ಮುಖ್ಯಮಂತ್ರಿಯನ್ನು ಭೇಟಿಯಾದ ರಾಮಲಿಂಗಾರೆಡ್ಡಿ: 'ರಾಜಕೀಯ ಚರ್ಚೆ' ಬಗ್ಗೆ ಮಾಜಿ ಸಚಿವ ಹೇಳಿದ್ದೇನು ?

Update: 2019-11-02 13:58 GMT

ಬೆಂಗಳೂರು, ನ. 2: ‘ನೆರೆ-ಬರ ಪರಿಸ್ಥಿತಿಗೆ ಕೇಂದ್ರ ಸರಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ರಾಜ್ಯ ಸರಕಾರದ ಬಗ್ಗೆ ಜನತೆಗೆ ತೀವ ಬೇಸರವಿದೆ’ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಬಿಎಂಟಿ ಲೇಔಟ್ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನೂರು ದಿನ ಪೂರೈಸಿರುವ ಬಿಜೆಪಿ ಸರಕಾರಕ್ಕೆ ಕೇಂದ್ರ ಸಹಕಾರ ನೀಡಿದ್ದರೆ ಒಳ್ಳೆಯ ಹೆಸರು ಬರುವ ಸಾಧ್ಯತೆ ಇತ್ತು ಎಂದರು. ಅತಿವೃಷ್ಟಿ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ಲಕ್ಷಿಸಿದೆ. ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯಲ್ಲಿ ಯಾವುದೇ ಸರಕಾರವಿದ್ದರೂ ಕೇಂದ್ರದ ನೆರವು ಅಗತ್ಯ. ಆದರೆ, ಬಿಜೆಪಿ ಸರಕಾರಕ್ಕೆ ಕೇಂದ್ರ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಸಂತ್ರಸ್ತರು ಇನ್ನೂ ಸಂಕಷ್ಟದಲ್ಲಿ ಬದುಕು ದೂಡಬೇಕಾಗಿದೆ ಎಂದು ಟೀಕಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಭೇಟಿಯಾಗಿರುವುದಕ್ಕೆ ರಾಜಕೀಯ ಕಾರಣ ಹುಡುಕುವುದು ಸಲ್ಲ ಎಂದ ಅವರು, ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಹೊರತುಪಡಿಸಿ ಸಿಎಂ ಜತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಬಿಟಿಎಂ ಕ್ಷೇತ್ರ ಬಹಳ ದೊಡ್ಡದಿದ್ದು, ಬಿಬಿಎಂಪಿಯ 8 ವಾರ್ಡ್‌ಗಳನ್ನು ಹೊಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನದ ಅವಶ್ಯಕತೆ ಇರುವುದರಿಂದ ಇಂದಿನ ಸರಕಾರ 378 ಕೋಟಿ ರೂ.ಅನುದಾನ ನಿಗದಿ ಮಾಡಿತ್ತು. ಬಿಜೆಪಿ ಸರಕಾರ ಬಂದ ನಂತರ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಟೀಕಿಸಿದರು.

ಅನುದಾನ ತಡೆ ಹಿಡಿದಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತಂದಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಮನವಿ ಮಾಡಿದ್ದು, ಈಗ ಖುದ್ದು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News