ಪಶ್ಚಾತ್ತಾಪದ ಪರಿವೆಯೇ ಇಲ್ಲದ ಸಮಾಜದಲ್ಲಿ ನಾವು
ನಿರ್ಭಯಾಳಿಂದ ಪ್ರಿಯಾಂಕಾವರೆಗೆ ಸಾಕಷ್ಟು ರಕ್ತ ಹರಿದುಹೋಗಿದೆ, ಸಾಕಷ್ಟು ಕಣ್ಣೀರು ಹರಿದುಹೋಗಿದೆ. ಶಿಕ್ಷೆ ಮತ್ತು ಅಪರಾಧಗಳ ನಡುವೆ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಾಗರಿಕ ಸಮಾಜ ಹೊಸ ದಿಕ್ಕಿನತ್ತ ಯೋಚಿಸಬೇಕಿದೆ. ಇದು ರಾಜಕೀಯ, ಮತಧಾರ್ಮಿಕ, ಆಧ್ಯಾತ್ಮಿಕ ನೇತಾರರಿಂದ ಆಗುವ ಕೆಲಸವಲ್ಲ. ಪ್ರತಿಯೊಂದು ಮನೆಯಿಂದಲೂ ಆರಂಭವಾಗಬೇಕಿರುವ ಆಂದೋಲನ. ಸಂವೇದನಾಶೀಲ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮಗೆ ಬೇಕಿರುವುದು ಎಲ್ಲ ರೀತಿಯ ಶ್ರೇಷ್ಠತೆಯ ಅಹಮಿಕೆಯಿಂದ ಮುಕ್ತಿ. ಜಾತಿ ಮತ್ತು ಪುರುಷತ್ವದ ಅಹಮಿಕೆಗಳನ್ನು ತೊಡೆದುಹಾಕಿದರೆ ಮಾತ್ರವೇ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ.
ಕ್ರೌರ್ಯ ಮನುಷ್ಯನ ದೌರ್ಬಲ್ಯ. ಈ ದೌರ್ಬಲ್ಯಕ್ಕೆ ಪೂರಕವಾಗಿರುವುದು ಸ್ವಾರ್ಥ ಮತ್ತು ಸ್ವಾರ್ಥ ಸಾಧನೆಯ ಛಲ. ಎಷ್ಟು ಕ್ರೌರ್ಯ ಅಡಗಿದೆ ನಮ್ಮ ನಡುವೆ. ನಾವು ಯಾವುದನ್ನೋ ಕ್ರೌರ್ಯ ಎಂದು ಭಾವಿಸುತ್ತೇವೆ. ಆದರೆ ನಮ್ಮ ಕಣ್ಣೆದುರಿನಲ್ಲೇ ಕ್ರೂರ ಮನಸ್ಸ್ಸುಗಳು ನಡೆದಾಡುತ್ತಿರುತ್ತವೆ. ನಮ್ಮ ಗಮನಕ್ಕೇ ಬರುವುದಿಲ್ಲ. ಬಂದರೂ ಆ ಕ್ರೂರ ಕೃತ್ಯಗಳಿಗೆ ಕಾರಣಗಳನ್ನು ಹುಡುಕಿ ಸುಮ್ಮನಾಗಿಬಿಡುತ್ತೇವೆ. ಮಹಿಳೆಯರೋ, ಅಲ್ಪಸಂಖ್ಯಾತರೋ, ದಲಿತರೋ ಮನುಷ್ಯ ಸಮಾಜದ ಕ್ರೂರ ಕೃತ್ಯಗಳಿಗೆ ಬಲಿಯಾದಾಗ ನಮ್ಮ ನಾಗರಿಕ ಸಮಾಜಕ್ಕೆ ಕ್ರೌರ್ಯ ಒಂದು