ರಸ್ತೆ ಕಾಮಗಾರಿ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ರಾಜ್ಯ ಸರಕಾರ ಆದೇಶ
ಬೆಂಗಳೂರು, ಅ.29: ಪಾಲಿಕೆ ವ್ಯಾಪ್ತಿಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ, ಅನಗತ್ಯ ರಸ್ತೆ ಕಾಮಗಾರಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಸ್ತೆಗಳ ಹಿಂದಿನ ಕಾಮಗಾರಿಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಬಿಬಿಎಂಪಿಯ ಅಂತರ್ಜಾಲದಲ್ಲಿ ‘ರಸ್ತೆ ಕಾಮಗಾರಿ ಇತಿಹಾಸ’ ವಿಭಾಗದಲ್ಲಿ ಕಾಮಗಾರಿಯ ಮಾಹಿತಿಯನ್ನು ಪ್ರಕಟಿಸಬೇಕು. ಆ ಮೂಲಕ ಆದ್ಯತೆಯ ಮೇಲೆ ಕಾಮಗಾರಿ ಕೈಗೊಳ್ಳಲು ಸಹಾಯವಾಗಲಿದೆ ಎಂದು ಸರಕಾರದ ಉಪ ಕಾರ್ಯದರ್ಶಿ(ನಗರಾಭಿವೃದ್ಧಿ ಇಲಾಖೆ) ಕೆ.ಎ.ಹಿದಾಯತುಲ್ಲ ಆದೇಶದಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿಯ ವೈಬ್‌ಸೈಟ್‌ನಲ್ಲಿ ಮುಖ್ಯರಸ್ತೆ ಮತ್ತು ವಲಯವಾರು 82,397 ರಸ್ತೆಗಳ ಮಾಹಿತಿ ಲಭ್ಯವಿದೆ. ಈ ರಸ್ತೆಗಳಲ್ಲಿ ಸರಕಾರ ಹಾಗೂ ಖಾಸಗಿ ಸ್ವತ್ತುಗಳ ವಿವರವನ್ನೂ ಹಂತಹಂತವಾಗಿ ವೈಬ್‌ಸೈಟ್‌ನ ಇತಿಹಾಸಕ್ಕೆ ಸೇರಿಸಬೇಕು. ಆ ರಸ್ತೆಗಳಲ್ಲಿ ಬರುವ ಆಸ್ತಿ ದಾಖಲಾತಿ ಸಂಖ್ಯೆ ನೇರವಾಗಿ ಆ ರಸ್ತೆಗೆ ಲಿಂಕ್ ಆಗುವಂತೆ ಮಾಡಲು ಸೂಚಿಸಲಾಗಿದೆ.
ಯಾವ ರಸ್ತೆಯಲ್ಲಿ ಒಎಫ್‌ಸಿಗೆ ಸಂಬಂಧಿಸಿದ ಮಾಹಿತಿ ದಾಖಲಿಸುವುದು, ಇದರೊಂದಿಗೆ ಬೀದಿ ದೀಪಗಳ ಮಾಹಿತಿ, ಚರಂಡಿ, ಪಾದಚಾರಿ ಮಾರ್ಗ, ಮೇಲುಸೇತುವೆ, ಕೆಳ ಸೇತುವೆ, ಬೆಸ್ಕಾಂ, ಜಲಮಂಡಳಿ, ಕೆಪಿಟಿಸಿಎಲ್, ಗೈಲ್, ಬಿಎಂಆರ್‌ಸಿಎಲ್ ಸೇರಿದಂತೆ ಎಲ್ಲ ಇಲಾಖೆಗಳ ಮಾಹಿತಿಯನ್ನು ನಮೂದಿಸುವಂತೆ ಸೂಚಿಸಲಾಗಿದೆ.
ರಸ್ತೆಗಳ ಇತಿಹಾಸ ಸೇರಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಜಾಬ್‌ಕೋಡ್ ನೀಡುವ ಮೊದಲು ರಸ್ತೆ ಇತಿಹಾಸ ತಂತ್ರಾಂಶದ ಮೂಲಕ ಮುಖ್ಯ ಇಂಜಿನಿಯರ್‌ಗೆ ಸಲ್ಲಿಸಿ, ಅನುಮೋದನೆ ಪಡೆಯಬೇಕು. ಆ ಬಳಿಕ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ನಂತರ ಕಾಮಗಾರಿಗೆ ಜಾಬ್ ಕೋಡ್ ನೀಡಬೇಕಿದೆ ಎಂದು ಹೇಳಲಾಗಿದೆ.