ವಿಮೋಚನೆಯ ಮಾರ್ಗ

Update: 2019-10-31 18:42 GMT

ಜೀವಕಾರುಣ್ಯ ತತ್ವದೊಂದಿಗೆ ಬಸವಣ್ಣನವರು ಅಹಂಕಾರ ಮರ್ದನ ಮಾಡಿದರು. ಅಹಂಕಾರವು ಎಲ್ಲ ಭೌತಿಕ ಅನಿಷ್ಟಗಳ ಮತ್ತು ಮನೋರೋಗಗಳ ಮೂಲವಾಗಿದೆ. ಜೀವ ಮತ್ತು ಜಗತ್ತಿನ ಅವಿರತ ಸಂಬಂಧವನ್ನು ತೋರಿಸುವ ಮೂಲಕ ದಯಾಭಾವದೊಂದಿಗೆ ಸಹನಶಕ್ತಿಯನ್ನು ಹೆಚ್ಚಿಸುತ್ತ ಮಾನವರನ್ನು ಅಹಂಕಾರ ಭಾವದಿಂದ ಮುಕ್ತಗೊಳಿಸಿ ಅವರೆಲ್ಲ ತಮ್ಮಿಳಗಿನ ದೇವರಿಗೆ ಶರಣಾಗುವಂಥ ಸಿದ್ಧಾಂತವನ್ನು ರೂಪಿಸಿದರು. ಇಡೀ ಮಾನವ ಕುಲ ಒಂದಾಗಿ ಸಕಲಜೀವಾತ್ಮರಿಗೆ ಲೇಸ ಬಯಸುವ ಹಾಗೆ ಬದುಕುವ ಕಲೆಯನ್ನು ಕಲಿಸಿದರು.

ಬಸವಣ್ಣನವರು ವೈದಿಕ ವ್ಯವಸ್ಥೆಯ ಎಲ್ಲವನ್ನೂ ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಹೊಸ ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಹುದೇವೋಪಾಸನೆಗೆ ಪರ್ಯಾಯವಾಗಿ ಏಕದೇವೋಪಾಸನೆ, ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಮಂದಿರಕ್ಕೆ ಪರ್ಯಾಯವಾಗಿ ಅನುಭವ ಮಂಟಪ, ಮಠಕ್ಕೆ ಪರ್ಯಾಯವಾಗಿ ಮಹಾಮನೆ, ಸ್ವಾಮಿಗೆ ಪರ್ಯಾಯವಾಗಿ ತತ್ವಜಂಗಮ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕಸಿದ್ಧಾಂತ. ಜಾತಿಭೇದ ಸಮಾಜಕ್ಕೆ ಪರ್ಯಾಯವಾಗಿ ಜಾತಿಸಂಕರ ಸಮಾಜ ಮುಂತಾದವು ಬಸವಣ್ಣನವರ ಪರ್ಯಾಯ ವ್ಯವಸ್ಥೆಯ ಅಂಶಗಳಾಗಿವೆ.

ಬಸವಣ್ಣನವರು ಆಂತರಿಕ ಶಕ್ತಿ ಮತ್ತು ಶುಚಿತ್ವಕ್ಕಾಗಿ ಇಷ್ಟಲಿಂಗದ ಅರಿವು ಕೊಟ್ಟರೆ ಲೋಕದಲ್ಲಿ ಸರ್ವರೀತಿಯ ಸಮಾನತೆ ಸಾಧಿಸುವುದಕ್ಕಾಗಿ ಸಮಾಜವೆಂಬ ಜಂಗಮಲಿಂಗದ ಪ್ರಜ್ಞೆ ಕೊಟ್ಟರು. ಲಿಂಗವಂತರು ಕಾಯಕದ ಜವಾಬ್ದಾರಿ, ಪ್ರಸಾದ ಪ್ರಜ್ಞೆ ಮತ್ತು ದಾಸೋಹ ಭಾವದೊಂದಿಗೆ ಬದುಕುವುದೇ ಜಂಗಮಲಿಂಗಪೂಜೆ. ಹೀಗೆ ಬದುಕುವುದರಿಂದ ಯಾರೂ ಉಪವಾಸದಿಂದ ನರಳುವುದಿಲ್ಲ. ಜಾತಿಯಿಂದಾಗಿ ಕಡೆಗಣನೆಗೆ ಒಳಗಾಗುವುದಿಲ್ಲ. ಬಡವ-ಬಲ್ಲಿದ ಎಂಬ ಭೇದ ಇರುವುದಿಲ್ಲ.