ಪ್ರತಿಕ್ರಿಯೆಯಂತೆ ಕಾಣುವುದೇ ಹೊರತು ಧೋರಣೆಯಂತೆ ಕಾಣುವುದಿಲ್ಲ. ಕ್ರೂರ ವರ್ತನೆಗೆ ಬಲಿಯಾದವರೇ ಪ್ರಶ್ನಾರ್ಹರಾಗಿಬಿಡುತ್ತಾರೆ. ಅವರ ಹುಟ್ಟು ಒಂದು ದೊಡ್ಡ ಪ್ರಶ್ನೆಯಾಗಿ ನಮ್ಮೆದುರು ನಿಂತುಬಿಡುತ್ತದೆ. ಹುಟ್ಟು ಅವರ ಆಯ್ಕೆಯಲ್ಲ ಎಂದರೆ ಅವರ ನಡವಳಿಕೆ ಪ್ರಶ್ನೆಯಾಗಿಬಿಡುತ್ತದೆ. ಒಂದು ಅತ್ಯಾಚಾರ, ಒಂದು ಕೊಲೆ, ಒಂದು ಹಲ್ಲೆ ನಮ್ಮ ಪ್ರಜ್ಞೆಯನ್ನು ಎಷ್ಟು ಕಲಕಿಬಿಡುತ್ತದೆ ಅಲ್ಲವೇ? ಮನಸ್ಸು ವಿಲವಿಲನೆ ತಡಕಾಡಿಬಿಡುತ್ತದೆ. ಆಂಧ್ರದ ವೈದ್ಯೆಯೋ, ರಾಂಚಿಯ ಕಾನೂನು ವಿದ್ಯಾರ್ಥಿನಿಯೋ, ಚೆನ್ನೈನ ಶಿಕ್ಷಕಿಯೋ, ದ.ಕ. ಶಿಕ್ಷಣ ಸಂಸ್ಥೆಯ ಬಾಲಕಿಯೋ ಅಥವಾ ಚಪ್ಪಲಿ ಧರಿಸಿದ ದಲಿತನೋ, ದನ ಸಾಗಿಸಿದ ಮುಸಲ್ಮಾನನೋ. ಸುಮ್ಮನೆ ಅವರ ಮೇಲೆ ಆಕ್ರಮಣ ನಡೆದುಬಿಡುತ್ತದೆ. ಏಕೆ ಹೀಗೆ ನಡೆಯುತ್ತೆ, ದುರ್ಬಲರೆಂದೋ ಅಥವಾ ಅಸಹಾಯಕರೆಂದೋ? ‘‘ಸರಕಾರ ಎಲ್ಲರಿಗೂ ರಕ್ಷಣೆ ಕೊಡೋಕಾಗುತ್ತಾ?’’ ಈ ಪ್ರಶ್ನೆ ಚಹಾ ಕುಡಿಯುತ್ತಾ ಮಾತನಾಡುವವರ ನಡುವೆ ಕೇಳಿಬರುತ್ತದೆ. ಅವನಿಗೂ ಸ್ವಲ್ಪಬುದ್ಧಿ ಇರಬೇಕಲ್ವೇ ಅಂತಲೋ, ಆ ಹುಡುಗೀನೂ ಸ್ವಲ್ಪ ಹುಷಾರಾಗಿರಬೇಕಲ್ವೇ ಅಂತಲೋ ಮಾತುಗಳೂ ಕೇಳಿಬರುತ್ತವೆ. ಇನ್ನೂ ಸ್ವಲ್ಪಮುಂದುವರಿದರೆ ಜಾತಿ ಕಟ್ಟಳೆಯನ್ನು ಪಾಲಿಸಲೇಬೇಕಲ್ವೇ ಅನ್ನೋ ಉದ್ಗಾರವನ್ನೂ ಕರ್ಮಠರ ನಡುವೆ ಕೇಳಬಹುದು. ಇಷ್ಟೆಲ್ಲಾ ಮಾತು ಕತೆಗಳ ನಡುವೆ ನಮ್ಮ ದೇಶದಲ್ಲಿ ಅತ್ಯಾಚಾರ, ಕೊಲೆ, ಹಲ್ಲೆ, ಗುಂಪು ಥಳಿತ ಇವೆಲ್ಲಾ ಮಾಮೂಲು ಸುದ್ದಿಯಾಗಿಬಿಟ್ಟಿದೆ. ಸ್ವೀಕೃತವೂ ಆಗಿಬಿಟ್ಟಿದೆ.
