ಅಸ್ವಸ್ಥ ಮನಸ್ಸುಗಳೂ, ಸ್ವಚ್ಛ ಭಾರತದ ಕನಸುಗಳೂ
ಸ್ವಾಸ್ಥ್ಯ ಮತ್ತು ಸ್ವಚ್ಛತೆ ಎರಡೂ ಸಹ ಬೌದ್ಧಿಕ ಆಯಾಮಗಳನ್ನು ಹೊಂದಿವೆ ಎಂದು ಭಾವಿಸುವ ಮನಸ್ಥಿತಿಯನ್ನೇ ನಾವು ಕಳೆದುಕೊಂಡಿದ್ದೇವೆ. ಬಹಿರ್ದೆಸೆಗಾಗಿ ಬಯಲು ಆಶ್ರಯಿಸುವ ಮಹಿಳೆ ಅಪರಾಧಿಯಾಗಿ ಕಾಣುತ್ತಾಳೆ. ಅದೇ ಸಂದರ್ಭದಲ್ಲೇ ಅತ್ಯಾಚಾರಕ್ಕೀಡಾಗುವ ಮಹಿಳೆಯ ಆಕ್ರಂದನ ನಮಗೆ ಕೇಳುವುದೇ ಇಲ್ಲ. ಬಯಲಿಗೆ ಏಕೆ ಹೋಗಬೇಕಿತ್ತು ಎಂದು ಕೇಳುತ್ತೇವೆ. ಅತ್ಯಾಚಾರಿಯ ಮನಸ್ಸು ನಮಗೆ ಅಸ್ವಸ್ಥ ಎಂದೂ ಎನಿಸುವುದಿಲ್ಲ, ಮಲಿನ ಎಂದೂ ಎನಿಸುವುದಿಲ್ಲ. ಸಂತ್ರಸ್ತ ಮಹಿಳೆಯೇ ಅಪರಾಧಿಯಾಗಿಬಿಡುತ್ತಾಳೆ. ಏಕೆಂದರೆ ನಾವು ಸ್ವಚ್ಛತೆಯ ಕನಸು ಕಾಣುತ್ತಿದ್ದೇವೆ. ಮೇಲಾಗಿ ಆಕೆ ‘ಮತ್ತೊಂದು’ ಗುಂಪಿಗೆ ಸೇರಿದವಳಾಗಿರುತ್ತಾಳೆ.
ಸ್ವಚ್ಛ ಭಾರತದ ಕನಸುಗಳ ಹೊತ್ತು ಭಾರತವನ್ನು ಬಯಲು ಶೌಚ ಮುಕ್ತ ರಾಷ್ಟ್ರವನ್ನಾಗಿ ಮಾಡಲು ತುದಿಗಾಲಲ್ಲಿ ನಿಂತಿರುವ ಭಾರತ ಇತ್ತೀಚೆಗೆ ತಾನೇ ವಿಶ್ವ ಶೌಚಾಲಯ ದಿನವನ್ನು ಆಚರಿಸಿದೆ. ಸ್ವಚ್ಛತೆಯನ್ನು ಶೌಚಾಲಯದ ನಾಲ್ಕು ಗೋಡೆಗಳಿಂದಾಚೆಗೆ ನೋಡಲು ಸಾಧ್ಯವೇ ಆಗದಂತೆ ಮಸುಕಾಗಿರುವ ಕಣ್ಣೋಟ ಸ್ವಚ್ಛ ಭಾರತವನ್ನು ಬಯಲು ಮತ್ತು ಶೌಚಾಲಯಗಳ ನಡುವೆ ತಂದು ನಿಲ್ಲಿಸಿದೆ. ತಂಬಿಗೆ ಹಿಡಿದು ಬಹಿರ್ದೆಸೆಗೆ ಹೋಗುವವರನ್ನು ‘‘ದರ್ವಾಜಾ ಬಂದ್ ದರ್ವಾಜಾ ಬಂದ್’’ (ಬಾಗಿಲು ಮುಚ್ಚಿ-ಬಾಗಿಲು ಮುಚ್ಚಿ) ಎನ್ನುತ್ತಾ ಶೌಚಾಲಯದ ಒಳಗೆ ಹೋಗುವಂತೆ ಮಾಡುವ ಒಂದು ಜಾಹೀರಾತು ನೆನಪಾಗುತ್ತದೆ. ಭಾರತದ ಬಯಲುಗಳು ಶೌಚ ಮುಕ್ತವಾಗಿದೆ ಎಂದು ಹೆಮ್ಮೆಯಿಂದ ಬೀಗುವ ಸಮಾಜ ಮುಚ್ಚಿದ ಬಾಗಿಲಿನ ಹಿಂದೆ ಅಡಗಿರುವ ಕರಾಳ ಸತ್ಯವನ್ನು ಕಾಣದಷ್ಟು ನಿಷ್ಕ್ರಿಯವಾಗಿರುವುದನ್ನು