ವಿವೇಕಕ್ಕೊಂದು ಸ್ಮಾರಕ ನಿರ್ಮಿಸೋಣವೇ?

Update: 2019-11-04 18:35 GMT

ರಾಜಪ್ರಭುತ್ವದಲ್ಲಿ ಉಗಮಿಸಿದ ಒಂದು ಜನೋಪಯೋಗಿ ಸಂಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಧಿ ನಿರ್ಮಿಸುವುದು ವಿವೇಕಯುತವೇ? ವಿವೇಕ ಸ್ಮಾರಕ ನಿರ್ಮಿಸಲು ಶಾಲಾ ಕಟ್ಟಡ ಇರುವ ಜಾಗವೇ ಬೇಕು ಎನ್ನುವವರು ಇದನ್ನು ಯೋಚಿಸಬೇಕು. ಇಷ್ಟಕ್ಕೂ ಸ್ಮಾರಕ ಎಂದರೆ ಅಮೃತಶಿಲೆಯಿಂದಲೇ ನಿರ್ಮಿಸಬೇಕು, ಬಣ್ಣದ ಕಾರಂಜಿ ಇರುವ ಅದ್ಭುತ ವಿಸ್ಮಯ ಲೋಕವನ್ನು ಸೃಷ್ಟಿಸುವಂತಿರಬೇಕು ಎಂದೇನಿಲ್ಲ ಅಲ್ಲವೇ? ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಲು ಸ್ಮಾರಕದ ಸ್ವರೂಪಕ್ಕಿಂತಲೂ ಐತಿಹ್ಯ ಮುಖ್ಯವಲ್ಲವೇ? ಈಗಿರುವ ಎನ್‌ಟಿಎಂ ಶಾಲೆಯನ್ನೇ ವಿವೇಕಾನಂದ ಸ್ಮಾರಕ ಮಾದರಿ ಶಾಲೆ ಎಂದು ಮರುನಾಮಕರಣ ಮಾಡಿ, ಆವರಣದಲ್ಲೊಂದು ವಿವೇಕಾನಂದರ ಪುತ್ಥಳಿ ನಿರ್ಮಿಸಿದರೂ ಅದು ಸ್ಮಾರಕವೇ ಆಗುತ್ತದೆ ಅಲ್ಲವೇ? ಹೀಗೆ ಯೋಚಿಸಲು ಸಾಧ್ಯವಿಲ್ಲ ಎನ್ನುವುದಾದರೆ ನಮ್ಮ ವಿವೇಕಕ್ಕೇ ಒಂದು ಸ್ಮಾರಕ ನಿರ್ಮಿಸುವುದು ಒಳಿತು. ಭವಿಷ್ಯದ ಪೀಳಿಗೆಗೆ ಮಾರ್ಗಸೂಚಿಯಾದರೂ ಆದೀತು.

ಮೈಸೂರಿನಲ್ಲಿ ವಿವೇಕಾನಂದರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಡೀ ಸಮಾಜವೇ ವಿವೇಕದ ಶೋಧದಲ್ಲಿ ತೊಡಗಿರುವ ಸಂದರ್ಭದಲ್ಲಿ ಶಿಕ್ಷಣ ಮತ್ತು ಸ್ಮರಣೆಯ ನಡುವಿನ ಸಂಘರ್ಷ ವಿವೇಕಾನಂದರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಆರಾಧನಾ ಸಂಸ್ಕೃತಿಯಲ್ಲಿ ಸಾಕಷ್ಟು ಕ್ರಮಿಸಿರುವ ಭಾರತೀಯ ಸಮಾಜ ಇತಿಹಾಸದ ಸ್ಮರಣೆ ಸ್ಥಾವರಗಳಿಂದ ಮಾತ್ರವೇ ಸಾಧ್ಯ ಎನ್ನುವ ಮನಸ್ಥಿತಿಗೆ ತಲುಪಿದೆ. ಇತಿಹಾಸದ ಘಟನೆಗಳು ಮತ್ತು ಚಾರಿತ್ರಿಕ ವ್ಯಕ್ತಿಗಳು ಜಂಗಮ ಸ್ವರೂಪಿಯಾಗಿರುವುದಕ್ಕೂ, ಸ್ಥಾವರ ರೂಪಿಯಾಗಿರುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಪೆರಿಯಾರ್ ಅವರ ಚಿಂತನೆಗಳಲ್ಲೇ ಗ್ರಹಿಸಬಹುದು. ಭಿನ್ನ ಚಿಂತನೆಗಳು ಸತತ ಹಲ್ಲೆಗೊಳಗಾಗುತ್ತಿರುವ ಸಂದರ್ಭದಲ್ಲಿ, ಸಾಂಸ್ಕೃತಿಕ ಚಿಂತಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿಯಲ್ಲಿ ವಿವೇಕಾನಂದರನ್ನು ಸಮಾಜದ ಅವಕಾಶವಂಚಿತ ಮಕ್ಕಳ ಭವಿಷ್ಯಕ್ಕೆ ಮುಖಾಮುಖಿಯಾಗಲು ಮುಂದಾಗಿರುವುದು ನಮ್ಮ ಸಮಾಜೋ ಸಾಂಸ್ಕೃತಿಕ ವಿವೇಚನೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಧರ್ಮ, ಅಧ್ಯಾತ್ಮ ಮತ್ತು ಸಂಸ್ಕೃತಿಯ ನೆಲೆಗಳು ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಡುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಚಿಂತನೆಗಳು ಸಮಾಜವನ್ನು ಸೃಜನಶೀಲತೆಯತ್ತ, ಸಂವೇದನೆಯ ಮಾರ್ಗದಲ್ಲಿ, ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ಯಬೇಕು. ದುರಂತ ಎಂದರೆ ಈ ನೆಲೆಗಳ ಸಾಂಸ್ಥೀಕರಣ ಪ್ರಕ್ರಿಯೆ ವೈಚಾರಿಕತೆಯ ಸಮಾಧಿಗಳನ್ನು ನಿರ್ಮಿಸುತ್ತಿದೆ. ಈ ಸಮಾಧಿಗಳನ್ನೇ ಸ್ಮಾರಕಗಳೆಂದು ಬಿಂಬಿಸಲಾಗುತ್ತಿದೆ.

ಭಾರತದ ಇತಿಹಾಸದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಚೌಕಟ್ಟಿನಲ್ಲೇ ಸಮಾಜ ಸುಧಾರಣೆಗಾಗಿ ಶ್ರಮಿಸಿದವರಲ್ಲಿ ವಿವೇಕಾನಂದರೂ ಒಬ್ಬರು. ಇಂದಿನ ಏಕಮುಖಿ ಸಾಂಸ್ಕೃತಿಕ ಚಿಂತನಾ ವಾಹಿನಿಯಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿರುವುದೂ ಸತ್ಯ. ಎಲ್ಲ ಕಾಲಘಟ್ಟಗಳಲ್ಲೂ ಸಮಾಜ ಸುಧಾರಣೆಯ ಮೂಲವನ್ನು ಶಿಕ್ಷಣ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶಗಳ ಮೂಲಕವೇ ಕಾಣಬಹುದು. ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್‌ರಾಯ್, ರವೀಂದ್ರನಾಥ ಠಾಗೂರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ವಿವೇಕಾನಂದ ಎಲ್ಲರೂ ಇದೇ ಹಾದಿಯನ್ನು ತಮ್ಮದೇ ಆದ ಸಾಂಸ್ಕೃತಿಕ ಚಿಂತನೆಗಳ ಮೂಲಕ ಕ್ರಮಿಸಿರುವುದನ್ನು ಗಮನಿಸಬಹುದು. ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿ ನೋಡಿದರೂ ಈ ಚಿಂತನಾವಾಹಿನಿಯಲ್ಲಿ ಒಂದು ಸಮಾನ ಎಳೆ ಕಂಡುಬಂದರೆ ಅದು ಶಿಕ್ಷಣಕ್ಕೆ ಸಂಬಂಧಿಸಿರುತ್ತದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶೈಕ್ಷಣಿಕ ಅವಕಾಶ ಮತ್ತು ಸುಧಾರಣೆ ಎಂದರೆ ಅದು ಕೆಳಸ್ತರದ ಜನಸಮುದಾಯಗಳ, ಅವಕಾಶವಂಚಿತರ, ಶೋಷಿತರ ಪರವಾಗಿಯೇ ಇರುತ್ತದೆ ಎನ್ನುವುದು ಇಂದಿಗೂ ಸತ್ಯ ಅಲ್ಲವೇ? ಸಮಾಜದ ಶೋಷಿತರಿಗೆ, ಅವಕಾಶವಂಚಿತರಿಗೆ ಮೂಲ ಶಿಕ್ಷಣ ಒದಗಿಸುವ ಜಂಗಮ ಸ್ವರೂಪಿ ಸಂಸ್ಥೆಯೊಂದರ ಸಮಾಧಿಯ ಮೇಲೆ ಜಂಗಮ ಸನ್ಯಾಸಿಯ ಸ್ಥಾವರ ನಿರ್ಮಿಸುವ ಚಿಂತನೆಗೆ ಏನೆಂದು ಹೇಳಬೇಕು?

