ಸಾಮಾಜಿಕ ನಿಧಿ
ಶಿವನಿಧಿಯು ಸಾಮಾಜಿಕ ನಿಧಿಯಾಗಿದೆ. ಶರಣಸಂಕುಲದಲ್ಲಿ ಯಾರೂ ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಬಸವಣ್ಣನವರು ಶಿವನಿಧಿಯನ್ನು ಸ್ಥಾಪಿಸಿದ್ದರು.
ಮಹಾನ್ ಅರ್ಥಶಾಸ್ತ್ರಜ್ಞರೂ ಆಗಿದ್ದ ಬಸವಣ್ಣನವರು ಕಾಯಕ ಪ್ರಜ್ಞೆಯ ಮೂಲಕ ಯೋಗ್ಯ ಉತ್ಪಾದನೆಯ ಮಹತ್ವ ತಿಳಿಸಿದರು. ಕಾಯಕದಿಂದ ಬಂದದ್ದು ದೇವರ ಪ್ರಸಾದ ಎಂದು ಸಾರಿದರು. ಪ್ರಸಾದವು ಸದ್ಬಳಕೆಯ ಪ್ರತೀಕವಾಗಿದೆ. ದೇವರ ಪ್ರತೀಕವಾದ ಸಕಲಜೀವಾತ್ಮರ (ಜಂಗಮ) ಸೇವೆಗೆ ದಾಸೋಹ ಎಂದು ಕರೆದರು. ದಾಸೋಹವು ಸರಿಯಾದ ಸಾಮಾಜಿಕ ವಿತರಣೆಯನ್ನು ಸೂಚಿಸುತ್ತದೆ. ಯೋಗ್ಯ ಉತ್ಪಾದನೆ, ಯೋಗ್ಯ ಬಳಕೆ ಮತ್ತು ಯೋಗ್ಯ ಸಾಮಾಜಿಕ ವಿತರಣಾ ವ್ಯವಸ್ಥೆ ಇರುವ ದೇಶದಲ್ಲಿ ಹಿಂಸೆ ತಾಂಡವವಾಡುವುದಿಲ್ಲ. ಜನತೆ ಸರ್ವ ವಿಧದಿಂದ ಸಮಾನತೆಯನ್ನು ಅನುಭವಿಸುತ್ತಾರೆ. ಬಸಣ್ಣನವರ ವಚನಗಳು ಸಾಹಿತ್ಯ, ಸಮಾಜ, ಧರ್ಮ, ದರ್ಶನ, ರಾಜನೀತಿ, ಅರ್ಥಶಾಸ್ತ್ರ, ಆಡಳಿತ, ಮನೋವಿಜ್ಞಾನ, ಸಾಮಾಜಿಕ ಮನೋವಿಜ್ಞಾನ, ಸಮೂಹ ಪ್ರಜ್ಞೆ, ಚಳವಳಿ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತವೆ.
ತನು-ಮನ-ಧನ, ಕಾಯಕ-ಪ್ರಸಾದ-ದಾಸೋಹ, ಉತ್ಪಾದನೆ-ಬಳಕೆ-ವಿತರಣೆ, ಗುರು-ಲಿಂಗ-ಜಂಗಮ ಮತ್ತು ಅರಿವು-ಸಂಸ್ಕಾರ-ಆಚಾರ ಎಂಬುವು ಆಂತರಿಕ ಸಂಬಂಧವನ್ನು ಹೊಂದಿವೆ. ತನು-ಕಾಯಕ-ಉತ್ಪಾದನೆ-ಗುರು- ಅರಿವು, ಮನ-ಪ್ರಸಾದ-ಬಳಕೆ- ಲಿಂಗ-ಸಂಸ್ಕಾರ ಮತ್ತು ಧನ-ದಾಸೋಹ- ವಿತರಣೆ-ಜಂಗಮ-ಆಚಾರ ಜೊತೆ ಜೊತೆಯಾಗಿ ಸಾಗುತ್ತವೆ. ತನುವಿಗೆ ಕಾಯಕದ ಸಂಬಂಧ ಬಂದಾಗ ಅದರ ಉತ್ಪಾದನೆಯಿಂದ ಬರುವ ಅರಿವು ಗುರುವಾಗುವುದು. ಮನವು ಪ್ರಸಾದ ಪ್ರಜ್ಞೆಯಿಂದಾಗಿ ಎಲ್ಲವನ್ನು ಸದ್ಬಳಕೆ ಮಾಡುತ್ತ ಸರ್ವಸಮತ್ವದ ಲಿಂಗತತ್ವದಿಂದ ಕೂಡಿದ ಸಂಸ್ಕಾರ ಹೊಂದುವುದು. ಧನವು ದಾಸೋಹಂಭಾವದಿಂದಾಗಿ ಯೋಗ್ಯ ವಿತರಣೆಯುಂಟಾಗಿ ಜಂಗಮ (ಸಮಾಜ)ದ ಏಳ್ಗೆಯ ಆಚರಣೆಯಾಗುವುದು.