ಗಮನಿಸಿದಾಗ ನಮ್ಮ ಮನದಾಚೆಯ ಬಯಲು ಸ್ವಚ್ಛವಾಗಿದ್ದರೂ ಮನದಾಳದ ಆಲಯ ತುಚ್ಛವಾಗಿರುವುದನ್ನು ಕಾಣಲು ಏಕೆ ಸಾಧ್ಯವಾಗಿಲ್ಲ ಎಂದು ಅರಿವಾಗುತ್ತದೆ. ಸಾಮಾನ್ಯವಾಗಿ ಅಸ್ವಸ್ಥ ಮನಸ್ಸ್ಸುಗಳು ಒಂದು ಸಮಾಜದ ಬೆಳವಣಿಗೆಯ ಸಹಜ ಪ್ರಕ್ರಿಯೆಯಾಗಿ ಸೃಷ್ಟಿಯಾಗುತ್ತವೆ. ಎಲ್ಲ ಕಾಲಘಟ್ಟಗಳಲ್ಲೂ ಇಂತಹ ಮನಸ್ಸ್ಸುಗಳನ್ನು ಕಾಣಬಹುದು. ಆದರೆ ನವ ಭಾರತದಲ್ಲಿ ಅಸ್ವಸ್ಥ ಮನಸ್ಸುಗಳನ್ನು ಉತ್ಪಾದಿಸಲಾಗುತ್ತಿದೆ, ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. ಕಣ್ಣೆದುರಿನ ಸತ್ಯವನ್ನೂ ಸುಳ್ಳು ಎಂದು ವಾದಿಸುವ ಅಥವಾ ನಿರೂಪಿತ ಸುಳ್ಳನ್ನೂ ಸತ್ಯ ಎಂದು ಬಿಂಬಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಒಂದು ವರ್ಗ ಮಾನಸಿಕ ಸ್ಥಿಮಿತವೇ ಇಲ್ಲದ ಕಾಲಾಳುಗಳನ್ನು ಸೃಷ್ಟಿಸುತ್ತಿದೆ.
ಒಂದರ ಮುಂದೆ ಮತ್ತೊಂದು ಇರುವುದು ಜಗತ್ತಿನ ನಿಯಮ ಅಲ್ಲವೇ? ಇದು ಅನಾದಿಕಾಲದಿಂದಲೂ ನಡೆದುಬಂದಿರುವ ವಿದ್ಯಮಾನ. ಇಡೀ ಜಗತ್ತು ತಾನೆಣಿಸಿದಂತೆಯೇ ಇರಬೇಕು ಎಂದು ಭಾವಿಸಿ, ಕನಸು ಕಂಡು, ಸಂಭ್ರಮಿಸಲು ಯತ್ನಿಸಿದ ಅನೇಕರು ಇತಿಹಾಸದ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ನಮ್ಮ ದೇಹದಲ್ಲೇ ಒಂದರ ಎದುರು ಮತ್ತೊಂದು ಇರುವುದನ್ನು ಅರಿತೂ ನಮ್ಮ ಸುತ್ತಲಿನ ಸಮಾಜದಲ್ಲಿನ ಮತ್ತೊಂದನ್ನು ಅಳಿಸಿಹಾಕುವ ಪ್ರವೃತ್ತಿ ಬೆಳೆಸಿಕೊಳ್ಳುವುದನ್ನು ಅಪ್ರಬುದ್ಧತೆ ಎನ್ನಬೇಕೋ ಅಹಮಿಕೆ ಎನ್ನಬೇಕೋ? ಪ್ರಸ್ತುತ ಸಂದರ್ಭದ ಭಾರತದ ರಾಜಕೀಯ ವಿದ್ಯಮಾನಗಳು ಮತ್ತು ಸಾಮಾಜಿಕ ಆಗುಹೋಗುಗಳನ್ನು ಗಮನಿಸಿದಾಗ ‘ಒಂದು’ ಆಧಿಪತ್ಯಕ್ಕಾಗಿ ಹವಣಿಸುತ್ತಿದ್ದು ಆ ‘ಮತ್ತೊಂದು’ ಬಹಿಷ್ಕೃತವಾಗುತ್ತಿದೆ. ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ ಇವೆಲ್ಲವೂ ರಾಜಕೀಯ ಘೋಷಣೆಗಳಾಗಿದ್ದರೆ ಅಡ್ಡಿಯಿಲ್ಲ ಎಂದೋ ಮಣ್ಣುಗೂಡಿ ಕೊಳೆತುಹೋಗುತ್ತವೆ. ಆದರೆ ಒಂದು ಮನಸ್ಸು, ಒಂದೇ ಹೃದಯ, ಒಂದು ಅಭಿವ್ಯಕ್ತಿಯ ಘೋಷವಾಕ್ಯಗಳು ನಮ್ಮೆದುರಿನ, ನಮ್ಮ ಸುತ್ತಲಿನ ಮತ್ತೊಂದನ್ನು ಬಹಿಷ್ಕರಿಸುವ, ನಿಷೇಧಿಸುವ, ನಿರಾಕರಿಸುವ ಅಥವಾ ಇಲ್ಲವಾಗಿಸುವ ವಿಕೃತಿಗಳನ್ನು ಸೃಷ್ಟಿಸುತ್ತವೆ.
ಈ ನಿರಾಕರಣೆಯ ರಾಜಕಾರಣ ಇತಿಹಾಸದ ಸತ್ಯಗಳನ್ನು ನಿರಾಕರಿಸುತ್ತಲೇ ಪೌರಾಣಿಕ ಮಿಥ್ಯೆಗಳನ್ನು ಮುನ್ನೆಲೆಗೆ ತರುತ್ತವೆ. ನಮ್ಮದಲ್ಲದ್ದರ ಅಸ್ತಿತ್ವವನ್ನೇ ನಿರಾಕರಿಸುವುದು, ನಮಗಿಷ್ಟವಿಲ್ಲದ್ದರ ಅಸ್ತಿತ್ವವನ್ನೇ ಅಳಿಸಿಹಾಕುವುದು ಶಿಲಾಯುಗದಲ್ಲೂ ಕಾಣಲಾಗದ ಧೋರಣೆ. ಇದರ ಆಧುನಿಕ ರೂಪವನ್ನು ನಾವು 21ನೆಯ ಶತಮಾನದಲ್ಲಿ ಕಾಣುತ್ತಿರುವುದು ದುರಂತ. ಆದರೂ ಸಮಾಜದ ಒಂದು ಸುಶಿಕ್ಷಿತ ವರ್ಗ ಈ ಮನೋಭಾವಕ್ಕೆ ಶರಣಾಗಿದೆ. ಆಧುನಿಕ ತಂತ್ರಜ್ಞಾನ ಈ ವಿಕೃತ ಧೋರಣೆಗೆ ಬೇಕಾದ ಪರಿಕರಗಳನ್ನು ಒದಗಿಸುತ್ತಿದೆ, ಮಾರ್ಗಗಳನ್ನು ರೂಪಿಸುತ್ತಿದೆ. ಯಾಂತ್ರಿಕವಾಗಿ ಯಾರದೋ ದೇಹಕ್ಕೆ ಮತ್ತಾರದೋ ತಲೆಯನ್ನು ಜೋಡಿಸುವ ತಂತ್ರಜ್ಞಾನ ಮನುಕುಲದ ಅದ್ಭುತ ಆವಿಷ್ಕಾರ. ಈ ತಂತ್ರಜ್ಞಾನ ಒಂದು ಮಿಥ್ಯೆ. ನಾವು ಹೀಗೂ ಮಾಡಬಹುದು ಎಂಬ ಮಿಥ್ಯ ಕಲ್ಪನೆಯನ್ನು ಸೃಷ್ಟಿಸುವ ಮೂಲಕ ಮನುಷ್ಯನ ಭಾವನೆಗಳನ್ನು ಕೆರಳಿಸುವ ಒಂದು ಜ್ಞಾನಶಾಖೆ. ಇದರಲ್ಲಿ ತಪ್ಪೇನೂ ಇಲ್ಲ. ಮನುಷ್ಯ ಬದುಕುವುದೇ ಕಲ್ಪನೆಗಳ ಲೋಕದಲ್ಲಿ. ಆದರೆ ಈ ತಂತ್ರಜ್ಞಾನ ವಿಕೃತ ಮನಸ್ಸ್ಸುಗಳ ಹಿಡಿತಕ್ಕೆ ಸಿಲುಕಿದಾಗ ದೇಹ ಮತ್ತು ತಲೆ ಮಾರಾಟದ ಸರಕುಗಳಂತೆ ಬಳಕೆಯಾಗಿಬಿಡುತ್ತವೆ.
