ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ: ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಮೇಯರ್ ಸೂಚನೆ
ಬೆಂಗಳೂರು ಅ.22: ನಗರದಲ್ಲಿ ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಮುನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಳೆಯ ಅನಾಹುತಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಬರುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಎದುರಾಗುವ ಅನಾಹುತಗಳನ್ನು ತಪ್ಪಿಸಲು ಪಾಲಿಕೆಯಲ್ಲಿರುವ ಪ್ರಹರಿ ತಂಡವನ್ನು ಸಜ್ಜುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಯಾವುದೇ ಭಾಗದಲ್ಲಿ ಯಾವುದೇ ಅನಾಹುತಗಳು ಸಂಭವಿಸಿದಲ್ಲಿ ಕೂಡಲೇ ಆ ಸ್ಥಳಕ್ಕೆ ಪ್ರಹರಿ ತಂಡಗಳು ತೆರಳಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ದೂರಿಗಾಗಿ ಕಾಯುತ್ತಾ ಕುಳಿತಿರಬಾರದು ಎಂದು ಹೇಳಿದರು. ಪ್ರಹರಿ ತಂಡವನ್ನು ಬಲಿಷ್ಠಗೊಳಿಸಬೇಕು. ಜಂಟಿ ಆಯುಕ್ತರು ಮನೆಗೆ ಹೋಗುವ ಮುನ್ನ ಮಳೆ ಅನಾಹುತಗಳ ಬಗ್ಗೆ ಮಾಹಿತಿಯನ್ನು ಪಡೆದು ಪರಿಶೀಲನೆ ನಡೆಸಬೇಕು. ಒಂದು ವೇಳೆ ಮಳೆ ಬರುವ ಮುನ್ಸೂಚನೆ ಇದ್ದರೆ ಕಚೇರಿಯಲ್ಲಿ ಇದ್ದುಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ನೀರು ಎತ್ತುವ ಯಂತ್ರಗಳನ್ನು ನಿಯೋಜಿಸಬೇಕು. ರಾಜಕಾಲುವೆಯಿಂದ ನೀರು ಹಿಮ್ಮುಖವಾಗಿ ಚಲಿಸುವ ಕಡೆ ಗುಂಡಿಗಳನ್ನು ನಿರ್ಮಿಸಿ ಯಂತ್ರ ಅಳವಡಿಸಿ ನೀರು ರಾಜಕಾಲುವೆಗೆ ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಬಿಬಿಎಂಪಿಯ ಕೇಂದ್ರ ನಿಯಂತ್ರಣ ಕೊಠಡಿ ಸೇರಿದಂತೆ ಎಲ್ಲಾ 8 ನಿಯಂತ್ರಣ ಕೊಠಡಿಗಳಿಗೆ ಅಗತ್ಯ ಸಿಬ್ಬಂದಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಪಾಲಿಕೆ ಕೇಂದ್ರ ಕಚೇರಿ, ವಲಯ ಕಚೇರಿ 63 ತಾತ್ಕಾಲಿಕ ಕೊಠಡಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಅವುಗಳ ಮೂಲಕ ಮಳೆ ಅನಾಹುತಗಳನ್ನು ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ ಪ್ರಹರಿ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾಹನದಲ್ಲಿ ಪಿಕಾಸಿ, ಹಾರೆ ಗುತ್ತಿಗೆ, ಅಗ್ಗ, ಮರ ಕತ್ತರಿಸುವ ಯಂತ್ರ, ಪಂಪು, ಜನರೇಟರ್ ಹಾಗೂ ಪ್ರಖರವಾಗಿ ಬೆಳಕು ಚೆಲ್ಲುವ ಟಾರ್ಚ್‌ಗಳು ಇರಲಿವೆ ಎಂದು ಸಭೆಗೆ ತಿಳಿಸಿದರು. ನಗರದಲ್ಲಿ ಈಗಾಗಲೇ ಎಲ್ಲೆಲ್ಲಿ ಜಲಾವೃತಗಳು ಉಂಟಾಗುತ್ತವೆ ಎಂಬುದನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು. ಮಳೆ ಬಂದಾಗ ಅಂತಹ ಪ್ರದೇಶಗಳಿಗೆ ತೆರಳಿ ಜಲಾವೃತವಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಉಪಮೇಯರ್ ರಾಮಮೋಹನ್ ರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.