ಇಷ್ಟರ ನಡುವೆ ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಜೀವಂತ ದಹನದ ಶಿಕ್ಷೆ ಅನುಭವಿಸಿದ್ದಾರೆ. ಅತ್ತ ರಾಂಚಿಯಲ್ಲಿ ಕಾನೂನು ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ನಿರ್ಭಯಾ ಪ್ರಕರಣ ನಡೆದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಸರಕಾರವೂ ತನ್ನ ದೀರ್ಘ ನಿದ್ರಾವಸ್ಥೆಯಿಂದ ಎಚ್ಚೆತ್ತು ಹಲವು ಕಾನೂನುಗಳನ್ನು ರಚಿಸಿತು. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಸಹ ರಚಿಸಲಾಯಿತು. ಆದರೆ ಕಾಮುಕ ಪುರುಷರಿಗೆ ನೇಣು ಕುಣಿಕೆ ಕಾಣುವುದಿಲ್ಲ. ಕಾಮುಕ ಮನಸ್ಸು ಉನ್ಮತ್ತ ಮನಸ್ಸಿನಂತೆ ತನ್ನ ದೈಹಿಕ ಅಥವಾ ಮಾನಸಿಕ ಇಚ್ಛೆಯನ್ನು ಪೂರೈಸಿಕೊಳ್ಳಲು ಬಯಸುತ್ತದೆ. ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಅತ್ಯಾಚಾರ ಎಸಗುವ ಮನಸ್ಸುಗಳಿಗೂ, ದ್ವೇಷ ತೃಷೆಯನ್ನು ತೀರಿಸಿಕೊಳ್ಳಲು ಹಲ್ಲೆ ನಡೆಸುವ ಮನಸ್ಸುಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ. ಒಂದು ಪುರುಷಾಧಿಪತ್ಯದ ಸಂಕೇತವಾದರೆ ಮತ್ತೊಂದು ಜಾತಿ ಶ್ರೇಷ್ಠತೆಯ ಅಥವಾ ಮತಧರ್ಮ ಶ್ರೇಷ್ಠತೆಯ ಸಂಕೇತವಾಗಿರುತ್ತದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿದರೆ ಮಹಿಳೆಯರು ಸುರಕ್ಷಿತವಾಗಿರಬಹುದು ಎಂಬ ಭಾವನೆ ದಟ್ಟವಾಗಿದೆ. ಆದರೆ ನಿರ್ಭಯ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಲೇ ಇದ್ದಾಳೆ. ಆಸಿಫಾಳಂತಹ ಹಸುಳೆಗಳು ಬಲಿಯಾಗುತ್ತಲೇ ಇವೆ. ದೂರು, ಮೊಕದ್ದಮೆ, ದಾವೆ, ಜಾಮೀನು, ವಿಚಾರಣೆ ಮತ್ತು ಅಂತಿಮ ನ್ಯಾಯ ಈ ಸುದೀರ್ಘ ಹಾದಿಯ ನಡುವೆಯೇ ಸದ್ದಿಲ್ಲದಂತೆ ಅತ್ಯಾಚಾರ, ಕೊಲೆ, ಗುಂಪು ಥಳಿತ ನಡೆದುಹೋಗಿರುತ್ತವೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವ ವ್ಯವಸ್ಥೆ ಬಲಿಪೀಠಗಳನ್ನು ತೆರವುಗೊಳಿಸುವುದಿಲ್ಲ, ಶುಚಿಗೊಳಿಸಿ ಸುಮ್ಮನಾಗುತ್ತದೆ.