ಹಾಗಾಗಿಯೇ ಕಳೆದ ಮೂರು ದಶಕಗಳಲ್ಲಿ ದೇಶಾದ್ಯಂತ ಸೃಷ್ಟಿಯಾಗಿರುವ ‘ಅಭಿಪ್ರಾಯ ತಯಾರಿಕಾ ಘಟಕಗಳು’ ಈ ದೇಶದ ಭೌಗೋಳಿಕ ಭೂಪಟವನ್ನು ರಕ್ಷಿಸುತ್ತಲೇ ಬೌದ್ಧಿಕ ಭೂಪಟವನ್ನು ಹಂತಹಂತವಾಗಿ ಅಳಿಸಿ ಹಾಕುವ ಕೃತ್ಯದಲ್ಲಿ ತೊಡಗಿವೆ. ದೇಶದ ಯುವ ಪೀಳಿಗೆ ಭಾರತ ಸ್ವಚ್ಛವಾಗುತ್ತಿರುವುದನ್ನು ಸಂಭ್ರಮಿಸುತ್ತಿದೆ. ದೊಡ್ಡ ಕ್ರಾಂತಿಯೇ ನಡೆದಿದೆ ಎಂದು ಭಾವಿಸುತ್ತಿದೆ. ಮತ್ತೊಂದೆಡೆ ಸ್ವಸ್ಥ ಭಾರತದ ಕಲ್ಪನಾ ಲೋಕದಲ್ಲೂ ವಿಹರಿಸುತ್ತಿದೆ. ಮಲೇರಿಯಾ, ಡೆಂಗ್, ಕಾಲರಾ ಮುಂತಾದ ಮಾರಕ ರೋಗಗಳಿಂದ ಮುಕ್ತವಾದರೆ ನಾವು ಸ್ವಸ್ಥ ಸಮಾಜ ಎಂದು ಬೆನ್ನುತಟ್ಟಿಕೊಳ್ಳಬಹುದು ಎಂದು ಭಾವಿಸಿರುವ ಈ ಯುವ ಮನಸ್ಸುಗಳಿಗೆ ಸ್ವಸ್ಥ ಮನಸ್ಸುಗಳ ಪರಿಕಲ್ಪನೆಯೂ ಇಲ್ಲವಾಗಿದೆ. ದೈಹಿಕ ಸ್ವಚ್ಛತೆಯನ್ನೇ ಶ್ರೇಷ್ಠತೆಯ ಪರಾಕಾಷ್ಠೆ ಎಂದು ನಂಬುವ ಬೌದ್ಧಿಕ ಚಿಂತನೆಯನ್ನು ಶತಮಾನಗಳಿಂದಲೂ ಮೈಗೂಡಿಸಿಕೊಂಡಿರುವ ಭಾರತೀಯ ಸಮಾಜಕ್ಕೆ ಸ್ವಚ್ಛತೆ ಮತ್ತು ಸ್ವಾಸ್ಥ್ಯದ ನಡುವಿನ ಸೂಕ್ಷ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಲು 21ನೆಯ ಶತಮಾನದಲ್ಲೂ ಸಾಧ್ಯವಾಗಿಲ್ಲ. ಇದು ದುರಂತವಲ್ಲವೇ? ಹಾಗಾಗಿಯೇ ಬಯಲು ಶೌಚ ಮುಕ್ತ ರಾಷ್ಟ್ರ ಎಂದು ಬೀಗುವ ಸಮಾಜ ಬಯಲ ಗುಂಡಿಗಳಲ್ಲಿ, ಮಲದ ರಾಶಿಯ ನಡುವೆ ನಲುಗಿಹೋಗುವ ಶ್ರಮಿಕರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
