ತುಳಿತಕ್ಕೊಳಗಾದವರಿಗೆ ಶಿಕ್ಷಣ

Update: 2019-11-15 10:02 GMT

ಬಸವಣ್ಣನವರು ವಯಸ್ಕರ, ಮಹಿಳೆಯರ, ದಲಿತರ, ಹಿಂದುಳಿದವರ ಮತ್ತು ಒಟ್ಟಾರೆ ಕಾಯಕಜೀವಿಗಳ ಶಿಕ್ಷಣದ ಹರಿಕಾರರಾಗಿದ್ದಾರೆ. ಕಾಯಕಜೀವಿಗಳ ಶಿಕ್ಷಣ ಸಂಘಟನೆ ಮತ್ತು ಹೋರಾಟ ವಚನ ಚಳವಳಿಯ ಪ್ರಮುಖ ಅಂಶಗಳಾಗಿವೆ. ಬಸವಣ್ಣನವರು ಜನಸಮುದಾಯ ಸಂಘಟಿತರಾಗುವಂಥ ಶಿಕ್ಷಣ ನೀಡಿದರು ಮತ್ತು ಹೋರಾಟಕ್ಕೆ ಪೂರಕವಾದ ಶರಣಸಂಕುಲದಂತಹ ಸಂಘಟನೆ ಮಾಡಿದರು. ಮೊದಲ ಬಾರಿಗೆ ಅಕ್ಷರ ಕಲಿತ ಕಾಯಕಜೀವಿಗಳು ಉತ್ಕೃಷ್ಟ ವಚನ ಸಾಹಿತ್ಯ ರಚನೆ ಮಾಡಿದರು. ಅವರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿದರು.

‘‘ಹದ ಮಣ್ಣಲ್ಲದೆ ಮಡಕೆಯಾಗಲಾರದು’’ ಎಂದು ಕುಂಬಾರ ಗುಂಡಯ್ಯನವರ ಪುಣ್ಯಸ್ತ್ರೀ ಕೇತಲದೇವಿ ಹೇಳುತ್ತಾಳೆ. ಮಡಕೆ ಮಾಡಲು ಮಣ್ಣನ್ನು ಸೋಸಬೇಕು. ನೀರಲ್ಲಿ ಕಲಿಸಿಟ್ಟು ತುಳಿದು ತುಳಿದು ಹದ ಮಾಡಬೇಕು. ಈ ಕೆಲಸದ ಅನುಭವದ ಮೂಲಕ ಕೇತಲದೇವಿ ಅನುಭಾವದ ಮಾತುಗಳನ್ನು ಸೂಚಿಸುತ್ತಾಳೆ. ಪ್ರಕೃತಿದತ್ತವಾದ ಮನುಷ್ಯ ಸಂಸ್ಕಾರದ ಮೂಲಕ ಹದಗೊಂಡಾಗ ಅನುಭಾವ ತುಂಬಿದ ‘ಘಟ’ವಾಗುತ್ತಾನೆ. ಹೀಗೆ ಕಾಯಕಜೀವಿಗಳು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ರಚನೆ ಮಾಡಿದರು.

ಅನುಭವದ ಮೂಲಕ ಮಾತ್ರ ಅನುಭಾವದ ಕಡೆಗೆ ಹೋಗಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ವೈಯಕ್ತಿಕ ಕಾಯಕದ ಅನುಭವದ ಮೂಲಕ ಸಾಮೂಹಿಕ ಅನುಭಾವದ ಎತ್ತರಕ್ಕೆ ಒಯ್ಯುವ ವಿಶಿಷ್ಟವಾದ ವಚನ ಸಾಹಿತ್ಯ ಪ್ರಕಾರವನ್ನು ಬಸವಣ್ಣನವರು ಸಾಮಾಜೀಕರಣಗೊಳಿಸಿದರು. ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಎಲ್ಲ ಕಾಯಕಜೀವಿಗಳು ವಿಶ್ವದಲ್ಲಿ ಮೊದಲಬಾರಿಗೆ ಒಂದಾಗಿ ತಮ್ಮ ಸ್ವಂತಿಕೆಯೊಂದಿಗೆ ಸೃಷ್ಟಿಸಿದ ವಚನ ಸಾಹಿತ್ಯ ಜಗತ್ತಿನ ದುಡಿಯುವ ವರ್ಗದ ಮೊದಲ ಸಾಹಿತ್ಯವಾಗಿದೆ.