ಸಾಕ್ಷರತೆ ಹೆಚ್ಚಾಗಿದೆ, ಬಡತನ ಕ್ಷೀಣಿಸಿದೆ, ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ ಆದರೂ ನಮ್ಮ ಸಮಾಜ ಬೌದ್ಧಿಕವಾಗಿ ಏಕೆ ಹಿಂದುಳಿದಿದೆ? ನಾವು ಎಲ್ಲಿ ಎಡವುತ್ತಿದ್ದೇವೆ ? ಶಿಕ್ಷಣ ಕ್ಷೇತ್ರದ ಸುಧಾರಣೆ ಎಂದ ಕೂಡಲೇ ಇತಿಹಾಸದತ್ತ ಮಾತ್ರ ದೃಷ್ಟಿ ಹೊರಳಿಸುವ ಆಡಳಿತ ವ್ಯವಸ್ಥೆ ಆಳಿ ಅಳಿದು ಹೋದ ರಾಜಮಹಾರಾಜರುಗಳ ಹೆಸರುಗಳನ್ನು ಅಳಿಸಿಹಾಕುವ ಚಿಂತನೆ ಮಾಡುತ್ತದೆ. ಗತಕಾಲದಲ್ಲಿ ಅತ್ಯಾಚಾರ ಎಸಗಿದ ರಾಜರುಗಳ ದಂತಕಥೆಗಳನ್ನು ಜನರ ಮುಂದಿಟ್ಟು, ನೋಡಿ ಇವ ದೇಶದ್ರೋಹಿ, ಇವನನ್ನು ಅಳಿಸಿಹಾಕೋಣ ಎಂದು ಅಬ್ಬರಿಸುತ್ತದೆ. ಆದರೆ ಇತ್ತ ನಮ್ಮ ಸುತ್ತಲಿನ ಪರಿಸರದಲ್ಲೇ ಅತ್ಯಾಚಾರ ರಾಜಾರೋಷವಾಗಿ ನಡೆಯುತ್ತಿರುತ್ತದೆ. ಏಕೆಂದರೆ ಪುರುಷಾಧಿಪತ್ಯ ಮತ್ತು ಪುರುಷ ಸಮಾಜದ ಶ್ರೇಷ್ಠತೆಯ ಅಹಮಿಕೆಯನ್ನು ಹಣಿಯುವ, ಮಣಿಸುವ, ಕನಿಷ್ಠ ಪ್ರಶ್ನಿಸುವ ಧೋರಣೆಯನ್ನೂ ನಮ್ಮ ಪಠ್ಯಕ್ರಮದಲ್ಲಿ ಕಾಣಲಾಗುವುದಿಲ್ಲ. ನಿರ್ಭಯಾ, ಆಸಿಫಾ, ದಾನಮ್ಮ, ಸೌಜನ್ಯಾ, ಪಾಯಲ್ ಈಗ ಪ್ರಿಯಾಂಕಾ ಇವರು ಬಲಿಯಾಗಿದ್ದು ಗತಕಾಲದ ದೌರ್ಜನ್ಯಕ್ಕಲ್ಲ, ಸಮಕಾಲೀನ ಸಮಾಜದ ಬೌದ್ಧಿಕ ದಾರಿದ್ರ್ಯಕ್ಕೆ, ಅಹಮಿಕೆಯ ಆಧಿಪತ್ಯಕ್ಕೆ. ಮಕ್ಕಳ ಬೌದ್ಧಿಕ ವಿಕಸನದ ಹಂತದಲ್ಲಿ ಪುರುಷಾಧಿಪತ್ಯ ಮತ್ತು ಪೌರುಷದ ವ್ಯಾಖ್ಯಾನವೇ ಬದಲಾಗಬೇಕಿದೆ. ಹೆಣ್ಣು ಮಕ್ಕಳನ್ನು ಗೌರವಿಸಿ, ಸಮಾನರಂತೆ ಭಾವಿಸಿ ಎಂದೆಲ್ಲಾ ಆದರ್ಶಗಳನ್ನು ಹೇಳುವುದರೊಂದಿಗೇ, ಗಂಡು ಅಥವಾ ಪುರುಷ ಹೆಣ್ಣಿನ ಮೇಲೆ ಯಾವುದೇ ರೀತಿಯ ಅಧಿಕಾರ ಹೊಂದಿರುವುದಿಲ್ಲ ಎಂದೂ ಹೇಳಬೇಕಾಗುತ್ತದೆ. ಧರಿಸುವ ಉಡುಪು, ಬಳಸುವ ವಾಹನ, ಸೇವಿಸುವ ಆಹಾರ ಎಲ್ಲದರಲ್ಲೂ ಹೆಣ್ಣು ಚರ್ಚೆಯ ವಿಷಯವಾಗುವುದನ್ನು ಪ್ರಾಥಮಿಕ ಶಾಲಾ ಮಟ್ಟದಿಂದಲೇ ಕಾಣುತ್ತೇವೆ. ಇಲ್ಲಿ ಹೆಣ್ಣಿನಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತದೆ ಆದರೆ ಗಂಡು ಬದಲಾಗುವ ಅವಶ್ಯಕತೆಯೇ ಇಲ್ಲ ಎನ್ನುವ ಧೋರಣೆ ಎದ್ದುಕಾಣುವಂತಿರುತ್ತದೆ.
