ಐಎಂಎ ಬಹುಕೋಟಿ ವಂಚನೆ ಪ್ರಕರಣ: ನಿಧಾನಗತಿ ತನಿಖೆಗೆ ಹೈಕೋರ್ಟ್ ಆಕ್ರೋಶ
ಬೆಂಗಳೂರು, ಅ.31: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ತನಿಖೆಯ ಪ್ರಗತಿ ವರದಿ ಸಲ್ಲಿಸಲು ಸರಕಾರಕ್ಕೆ ನಿರ್ದೇಶಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಆ್ಯಂಬಿಡೆಂಟ್, ಇಂಜಾಸ್ ಸೇರಿ 9 ವಂಚಕ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರ ಬರೆದ ಪತ್ರಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಸರಕಾರ ಇಷ್ಟೊಂದು ಅಸಹಾಯಕ ಆಗಬಾರದು. ಡಿಸಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠವು, ಸರಕಾರದ ಪತ್ರಕ್ಕೆ ಸ್ಪಂದಿಸದ ಡಿಸಿ ಸೇರಿ 9 ವಂಚಕ ಕಂಪೆನಿಗಳ ವಿರುದ್ಧ ಕೆಪಿಐಡಿ ಕಾಯ್ದೆ 2004ರ ಪ್ರಕಾರ ಕ್ರಮ ಕೈಗೊಳ್ಳಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.