ಮದ್ಯಪಾನ ಮಾಡಿ ವಾಹನ ಚಲಾವಣೆ: ಅಪಘಾತ ತಡೆಯಲು ‘ಆಲ್ಕೋ ಲಾಕ್‌‘

Update: 2019-11-11 16:36 GMT

ಬೆಂಗಳೂರು, ನ.11: ಸಂಚಾರ ಸಾರಿಗೆಯಲ್ಲಿ ‘ಆಲ್ಕೋ ಲಾಕ್’ ಉಪಕರಣ ಅಳವಡಿಸುವ ಮೂಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಡೆಯಬಹುದಾಗಿದೆ ಎಂದು ಆಲ್ಕೋಲಾಕ್ ಸಂಶೋಧಕ ರಾಮ್ ನಾಥ್ ಮಂದಲಿ ತಿಳಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲ್ಕೋಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದ್ದರೆ ಅಪಘಾತವಾಗುವ ಸಂಭವ ಹೆಚ್ಚು. ಮದ್ಯಪಾದಿಂದಾಗುವ ಅಪಘಾತಗಳನ್ನು ತಡೆಯಲು ಈ ಉಪಕರಣ ಅನುಕೂಲಕರವಾಗಲಿದೆ. ಮದ್ಯಪಾನ ಮಾಡಿದ್ದರೆ ವಾಹನ ಚಾಲೂ ಮಾಡಲು ಸಹ ಆಗದಂತೆ ಆಂತರಿಕವಾಗಿ ಲಾಕ್ ಮಾಡುವ ಕೇಂದ್ರಿಕೃತ ವ್ಯವಸ್ಥೆ ಇದರಲ್ಲಿದೆ ಎಂದು ತಿಳಿಸಿದರು.

ದೇಶಿಯವಾಗಿ ಈ ಉಪಕರಣವನ್ನು ಅನ್ವೇಷಣೆ ಮಾಡಲಾಗಿದ್ದು, ಟ್ರಾವೆಲ್ ಏಜೆನ್ಸಿ, ಟ್ರಕ್‌ಗಳು, ಸಾರಿಗೆ ವಾಹನಗಳು, ಶಾಲಾ ಮಕ್ಕಳ ವಾಹನ ಹಾಗೂ ಕುಟುಂಬದ ಸದಸ್ಯರ ಮೇಲೆ ನಿಗಾ ಇಡಲು ಇದು ಸಹಕಾರಿಯಾಗಿದೆ. ನಾಲ್ಕು ಚಕ್ರದ ಯಾವುದೇ ವಾಹನಗಳಿಗೆ ಇದನ್ನು ಅಳವಡಿಸಬಹುದಾಗಿದ್ದು, ವಾಹನವು ಚಾಲು ಮಾಡಬೇಕಾದರೆ ಚಾಲಕ ಜೋರಾಗಿ ಉಪಕ್ರಮದ ಮುಂದೆ ಊದಬೇಕು. ಈ ಸಂದರ್ಭದಲ್ಲಿ ಚಾಲಕ ನಿರ್ದಿಷ್ಟ ಮಿತಿಗಿಂತ ಹೆಚ್ಚು ಮದ್ಯಪಾನ ಮಾಡಿದ್ದರೆ ವಾಹನ ಚಾಲು ಆಗುವುದಿಲ್ಲ ಎಂದು ಮಾಹಿತಿ ನೀಡಿದರು.

ಕೆಲವರು ವಾಹನ ಚಲಾಯಿಸುವಾಗ ಮದ್ಯಪಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಚಾಲಕನ ಉಸಿರಾಟ ಗಮನಿಸಿ ಮಿತಿಗಿಂತ ಆಲ್ಕೋಹಾಲ್ ಹೆಚ್ಚಾಗಿದ್ದರೆ ಸ್ವಲ್ಪ ಸಮಯದ ನಂತರ ವಾಹನದ ಇಂಜಿನ್ ಬಂದ್ ಆಗುತ್ತದೆ. ನಂತರ ಉಪಕರಣದ ಮುಂದೆ ಊದಲು ಸೂಚಿಸುತ್ತದೆ. ನಂತರ ಸಂಬಂಧಿತ ವ್ಯಕ್ತಿಗೆ ಸಂದೇಶ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News