ಓ ಮೆಣಸೇ ...
ಮುಂದಿನ ನೂರು ದಿನಗಳಲ್ಲಿ ರಾಜ್ಯದ ಚಿತ್ರಣವನ್ನೇ ಬದಲಿಸುತ್ತೇನೆ -ಯಡಿಯೂರಪ್ಪ, ಮುಖ್ಯಮಂತ್ರಿ
ಜನರ ಸ್ಥಿತಿ ಚಿತ್ರಾನ್ನವಾಗಲಿದೆಯೇ?
---------------------
ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-
ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಪಾಲಿನ ದಕ್ಷಿಣ ಕನ್ನಡದ ಶನಿಯಿಂದ ಹೇಳಿಕೆ.
--------------------
ರಾಜ್ಯ ಬಿಜೆಪಿ ಸರಕಾರ ಬೀಳಿಸುವ ಗಡಿಬಿಡಿ ನಮಗಿಲ್ಲ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಅದೇನಿದ್ದರೂ, ಉಳಿದವರು ಬೀಳಿಸುವಾಗ ಬಾಚಿಕೊಳ್ಳುವುದರ ಬಗ್ಗೆ ಮಾತ್ರ ಆಸಕ್ತಿ.
---------------------
ಆಡಿಯೊ ಮಾಡಿಸುವುದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಅದರ ಪ್ರಸಾರದ ಹೊಣೆಯನ್ನು ಬಿಜೆಪಿ ಹೊತ್ತುಕೊಂಡಿರುವಂತಿದೆ.
---------------------
ವಿದೇಶಿ ಗೋವುಗಳು ಮಾತೆಯಲ್ಲ, ಅವು ನಮ್ಮ ಆಂಟಿಯರಿಗೆ ಸಮಾನ - ದಿಲೀಪ್ ಘೋಷ್, ಪ.ಬಂ. ಬಿಜೆಪಿ ನಾಯಕ
ಸ್ವದೇಶದಿಂದ ಮಾಂಸಕ್ಕಾಗಿ ವಿದೇಶಕ್ಕೆ ಕಳುಹಿಸಿದ ಗೋವುಗಳನ್ನು ಏನೆಂದು ಕರೆಯೋಣ?
---------------------
ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡಿದರೆ ಬೇಡ ಎನ್ನುವುದಿಲ್ಲ - ಕೆ.ಎಸ್. ಈಶ್ವರಪ್ಪ, ಸಚಿವ
ಆದರೆ ಅವರು ಮುಖ್ಯಮಂತ್ರಿ ಸ್ಥಾನ ಬೇಕು ಎಂದರೆ?
---------------------
ರಾಜ್ಯದಲ್ಲಿನ ಎಲ್ಲಾ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ದೇವರ ಹೆಸರಿರುವವರಿಗೆ ಮದ್ಯ ನೀಡುವುದನ್ನೂ ನಿಷೇಧಿಸಬೇಕು.
---------------------
ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಈಗ ಯಾರನ್ನು ಮಿತ್ರರನ್ನಾಗಿಸಲು ಹೊರಟಿದ್ದೀರಿ,ಅದನ್ನಾದರೂ ಹೇಳಿ.
---------------------
ಮೆಕಾಲೆ ಇಂಗ್ಲಿಷ್ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮತ್ತು ಗುಲಾಮಿತನವನ್ನು ಸೃಷ್ಟಿಸುತ್ತಿದೆ - ಡಾ. ಚಂದ್ರಶೇಖರ ಕಂಬಾರ, ಸಾಹಿತಿ
ಹಿಂದಿನಂತೆ ಗುರುಕುಲ ಪದ್ಧತಿ ವ್ಯವಸ್ಥೆ ಮಾಡಿ, ದಲಿತರು, ಶೂದ್ರರನ್ನು ಶಿಕ್ಷಣದಿಂದ ಹೊರಗಿಡೋಣವೇ?
---------------------
ದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅಧಿಕಾರದಲ್ಲಿದ್ದಾಗ ಅದರ ರಕ್ಷಣೆಯಲ್ಲಿ ವಿಫಲರಾದುದು ಯಾಕೆ?
---------------------
ಸಂವಿಧಾನದಲ್ಲಿ ಹೇಳಿರುವ ಪ್ರತಿಯೊಂದು ವಿಚಾರಗಳೂ ಮಹಾಭಾರತದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಹೇಳಲಾಗಿದೆ - ತೇಜಸ್ವಿ ಸೂರ್ಯ, ಸಂಸದ
ಅಂದರೆ ಸಂವಿಧಾನದ ಬದಲು ಮಹಾಭಾರತವನ್ನೇ ಸಂವಿಧಾನ ಮಾಡಬೇಕೇ?
---------------------
ನಮ್ಮ ಸರಕಾರಕ್ಕೆ ಎಚ್.ಡಿ. ದೇವೇಗೌಡರ ಮಾರ್ಗದರ್ಶನ ಅಗತ್ಯವಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬೆಂಬಲ ಎಂದು ನಾಚಿಕೆ ಬಿಟ್ಟು ಸ್ಪಷ್ಟವಾಗಿ ಕೇಳಬಾರದೇ?