ಕಾನೂನಿನ ಪುಸ್ತಕಗಳು ಮತ್ತು ಕಾನೂನು ಪಾಲನೆಯ ಸಂಸ್ಥೆಗಳು ಅಪರಾಧ ಮತ್ತು ಶಿಕ್ಷೆಯನ್ನು ದಾಟಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಕಾನೂನು ರೂಪಿಸುವ ಮನಸ್ಸುಗಳಿಗೆ ಮನುಜ ಸೂಕ್ಷ್ಮಗಳ ಪರಿವೇ ಇರುವುದಿಲ್ಲ. ಸೂಕ್ಷ್ಮ ಸಂವೇದನೆ ಇರುವುದಿಲ್ಲ. ಅತ್ಯಾಚಾರ ನಡೆಯಿತಲ್ಲವೇ, ಕೊಲೆ ಆಯಿತಲ್ಲವೇ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವುದು, ಅತಿ ಶೀಘ್ರದಲ್ಲೇ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ಇದನ್ನು ಮೀರಿ ಕಾನೂನು ಏನು ಮಾಡಲು ಸಾಧ್ಯ? ಕಾನೂನು ವ್ಯವಸ್ಥೆಗೆ ಇಷ್ಟೇ ಕಾಣುವುದು. ನಾವು ಅಷ್ಟಕ್ಕೇ ಸಂತೃಪ್ತರಾಗಿಬಿಡುತ್ತೇವೆ. ಎಲ್ಲ ಕಡೆಯೂ ಪೊಲೀಸರು ಇರುವುದಿಲ್ಲ ನಿಜ. ಇರಲು ಸಾಧ್ಯವೂ ಇಲ್ಲ. ಇದರಿಂದಾಚೆಗಿನ ಅಪರಾಧದ ಲೋಕ ನಾಗರಿಕ ಸಮಾಜದಲ್ಲಿ ಅಡಗಿದೆ ಎನ್ನುವ ಸೂಕ್ಷ್ಮಪ್ರಜ್ಞೆ ಪ್ರಜ್ಞಾವಂತ ಸಮಾಜದಲ್ಲಿ ಇರಬೇಕಲ್ಲವೇ? ಒಬ್ಬ ಅತ್ಯಾಚಾರಿಗೆ ಶಿಕ್ಷೆಯಾದ ಮರುಕ್ಷಣದಲ್ಲೇ ಯಾವುದೋ ನಗರದ ಹೊರವಲಯದಲ್ಲಿ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ, ಕಾಲೇಜು ಆವರಣದಲ್ಲಿ, ಹಾಸ್ಟೆಲುಗಳಲ್ಲಿ, ಸಾರ್ವಜನಿಕ ಜನನಿಬಿಡ ಪ್ರದೇಶಗಳಲ್ಲೂ ಅತ್ಯಾಚಾರ ನಡೆಯುತ್ತದೆ. ಆರಾಧನಾಲಯಗಳಲ್ಲಿ ಅತ್ಯಾಚಾರ ನಡೆಯುತ್ತದೆ. ಹಲ್ಲೆ ನಡೆಯುತ್ತದೆ. ದೌರ್ಜನ್ಯ ನಡೆಯುತ್ತದೆ. ಈ ಸಮಾಜವನ್ನು ವ್ಯಾಪಕ ನೆಲೆಯಲ್ಲಿ ಪ್ರತಿನಿಧಿಸುವ ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳು ಜನಸಾಮಾನ್ಯರಲ್ಲಿ ಸೂಕ್ಷ್ಮ ಸಂವೇದನೆಯನ್ನು