ದರ್ವಾಜಾ ಬಂದ್ (ಬಾಗಿಲು ಮುಚ್ಚಿ) ಎನ್ನುತ್ತಾ ಅಗುಳಿ ಸಿಲುಕಿಸಿ, ಕಮೋಡುಗಳ ಮೇಲೆ ಕುಳಿತು ತಮ್ಮ ಆಂತರಿಕ ಘನ ತ್ಯಾಜ್ಯವನ್ನು ವಿಸರ್ಜಿಸಿ, ತೆಳುವಾದ ಕಾಗದದಿಂದ ತಮ್ಮ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಹೊರಬರುವ ಮನಸ್ಸುಗಳಿಗೆ ತಾವು ವಿಸರ್ಜಿಸುವ ತ್ಯಾಜ್ಯದ ಗುಡ್ಡಗಳ ನಡುವೆ ದಿನಕ್ಕೊಂದು ಜೀವ ತುಸು ದೂರದಲ್ಲೇ ಬಲಿಯಾಗುತ್ತಿರುವುದು ಕಾಣುತ್ತಲೇ ಇಲ್ಲ. ಕಂಡರೂ ಮನಸ್ಸು ವಿಚಲಿತವಾಗುತ್ತಿಲ್ಲ. ವಿಚಲಿತವಾದರೂ ಗಾಢವಾಗಿ ಕಾಡುತ್ತಿಲ್ಲ. ಏಕೆಂದರೆ ಹೀಗೆ ಬಲಿಯಾಗುವ ಜೀವಗಳ ಬದುಕು ಭಿನ್ನವಾದುದು. ಅವರು ಮತ್ತೊಂದರ ಭಾಗವಾಗಿ ಕಾಣುತ್ತಾರೆ. ಆ ಮತ್ತೊಂದು ‘ಅನ್ಯರ’ ಗುಂಪಿಗೆ ಸೇರಿಬಿಡುತ್ತದೆ. ‘ಅನ್ಯರು’ ಎಂದರೆ ದ್ವೇಷಕ್ಕೆ ಅರ್ಹರು, ಸಾವಿಗೆ ಹತ್ತಿರವಾದವರು, ಬದುಕುವ ಹಕ್ಕು ಇಲ್ಲದವರು ಅಥವಾ ಬದುಕುವುದಾದರೆ ‘ನಾವು’ ಎಣಿಸಿದಂತೆ ಬದುಕಬೇಕಾದವರು. ‘ನಮ್ಮವರು’ ಎಣಿಸಿದಂತೆ ನಡೆಯಬೇಕಾದವರು. ಈ ಮನಸ್ಥಿತಿಗೆ ಶತಮಾನಗಳ ಇತಿಹಾಸವಿದೆ. ಆಧುನಿಕತೆ, ಕೈಗಾರಿಕಾ ಕ್ರಾಂತಿ, ರೈಲು, ವಿಮಾನ, ರಸ್ತೆ ಸಾರಿಗೆಯ ಕ್ರಾಂತಿಕಾರಿ ಬೆಳವಣಿಗೆಗಳು, ಅತ್ಯಾಧುನಿಕ ಶಿಕ್ಷಣ, ತಂತ್ರಜ್ಞಾನ ಮತ್ತು ಸಂಪರ್ಕ ಕ್ರಾಂತಿ, ಡಿಜಿಟಲೀಕರಣ ಇದಾವುದೂ ಈ ಮೂಲ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ. ಆಗಿದ್ದಿದ್ದರೆ ಒಂದೇ ವರ್ಷದಲ್ಲಿ 22 ಸಾವಿರ ಪೌರ ಕಾರ್ಮಿಕರು ಮಲಗುಂಡಿಯಲ್ಲಿ ಬಿದ್ದು ಸಾಯುತ್ತಿರಲಿಲ್ಲ. ಅವರ ಸಾವಿಗೆ ಸ್ಪಂದಿಸಲೂ ಆಗದಂತಹ ನಿಷ್ಕ್ರಿಯ, ನಿರ್ವೀರ್ಯ ಸಮಾಜವನ್ನು ನಾವು ಕಾಣಲಾಗುತ್ತಿರಲಿಲ್ಲ.
ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಕೊಲೆಗೀಡಾಗುವ ಎಳೆಯ ಜೀವಗಳು ನಮ್ಮ ‘ಸ್ವಸ್ಥ’ ಮನಸ್ಸುಗಳನ್ನು ಕಾಡುವುದೇ ಇಲ್ಲ. ‘ಸ್ವಚ್ಛ’ ಭಾವನೆಗಳನ್ನೂ ಕದಡುವುದಿಲ್ಲ. ಏಕೆಂದರೆ ಸಾವಿಗೀಡಾದವರು, ಹತ್ಯೆಯಾದವರು ಮತ್ತೊಂದರ ಭಾಗವಾಗಿರುತ್ತಾರೆ. ನಮ್ಮ ಶ್ರೇಣೀಕೃತ ಸಮಾಜ ಪರಿಭಾವಿಸುವ ‘ಒಂದು’ ಎನ್ನುವ ಚೌಕಟ್ಟಿನಲ್ಲಿ ಇವರಿಗೆ ಜಾಗವೇ ಇರುವುದಿಲ್ಲ. ಈ ಚೌಕಟ್ಟಿನಿಂದ ಹೊರತಾದವರು ಯಾರೇ ಹತ್ಯೆಗೀಡಾದರೂ ಅದು ನಮ್ಮ ಚಿತ್ತವನ್ನು ಕದಡುವುದಿಲ್ಲ. ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅವಕಾಶವಂಚಿತ ಸಮುದಾಯಗಳ ಯುವ ಮನಸ್ಸುಗಳು ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಳದ ವಿರುದ್ಧ ಹೋರಾಡುತ್ತಿದ್ದರೂ ಈ ಚಿತ್ತ ಕದಡುವುದಿಲ್ಲ. ಏಕೆಂದರೆ ಈ ವಿದ್ಯಾರ್ಥಿ ಸಮೂಹ ‘ಮತ್ತೊಂದರ’ ಒಂದು ಭಾಗ. ಯಾವುದೋ ಪಂಥ. ಎಡವೋ, ಬಲವೋ, ಅಸ್ಪಶ್ಯರೋ, ಅಂಬೇಡ್ಕರರ ಅನುಯಾಯಿಗಳೋ ಅಥವಾ ‘ಒಂದು’ ಎನ್ನುವುದನ್ನು ಒಪ್ಪದವರು. ದಿಲ್ಲಿಯಲ್ಲಿ ಹೋರಾಡುತ್ತಿರುವ ಹೆಣ್ಣುಮಕ್ಕಳನ್ನು ಅವಹೇಳನ ಮಾಡಲು ಏನೆಲ್ಲಾ ವಿಕೃತಿಗಳನ್ನು ಬಳಸಲಾಗುತ್ತಿದೆ? ಇದನ್ನು ನೋಡಿದರೆ ನಾವು ನೈತಿಕವಾಗಿ ಎಷ್ಟು ಅವನತಿ ಹೊಂದಿದ್ದೇವೆ ಎಂದು ಭಯವಾಗುತ್ತದೆ. ಏಕೆ ಈ ಅವಹೇಳನ. ಕಾರಣ ಸ್ಪಷ್ಟ. ಜೆಎನ್‌ಯು ‘ಮತ್ತೊಂದು’ ಗುಂಪಿಗೆ ಸೇರಿದ ಎಡಚರ ಸೃಷ್ಟಿ.
