ಅಪರಿಚಿತ ಮೃತದೇಹ ಗುರುತಿಸಲು ಆಧಾರ್ ಲಿಂಕ್ ಕೋರಿ ಅರ್ಜಿ: ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್

Update: 2019-10-23 16:26 GMT

ಬೆಂಗಳೂರು, ಅ.23: ಪಾದಚಾರಿ ಮಾರ್ಗ, ಕೆರೆ ಬಳಿ ಸಿಕ್ಕ ಮೃತದೇಹಗಳು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಅಪರಿಚಿತ ಮೃತದೇಹಗಳಿಗೆ ಆಧಾರ್ ಲಿಂಕ್ ಮೂಲಕ ಮಾಹಿತಿ ಕಲೆ ಹಾಕಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ. 

ಈ ಕುರಿತು ಮಾಜಿ ಐಪಿಎಸ್ ಅಧಿಕಾರಿ ಉಲ್ಫತ್ ಹುಸೇನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬೆಂಗಳೂರು ನಗರದಲ್ಲಿಯೇ 2016ರಲ್ಲಿ 237 ಅಪರಿಚಿತ ಮೃತದೇಹಗಳು, 2017ರಲ್ಲಿ 178, 2018ರಲ್ಲಿ 140 ಅಪರಿಚಿತ ಮೃತದೇಹಗಳು ಪತ್ತೆಯಾಗಿವೆ. ಈ ಅಪರಿಚಿತ ಮೃತದೇಹಗಳ ಬಗ್ಗೆ ಆಧಾರ್ ಲಿಂಕ್ ಮೂಲಕ ಮಾಹಿತಿಯನ್ನು ಕಲೆ ಹಾಕಿದರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ, ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ತಿಳಿಸಿದರು.

ಪಾದಚಾರಿ ಮಾರ್ಗ, ಕೆರೆ, ಜಮೀನು ಇತರೆ ಕಡೆಗಳಲ್ಲಿ ಅಪರಿಚಿತ ಮೃತದೇಹಗಳು ಸಿಕ್ಕಿರುತ್ತವೆ. ಪೊಲೀಸರು ಅಪರಿಚಿತ ಮೃತದೇಹಗಳನ್ನು ವಾರಸುದಾರರಿಲ್ಲ ಎಂದು ಹೇಳಿ ಅಂತ್ಯಸಂಸ್ಕಾರವನ್ನು ನಡೆಸಿ ಬಿಡುತ್ತಾರೆ. ಮೃತದೇಹಗಳ ಬಗ್ಗೆ ಮಾಹಿತಿ ಕಲೆ ಹಾಕಲು ಆಧಾರ್ ಲಿಂಕ್ ಅನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ನಿರ್ದೇಶಿಸಬೇಕೆಂದು ಪೀಠಕ್ಕೆ ತಿಳಿಸಿದ್ದಾರೆ. ಕೇಂದ್ರ ಸರಕಾರ, ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ), ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಈ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News