ಬಿಜೆಪಿಯ ನೂರು ದಿನದ ಸಾಧನೆ ಶೂನ್ಯ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-11-01 15:43 GMT

ಬೆಂಗಳೂರು, ನ.1: ಅಧಿಕಾರಿಗಳ ವರ್ಗಾವಣೆ, ಜೆಡಿಎಸ್-ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿದ್ದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ನೀಡಲಾಗಿದ್ದ ಅನುದಾನವನ್ನು ಕಡಿತ ಮಾಡಿರುವುದೇ ಬಿಜೆಪಿ ಸರಕಾರದ ನೂರು ದಿನದ ಸಾಧನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೇ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿ ಆಪರೇಷನ್ ಕಮಲವನ್ನು ಯಶಸ್ವಿಗೊಳಿಸಿದರು. ಆದರೆ, ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಇಲ್ಲಿಯವರೆಗೂ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿಯೇ ನಿರತವಾಗಿದೆ. ಇನ್ನು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ದಿಢೀರನೆ ವಾಪಸ್ ಪಡೆದಿದ್ದಾರೆ. ಇಷ್ಟು ಬಿಟ್ಟರೆ ಬಿಜೆಪಿಯ ನೂರು ದಿನದ ಸಾಧನೆ ಶೂನ್ಯವೆಂದು ತಿಳಿಸಿದರು.

ಬಿಜೆಪಿಯಿಂದ ಸುಳ್ಳು ಭರವಸೆಗಳು: ನೆರೆ ಹಾವಳಿಯಿಂದಾಗಿ ರಾಜ್ಯದಲ್ಲಿ ಒಟ್ಟು 2ಲಕ್ಷದ 60ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ರಾಜ್ಯ ಸರಕಾರವೇ ಕೇಂದ್ರಕ್ಕೆ ವರದಿ ನೀಡಿದೆ. ಆದರೆ, ಬಿ.ಎಸ್.ಯಡಿಯೂರಪ್ಪ ನಿನ್ನೆ(ಗುರುವಾರ) ನೀಡಿದ ಜಾಹೀರಾತಿನಲ್ಲಿ 97,920 ಮನೆಗಳು ಮಾತ್ರ ಹಾನಿಗೊಳಗಾಗಿವೆ ಎಂದು ದಾಖಲಿಸಿದ್ದಾರೆ. ಇದರಲ್ಲಿ ಯಾವುದು ಸತ್ಯವೆಂದು ಅವರೇ ಹೇಳಬೇಕೆಂದು ಕಿಡಿಕಾರಿದರು.

ಜಲಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಸಾವಿರಾರು ಮಗ್ಗಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರತಿ ಮಗ್ಗಕ್ಕೆ 25ಸಾವಿರ ರೂ.ಕೊಡಲಾಗುವುದೆಂದು ಹೇಳಿದ್ದ ಸರಕಾರ, ಈಗ ಎಷ್ಟೆ ಮಗ್ಗ ಹಾಳಾಗಿದ್ದರೂ ಎಲ್ಲವಕ್ಕೂ ಸೇರಿ ಕೇವಲ 25ಸಾವಿರ ರೂ.ಮಾತ್ರ ಕೊಡಲಾಗುವುದು ಎಂದು ತಿಳಿಸಿದೆ. ಒಟ್ಟು ಲಕ್ಷಾಂತರ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿ ನಾಶವಾಗಿದೆ. ಇದ್ಯಾವುದಕ್ಕೂ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲವೆಂದು ಅವರು ಹೇಳಿದರು.

ನನ್ನ ಹಾಗೂ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ವೈಯಕ್ತಿಕವಾಗಿ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಪಕ್ಷದ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆಯುತ್ತಿದೆ. ಅವರೇ ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸಿ, ಅಲ್ಲಿಂದ ವರದಿಗಳನ್ನು ತರಿಸಿಕೊಂಡು ಚರ್ಚಿಸಿ ಟಿಕೆಟ್ ನೀಡುತ್ತಿದ್ದಾರೆಂದು ಅವರು ಹೇಳಿದರು. ಈ ವೇಳೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತಿತರರಿದ್ದರು.

ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. 15 ಗೆದ್ದರೂ ಅಚ್ಚರಿ ಇಲ್ಲ. ಸಂಘಟಿತವಾಗಿ ಪಕ್ಷ ಹೋರಾಟ ಮಾಡಿ ಗೆಲ್ಲಲಿದೆ. ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಬೇಸರ ತರಿಸಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ. ಹೀಗಾಗಿ ರಾಜ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯ ಗಳಿಸಲಿದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News