ವಿವೇಕಾನಂದರ ಸ್ಮಾರಕ ನಿರ್ಮಿಸಲು ಯಾರೂ ಅಡ್ಡಿಪಡಿಸುವುದಿಲ್ಲ. ಅಡ್ಡಿಪಡಿಸಲು ಸಾಧ್ಯವೂ ಇಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಕೆರೆ ನಿರ್ಮಿಸಲು ಅಡ್ಡಿಪಡಿಸಬಹುದು, ನೀರಾವರಿ ಅಣೆಕಟ್ಟು ನಿರ್ಮಿಸಲು ಅಡ್ಡಿಪಡಿಸಬಹುದು, ಶಾಲೆ ಆಸ್ಪತ್ರೆ ನಿರ್ಮಿಸಲೂ ಅಡ್ಡಿಪಡಿಸಬಹುದು ಆದರೆ ಸ್ಮಾರಕಗಳಿಗೆ ಅಡ್ಡಿಪಡಿಸಲಾಗುವುದಿಲ್ಲ. ಏಕೆಂದರೆ ಸ್ಮಾರಕಗಳ ಹಿಂದೆ ಒಂದು ಪ್ರಬಲ ಸಾಂಸ್ಕೃತಿಕ ಚಿಂತನೆ, ಸಾಂಸ್ಕೃತಿಕ ರಾಜಕಾರಣ ಮತ್ತು ಸಾಮುದಾಯಿಕ ಹಿತಾಸಕ್ತಿಗಳು ಅಡಗಿರುತ್ತವೆ. ಭಾರತದ ಸಾಂಸ್ಕೃತಿಕ ರಾಜಕಾರಣ ಮತೀಯ ಮೂಲಭೂತವಾದದ ಹಿಡಿತದಲ್ಲಿ ನಲುಗುತ್ತಿರುವ ಸಂದರ್ಭದಲ್ಲಿ ಈ ಸಾಮುದಾಯಿಕ ಹಿತಾಸಕ್ತಿಗಳು ಆಧ್ಯಾತ್ಮವನ್ನು ಹಿಂದಿಕ್ಕಿ ಮತಧಾರ್ಮಿಕ ಅಸ್ಮಿತೆಗಳನ್ನೇ ಅಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ. ಕಳೆದ ಮೂರು ದಶಕಗಳಲ್ಲಿ ವಿವೇಕಾನಂದರು ಇಂತಹ ಒಂದು ಬೆಳವಣಿಗೆಗೆ ಬಲಿಯಾಗಿರುವುದನ್ನು ಗಮನಿಸಬಹುದು. ವಿವೇಕಾನಂದರ ಚಿಂತನೆಗಳ ಗುತ್ತಿಗೆ ಪಡೆದವರಂತೆ ವರ್ತಿಸುವ ಮಠಗಳು ಕೃಷ್ಣನನ್ನು ಆಕ್ರಮಿಸಿರುವ ಇಸ್ಕಾನ್‌ನಂತೆಯೇ ಕಾಣುತ್ತಿವೆ. ಹಾಗಾಗಿ ಇಲ್ಲಿ ವಿವೇಕಾನಂದರು ಒಂದು ಶಿಲೆಯಾಗಿ ಉಳಿದುಬಿಡುತ್ತಾರೆ. ಅವರ ಜಂಗಮ ಸ್ವರೂಪ ಮರೆಯಾಗಿಬಿಡುತ್ತದೆ.

ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿ ಇಲ್ಲಿನ ನಿರಂಜನ ಮಠದಲ್ಲಿ ತಂಗಿದ್ದುದು ನಿಜಕ್ಕೂ ಚಾರಿತ್ರಿಕವಾಗಿ ಸ್ಮರಣಾರ್ಹ. ಈ ಮಠದ ಆವರಣದಲ್ಲಿ ವಿವೇಕಾನಂದರ ಸ್ಮರಣೆಗಾಗಿ ಸ್ಮಾರಕವನ್ನು ನಿರ್ಮಿಸುವುದು ಸಹ ಸ್ವಾಗತಾರ್ಹವೇ. ಆದರೆ ಈ ಮಠಕ್ಕೆ ಹೊಂದಿಕೊಂಡಂತಿರುವ 138 ವರ್ಷಗಳ ಇತಿಹಾಸ ಇರುವ ಒಂದು ಶಾಲೆಯನ್ನು ಕೆಡವಿ ಸ್ಮಾರಕವನ್ನು ನಿರ್ಮಿಸುವುದು ಅಕ್ಷಮ್ಯ. ಶಾಲೆಯನ್ನು ಉಳಿಸಿ ಎಂದು ಹೋರಾಟ ಮಾಡುವವರನ್ನು ವಿವೇಕ ಸ್ಮಾರಕದ ವಿರೋಧಿಗಳು ಎಂದು ನಂಬಿಸುವ ಪ್ರಯತ್ನ ಕೆಲವು ಹಿರಿಯ ಸಾಹಿತಿಗಳಿಂದಲೂ ನಡೆಯುತ್ತಿರುವುದು ಮತ್ತೂ ಅಕ್ಷಮ್ಯ. ಇಲ್ಲಿ ಸ್ಮಾರಕವನ್ನು ವಿರೋಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಿರಂಜನ ಮಠದಲ್ಲಿ ವಿವೇಕಾನಂದರು ತಂಗಿದ್ದುದೇ ಆದರೆ ಆ ಮಠವನ್ನೇ ಕೆಡವಿ ವಿವೇಕ ಸ್ಮಾರಕವನ್ನು ನಿರ್ಮಿಸಬಹುದಲ್ಲವೇ? ಶಾಲೆಯನ್ನೇ ಏಕೆ ಕೆಡವಬೇಕು ? ಶಾಲೆಯನ್ನು ಮುಚ್ಚುವುದಿಲ್ಲ ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಮಠ, ಆಶ್ರಮ, ದೇವಾಲಯ ಮುಂತಾದ ಸ್ಥಾವರಗಳನ್ನು ವಿರೋಧಿಸುತ್ತಲೇ, ಅವಕಾಶವಂಚಿತರಿಗೆ, ದುರ್ಬಲ ವರ್ಗಗಳಿಗೆ, ಶೋಷಿತರಿಗೆ ಶಿಕ್ಷಣ ಒದಗಿಸಿ ಎಂದು ಉಪದೇಶಿಸಿದ ಜಂಗಮ ಸನ್ಯಾಸಿಯ ಸ್ಮಾರಕ ನಿರ್ಮಿಸಲು ಶಾಲೆಯನ್ನು ಕೆಡವುವುದರ ಔಚಿತ್ಯವಾದರೂ ಏನು? ಹಿರಿಯ ಸಾಹಿತಿಗಳು ಸ್ಪಷ್ಟೀಕರಣ ನೀಡಬೇಕು.

 ಮೈಸೂರಿನ ರಾಮಕೃಷ್ಣ ಮಠ ನೆರೆ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡಿದೆ, ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದೆ, ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದೆ ಇವೆಲ್ಲವೂ ನಿಜ. ಆದರೆ ಮೈಸೂರಿನ ರಾಮಕೃಷ್ಣ ಮಠದ ಶಾಲೆಯಲ್ಲಿ ಎಷ್ಟು ಬಡ ಮಕ್ಕಳಿಗೆ ಪ್ರವೇಶ ಗಳಿಸಲು ಸಾಧ್ಯ? ಮಧ್ಯಮ, ಮೇಲ್ ಮಧ್ಯಮ ಮತ್ತು ಶ್ರೀಮಂತ ವರ್ಗಗಳಿಗೆ ಅನುಕೂಲವಾಗುವಂತಹ ಪ್ರವೇಶ ಪರೀಕ್ಷೆ, ರ್ಯಾಂಕಿಂಗ್ ಆಧಾರಿತ ಪ್ರವೇಶ ಮತ್ತು ದುಬಾರಿ ಶುಲ್ಕ ಸಮಾಜದ ಕೆಳಸ್ತರದ ಜನಸಮುದಾಯಗಳನ್ನು ತಲುಪಲು ಸಾಧ್ಯವೇ? ಹೊರಜಗತ್ತಿನ ವಾಸ್ತವ ಬದುಕಿನ ಪರಿಚಯವೇ ಇಲ್ಲದಂತೆ ಮಕ್ಕಳನ್ನು ಆಶ್ರಮದ ಆವರಣದಲ್ಲಿಯೇ ಕೂಡಿಟ್ಟು ಅಂಕ ಸಾಮ್ರಾಟರನ್ನು ಉತ್ಪಾದಿಸುವ ಈ ಶಾಲೆಯ ಮಕ್ಕಳು ಹೊರಬರುವ ಹೊತ್ತಿಗೆ ಸಮಾಜದ ಒಂದು ವರ್ಗದೊಡನೆ ತಮ್ಮ ಬೌದ್ಧಿಕ ಸಂಪರ್ಕವನ್ನೇ ಕಳೆದುಕೊಂಡಿರುತ್ತಾರೆ. ಏಕೆಂದರೆ ಸಮಕಾಲೀನ ಸಂದರ್ಭದ ಅಧ್ಯಾತ್ಮ ಚಿಂತನೆಯ ಸ್ವರೂಪವೇ ಬದಲಾಗಿದೆ. ಈ ಶಾಲಾ ಆವರಣದಲ್ಲಿ ಕಂಡುಬರುವ ಸಮಾನತೆ ಅಥವಾ ಸಮಾನ ಅವಕಾಶ ಹೊರಜಗತ್ತಿನ ವಾಸ್ತವತೆಯಿಂದ ಹೊರತಾಗಿದ್ದು ಭ್ರಮೆಯನ್ನು ಸೃಷ್ಟಿಸುವಂತಿರುತ್ತದೆ. ಶಿಕ್ಷಣ ಎಂದರೆ ಮನುಷ್ಯನ ಮನಸ್ಥಿತಿಯಲ್ಲಿ ಪರಿವರ್ತನೆ ಉಂಟುಮಾಡಿ, ಭಾರತದ ಸಾಮಾಜಿಕ ಜೀವನದಲ್ಲಿ ಕಂಡುಬರುವ ಅಮಾನವೀಯ ಪದ್ಧತಿಗಳನ್ನು ತಿರಸ್ಕೃರಿಸುವ ಪ್ರಬುದ್ಧ ಸಮಾಜವನ್ನು ನಿರ್ಮಿಸುವ ಒಂದು ಅಸ್ತ್ರ ಎನ್ನುವುದು ವಿವೇಕಾನಂದರ ಸಂದೇಶವಾಗಿತ್ತಲ್ಲವೇ? ಈ ಆಶಯಗಳನ್ನು ಸಾಕಾರಗೊಳಿಸುವಲ್ಲಿ ರಾಮಕೃಷ್ಣ ಮಠದ ಶಾಲೆಗಳ ಪಾತ್ರವೇನು? ಶಾಲೆಯನ್ನು ಕೆಡವುವ ಮುನ್ನ ಇದನ್ನು ಯೋಚಿಸಬೇಕಲ್ಲವೇ?

 ಅಭಿವೃದ್ಧಿ ರಾಜಕಾರಣದಲ್ಲಿ ಮುಳುಗಡೆ, ವಿನಾಶ ಮತ್ತು ಪುನರ್ವಸತಿ ಎಂಬ ಪರಿಕಲ್ಪನೆಗಳು ಹೊಸ ವ್ಯಾಖ್ಯಾನವನ್ನು ಪಡೆದಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಸಾವಿರಾರು ಗ್ರಾಮಗಳ ಮುಳುಗಡೆಯಾದ ನಂತರ ಒಂದು ಸ್ಥಾವರ ಕೆಲವೇ ಜನರಿಗೆ ಉಪಯುಕ್ತವಾಗುವುದನ್ನು ಕಾಣುತ್ತಿದ್ದೇವೆ. ಅಥವಾ ಮುಳುಗಡೆಯಾದ ಗ್ರಾಮಗಳ ಜನತೆಗೆ ಕಿಂಚಿತ್ತೂ ಉಪಯುಕ್ತವಾಗದಿರುವುದನ್ನೂ ಗಮನಿಸುತ್ತಿದ್ದೇವೆ. ಆದರೂ ಈ ಜನಸಮುದಾಯಗಳು ಅಭಿವೃದ್ಧಿಗಾಗಿ ಮಾಡಬೇಕಾದ ಈ ತ್ಯಾಗವನ್ನು ಸರಿದೂಗಿಸಲು ಪುನರ್ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಮನುಷ್ಯನ ಅಸ್ತಿತ್ವಕ್ಕೂ ಮತ್ತು ಮೂಲ ನೆಲೆಗೂ ಇರುವ ಸೂಕ್ಷ್ಮ ಸಂಬಂಧಗಳು ಇಲ್ಲಿ ಪರಿಗಣನೆಗೇ ಬರುವುದಿಲ್ಲ. ಒಂದು ಶಾಲೆಯನ್ನೂ ಹೀಗೆಯೇ ನೋಡಬೇಕಾಗುತ್ತದೆ. 