೇ ಪ್ರಧಾನವಾಗಿ ರೂಪಿಸಿದ ಹಲವು ಜಾಗತಿಕ ಒಪ್ಪಂದಗಳು ಹಾಗೂ ಸಂಸ್ಥೆಗಳಿಂದ ಹೊರಬರತೊಡಗಿದೆ. ಇಲ್ಲವೇ ಅಂತಹ ಒಪ್ಪಂದಗಳನ್ನು ಉಲ್ಲಂಘಿಸತೊಡಗಿದೆ.

ತಾನೇ ಮುಕ್ತ ವ್ಯಾಪಾರ ವಲಯ ಒಪ್ಪಂದಗಳಿಂದಲೂ ಹೊರಬರತೊಡಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಸೇರಿದಂತೆ ಕೆನಡಾ, ಚಿಲಿ, ಪೆರು, ಮೆಕ್ಸಿಕೋ, ಆಸ್ಟ್ರೇಲಿಯಾ, ಜಪಾನ್, ನ್ಯೂಝಿಲ್ಯಾಂಡ್, ಬ್ರೂನೆ, ಸಿಂಗಾಪುರ, ಮಲೇಷ್ಯಾ, ವಿಯಟ್ನಾಮ್ ಒಟ್ಟು 12 ರಾಷ್ಟ್ರಗಳನ್ನು ಒಳಗೊಂಡಿದ್ದ ಟಿಪಿಪಿ (transnational partnership) ಎಂಬ ವ್ಯಾಪಾರಿ ಕೂಟ ಅಮೆರಿಕ ನೇತೃತ್ವದಲ್ಲಿ 2015ರ ಸಮಯದಲ್ಲಿ ರೂಪುಗಳ್ಳತೊಡಗಿತ್ತು. ಇದೇ ವೇಳೆಯಲ್ಲೇ ಚೀನಾ ನೇತೃತ್ವದಲ್ಲಿ 16 ದೇಶಗಳ ಆರ್‌ಸಿಇಪಿ (regional comprehensive economic partenership) ಎಂಬ ಹೆಸರಿನ ಮುಕ್ತ ವ್ಯಾಪಾರಿ ಪಾಲುದಾರಿಕಾ ವಲಯವೂ ರೂಪುಗೊಳ್ಳತೊಡಗಿತ್ತು. ಇದರಲ್ಲಿ ಚೀನಾ, ಭಾರತ, ಕೊರಿಯ, ಆಸ್ಟ್ರೇಲಿಯ, ಜಪಾನ್, ನ್ಯೂಝಿಲ್ಯಾಂಡ್, ಲಾವೋ, ಮ್ಯಾನ್ಮಾರ್, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ಕಾಂಬೋಡಿಯಾ, ಬ್ರೂನೆ, ಮಲೇಷಿಯಾ, ಸಿಂಗಾಪುರ, ವಿಯೆಟ್ನಾಮ್‌ಗಳು ಸೇರಿದ್ದವು.

