ಇದೊಂದು ರಾಷ್ಟ್ರವ್ಯಾಪಿ ಹುನ್ನಾರ!

Update: 2019-11-17 05:10 GMT

ಭಾರತದಲ್ಲಿ ಇತಿಹಾಸವನ್ನು ತಿರುಚಿ ಅದನ್ನು ಜನಸಾಮಾನ್ಯರಲ್ಲಿ ಮತ್ತು ಬೆಳೆಯುವ ಮನಸ್ಸುಗಳಲ್ಲಿ ಬಿತ್ತುವ ಪ್ರಯತ್ನಗಳು ಬಹಳ ವರ್ಷಗಳಿಂದಲೂ ನಡೆಯುತ್ತಾ ಬಂದಿವೆ. ಆದರೆ ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರವಂತೂ ಅವು ಬುಲೆಟ್ ರೈಲಿನ ವೇಗ ಪಡೆದುಕೊಂಡಿರುವಂತೆ ತೋರುತ್ತಿದೆ. ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ತೀರ ಇತ್ತೀಚೆಗೆ ನಡೆದಂತಹ ಕೆಲವು ವಿದ್ಯಮಾನಗಳು ಇದಕ್ಕೆ ಜ್ವಲಂತ ನಿದರ್ಶನಗಳಾಗಿ ನಿಲ್ಲುತ್ತವೆ.

ಕರ್ನಾಟಕದಲ್ಲಿ ಪ್ರಸಕ್ತ ಯಡಿಯೂರಪ್ಪ ನೇತೃತ್ವದ ಸರಕಾರದ ಶಿಕ್ಷಣ ಇಲಾಖೆ ಕಳೆದ ತಿಂಗಳ 28ರಂದು ಕೈಪಿಡಿ ಸಹಿತವಾದ ಸುತ್ತೋಲೆಯೊಂದನ್ನು ಶಾಲೆಗಳಿಗೆ ಕಳುಹಿಸಿ ನವೆಂಬರ್ 26ರಂದು ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನವನ್ನು ಆಚರಿಸುವಂತೆ ಆದೇಶಿಸಿತ್ತು. ಸಿಎಂಸಿಎ ಎಂಬ ಹೊರಗಿನ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿ ತಯಾರಿಸಿದ್ದ ಈ ಕೈಪಿಡಿಯಲ್ಲಿ ಸಂವಿಧಾನ ಬರೆದವರು ಅಂಬೇಡ್ಕರ್ ಒಬ್ಬರೇ ಅಲ್ಲ ಎಂದು ಮುಂತಾದ ಸತ್ಯಕ್ಕೆ ದೂರವಾದ ಅನೇಕ ವಿಷಯಗಳಿದ್ದವು. ಸಂವಿಧಾನ ಶಿಲ್ಪಿಡಾ. ಅಂಬೇಡ್ಕರ್‌ರನ್ನು ಅವಮಾನಿಸುವ ಈ ಕೈಪಿಡಿಯ ವಿಚಾರ ತಿಳಿಯುತ್ತಿದ್ದಂತೆೆ ವ್ಯಾಪಕ ಪ್ರತಿಭಟನೆಗಳು ನಡೆದವು. ಆಗ ತರಾತುರಿಯಲ್ಲಿ ಸುತ್ತೋಲೆಯನ್ನು ಹಿಂಪಡೆದು ಯಾವನೋ ಒಬ್ಬ ಬಲಿಪಶು ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಯಿತು. ಆದರೆ ಆ ಖಾಸಗಿ ಸಂಸ್ಥೆಯ ಹಿನ್ನೆಲೆ ಏನು? ಅದಕ್ಕೆ ಗುತ್ತಿಗೆಯನ್ನು ಯಾರು, ಯಾಕಾಗಿ, ಯಾವಾಗ, ಯಾರ ಆದೇಶದ ಮೇರೆಗೆ ಕೊಟ್ಟರು ಎಂಬಿತ್ಯಾದಿ ಪ್ರಶ್ನೆಗಳು ಇನ್ನೂ ಗಾಳಿಯಲ್ಲೇ ತೇಲುತ್ತಿವೆ. ಇದೀಗ ಸುಮಾರು ಇದೇ ತೆರನಾದ ಇನ್ನೊಂದು ಘಟನೆ ವರದಿಯಾಗಿದೆ. ನವ ಬೆಂಗಳೂರು ಫೌಂಡೇಷನ್ ಹೆಸರಿನ ಸಂಸ್ಥೆಯೊಂದು ನವೆಂಬರ್ 24ರಂದು ಹಮ್ಮಿಕೊಂಡಿರುವ ಸಂವಿಧಾನ ದಿನಾಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಡಾ. ಅಂಬೇಡ್ಕರ್‌ರ ಭಾವಚಿತ್ರದ ಬದಲು ಆರೆಸ್ಸೆಸ್‌ನ ಶ್ಯಾಮ ಪ್ರಸಾದ್ ಮುಖರ್ಜಿಯವರ ಚಿತ್ರವನ್ನು ಪ್ರಕಟಿಸುವ ದಾರ್ಷ್ಟ್ಯವನ್ನು ತೋರಿಸಲಾಗಿದೆ! ಮೂರನೆಯ ಘಟನೆಯಲ್ಲಿ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ರಾಜ್ಯದ ವಾರ್ತಾ ಮತ್ತು ಸಂಪರ್ಕ ಇಲಾಖೆ ಬಂಟ್ವಾಳದಲ್ಲಿ ಹಮ್ಮಿಕೊಂಡ ಗಾಂಧೀಜಿ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧಿ ಹತ್ಯೆ ಪ್ರಕರಣ ಮಂಗಮಾಯವಾಗಿದೆ. ಇದನ್ನು ಕಣ್ತಪ್ಪಿನಿಂದಾಗಿ ಆದ ಅಚಾತುರ್ಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಒಡಿಶಾದಲ್ಲೂ ಹೆಚ್ಚುಕಡಿಮೆ ಇಂತಹುದೇ ಘಟನೆಯೊಂದು ನಡೆದಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಲ್ಲಿನ ಶಿಕ್ಷಣ ಇಲಾಖೆ ಈಗ ಗಾಂಧೀಜಿ ಬಗ್ಗೆ ಎರಡು ಪುಟಗಳ ಒಂದು ಸಚಿತ್ರ ಕೈಪಿಡಿಯನ್ನು (ಆಮಾ ಬಾಪೂಜಿ - ಅಕಾ ಝಲಕ) ತಯಾರಿಸಿ ಅದನ್ನು ರಾಜ್ಯಾದ್ಯಂತದ ಶಾಲೆಗಳಲ್ಲಿ ಹಂಚತೊಡಗಿದೆ. ಈ ಕಿರುಹೊತ್ತಗೆ ಏನು ಹೇಳುತ್ತದೆ ಗೊತ್ತೇ? ಗಾಂಧೀಜಿ ಮೃತ್ಯುವಿಗೀಡಾದುದು ಆಕಸ್ಮಿಕವಾಗಿ ಸಂಭವಿಸಿದ ಸರಣಿ ಘಟನೆಗಳಿಂದ ಅಂತೆ! ಇವೆಲ್ಲವೂ ಯಾರೋ ಒಬ್ಬಿಬ್ಬರು ಮೂರ್ಖರು ಮಾಡಿದ ಕೆಲಸ ಅಲ್ಲ, ಇದನ್ನೆಲ್ಲಾ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎನ್ನುವುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಒಂದೆಡೆ ಗಾಂಧಿ ಹಂತಕರ ಸಂತತಿಗಳಿಂದ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ಊರೂರುಗಳಲ್ಲಿ ‘ಗಾಂಧಿ ಸಂಕಲ್ಪ ಯಾತ್ರೆ’ ಮತ್ತು ಡಾ. ಅಂಬೇಡ್ಕರ್‌ರ ಗುಣಗಾನದ ನಾಟಕ, ಇನ್ನೊಂದೆಡೆ ಈ ಮಹಾಪುರುಷರಿಬ್ಬರ ಕುರಿತಂತೆ ತಮ್ಮ ನೈಜ, ಮನದಾಳದ ಭಾವನೆಗಳನ್ನು ಹೊರಹಾಕುವ ಬೆಳವಣಿಗೆಗಳ ಅಸಂಬದ್ಧತೆಯನ್ನು ಗಮನಿಸಬೇಕಾಗಿದೆ.