ಮೂಡಿಸಲು ಯಾವ ರೀತಿಯ ಪ್ರಯತ್ನ ನಡೆಸುತ್ತಿವೆ ಎಂದು ನೋಡಿದಾಗ ವಿಷಾದದ ಗೆರೆ ಮೂಡುತ್ತದೆ. ಅತ್ಯಾಚಾರದ ಸುದ್ದಿಯನ್ನು ರೋಚಕವಾಗಿ ಬಿತ್ತರಿಸುವ ವಿದ್ಯುನ್ಮಾನ ಮಾಧ್ಯಮಗಳು ಈ ಘೋರ ಕೃತ್ಯಗಳ ಹಿಂದಿರುವ ವಿಕೃತಿಯನ್ನು ಹೋಗಲಾಡಿಸಲು ಐದು ನಿಮಿಷವಾದರೂ ವ್ಯಯ ಮಾಡುತ್ತವೆಯೇ? ಅತ್ಯಾಚಾರಕ್ಕೊಳಗಾದ ಮಹಿಳೆಯ ಚಾರಿತ್ರ್ಯವನ್ನು ಶೋಧಿಸುವವರೊಬ್ಬರಾದರೆ, ಅತ್ಯಾಚಾರಿಗಳ ಅಸ್ಮಿತೆಗಳನ್ನು ಶೋಧಿಸುವವರು ಮತ್ತೊಬ್ಬರು. ಹತ್ಯೆ, ದೌರ್ಜನ್ಯಕ್ಕೊಳಗಾದ ಮಹಿಳೆಯ ಕುಟುಂಬದವರ ಬಳಿ ‘ಥಟ್ ಅಂಥ ಹೇಳಿ’ ಕಾರ್ಯಕ್ರಮ ನಡೆಸುವವರು ಹಲವರು. ಇದು ಅತ್ಯಾಚಾರಕ್ಕಿಂತಲೂ ಹೆಚ್ಚಿನ ಕ್ರೌರ್ಯ ಎಂದು ಇವರಿಗೆ ಹೊಳೆಯುವುದೇ ಇಲ್ಲ.
ನಮ್ಮ ಸುತ್ತಲಿನ ಸಮಾಜದಲ್ಲಿ ಅಂತರ್ಗತವಾಗಿ ಬೆಳೆಯುತ್ತಲೇ ಇರುವ ಈ ಕ್ರೌರ್ಯ ನಮಗೆ ಭಯೋತ್ಪಾದನೆಯಂತೆ ಕಾಣುವುದಿಲ್ಲ. ಉಗ್ರವಾದದಂತೆಯೂ ಕಾಣುವುದಿಲ್ಲ. ಏಕೆಂದರೆ ಇಲ್ಲಿ ದೌರ್ಜನ್ಯಕ್ಕೊಳಗಾಗುವವರು, ಕ್ರೌರ್ಯಕ್ಕೆ ಬಲಿಯಾಗುವವರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಅಧೀನಕ್ಕೊಳಪಟ್ಟವರು ಎಂದೇ ಸಾಂಪ್ರದಾಯಿಕ ಸಮಾಜ ಭಾವಿಸುತ್ತದೆ. ಉತ್ತರ ಪ್ರದೇಶದ ಚಿನ್ಮಯಾನಂದ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವುದು ಅತ್ಯಾಚಾರಕ್ಕೊಳಗಾದ ಹೆಣ್ಣು, ಮಠದ ಸ್ವಾಮಿಯಲ್ಲ. ನ್ಯಾಯಾಂಗವೂ ಕೆಲವೊಮ್ಮೆ ಇಂತಹ ಸಂತ್ರಸ್ತರ ಪರ ನಿಲ್ಲುವುದಿಲ್ಲ. ಏಕೆಂದರೆ ಹೆಣ್ಣಿನ ಚಾರಿತ್ರ್ಯ ಶೋಧ ಮಾಡುವ ಹಕ್ಕನ್ನು ಗಂಡುಕುಲ ತನ್ನ ನೈಸರ್ಗಿಕ ಹಕ್ಕು ಎಂದೇ ಭಾವಿಸಿದೆ. ಈ ಮನಸ್ಥಿತಿಯನ್ನು ಬದಲಿಸಲು