ಬಸವಣ್ಣನವರ ಶಿಕ್ಷಣದ ಪರಿಕಲ್ಪನೆ ವೈಶಿಷ್ಟ್ಯಪೂರ್ಣವಾಗಿದೆ. ಶಿಕ್ಷಣವು ಕಾಯಕಜೀವಿಗಳ ಕಾಯಕದಿಂದಲೇ ಪ್ರಾರಂಭವಾಗುತ್ತದೆ. ಬಹುತೇಕ ಎಲ್ಲ ಕಾಯಕಜೀವಿಗಳು ನವಸಾಕ್ಷರರೇ ಆಗಿದ್ದಾರೆ. ಅವರು ಅಕ್ಷರದ ಅರಿವು ಪಡೆದ ನಂತರ ತಮ್ಮ ಕಾಯಕಕ್ಕೆ ಸಂಬಂಧಿಸಿದ ಉಪಕರಣಗಳ ಕುರಿತು ಬರೆದರು. ಅವರ ಕಾಯಕ, ಶಿಕ್ಷಣ ಮತ್ತು ತತ್ವಜ್ಞಾನ ಒಂದಕ್ಕೊಂದು ಪೂರಕವಾಗಿದ್ದವು. ಕಾಯಕದ ಅನುಭವವನ್ನು ಶಿಕ್ಷಣದ ಮೂಲಕ ಅನುಭಾವದ ರೂಪದಲ್ಲಿ ದಾಖಲಿಸುವ ಕ್ರಿಯೆಯಲ್ಲಿ ಅವರು ತೊಡಗಿದರು. ವಚನಗಳು ಈ ಅಂತರ್ ಸಂಬಂಧದ ಉತ್ಪಾದನೆಗಳು. ಬಸವಣ್ಣನವರ ಕಾಯಕ ಮೂಲದ ಅನುಭಾವವೆಂಬ ತತ್ವಜ್ಞಾನ ಅವರ ಬದುಕಿನ ಭಾಗವಾಗಿರುವುದರಿಂದ ಅವರು ಆ ಘನತೆಯನ್ನು ಅನುಭಾವಿಸಿದರು. ತಮ್ಮ ಕಾಯಕದ ಉಪಕರಣಗಳನ್ನೇ ರೂಪಕಗಳನ್ನಾಗಿಸಿ ಅವರು ಅನುಭಾವದ ವಿರಾಟ್ ಸ್ವರೂಪವನ್ನು ನಮಗೆ ಮನವರಿಕೆಯಾಗುವಂತೆ ತಿಳಿಸಿದರು.

‘‘ಕೈಯಲ್ಲಿ ಕನ್ನಡಿ ಇರಲು ತನ್ನ ತಾ ನೋಡಬಾರದೆ?’’ ಎಂದು ಕನ್ನಡಿ ಕಾಯಕದ ರೇವಮ್ಮ ಕೇಳುತ್ತಾಳೆ. ಹೀಗೆ ಕಾಯಕದಿಂದ ಬಂದ ಅನುಭವವನ್ನು ಅನುಭಾವದ ಎತ್ತರಕ್ಕೆ ಏರಿಸುತ್ತಾಳೆ. ‘‘ನಾನು ಕೊಟ್ಟ ಕನ್ನಡಿಯಲ್ಲಿ ನಿಮ್ಮ ಮುಖ ಕಾಣವುದು. ಬಸವಣ್ಣನವರು ಕೊಟ್ಟ ಇಷ್ಟಲಿಂಗವೆಂಬ ಕನ್ನಡಿಯಲ್ಲಿ ನಿಮ್ಮನ್ನೇ ಕಾಣುವಿರಿ’’ ಎಂಬುದು ಇದರರ್ಥ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News