ಕರ್ನಾಟಕ, ಒಡಿಶಾ ಮಾತ್ರವಲ್ಲ ಗುಜರಾತ್ ಮತ್ತಿತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ನಡೆಯುತ್ತಿರುವ ಈ ಘಟನೆಗಳು ಖಂಡಿತ ಆಕಸ್ಮಿಕವಲ್ಲ. ಇವೆಲ್ಲವೂ ಒಂದು ಸುವ್ಯವಸ್ಥಿತ ಯೋಜನೆಯ ಭಾಗವಾಗಿದ್ದು ಇದರ ಹಿಂದೆ ಒಂದು ಬಹುದೊಡ್ಡ ಹಾಗೂ ವ್ಯಾಪಕವಾದ ರಾಷ್ಟ್ರಮಟ್ಟದ ಸಂಚು ಅಡಗಿರುವಂತಿದೆ. ಯಾಕೆಂದರೆ ಭಾರತದ ಇತಿಹಾಸವನ್ನು ಪುನಾರಚಿಸಲಿದ್ದೇವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈಗಾಗಲೇ ಸಾರ್ವಜನಿಕವಾಗಿ ಘೋಷಿಸಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಮೋದಿ ಸರಕಾರ ಒಂದು ಸಮಿತಿಯನ್ನು ರಚಿಸಿಯೂ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೇನು ಅನಾಹುತಗಳು ಕಾದಿವೆಯೋ ಗೊತ್ತಿಲ್ಲ. ಆದರೆ ಇಷ್ಟನ್ನು ಮಾತ್ರ ಖಚಿತವಾಗಿ ಹೇಳಬಹುದು: ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News