ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಭರವಸೆ
ಬೆಂಗಳೂರು, ಅ 31: ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರತಿಯೊಬ್ಬರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಭರವಸೆ ನೀಡಿದರು.
ಪಾಲಿಕೆ ಸಭೆಯಲ್ಲಿ ಗುರುವಾರ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಾಲಿಕೆಯ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ನಗರದ ಅಭಿವೃದ್ಧಿಗೆ ತಾವು ಕೈಗೊಳ್ಳುವ ಯೋಜನೆಗಳಿಗೆ ಶಾಸಕರು, ಬಿಬಿಎಂಪಿ ಸದಸ್ಯರು ಅಧಿಕಾರಿಗಳು ಹಾಗೂ ಜನರ ಸಹಕಾರವು ಅಗತ್ಯ ಎಂದು ಹೇಳಿದರು.
ಉಪ ಮೇಯರ್ ರಾಮಮೋಹನ ರಾಜು ಮಾತನಾಡಿ, ಅವರು ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ತಾವು ಸೇವೆ ಸಲ್ಲಿಸುವುದಾಗಿ ತಿಳಿಸಿದರು. ನೂತನ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ತಮ್ಮನ್ನು ಆಡಳಿತ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅನುದಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಡಳಿತ ಅವಧಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರ ಹೇಳಿಕೆಯನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಕೆಲಕಾಲ ಪಾಲಿಕೆ ಸಭೆಯಲ್ಲಿ ಧರಣಿ ನಡೆಸಿದರು. ಆದರೆ, ಮೇಯರ್ ಗೌತಮ್ ಕುಮಾರ್ ಜೈನ್ ಇದಕ್ಕೆ ಏನೂ ಪ್ರತಿಕ್ರಿಯಿಸದೆ ಹೋದಾಗ ಕಾಂಗ್ರೆಸ್ ಸದಸ್ಯರು ಆಕ್ರೋಶಗೊಂಡು ಬಾವಿಗಿಳಿದು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ಅವ್ಯವಹಾರ ಎಂಬ ಪದವನ್ನು ಕಡತದಿಂದ ತೆಗೆದುಹಾಕುವವರೆಗೂ ಧರಣಿಯನ್ನು ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಸದಸ್ಯರಾದ ಸತ್ಯನಾರಾಯಣ, ಎಂ.ಶಿವರಾಜ್, ಮಂಜುನಾಥರೆಡ್ಡಿ ಮತ್ತಿತರ ಸದಸ್ಯರು ಪಟ್ಟು ಹಿಡಿದರು.
ಆಗ ಎರಡು ಪಕ್ಷಗಳ ಸದಸ್ಯರು ಆರೋಪ, ಪ್ರತ್ಯಾರೋಪದಲ್ಲಿ ನಿರತರಾದರಲ್ಲದೆ ಪರಸ್ಪರ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಮೇಯರ್ ಅವರು ಮಧ್ಯ ಪ್ರವೇಶಿಸಿ ಶಾಸಕರ ಅನುದಾನ ಕುರಿತಂತೆ ಮುಖ್ಯಮಂತ್ರಿ ಅವರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರಾದರೂ ಕಾಂಗ್ರೆಸ್ ಸದಸ್ಯರು ಧರಣಿಯನ್ನು ವಾಪಸ್ಸು ಪಡೆಯಲಿಲ್ಲ. ಅಂತಿಮವಾಗಿ ಕಾಂಗ್ರೆಸ್ ಸದಸ್ಯರ ಬಿಗಿಪಟ್ಟಿಗೆ ಮಣಿದ ಮೇಯರ್ ಗೌತಮ್ ಕುಮಾರ್ ಅವರು ಅವ್ಯವಹಾರ ಪದವನ್ನು ಕಡತದಿಂದ ತೆಗೆದು ಹಾಕಬೇಕೆಂದು ಸೂಚಿಸಿದಾಗ ಧರಣಿ ನಿರತ ಕಾಂಗ್ರೆಸ್ ಸದಸ್ಯರು ಧರಣಿ ಅಂತ್ಯಗೊಳಿಸಿ ಸ್ವ-ಸ್ಥಾನಕ್ಕೆ ತೆರಳಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಯಿತು. ಬಿಬಿಎಂಪಿಯಲ್ಲಿ ನಿಮ್ಮ ಆಡಳಿತ ಬಂದು ಒಂದು ತಿಂಗಳಾಯಿತು. ಆದರೆ, ಕಸದ ಸಮಸ್ಯೆ ನಿವಾರಣೆಯಾಗಿಲ್ಲ. ಮುಖ್ಯಮಂತ್ರಿಗಳ ಮನೆ ಮುಂದೆಯೇ ಕಸ ಬಿದ್ದಿದೆ. ಯಡಿಯೂರಪ್ಪ ಅವರ ಆಡಳಿತ ಶೂನ್ಯ ಎಂದು ಕುಟುಕಿದರು.
ಇದರಿಂದ ಕೆರಳಿದ ಬಿಜೆಪಿಯ ಪದ್ಮನಾಭರೆಡ್ಡಿ ನಮ್ಮ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಪಾಲಿಕೆಯಲ್ಲಿ ಒಂದು ತಿಂಗಳಾಗಿದೆ. ಕಸದ ಸಮಸ್ಯೆ ನೀವು ಮಾಡಿದ ಅವ್ಯವಹಾರದ ಪಾಪದ ಕೂಸು ಎಂದು ಸಮರ್ಥಿಸಿಕೊಂಡರು.
ಸಭೆಯಲ್ಲಿ ಬುಧವಾರ ನಿಧನರಾದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.