ಆಡಿಯೋ ಬಹಿರಂಗ: ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಉಮೇಶ್ ಕತ್ತಿ ಮನವಿ
Update: 2019-11-06 17:28 GMT
ಬೆಂಗಳೂರು, ನ. 6: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಬಹಿರಂಗಪಡಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮೇಶ್ ಕತ್ತಿ, ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.
ಬುಧವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿನ ಧವಳಗಿರಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ ಉಮೇಶ್ ಕತ್ತಿ, ಒಂದು ಗಂಟೆಗೂ ಹೆಚ್ಚು ಕಾಲ ಬಿಎಸ್‌ವೈ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಆಡಿಯೋ ಬಹಿರಂಗಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆಂದು ತಿಳಿದು ಬಂದಿದೆ.
ಆಡಿಯೋ ಬಹಿರಂಗಪಡಿಸಿರುವುದು ಗಂಭೀರ ವಿಚಾರ. ಬೆಳಗಾವಿ ಜಿಲ್ಲೆ ಮೂಲದ ವ್ಯಕ್ತಿಗಳ ಬಗ್ಗೆ ಸಂಶಯವಿದ್ದು, ಯಾರೇ ಆಗಿರಲಿ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಮೇಶ್ ಕತ್ತಿ ಆಗ್ರಹಿಸಿದ್ದು, ಇಂತಹ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು ಎಂದು ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.