ಹೀಗೆ ಜಾತಿ, ಕುಲ, ಮತ, ಧರ್ಮ, ವರ್ಗ ಮತ್ತು ಲಿಂಗಭೇದವಿಲ್ಲದೆ ‘‘ಇವ ನಮ್ಮವ, ಇವ ನಮ್ಮವ, ಇವ ನಮ್ಮವ’’ ಎಂದು ಎಲ್ಲರನ್ನು ಒಳಗೊಳ್ಳುವ ಶರಣಸಂಕುಲದ ನಿರ್ಮಾಣವಾದುದು ಹೇಗೆ? ಒಬ್ಬನೇ ನಿರಾಕಾರ ದೇವರು, ಸಕಲ ಜೀವಾತ್ಮರನ್ನೊಳಗೊಂಡ ಒಂದೇ ಸಾಕಾರ ಜಗತ್ತು ಹಾಗೂ ಮಾನವಕುಲವೊಂದೇ ಎಂದು ಸಾರುತ್ತ ‘‘ಇವನಾರವ, ಇವನಾರವ, ಇವನಾರವ’’ ಎಂದು ಬೇರ್ಪಡಿಸುವವರ ಸ್ಥಗಿತಗೊಂಡ ಮನುಧರ್ಮವನ್ನು ಎದುರಿಸುತ್ತ, ಎಲ್ಲರನ್ನು ಒಳಗೊಳ್ಳುವ ಜೀವನ ವಿಧಾನವೊಂದರ ಮೂಲಕ ಕಾಯಕ ಜೀವಿಗಳ ಚಳವಳಿಯ ಧರ್ಮ ಸ್ಥಾಪನೆ ಮಾಡಿದ್ದು ಹೇಗೆ? ಎಂಬುದನ್ನು ಅರಿಯುವುದು ಈ ಕಾಲಘಟ್ಟದಲ್ಲಿ ಅತ್ಯವಶ್ಯವಾಗಿದೆ.
ಈ ಧರ್ಮ ಮೂಲತಃ ಒಂದು ಉತ್ಕೃಷ್ಟ ಜೀವನವಿಧಾನದ ಚಳವಳಿಯಾಗಿ ರೂಪುಗೊಂಡಿತು. ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಸಾಧಿಸುವ ವಿಧಾನ ಇದಾಗಿತ್ತು. ಬಹಿರಂಗ ಶುದ್ಧಿಗಾಗಿ ಹೋರಾಡಬಯಸುವವರು ಅಂತರಂಗ ಶುದ್ಧಿಯ ಮೂಲಕ ಗಟ್ಟಿಗೊಳ್ಳಬೇಕು ಎಂಬುದು ಬಸವಣ್ಣನವರ ದೃಢನಿರ್ಧಾರವಾಗಿತ್ತು. ಅಂತರಂಗ ಶುದ್ಧಿಗಾಗಿ ಇಷ್ಟಲಿಂಗದ ಸೃಷ್ಟಿ ಮಾಡಿದರು. ಬಹಿರಂಗ ಶುದ್ಧಿಗಾಗಿ ಜಂಗಮಲಿಂಗದ ಪರಿಕಲ್ಪನೆ ಕೊಟ್ಟರು. ಇಷ್ಟಲಿಂಗದ ಅರಿವು ಜಂಗಮಲಿಂಗದ ಆಚಾರವಾಯಿತು. ಅರಿವನ್ನು ಆಚರಣೆಗೆ ತರುವ ಈ ಕ್ರಮ ವಿನೂತನವಾಗಿದೆ. ಇದನ್ನು ಸಾಧಿಸುವಲ್ಲಿ ಸಾಮಾಜಿಕ ನಿಧಿಯ ಪಾತ್ರ ಮಹತ್ವದ್ದಾಗಿದೆ.