ಸ್ವಾಸ್ಥ್ಯ ಮತ್ತು ಸ್ವಚ್ಛತೆ ಎರಡೂ ಸಹ ಬೌದ್ಧಿಕ ಆಯಾಮಗಳನ್ನು ಹೊಂದಿವೆ ಎಂದು ಭಾವಿಸುವ ಮನಸ್ಥಿತಿಯನ್ನೇ ನಾವು ಕಳೆದುಕೊಂಡಿದ್ದೇವೆ. ಬಹಿರ್ದೆಸೆಗಾಗಿ ಬಯಲು ಆಶ್ರಯಿಸುವ ಮಹಿಳೆ ಅಪರಾಧಿಯಾಗಿ ಕಾಣುತ್ತಾಳೆ. ಅದೇ ಸಂದರ್ಭದಲ್ಲೇ ಅತ್ಯಾಚಾರಕ್ಕೀಡಾಗುವ ಮಹಿಳೆಯ ಆಕ್ರಂದನ ನಮಗೆ ಕೇಳುವುದೇ ಇಲ್ಲ. ಬಯಲಿಗೆ ಏಕೆ ಹೋಗಬೇಕಿತ್ತು ಎಂದು ಕೇಳುತ್ತೇವೆ. ಅತ್ಯಾಚಾರಿಯ ಮನಸ್ಸು ನಮಗೆ ಅಸ್ವಸ್ಥ ಎಂದೂ ಎನಿಸುವುದಿಲ್ಲ, ಮಲಿನ ಎಂದೂ ಎನಿಸುವುದಿಲ್ಲ. ಸಂತ್ರಸ್ತ ಮಹಿಳೆಯೇ ಅಪರಾಧಿಯಾಗಿಬಿಡುತ್ತಾಳೆ. ಏಕೆಂದರೆ ನಾವು ಸ್ವಚ್ಛತೆಯ ಕನಸು ಕಾಣುತ್ತಿದ್ದೇವೆ. ಮೇಲಾಗಿ ಆಕೆ ‘ಮತ್ತೊಂದು’ ಗುಂಪಿಗೆ ಸೇರಿದವಳಾಗಿರುತ್ತಾಳೆ. ಈ ಅತ್ಯಾಚಾರಿಗಳಿಗೂ, ಜೆಎನ್‌ಯು ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಕಾರಿ ಚಿತ್ರಗಳನ್ನು ಬಿತ್ತರಿಸುವ ಮನಸ್ಸುಗಳಿಗೂ ವ್ಯತ್ಯಾಸವೇನಾದರೂ ಇದೆಯೇ. ಒಂದು ದೈಹಿಕ ಅತ್ಯಾಚಾರ, ಮತ್ತೊಂದು ಬೌದ್ಧಿಕ. ಅಲ್ಲವೇ? ಸಾಮಾಜಿಕ ಘನತೆ, ಗೌರವ ಉಳಿಸಿಕೊಳ್ಳಲು ಸಮಾಜಮುಖಿ ಚಿಂತನೆಯನ್ನೇ ಬಲಿಕೊಡುವ ಪರಂಪರೆಗೆ ನಾವು ಗೌರವ ಹತ್ಯೆ ಅಥವಾ ಮರ್ಯಾದಾ ಹತ್ಯೆ ಎಂದು ಕರೆಯುತ್ತೇವೆ. ಹತ್ಯೆಗೀಡಾಗುತ್ತಿರುವ ಎಳೆಯ ಜೀವಗಳು ನಕ್ಸಲರೂ ಅಲ್ಲ, ಎಡಪಂಥೀಯರೂ ಅಲ್ಲ, ಭಯೋತ್ಪಾದಕರೂ ಅಲ್ಲ ಆದರೂ ಸಾವಿಗೆ ಅರ್ಹರಾಗಿಬಿಡುತ್ತಾರೆ. ಏಕೆಂದರೆ ಅವರು ‘ಮತ್ತೊಂದು’ ಗುಂಪಿಗೆ ಸೇರಿದವರು. ಅಥವಾ ನಮ್ಮವರಲ್ಲ, ನಾವೆಣಿಸಿದಂತೆ ಬದುಕುವವರು ಅಲ್ಲ, ಅಷ್ಟೆ.
