ಸಮೂಹ ನಾಯಕತ್ವ

Update: 2019-11-29 09:10 GMT

ಅವರು ಜನಿಸಿದ್ದು ಅಗ್ರಹಾರಗಳ ಅಗ್ರಹಾರವಾಗಿದ್ದ ಬಾಗೇವಾಡಿಯ ಪುರವರಾಧೀಶ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ. ಉನ್ನತಕುಲ ಎಂದು ಕರೆಯಿಸಿಕೊಳ್ಳುವ ಶೈವಬ್ರಾಹ್ಮಣ ಕುಲದಲ್ಲಿ, ಧಾರ್ಮಿಕ ಅಧಿಕಾರ, ವೇದಾಗಮಗಳ ಜ್ಞಾನ ಮತ್ತು ಸಂಪತ್ತು ತುಂಬಿದ್ದ ಮನೆತನದಲ್ಲಿ! ಆದರೆ ಬಸವಣ್ಣನವರಿಗೆ ಇದಾವುದರ ಪರಿವೆ ಇರಲಿಲ್ಲ. ಶೂದ್ರರ ಮತ್ತು ಪಂಚಮರ ಸಾಮಾಜಿಕ ನ್ಯಾಯದ ಪ್ರಶ್ನೆ ಮಾತ್ರ ಅವರನ್ನು ಬಾಧಿಸುತ್ತಿತ್ತು. ಅದಕ್ಕೆ ಅವರು ಉತ್ತರ ಕಂಡುಕೊಳ್ಳಲೇ ಬೇಕಾಗಿತ್ತು. ಅದಕ್ಕಾಗಿ ಅವರು ಬ್ರಾಹ್ಮಣ್ಯವನ್ನು, ಸಂಪತ್ತನ್ನು ಮತ್ತು ನಂತರ ಕಲ್ಯಾಣದ ಪ್ರಧಾನಿ ಪದವಿಯನ್ನೂ ಬಿಟ್ಟುಕೊಡಬೇಕಾಯಿತು. ಶೋಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ, ಶೂದ್ರರು ಮತ್ತು ಪಂಚಮರು ಎಂದೆಂದಿಗೂ ಆರ್ಥಿಕವಾಗಿ ದುರ್ಬಲರಾಗಿಯೇ ಉಳಿಯುವಂಥ ಸ್ಥಿತಿಯನ್ನು ನಿರ್ಮಿಸಿದ ವರ್ಣವ್ಯವಸ್ಥೆಯನ್ನು ಗಟ್ಟಿ ಮಾಡಿದ ಮನುಸ್ಮತಿಯ ಕೌರ್ಯದ ವಿರುದ್ಧ ಹೋರಾಡುತ್ತ, ದಯಾಸಂಸ್ಕೃತಿಯನ್ನು ಸಾಮಾಜೀಕರಣಗೊಳಿಸಿ ಬದುಕಿನ ಎಲ್ಲ ಸ್ತರಗಳಲ್ಲಿನ ಶೋಷಣೆಯನ್ನು ನಿರ್ನಾಮಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು.

ಕಾಯಕಜೀವಿಗಳನ್ನು ಸಂಘಟಿಸುವುದರ ಮೂಲಕ ಬಸವಣ್ಣನವರು ದುಡಿಯುವ ವರ್ಗದ ಮೊದಲ ನಾಯಕರಾದರು. ಆದರೆ ಅವರು ತಮ್ಮ ನಾಯಕತ್ವವನ್ನು ಸಮೂಹ ನಾಯಕತ್ವವಾಗಿ ಪರಿವರ್ತಿಸಿದರು. ರಾಜರುಗಳಿಂದ ತುಂಬಿದ್ದ ಜಗತ್ತಿನಲ್ಲಿ ಸಮೂಹ ನಾಯಕತ್ವದ ಪ್ರಶ್ನೆಯೇ ಇರಲಿಲ್ಲ. ರಾಜ ಹೇಳಿದ್ದೇ ಅಂತಿಮವಾಗಿತ್ತು. ಆದರೆ ಬಸವಣ್ಣನವರು ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಅಲ್ಲಿಯವರೆಗೆ ಜಗತ್ತಿನ ಯಾವ ದಾರ್ಶನಿಕನಿಗೂ ಸಮೂಹ ನಾಯಕತ್ವದ ಕಲ್ಪನೆ ಮೂಡಿರಲಿಲ್ಲ. ಅನುಭವ ಮಂಟಪದ 770 ಅಮರಗಣಂಗಳೇ ಆ ಸಮೂಹ ನಾಯಕರು. ಇಲ್ಲಿನ ಬಹುಪಾಲು ನಾಯಕರೆಲ್ಲ ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕಜೀವಿಗಳಾದ ಶರಣ ಶರಣೆಯರಾಗಿದ್ದರು. ಕೆಲವರು ಮೇಲಿನ ವರ್ಣಗಳವರು ಶರಣಸಂಕುಲದ ಸರ್ವಸಮತ್ವವನ್ನು ಒಪ್ಪಿಕೊಂಡು ಶರಣ ಶರಣೆಯರಾಗಿದ್ದರು. ಇವರೆಲ್ಲ ಅನುಭವ ಮಂಟಪವೆಂಬ ಸಮಾಜೋಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳು ಈ ಸಂಸತ್ತಿನ ಸಭಾಧ್ಯಕ್ಷರಾಗಿದ್ದರು. ಹೀಗೆ ಜಗತ್ತಿನಲ್ಲಿ ಮೊದಲಬಾರಿಗೆ ಸಂಸತ್ತಿನ ಪರಿಕಲ್ಪನೆ ಮೂಡಿತು.

ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಬದುಕಿನ ಎಲ್ಲ ಆಗುಹೋಗುಗಳ ಚರ್ಚೆಯಾಗುತ್ತಿತ್ತು. ಶರಣರ ವಚನಗಳು ಅನುಭವ ಮಂಟಪದ ವೂಸೆಯಲ್ಲಿ ಹಾಯ್ದು ಹೊರಬರುತ್ತಿದ್ದವು. ಅಂದರೆ 770 ಅಮರಗಣಂಗಳ ಒಪ್ಪಿಗೆ ಪಡೆದು ಮಸೂದೆಗಳು ಕಾಯ್ದೆಗಳಾಗುವ ಹಾಗೆ ವಚನಗಳು ಹೊರಬರುತ್ತಿದ್ದವು. ಈ ಕಾರಣದಿಂದಲೇ ವಚನಗಳು ‘ವಚನ ಸಂವಿಧಾನ’ ಎಂದು ಕರೆಯಿಸಿಕೊಂಡವು.

ಈ ವಚನ ಸಂವಿಧಾನ ಕೇವಲ ಐಹಿಕ ಜಗತ್ತಿಗೆ ಸಂಬಂಧಿಸಿದ್ದಲ್ಲ. ಮಾನವನ ಆಂತರಿಕ ಜಗತ್ತಿಗೂ ಸಂಬಂಧಿಸಿತ್ತು. ಜಗತ್ತು ಬದಲಾಗಬೇಕಾದರೆ ಆ ಬದಲಾವಣೆ ಬಯಸುವ ಮಾನವರು ಬದಲಾಗಬೇಕು ಎಂಬುದು ಬಸವಣ್ಣನವರ ದೃಢ ನಿಲುವಾಗಿದೆ. ಅಂತೆಯೆ ಅವರು ಕಳಬೇಡ, ಕೊಲಬೇಡ ಎಂಬ ಸಪ್ತಸೂತ್ರಗಳನ್ನು ತಿಳಿಸಿದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News