ಸಿಸಿಬಿಯಲ್ಲಿ ಆಮೂಲಾಗ್ರ ಬದಲಾವಣೆ: ಭಯೋತ್ಪಾದನೆ ನಿಗ್ರಹ ಸೇರಿ 6 ದಳಗಳ ಕಾರ್ಯಾರಂಭ
ಬೆಂಗಳೂರು, ನ.5: ಭಯೋತ್ಪಾದನೆ ನಿಗ್ರಹ ದಳ(ಎಟಿಸಿ), ಮಹಿಳಾ ಸುರಕ್ಷತಾ ದಳ ಸೇರಿದಂತೆ ಒಟ್ಟು ಆರು ವಿವಿಧ ದಳಗಳನ್ನು ರಚಿಸಿ ಕೇಂದ್ರ ಅಪರಾಧ ದಳ (ಸಿಸಿಬಿ)ಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿನ ಪರಿಸ್ಥಿತಿಗನುಗುಣವಾಗಿ ಹೊಸ ಜವಾಬ್ದಾರಿಯೊಂದಿಗೆ ಮಹಿಳೆಯರ ಸುರಕ್ಷತೆ, ವಿದ್ಯಾರ್ಥಿ ಯುವ ಜನತೆಗೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಮಾದಕ ವಸ್ತು ಜಾಲವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ.
► ಭಯೋತ್ಪಾದನೆ ನಿಗ್ರಹ ದಳ(ಎಟಿಸಿ): ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರಚನೆಯಾಗಲಿರುವ ಭಯೋತ್ಪಾದನೆ ನಿಗ್ರಹ ದಳ (ಎಟಿಸಿ) ನಗರದಲ್ಲಿನ ಉಗ್ರಗಾಮಿ ಚಟುವಟಿಕೆಗಳ ಮಾಹಿತಿ ಸಂಗ್ರಹಣೆ ಮಾಡಿ, ಉಗ್ರಗಾಮಿ ಸಂಬಂಧಿತ ದುಷ್ಕತ್ಯಗಳ ತನಿಖೆ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ನಿರ್ವಹಣೆ ಮಾಡಲಿದೆ.
►ಆಂಟಿ ನಾರ್ಕೊಟಿಕ್ ದಳ(ಎಎನ್‌ಡಬ್ಲೂ): ಗಾಂಜಾ, ಕೊಕೇನ್, ಎಂಡಿಎಂಎ ಇನ್ನಿತರ ಮಾದಕ ವಸ್ತುಗಳ ಜಾಲ, ಮಾರಾಟ ಹಾಗೂ ಸಾಗಾಣೆಯ ಮೇಲೆ ಆಂಟಿ ನಾರ್ಕೊಟಿಕ್ ದಳ ಹದ್ದಿನ ಕಣ್ಣಿಡಲಿದ್ದು, ದಳದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲೆಡೆ ಕಾರ್ಯಾಚರಣೆ ನಡೆಸುತ್ತ ಮಾದಕ ವಸ್ತುಗಳ ಜಾಲವನ್ನು ಬೇಧಿಸಲಿದ್ದಾರೆ.
►ಮಹಿಳಾ ಸುರಕ್ಷತಾ ದಳ(ಡಬ್ಲೂಪಿಡಬ್ಲೂ): ಮಾನವ ಕಳ್ಳ ಸಾಗಾಣೆ, ವೇಶ್ಯಾವಾಟಿಕೆ ನಿಗ್ರಹ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ, ಕಿರುಕುಳ ನಿಯಂತ್ರಣ ಮಾಡಲು ಮಹಿಳಾ ಸುರಕ್ಷತಾ ದಳ ಕಾರ್ಯ ನಿರ್ವಹಿಸಲಿದೆ.
►ಸಂಘಟಿತ ಅಪರಾಧ ದಳ(ಒಸಿಡಬ್ಲೂ): ನಗರದಲ್ಲಿ ರೌಡಿ, ಗೂಂಡಾ ಚಟುವಟಿಕೆ ಮೇಲೆ ಸಂಘಟಿತ ಅಪರಾಧ ದಳ ನಿಗಾವಹಿಸಲಿದ್ದು, ನಗರದ ಯಾವುದೇ ಭಾಗದಲ್ಲಿ ರೌಡಿ ಚಟುವಟಿಕೆಗಳು ನಡೆಯುವುದಾಗಲಿ, ಹಫ್ತಾ ವಸೂಲಿ, ಬೆದರಿಕೆ, ಸುಲಿಗೆ ಮಾಡುವ ರೌಡಿಗಳ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ.
► ಆರ್ಥಿಕ ಅಪರಾಧ ದಳ(ಇಒಡಬ್ಲೂ): ನಗರದಲ್ಲಿ ಅಧಿಕ ಬಡ್ಡಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುವುದು, ಚೀಟಿ, ಬಡ್ಡಿ ವ್ಯವಹಾರ ನಡೆಸುವುದು, ಇನ್ನಿತರ ಆರ್ಥಿಕ ಅಪರಾಧಗಳು, ವಂಚನೆ ಪ್ರಕರಣಗಳ ತನಿಖೆಯನ್ನು ಆರ್ಥಿಕ ಅಪರಾಧ ದಳಕ್ಕೆ ನೀಡಲಾಗಿದೆ.
►ವಿಶೇಷ ವಿಚಾರಣಾ ದಳ(ಎಸ್‌ಇಡಬ್ಲೂ): ನ್ಯಾಯಾಲಯಗಳಿಂದ ಹಿರಿಯ ಅಧಿಕಾರಿಗಳಿಗೆ ವಹಿಸಲಾಗುವ ಉನ್ನತಮಟ್ಟದ ತನಿಖೆ ವಿಚಾರಣೆಯ ಜವಾಬ್ದಾರಿಯನ್ನು ಈ ದಳ ಹೊಂದಿರುತ್ತದೆ ಎಂದು ನಗರದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.