2017 ಜನವರಿಯಲ್ಲಿ ಅಮೆರಿಕ ತಾನು ರೂಪಿಸಿದ ಟಿಪಿಪಿ ಎಂಬ ವ್ಯಾಪಾರಿ ಪಾಲುದಾರಿಕಾ ವಲಯದಿಂದ ಹೊರಹೋಗುವುದಾಗಿ ಘೋಷಿಸಿತು. ಅಲ್ಲಿಗೆ ಆ ವ್ಯಾಪಾರಿ ಒಪ್ಪಂದ ನನೆಗುದಿಗೆ ಬಿದ್ದುಹೋಗಿದೆ. ವಾಸ್ತವದಲ್ಲಿ ಈ ಎರಡೂ ವ್ಯಾಪಾರಿ ಪಾಲುದಾರಿಕಾ ವಲಯಗಳು ಎರಡು ಆರ್ಥಿಕ ಶಕ್ತಿಗಳ ನಡುವಿನ ಜಾಗತಿಕ ಮಾರುಕಟ್ಟೆ ಹಂಚಿಕೊಳ್ಳುವ ಹಿತಾಸಕ್ತಿಗಳ ಪೈಪೋಟಿಯಲ್ಲದೆ ಬೇರೇನೂ ಆಗಿರಲಿಲ್ಲ. ಇಂತಹ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸಾಪೇಕ್ಷವಾಗಿ ಆರ್ಥಿಕ ಸ್ಥಿರತೆ ಇರುವ, ಜಾಗತಿಕವಾಗಿ ಅತೀ ದೊಡ್ಡ ವ್ಯಾಪಾರ ಮಿಗತೆಯ ದೇಶವಾಗಿರುವ ಚೀನಾ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲು ತೊಡಗಿದೆ. ಅದರ ಭಾಗವಾಗಿ ಚೀನಾದಿಂದ ಯೂರೋಪಿನವರೆಗೆ ಭೂ ಹಾಗೂ ಸಮುದ್ರ ಸಾರಿಗೆಗಳ ಬೃಹತ್ ಜಾಗತಿಕ ಸಂಪರ್ಕ ಜಾಲಗಳನ್ನು ನಿರ್ಮಿಸತೊಡಗಿದೆ. ಅದನ್ನು ಒನ್ ಬೆಲ್ಟ್ ಒನ್ ರೋಡ್, ಜಿಯೋ ಎಕನಾಮಿಕ್ ಸಿಲ್ಕ್ ರೋಡ್, ಮಾರಿ ಟೈಮ್ ಸಿಲ್ಕ್ ರೂಟ್ ಎಂಬ ಹೆಸರುಗಳೊಂದಿಗೆ ಗುರುತಿಸಲಾಗುತ್ತಿದೆ. ಚೀನಾ ಈಗ ಆಕ್ರಮಣಕಾರಿ ಹೆಜ್ಜೆಗಳನ್ನು ಇಡತೊಡಗಿದೆ.

ಆರ್‌ಸಿಇಪಿ ವ್ಯಾಪಾರಿ ಪಾಲುದಾರಿಕಾ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದೆ. ಅದರಂತೆ ಮೋದಿ ನೇತೃತ್ವದ ಭಾರತದ ಕೇಂದ್ರ ಸರಕಾರ ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಈ ಒಪ್ಪಂದದಿಂದ ಭಾರತಕ್ಕೆ ಇದರಿಂದ ಭಾರೀ ಲಾಭವಾಗುತ್ತದೆ, ಚೀನಾದೊಂದಿಗೆ ಇರುವ ವ್ಯಾಪಾರ ಕೊರತೆಯನ್ನು ಇದರಿಂದ ಸರಿಪಡಿಸಬಹುದು ಎಂದೆಲ್ಲಾ ಬೊಗಳೆ ಬಿಡಲಾಗುತ್ತಿದೆ. ಈ ಒಪ್ಪಂದದಿಂದ ಗರಿಷ್ಠವಾಗಿ ಚೀನಾಕ್ಕೆ ಲಾಭದಾಯಕವಾಗುತ್ತದೆಯೇ ಹೊರತು ಭಾರತಕ್ಕಲ್ಲ ಎನ್ನುವುದನ್ನು ಸರಕಾರ ಜಾಣತನದಿಂದ ಮರೆಮಾಚುತ್ತಿದೆ. ಈ ಒಪ್ಪಂದದ ಪ್ರಕಾರ ಇದರ ಸದಸ್ಯ ರಾಷ್ಟ್ರಗಳ ನಡುವೆ ಸುಂಕರಹಿತ ಇಲ್ಲವೇ ಏಕರೀತಿಯ ಸುಂಕದ ಆಮದು ಹಾಗೂ ರಫ್ತುಗಳಿರುತ್ತವೆ. ಮೇಲ್ನೋಟಕ್ಕೇ ಅದು ಒಳ್ಳೆಯದಲ್ಲವೇ ಎನಿಸಬಹುದು. ಆದರೆ ಸದಸ್ಯ ರಾಷ್ಟ್ರಗಳಲ್ಲಿ ಚೀನಾ ಸರಕು ಹಾಗೂ ಸೇವೆಗಳ ಭಾರೀ ದೊಡ್ಡ ಉತ್ಪಾದಕ ದೇಶವಾಗಿರುವುದರಿಂದ ಚೀನಾ ಉತ್ಪನ್ನಗಳು ಇದರ ಗರಿಷ್ಠ ಲಾಭಗಳನ್ನು ಪಡೆಯಬಹುದೇ ಹೊರತು ಇತರ ರಾಷ್ಟ್ರಗಳಲ್ಲ.

ಸುಂಕ ರಹಿತ ಇಲ್ಲವೇ ಏಕರೀತಿಯ ಸುಂಕದಿಂದಾಗಿ ಕಚ್ಚಾ ಪದಾರ್ಥಗಳನ್ನು ಸುಲಭವಾಗಿ ಅಗ್ಗದಲ್ಲಿ ತರಿಸಿಕೊಂಡು ಉತ್ಪನ್ನವನ್ನಾಗಿ ಪರಿವರ್ತಿಸಿ ಸುಲಭ ಮತ್ತು ಅಗ್ಗವಾಗಿ ಮಾರಾಟ ಮಾಡಬಹುದು. ಇದೂ ಪ್ರಧಾನವಾಗಿ ಚೀನಾಕ್ಕೆ ಅನುಕೂಲವೇ ಹೊರತು ಇತರ ರಾಷ್ಟ್ರಗಳಿಗಲ್ಲ. ಯಾಕೆಂದರೆ ಚೀನಾ ಆರ್‌ಸಿಇಪಿ ಸದಸ್ಯ ರಾಷ್ಟ್ರಗಳಲ್ಲೆಲ್ಲ ತನ್ನ ಆರ್ಥಿಕ ಹಾಗೂ ಉತ್ಪಾದನಾ ಚಟುವಟಿಕೆಗಳನ್ನು, ಕಂಪೆನಿಗಳನ್ನು ಹೊಂದಿದೆ. ನಮ್ಮ ದೇಶದ ಕೃಷಿ, ಹೈನುಗಾರಿಕೆ ಹಾಗೂ ತೋಟಗಾರಿಕಾ ಉತ್ಪನ್ನಗಳು, ಉಳಿದಿರುವ ಸಣ್ಣ, ಮಧ್ಯಮ ಕೈಗಾರಿಕಾ ಉತ್ಪಾದನಾ ಘಟಕಗಳು ಮತ್ತಷ್ಟು ನೆಲಕಚ್ಚುವ ಸ್ಥಿತಿಗೆ ಈ ಪಾಲುದಾರಿಕೆ ಹೆಸರಿನ ಒಪ್ಪಂದ ತಳ್ಳುತ್ತದೆ. ಈಗಾಗಲೇ ನಮ್ಮನ್ನು ಆಳುತ್ತಾ ಬಂದ ಸರಕಾರಗಳು ಡಂಕೆಲ್, ಗ್ಯಾಟ್, ವಿಶ್ವ ವ್ಯಾಪಾರಿ ಸಂಘಟನೆ ಮೊದಲಾದ ಒಪ್ಪಂದಗಳಿಗೆ ಸಹಿ ಹಾಕುತ್ತಾ ದೇಶವನ್ನು ಅದರ ಆರ್ಥಿಕತೆಯನ್ನು ಹದಗೆಡಿಸಿ ಇಟ್ಟಿವೆ. ದೇಶದ ಸ್ವಾತಂತ್ರ್ಯ, ಸಾರ್ವಭೌಮತೆ, ಗಡಿಗಳಿಗೆ ಅರ್ಥವೇ ಇಲ್ಲದಂತೆ ಮಾಡಿವೆ. ಈಗ ದೇಶದಲ್ಲಿ ಅಳಿದುಳಿದದ್ದನ್ನು ಚೀನಾ ನುಂಗಿಹಾಕಲು ಈಗಿನ ಸರಕಾರ ಅನುವು ಮಾಡಿಕೊಡಲು ಹೊರಟಿದೆ. ಕೆಲವು ರೈತ ಸಂಘಟನೆಗಳು ಭಾರತ ಸರಕಾರದ ಆರ್‌ಸಿಇಪಿ ಹೆಸರಿನ ಚೀನಾ ಪರ ನಡೆಗಳನ್ನು ವಿರೋಧಿಸಿ ಹೋರಾಟಗಳಿಗೆ ಇಳಿದಿವೆ. ಆದರೆ ಇದರ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಬಹಳ ಕಡಿಮೆಯೆಂದೇ ಹೇಳಬೇಕಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಜನರಿಗೆ ಏನೂ ಭವಿಷ್ಯ ಉಳಿಯಲಾರದು.


ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News