---------------------
ನಾವು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ರಾಜಕಾರಣ ಮಾಡುತ್ತೇವೆ - ಸಿ.ಟಿ. ರವಿ, ಸಚಿವ
ಅದಕ್ಕೆ ನಿಮ್ಮ ಪಕ್ಷದಲ್ಲಿ ಮುಳ್ಳುಗಳ ಸಂಖ್ಯೆ ಹೆಚ್ಚಿವೆ.
---------------------
ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುತ್ತೇವೆ ಎಂದು ಸಿಎಂ ಎಲ್ಲಿಯೂ ಹೇಳಿಲ್ಲ - ಜಗದೀಶ್ ಶೆಟ್ಟರ್, ಸಚಿವ
ಅವರವರ ಊರಿನ ಬಸ್ ಟಿಕೆಟ್ ಕೊಡುತ್ತೇವೆ ಎಂದು ಹೇಳಿರಬೇಕು.
---------------------
ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ನ್ಯಾಯಾಂಗದ ಪರಿಭಾಷೆ ಬದಲಾಗಬೇಕು - ಶೃತಿಹರಿಹರನ್, ನಟಿ
ಲೈಂಗಿಕ ಶೋಷಣೆ ನಡೆಸಿದ ಆರೋಪಿಗಳೇ ನ್ಯಾಯಾಧೀಶ ಸ್ಥಾನದಲ್ಲಿ ಕುಳಿತ ಮೇಲೆ ಭಾಷೆ ಬದಲಾದರೂ ತೀರ್ಪು ಬದಲಾಗದು.
---------------------
ಯಶಸ್ವಿ ರಾಜಕಾರಣಿಯಾಗಲು ಧರ್ಮ ಮತ್ತು ದೇವರಿಗೆ ಅಂಜುವ ಅಗತ್ಯವಿಲ್ಲ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಯಶಸ್ವಿ ಸ್ವಾಮೀಜಿಯಾಗಬೇಕಾದರೂ ಅದನ್ನೇಪಾಲಿಸಬೇಕಂತೆ.
---------------------
2025 ರೊಳಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವಲ್ಲಿ ಪ್ರತಿರಾಜ್ಯ, ಜಿಲ್ಲೆಯ ಪಾತ್ರವಿದೆ - ನರೇಂದ್ರ ಮೋದಿ, ಪ್ರಧಾನಿ
ತಮ್ಮ ಪಾತ್ರದ ಬಗ್ಗೆ ಸ್ವಲ್ಪ ಹೇಳಿ.
---------------------
ನನಗೂ ಚಕ್ರ ತಿರುಗಿಸೋದು ಗೊತ್ತು, ಸಮಯ ಬಂದಾಗ ತಿರುಗಿಸುವೆ - ಡಿ.ಕೆ. ಶಿವಕುಮಾರ್, ಶಾಸಕ
ಸದ್ಯಕ್ಕೆ ಜೈಲಿನೊಳಗೆ ರಾಟೆ ತಿರುಗಿಸಿ.
---------------------
ಮಾಜಿ ಪ್ರಧಾನಿ ದೇವೇಗೌಡರಿಗೆ ಯಾವಾಗ ಯಾವ ರೀತಿ ರಾಜಕಾರಣ ಮಾಡಬೇಕು ಎಂದು ಗೊತ್ತಿದೆ - ಶ್ರೀನಿವಾಸ ಪ್ರಸಾದ್, ಸಂಸದ
ಅದಕ್ಕೆ ಸಮಯ ಸಾಧಕ ರಾಜಕಾರಣ ಎಂದು ಹೇಳುತ್ತಾರೆ.
---------------------
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿ. ಮುಖ್ಯಮಂತ್ರಿಯಾಗಬೇಕು - ತನ್ವೀರ್ ಸೇಠ್, ಶಾಸಕ ಅಧಿಕಾರಕ್ಕೆ ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದರಂತೆ ಸಿದ್ದರಾಮಯ್ಯ.
---------------------
ಸಮುದ್ರ ಮಂಥನದ ವೇಳೆ ಹಾಲಾಹಲವನ್ನು ಕುಡಿದು ಶಿವ ವಿಷಕಂಠನಾದ ರೀತಿಯಲ್ಲಿ ನಾವು 17 ಶಾಸಕರು ರಾಜ್ಯವನ್ನು ರಕ್ಷಿಸಲು ವಿಷಕಂಠರಾಗ ಬೇಕಾಯಿತು - ಬಿ.ಸಿ. ಪಾಟೀಲ್, ಅನರ್ಹ ಶಾಸಕ
ಇನ್ನು ಸ್ಮಶಾನವೇ ಗತಿ.
---------------------
ರಾಜಕೀಯ ಎನ್ನುವುದು ತೆರೆದ ಪುಸ್ತಕ - ವಿ. ಸೋಮಣ್ಣ, ಸಚಿವ
ತೆರೆದ ಅಶ್ಲೀಲ ಪುಸ್ತಕ.
---------------------
ಅಭಿವೃದ್ಧಿಯಲ್ಲಿ ಕುಂಟುತ್ತಾ ಮಲಗಿದ್ದ ರಾಜ್ಯ ಸರಕಾರ ಇದೀಗ ಓಡಲು ಆರಂಭಿಸಿದೆ - ನಳಿನ್ ಕುಮಾರ್ ಕಟೀಲು,
ಸಂಸದ ಬಹುಶಃ ನೆರೆ ಸಂತ್ರಸ್ತರನ್ನು ನೋಡಿ ಹೆದರಿರಬೇಕು.