ಶಿವಾಜಿನಗರದಲ್ಲಿ 'ನೋಟಾ ಚಲಾವಣೆ' ಅಭಿಯಾನ: ಅಭ್ಯರ್ಥಿಗಳ ವಿರುದ್ಧ ಆನ್ ಲೈನ್ ಸಮರ ಸಾರಿದ ಜನತೆ

Update: 2019-11-18 12:30 GMT

ಬೆಂಗಳೂರು, ನ.18: ಐಎಂಎ ವಂಚನೆ ಪ್ರಕರಣ ಸಂಬಂಧ ಯಾವುದೇ ನ್ಯಾಯ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ನೂರಾರು ಹೂಡಿಕೆದಾರರು, ಶಿವಾಜಿನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಮತದಾರರು ನೋಟಾ ಚಲಾಯಿಸುವ ಮೂಲಕ ತಿರಸ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಐಎಂಎ ಕಂಪೆನಿಯಲ್ಲಿ ಸ್ಥಳೀಯ ನಿವಾಸಿಗಳೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದರು. ಜೂನ್ ತಿಂಗದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದರೂ, ಗ್ರಾಹಕರಿಗೆ ಹಣ ವಾಪಸ್ಸು ನೀಡುವ ಯಾವುದೇ ಪ್ರಕ್ರಿಯೆಯನ್ನು ಸರಕಾರ ಆಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲಿ ಕೈಗೊಂಡಿಲ್ಲ. ಇದರ ಜೊತೆಗೆ, ಅನಗತ್ಯವಾಗಿ ಉಪ ಚುನಾವಣೆ ಬಂದಿದೆ. ಹಾಗಾಗಿ, ನೋಟಾಕ್ಕೆ ಮತಚಲಾಯಿಸುವುದಾಗಿ ಕೆಲ ಹೂಡಿಕೆದಾರರು ವಾಟ್ಸ್ ಆ್ಯಪ್, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಹೇಳಿಕೊಂಡಿದ್ದಾರೆ.

ಈಗಾಗಲೇ ಕೆಲವರು ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದು, ಡಿ.5ರಂದು ಚುನಾವಣೆವರೆಗೆ ಕನಿಷ್ಠ 1 ಲಕ್ಷ ಜನರನ್ನು ನೋಟಾ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ.

ಆಕ್ರೋಶದ ವಿಡಿಯೋ ವೈರಲ್: ಫರ್ಹಾನ್ ರಶೀದ್ ಎಂಬುವರು ‘ಮುಸ್ಲಿಮ್ ಬ್ಲಾಗರ್’ ಹೆಸರಿನ ಫೇಸ್‌ಬುಕ್ ಪುಟ ರಚಿಸಿಕೊಂಡಿದ್ದು, ಇಲ್ಲಿನ ಸ್ಥಳೀಯ ರಾಜಕೀಯ ಮುಖಂಡರ ಹಾಗೂ ಐಎಂಎ ವಂಚನೆ ಪ್ರಕರಣದ ಆರೋಪಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋಗಳು ವೈರಲ್ ಆಗಿದ್ದು, ನೋಟಾಕ್ಕೆ ಮತ ಚಲಾಯಿಸುವ ಮೂಲಕ ರಾಜಕೀಯ ನಾಯಕರಿಗೆ ಬುದ್ಧಿ ಕಲಿಸುವಂತೆ ತಮ್ಮ ಸಂದೇಶಗಳಲ್ಲಿ ಹೇಳಿಕೊಂಡಿದ್ದಾರೆ.

ಹೂಡಿಕೆದಾರರ ಸಭೆ: ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಆಧರಿಸಿಯೇ ಸಭೆ ನಡೆಸುತ್ತಿರುವ ಅನೇಕ ಹೂಡಿಕೆದಾರರು, ಶಿವಾಜಿನಗರದ ಮತದಾರರಾಗಿದ್ದಾರೆ. ವಂಚನೆಗೊಳಗಾದ ಮಂದಿಗೆ ನ್ಯಾಯ ಒದಗಿಸಲು ಪ್ರತಿಭಟನೆ ನಡೆಸಿದರು, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಚುನಾವಣೆಯಲ್ಲಿ ನೋಟಾಕ್ಕೆ ಮತಚಲಾಯಿಸಲು ಒಮ್ಮತದಿಂದ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ನೋಟಾಕ್ಕೆ ಮತಚಲಾಯಿಸುವ ಮೂಲಕ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡುವ ಜತೆಗೆ ಇಲ್ಲಿನ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಹೂಡಿಕೆದಾರರು ಮಾಹಿತಿ ನೀಡಿದರು.

‘ಕ್ರಮ ಕೈಗೊಳ್ಳುತ್ತೇವೆ’

ಮತದಾನ ಪ್ರತಿಯೋರ್ವರ ಹಕ್ಕು. ಒಂದು ವೇಳೆ ಯಾರೊಬ್ಬ ಅಭ್ಯರ್ಥಿಗೂ ಮತದಾನ ಮಾಡಲು ಇಚ್ಛೆ ಇಲ್ಲದವರು ನೋಟಾ ಚಲಾಯಿಸಬಹುದು. ಆದರೆ ನೋಟಾ ಚಲಾಯಿಸಬೇಕೆಂದು ಯಾವುದೇ ವ್ಯಕ್ತಿ-ಸಂಘಟನೆಗಳು ಅಭಿಯಾನ ನಡೆಸಿದರೆ ಅದು ಇನ್ನೋರ್ವನ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.

ಐಎಂಎ ಆರೋಪಿ ಸ್ಪರ್ಧೆಯಲ್ಲಿ?

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರು ಸ್ಪರ್ಧೆಯಲ್ಲಿರುವುದೇ ದುರಂತ ಸಂಗತಿ. ಅವರಿಂದ ನಮಗೆ ನ್ಯಾಯ ದೊರೆಯುವ ವಿಶ್ವಾಸವೇ ಇಲ್ಲ. ಹೀಗಾಗಿಯೇ, ಮತದಾರರ ಶಕ್ತಿಯನ್ನು ನೋಟಾದ ಮೂಲದ ತಿಳಿುತ್ತೇವೆ ಎಂದು ಹೂಡಿಕೆದಾರರು ಸಾಮಾಜಿಕ ಜಾಲತಾಣದ ಸಂದೇಶಗಳಲ್ಲಿ ಹೇಳಿಕೊಂಡಿದ್ದಾರೆ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News