ಕೃಷಿ ಮೇಳ-2019: ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೇಳ ವೀಕ್ಷಣೆ, ನಾಳೆ ತೆರೆ
ಬೆಂಗಳೂರು, ಅ.26: ಪ್ರಸಕ್ತ ವರ್ಷದ ಕೃಷಿಮೇಳ-2019ವು ನಾಳೆ(ಅ.27) ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ವಾರಾಂತ್ಯವಾದ್ದರಿಂದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಜನರು ಮೇಳಕ್ಕೆ ಆಗಮಿಸಿದ್ದರು.
ಕಳೆದ ಮೂರು ದಿನಗಳಿಂದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಮೇಳಕ್ಕೆ ವಾರಾಂತ್ಯವಾದ್ದರಿಂದ ಶನಿವಾರ ಅಧಿಕ ಸಂಖ್ಯೆಯಲ್ಲಿ ರೈತರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿಗಳು ಬಂದು ಮೇಳವನ್ನು ವೀಕ್ಷಣೆ ಮಾಡಿದರು.
ಕಳೆದ ಎರಡು ದಿನಗಳಿಗಿಂತ ಇಂದು ಅಧಿಕ ಹೆಚ್ಚಿನ ಸಂದಣಿ ಕಂಡುಬರುತ್ತಿತ್ತು. ಬೆಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡಿದ್ದು, ಇಲ್ಲಿನ ಆಕರ್ಷಣೀಯ ಮಳಿಗೆಗಳತ್ತ ಸಾಗಿ ಮಾಹಿತಿ ಪಡೆಯುತ್ತಿದ್ದರು. ಮೇಳದಲ್ಲಿರುವ ಸಾವಯವ ಮಳಿಗೆಗಳತ್ತ ತೆರಳಿ ಆಹಾರ ಪದಾರ್ಥಗಳನ್ನು ಖರೀದಿ ಮಾಡುವುದು ಕಂಡುಬಂದಿತು.
ರಸಾವರಿ ಬೇಸಾಯ ಪದ್ಧತಿಯತ್ತ ಒಲವು: ಹನಿ ನೀರಾವರಿ ಮೂಲಕವೇ ರಸಗೊಬ್ಬರ, ಕೀಟನಾಶಕವನ್ನು ನೀರಿನ ಜತೆಯಲ್ಲೇ ನೇರವಾಗಿ ಬೆಳೆಗಳಿಗೆ ಅಥವಾ ಗಿಡದ ಬುಡಗಳಿಗೆ ಸಿಂಪಡಿಸುವಂತಹ ‘ರಸಾವರಿ ಕೃಷಿ ಪದ್ಧತಿ’ ಬಗ್ಗೆ ರೈತರು ವಿಶೇಷವಾಗಿ ಮಾಹಿತಿ ಪಡೆಯುತ್ತಿದ್ದರು.
ಕುತೂಹಲ ಹುಟ್ಟಿಸುವ ಒಣಸೋರೆ: ಗೊಂಬೆ, ಪುಂಗಿ, ತಂಬೂರಿ, ಗದೆ, ಆನೆ, ಹಾವು ಬಿಂದಿಗೆ ಹಂಸ ಇವೆಲ್ಲವೂ ಕೃಷಿ ಮೇಳಕ್ಕೆ ಬಂದಿವೆ. ಒಂದು ಸೋರೆಕಾಯಿ ಗೊಂಬೆಯಂತೆ ಗಿಡ್ಡದಾಗಿದ್ದರೆ, ಮತ್ತೊಂದು ಥೇಟ್ ಪುಂಗಿಯಂತೇ ಇದೆ. ಮತ್ತೊಂದು ತಂಬೂರಿಯಂತೆ ವಿನ್ಯಾಸವಿದ್ದರೆ, ಇನ್ನೊಂದು ಭೀಮ/ಆಂಜನೆಯರ ಗದೆಯಂತಿದೆ. ಆನೆ ಸೊಂಡಿಲನಂತೆ ಗಜಗಾತ್ರದ ‘ಆನೆ ಸೋರೆ’ ಗಮನ ಸೆಳೆದರೆ, ಝಿಗ್‌ಜಾಗ್ ಮಾದರಿಯಲ್ಲಿನ ‘ಹಾವು ಸೋರೆ’ ಆಕರ್ಷಕವಾಗಿದೆ.
ನವಣೆಗಳ ಆಕರ್ಷಣೆ: ಕಪ್ಪು ನವಣೆ, ಕೆಂಪು ನವಣೆ, ಹಾಲ್ ನವಣೆ, ಚಂದ್ರನವಣೆ, ಬಿಳಿಹುಲ್ ನವಣೆ, ಕೃಷ್ಣದೇವರಾಯ ನವಣೆ ಇತ್ಯಾದಿಗಳು ಮೇಳದಲ್ಲಿ ನೋಡುಗರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.