14 ದಶಕಗಳ ಕಾಲ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಒಂದು ಶಾಲೆಯ ಅಸ್ತಿತ್ವವನ್ನು ಮತ್ತೊಂದರಲ್ಲಿ ವಿಲೀನಗೊಳಿಸುವ ಮೂಲಕ ಉಳಿಸಲು ಸಾಧ್ಯವಿಲ್ಲ. ಇದ್ದರೂ ಒಂದು ಪೀಳಿಗೆಯ ಕಾಲ ನೆಪಮಾತ್ರಕ್ಕೆ ನೆನಪಿನಲ್ಲಿದ್ದು ನಂತರ ಕಾಲದಲ್ಲಿ ಲೀನವಾಗುತ್ತದೆ. ಮೈಸೂರು ಬ್ಯಾಂಕ್, ವಿಜಯ ಬ್ಯಾಂಕ್ ಈ ನಿಟ್ಟಿನಲ್ಲಿ ನಡೆದಿರುವುದನ್ನು ಕಂಡಿದ್ದೇವೆ. ಒಂದು ಶಾಲೆಯೂ ಅಷ್ಟೇ ಅಲ್ಲವೇ. ದೇವರಾಜ ಶಾಲೆಯಲ್ಲಿ ವಿಲೀನಗೊಳ್ಳುವ ಎನ್‌ಟಿಎಂ ತನ್ನ ನೆಲೆಯನ್ನು ಕಳೆದುಕೊಳ್ಳುವುದೇ ಅಲ್ಲದೆ ಕೊಂಚ ಕಾಲದ ಬಳಿಕ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತದೆ.

 ರಾಜಪ್ರಭುತ್ವದಲ್ಲಿ ಉಗಮಿಸಿದ ಒಂದು ಜನೋಪಯೋಗಿ ಸಂಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಧಿ ನಿರ್ಮಿಸುವುದು ವಿವೇಕಯುತವೇ? ವಿವೇಕ ಸ್ಮಾರಕ ನಿರ್ಮಿಸಲು ಶಾಲಾ ಕಟ್ಟಡ ಇರುವ ಜಾಗವೇ ಬೇಕು ಎನ್ನುವವರು ಇದನ್ನು ಯೋಚಿಸಬೇಕು. ಇಷ್ಟಕ್ಕೂ ಸ್ಮಾರಕ ಎಂದರೆ ಅಮೃತಶಿಲೆಯಿಂದಲೇ ನಿರ್ಮಿಸಬೇಕು, ಬಣ್ಣದ ಕಾರಂಜಿ ಇರುವ ಅದ್ಭುತ ವಿಸ್ಮಯ ಲೋಕವನ್ನು ಸೃಷ್ಟಿಸುವಂತಿರಬೇಕು ಎಂದೇನಿಲ್ಲ ಅಲ್ಲವೇ? ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಲು ಸ್ಮಾರಕದ ಸ್ವರೂಪಕ್ಕಿಂತಲೂ ಐತಿಹ್ಯ ಮುಖ್ಯವಲ್ಲವೇ? ಈಗಿರುವ ಎನ್‌ಟಿಎಂ ಶಾಲೆಯನ್ನೇ ವಿವೇಕಾನಂದ ಸ್ಮಾರಕ ಮಾದರಿ ಶಾಲೆ ಎಂದು ಮರುನಾಮಕರಣ ಮಾಡಿ, ಆವರಣದಲ್ಲೊಂದು ವಿವೇಕಾನಂದರ ಪುತ್ಥಳಿ ನಿರ್ಮಿಸಿದರೂ ಅದು ಸ್ಮಾರಕವೇ ಆಗುತ್ತದೆ ಅಲ್ಲವೇ? ಹೀಗೆ ಯೋಚಿಸಲು ಸಾಧ್ಯವಿಲ್ಲ ಎನ್ನುವುದಾದರೆ ನಮ್ಮ ವಿವೇಕಕ್ಕೇ ಒಂದು ಸ್ಮಾರಕ ನಿರ್ಮಿಸುವುದು ಒಳಿತು. ಭವಿಷ್ಯದ ಪೀಳಿಗೆಗೆ ಮಾರ್ಗಸೂಚಿಯಾದರೂ ಆದೀತು.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News