ಕಾನೂನು ಅಗತ್ಯವೂ ಇಲ್ಲ ಸೂಕ್ತವೂ ಅಲ್ಲ. ಇದು ಪ್ರಜ್ಞೆ ಮತ್ತು ನಾಗರಿಕತೆಯ ಪ್ರಶ್ನೆ. ಚಿನ್ಮಯಾನಂದ, ಅಸಾರಾಂ ಬಾಪು, ನಿತ್ಯಾನಂದ ಮತ್ತಾವುದೋ ಚರ್ಚಿನ ಬಿಷಪ್, ಮತ್ತೊಬ್ಬ ಮೌಲ್ವಿ ಹೀಗೆ ಧರ್ಮ, ಅಧ್ಯಾತ್ಮ ಮತ್ತು ಜೀವನ ದರ್ಶನಗಳ ಬೋಧಕರೇ ಈ ಕ್ರೌರ್ಯದ ಮತ್ತೊಂದು ಆಯಾಮವಾಗಿ ಕಂಡುಬರುತ್ತಿದ್ದಾರೆ. ಇವರಲ್ಲಿರುವುದು ಕಾಮತೃಷೆ ಮಾತ್ರವಲ್ಲ ಆಧಿಪತ್ಯದ ಹಪಾಹಪಿ ಮತ್ತು ಶ್ರೇಷ್ಠತೆಯ ಅಹಮಿಕೆಯೂ ಅಡಗಿದೆ. ಏಕೆಂದರೆ ಪ್ರಜ್ಞಾವಂತ ನಾಗರಿಕ ಸಮಾಜದ ಒಂದು ವರ್ಗ ಈಗಲೂ ಅವರನ್ನು ಗೌರವಿಸುತ್ತದೆ. ದೇಶದ ನೇತಾರರು ಅವರ ಸಾನ್ನಿಧ್ಯಕ್ಕಾಗಿ ಹಾತೊರೆಯುತ್ತಾರೆ. ಅವರ ಪಾದದಡಿ ಆಸೀನರಾಗುತ್ತಾರೆ.
ನಮ್ಮ ಚಿಂತನೆ, ಧೋರಣೆ ಮತ್ತು ಭಾವನೆಗಳು ಬದಲಾಗಬೇಕು. ಆಸಿಫಾಳಂತಹ ಹಸುಳೆಗಳಲ್ಲೂ ಮತೀಯ ಅಸ್ಮಿತೆಯನ್ನು ಗುರುತಿಸಿದಂತಹ ವಿಕೃತ ಸಮಾಜದಲ್ಲಿ ನಾವಿದ್ದೇವೆ. ಈ ವಿಕೃತ ಸಮಾಜದ ಸಾಂಸ್ಕೃತಿಕ ಪ್ರಜ್ಞೆಯೇ ಕಲುಷಿತವಾಗಿದೆ. ಮಾಲಿನ್ಯದಿಂದ ಕೂಡಿದೆ. ಈ ಪ್ರಜ್ಞೆಯನ್ನು ಸರಿಪಡಿಸಲು ಕಾನೂನು ಪಂಡಿತರಿಂದ ಸಾಧ್ಯವೇ? ಇಲ್ಲಿ ಆಗಬೇಕಿರುವುದು ಶಾರೀರಿಕ ದಂಡನೆಯಲ್ಲ ಬೌದ್ಧಿಕ ದಂಡನೆ. ಪ್ರತಿಯೊಬ್ಬ ಪುರುಷನಲ್ಲೂ ತನ್ನನ್ನು ತಾನೇ ನಿಗ್ರಹಿಸಿಕೊಳ್ಳುವ, ದಂಡಿಸಿಕೊಳ್ಳುವ ಪ್ರವೃತ್ತಿ ಬೆಳೆಯಬೇಕು. ಹೆಣ್ಣಿನ ಹೆಣ್ತನವನ್ನು ಗೌರವಿಸುವುದರೊಂದಿಗೇ ಆ ಹೆಣ್ತನದಲ್ಲಿ ಒಂದು ವ್ಯಕ್ತಿ ಅಡಗಿದೆ, ಸ್ವಂತ ವ್ಯಕ್ತಿತ್ವವಿದೆ ಅದೂ ಸಮಾಜದಲ್ಲಿ ಸಮಾನತೆಯಿಂದ ಗೌರವಯುತವಾಗಿ ಬಾಳುವ ಹಕ್ಕು ಹೊಂದಿದೆ ಎನ್ನುವ ಪ್ರಜ್ಞೆ ಬಾಲ್ಯದಿಂದಲೇ ಮೂಡುವಂತಾಗಬೇಕು. ನಿರಂತರವಾಗಿ ನಡೆಯುತ್ತಿರುವ ಜಾತಿ ಕೇಂದ್ರಿತ ಗೌರವ ಹತ್ಯೆಗಳನ್ನು ನೋಡಿದರೆ ನಾವು ಈ ಸುಪ್ರಜ್ಞೆಯನ್ನು ರೂಢಿಸಿಕೊಳ್ಳಲು ಇನ್ನೂ ಒಂದು ಶತಮಾನ ಬೇಕೇನೋ ಎನಿಸುತ್ತದೆ. ಪಶ್ಚಾತ್ತಾಪದ ಪರಿವೆಯೇ ಇಲ್ಲದ ಒಂದು ಸಮಾಜದಲ್ಲಿ ನಾವು ಬಾಳುತ್ತಿದ್ದೇವೆ. ಕ್ರೌರ್ಯವನ್ನು ಸಂಭ್ರಮಿಸುವ ನಾಗರಿಕತೆಯನ್ನೂ ರೂಢಿಸಿಕೊಳ್ಳುತ್ತಿದ್ದೇವೆ. ಭೌಗೋಳಿಕ ದೇಶ ರಕ್ಷಣೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದೇವೆ. ಆದರೆ ದೇಶದ ಶೇ. 50ರಷ್ಟು ಪ್ರಜೆಗಳು, ಅಂದರೆ ಮಹಿಳೆಯರು, ತಮ್ಮ ದೇಹರಕ್ಷಣೆಗಾಗಿ ಹೋರಾಡುವ ದುಸ್ಥಿತಿಯನ್ನು ಎದುರಿಸುತ್ತಿದ್ದೇವೆ.
ನಿರ್ಭಯಾಳಿಂದ ಪ್ರಿಯಾಂಕಾವರೆಗೆ ಸಾಕಷ್ಟು ರಕ್ತ ಹರಿದುಹೋಗಿದೆ, ಸಾಕಷ್ಟು ಕಣ್ಣೀರು ಹರಿದುಹೋಗಿದೆ. ಶಿಕ್ಷೆ ಮತ್ತು ಅಪರಾಧಗಳ ನಡುವೆ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಾಗರಿಕ ಸಮಾಜ ಹೊಸ ದಿಕ್ಕಿನತ್ತ ಯೋಚಿಸಬೇಕಿದೆ. ಇದು ರಾಜಕೀಯ, ಮತಧಾರ್ಮಿಕ, ಆಧ್ಯಾತ್ಮಿಕ ನೇತಾರರಿಂದ ಆಗುವ ಕೆಲಸವಲ್ಲ. ಪ್ರತಿಯೊಂದು ಮನೆಯಿಂದಲೂ ಆರಂಭವಾಗಬೇಕಿರುವ ಆಂದೋಲನ. ಸಂವೇದನಾಶೀಲ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮಗೆ ಬೇಕಿರುವುದು ಎಲ್ಲ ರೀತಿಯ ಶ್ರೇಷ್ಠತೆಯ ಅಹಮಿಕೆಯಿಂದ ಮುಕ್ತಿ. ಜಾತಿ ಮತ್ತು ಪುರುಷತ್ವದ ಅಹಮಿಕೆಗಳನ್ನು ತೊಡೆದುಹಾಕಿದರೆ ಮಾತ್ರವೇ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ. ಪುರುಷ ಸಮಾಜ ಸಿದ್ಧವಾಗಿದೆಯೇ ? ಆಸಿಫಾ ಕೇಳುತ್ತ್ತಿದ್ದಳು ಈಗ ಪ್ರಿಯಾಂಕಾ ಕೇಳುತ್ತಿದ್ದಾಳೆ. ಉತ್ತರಿಸಿ ನೋಡೋಣ.