ಆಕಾಶವಾಣಿಯ ಕಾರ್ಯಕ್ರಮ ‘‘ನಾವು ಮತ್ತು ನಮ್ಮವರು’’ ನೆನಪಾಗುತ್ತದೆ. ಈ ಪದಗಳನ್ನು ನಾವು ಎಷ್ಟು ಸಂಕುಚಿತಗೊಳಿಸಿಬಿಟ್ಟಿದ್ದೇವೆ ಅಲ್ಲವೇ? ನಾವು ಎಂದರೆ ನಾವೆಲ್ಲರೂ, ನಮ್ಮವರು ಎಂದರೆ ನಮ್ಮ ಸುತ್ತಲಿನವರೆಲ್ಲರೂ ಎಂದು ಭಾವಿಸುವ ಮನಸ್ಸನ್ನೇ ಒತ್ತೆ ಇಟ್ಟುಬಿಟ್ಟಿದ್ದೇವೆ. ಆದರೂ ‘ವಸುದೈವ ಕುಟುಂಬಕಂ’ ಎಂದರೆ ನಮ್ಮ ಮೈ ನವಿರೇಳುತ್ತದೆ. ಶತಮಾನಗಳ ಭವ್ಯ ಇತಿಹಾಸದತ್ತ ಹೊರಳಿಬಿಡುತ್ತೇವೆ. ಉದಾತ್ತ ಚಿಂತಕರತ್ತ ಬೆಟ್ಟು ತೋರಿಸಿ ಸಂತೃಪ್ತರಾಗಿಬಿಡುತ್ತೇವೆ. ಆದರೆ ಆ ಚಿಂತಕರನ್ನೇ ನಾವು ಮತ್ತು ನಮ್ಮವರು ಚೌಕಟ್ಟಿನಿಂದ ಹೊರಗಟ್ಟಿಬಿಡುತ್ತೇವೆ. ಇಲ್ಲಿ ಅಂಬೇಡ್ಕರ್, ಗಾಂಧಿ, ಮಾರ್ಕ್ಸ್, ಫುಲೆ, ಪೆರಿಯಾರ್ ಎಲ್ಲರೂ ಹೊರಗೆಸೆಯಲ್ಪಡುತ್ತಾರೆ. ಬಹಿಷ್ಕೃತರಾಗಿಬಿಡುತ್ತಾರೆ. ಇವರ ಹೆಸರೆತ್ತುವವರೂ ಅಸ್ಪಶ್ಯರಾಗಿಬಿಡುತ್ತಾರೆ, ಬೌದ್ಧಿಕವಾಗಿ ಎಂದು ಹೇಳಬೇಕಿಲ್ಲ. ಇಷ್ಟೆಲ್ಲಾ ಬೌದ್ಧಿಕ ಮಾಲಿನ್ಯದ ನಡುವೆ, ಆಂತರಿಕ ತ್ಯಾಜ್ಯ ಪರ್ವತಗಳ ನಡುವೆ, ಅಸ್ವಸ್ಥ ಚಿಂತನೆಗಳ ನಡುವೆ ನಾವು ಸ್ವಚ್ಛ ಭಾರತದ ಕನಸು ಕಾಣುತ್ತಿದ್ದೇವೆ. ಸ್ವಸ್ಥ ಭಾರತ ನಿರ್ಮಿಸಲು ಮುಂದಾಗುತ್ತಿದ್ದೇವೆ. ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಹೇಳುವಂತೆ ದರ್ವಾಜಾ ಬಂದ್ (ಬಾಗಿಲು ಮುಚ್ಚಿ) ಎಂದೋ ಆಗಿಹೋಗಿದೆ. ಈಗ ನಾವು ಕಿಟಕಿ ಬಾಗಿಲುಗಳನ್ನು ತೆರೆಯಬೇಕಿದೆ. ಮಲಗುಂಡಿಯಲ್ಲಿ ಬಿದ್ದು ಸಾಯುವ ಅಮಾಯಕ ಜೀವವನ್ನು ನಿರ್ಭಾವುಕರಾಗಿ ನೋಡುತ್ತಾ ಮುನ್ನಡೆಯುವ ನಮಗೆ ರಸ್ತೆಯಲ್ಲಿನ ಮಲದ ತೊಪ್ಪೆಅಸಹ್ಯ ಎನಿಸಕೂಡದು ಅಲ್ಲವೇ? ರಸ್ತೆಯಲ್ಲಿರುವ ಮಲಗುಂಡಿಗಳನ್ನು ಸ್ವಚ್ಛಗೊಳಿಸಲು ಅನಾಥ ಪೌರಕಾರ್ಮಿಕರಿದ್ದಾರೆ ಆದರೆ ಆಧುನಿಕ ನಾಗರಿಕ ಸಮಾಜದ ಬೌದ್ಧಿಕ ಮಲಗುಂಡಿಯನ್ನು ಸ್ವಚ್ಛಗೊಳಿಸಲು ಯಾವ ಕಾರ್ಮಿಕರಿದ್ದಾರೆ? ಇದಕ್ಕೆ ಉತ್ತರ ಶೋಧಿಸಿದರೆ ನಾವು ಸ್ವಚ್ಛ ಮತ್ತು ಸ್ವಸ್ಥ ಭಾರತದ ಕನಸು ಕಾಣುವುದು ಸಾರ್ಥಕ ಎನಿಸುತ್ತದೆ. ಅಲ್ಲವೇ?