ಇಷ್ಟಲಿಂಗದಿಂದಾಗಿ ಕಾಯಕಜೀವಿಗಳಿಗೆ ಮಂದಿರಗಳಲ್ಲಿ ಆಗುವ ಅವಮಾನ ತಪ್ಪಿತು. ಮಂದಿರಗಳಲ್ಲಿ ಬಿಟ್ಟಿಕೂಲಿ ಮಾಡುವುದು ತಪ್ಪಿತು. ರೈತಾಪಿ ಜನರು ಆಹಾರ ಧಾನ್ಯಗಳನ್ನು ಬಿಟ್ಟಿಯಾಗಿ ಕೊಡುವುದು ತಪ್ಪಿತು. ಗಾಣಿಗರು ಎಣ್ಣೆ ಕೊಡುವುದನ್ನು ನಿಲ್ಲಿಸಿದರು. ದೇವರಿಗೆ ಹರಕೆ ಹೊರುವುದರ ಮೂಲಕ ಜೀವನವಿಡೀ ಉಳಿಸಿದ್ದನ್ನು ಕಳೆದುಕೊಳ್ಳುವುದು ನಿಂತಿತು. ಇಷ್ಟಲಿಂಗ ಪೂಜೆಗೆ ಯಾವುದೇ ಖರ್ಚು ಇಲ್ಲದ ಕಾರಣ ದೇವರ ಹೆಸರಿನಲ್ಲಿ ಪೂಜಾರಿಗಳು, ಮಾಂತ್ರಿಕರು, ಭವಿಷ್ಯಗಾರರು ಮತ್ತು ಇತರ ಮೂಢ ನಂಬಿಕೆ ಹಬ್ಬಿಸುವವರು ಮೋಸ ಮಾಡುವುದು ನಿಂತಿತು. ಹೀಗಾಗಿ ಕಾಯಕಜೀವಿಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯಾಯಿತು. ‘ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ’ ಎಂಬ ಹೊಸ ವಾತಾವರಣ ಸೃಷ್ಟಿಯಾಯಿತು. ಇಷ್ಟಲಿಂಗವು ಆತ್ಮಗೌರವದ ಪ್ರತೀಕವಾಯಿತು. ಹೀಗೆ ಇಷ್ಟಲಿಂಗವು ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಾಯಕಜೀವಿಗಳನ್ನು ವಿಮೋಚನೆಗೊಳಿಸಿ ಹೊಸ ಜೀವನವಿಧಾನಕ್ಕೆ ನಾಂದಿಹಾಡಿತು.

ಬಸವಣ್ಣನವರು ಮಾನವನ ಅಭ್ಯುದಯಕ್ಕೆ ಅಡ್ಡಿಯನ್ನುಂಟು ಮಾಡುವ ದೇವಾಲಯಗಳನ್ನು, ಮೂರ್ತಿಪೂಜೆಯನ್ನು, ಜನ್ಮಜನ್ಮಾಂತರದ ಭ್ರಮೆಯನ್ನು ಹುಟ್ಟಿಸುವ ಕರ್ಮಸಿದ್ಧಾಂತವನ್ನು ಮತ್ತು ಎಲ್ಲ ತೆರನಾದ ಮೂಢನಂಬಿಕೆಗಳನ್ನು ನಿರಾಕರಿಸುವ ಮೂಲಕ ವಿಮೋಚನೆಯ ಮಾರ್ಗ ತೋರಿಸಿದರು. ಐಹಿಕ ಬದುಕಿನಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸುವವರಿಗೆ ಮಾತ್ರ ಈ ತತ್ವ್ವದ ಸಂಪೂರ್ಣ ಅರಿವಾಗುವುದು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News