ಮದ್ದೂರು: ರಸ್ತೆಯಲ್ಲೇ ಅಟ್ಟಾಡಿಸಿ ಯುವಕನ ಕೊಲೆಗೈದ ಪ್ರಕರಣ; ಆರೋಪಿಗಳ ಬಂಧನ

Update: 2019-10-23 16:16 GMT

ಮಂಡ್ಯ, ಅ.23: ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಲ್ಲಿ ಹಾಡಹಗಲೇ ಅಟ್ಟಾಡಿಸಿಕೊಂಡು ಯುವಕನನ್ನು ಹತ್ಯೆಗೈದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ದೂರಿನ ಶಿವಪುರದ ಪ್ರವೀಣ್ ಅಲಿಯಾಸ್ ಕಡ್ಡಿ(26), ಮಠದದೊಡ್ಡಿ ಗ್ರಾಮದ ಎಂ.ಎನ್. ನಿರಂಜನ್ ಅಲಿಯಾಸ್ ಡಾಲಿ(23), ಕ್ಯಾತಘಟ್ಟ ಗ್ರಾಮದ ಕೆ.ಪಿ.ಕಾರ್ತಿಕ್ (19), ಮಂಡ್ಯದ ಇಂದಿರಾನಗರ ಕಾಲನಿಯ ಜೆ.ಅನಂತಕುಮಾರ್ (23), ಸಾವುಕಾರ್ ಚನ್ನೇಗೌಡ ಬಡಾವಣೆಯ ಕೆ.ಪಿ.ಸಚಿನ್‍ಗೌಡ (20) ಬಂಧಿತರು.

ಕಳೆದ ಶನಿವಾರ ಕ್ಷುಲ್ಲಕ ಕಾರಣಕ್ಕೆ ಚಲುವರಾಜು ಅವರ ಪುತ್ರ ನವೀನ್‍ ಕುಮಾರ್ ಅಲಿಯಾಸ್ ಕುಟ್ಟಿ (32) ಎಂಬಾತನನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿಕೊಂಡು ಹತ್ಯೆಗೈದು ಪರಾರಿಯಾಗಿದ್ದರು. ಆರೋಪಿಗಳಲ್ಲಿ ಕೆಲವರು ರೌಡಿ ಶೀಟರ್ ಗಳಾಗಿದ್ದು, ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಗಳಿವೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಪರಶುರಾಂ ಕೆ.ಎಂ.ದೊಡ್ಡಿ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಹತ್ಯೆಯಾದ ನವೀನ್, ಆರೋಪಿಗಳಲ್ಲೊಬ್ಬನಾದ ಪ್ರವೀಣ್ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದ. ಈ ಬಗ್ಗೆ ಯುವಕರೇ ಪಂಚಾಯಿತಿ ನಡೆಸಿ ಅದಕ್ಕೆ ಸಂಬಂಧಿಸಿದಂತೆ ಮುರಿದ ಹಲ್ಲನ್ನು ಕಟ್ಟಿಸಿಕೊಡುವಂತೆ ನವೀನ್‍ಗೆ ಸೂಚಿಸಿದ್ದರು. ಅದಕ್ಕೆ ನವೀನ್ ಒಪ್ಪಿಕೊಂಡಿದ್ದ. ಆದರೆ, ನವೀನ್ ಪರಿಹಾರವನ್ನೂ ನೀಡಲಿಲ್ಲ. ಇಲ್ಲವೇ ಹಲ್ಲನ್ನೂ ಕಟ್ಟಿಸಿಕೊಡಲಿಲ್ಲ ಎನ್ನಲಾಗಿದ್ದು ಇದರಿಂದ ಕುಪಿತರಾದ ಪ್ರವೀಣ್ ಮತ್ತವರ ಸ್ನೇಹಿತರು ನವೀನ್ ಹತ್ಯೆಗೆ ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಎಎಸ್ಪಿ ಡಾ.ವಿ.ಜೆ.ಶೊಭಾರಾಣಿ, ಡಿವೈಎಸ್‍ಪಿ ಎಚ್.ಎಂ.ಶೈಲೇಂದ್ರ, ಸಿಪಿಐ ಎಂ.ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News