ಸಿಎಬಿ-ಬಹುಸಂಖ್ಯಾತ ಜನಸಾಮಾನ್ಯರ ಪೌರತ್ವ ನಿರಾಕರಣೆಯ ಕಾಯ್ದೆ

Update: 2019-12-19 08:54 GMT

ಈಗ ಮೋದಿ ಹಾಗೂ ಶಾ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ 2014 ಡಿಸೆಂಬರ್ 31ಕ್ಕೂ ಮುಂಚಿನಿಂದ ಈ ದೇಶದಲ್ಲಿ ವಾಸವಿರುವ ನಿರ್ದಿಷ್ಟ ರಾಷ್ಟ್ರಗಳ, ನಿರ್ದಿಷ್ಟ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವ ನೀಡಲಾಗುವುದು ಎಂದಿದೆ. ಆದರೆ ಅದನ್ನು ಸಾಬೀತು ಮಾಡಬೇಕಾದ ಜವಾಬ್ದಾರಿ ಆಯಾ ಜನರದೇ ಆಗಿರುತ್ತದೆ. ಅದಕ್ಕಿರುವ ದಾಖಲೆಗಳು ಮಾನದಂಡಗಳು ಭಾರೀ ಗೊಂದಲಕಾರಿಯೇ ಆಗಿದೆ. ಇವೆಲ್ಲದರ ಪರಿಣಾಮ ಊಹಿಸಲು ಕಷ್ಟಕರ. ಅಂದರೆ ಪೌರತ್ವ ತಿದ್ದುಪಡಿ ಮಸೂದೆ ವಾಸ್ತವದಲ್ಲಿ ಈ ದೇಶದ ಬಹುಸಂಖ್ಯಾತ ಜನಸಾಮಾನ್ಯರ ಪೌರತ್ವ ನಿರಾಕರಣೆ ಕಾಯ್ದೆಯಾಗಿಯೇ ಜಾರಿಯಾಗುತ್ತದೆ.!


ಇಂಡಿಯಾದ ಭಾಗವೆಂದು ಆಳುವ ಸರಕಾರಗಳು ಹೇಳುತ್ತಾ ಬಂದ ಈಶಾನ್ಯ ಭಾಗದ ಅಸ್ಸಾಂ, ಮಣಿಪುರ, ಅರುಣಾಚಲಪ್ರದೇಶ, ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ ರಾಜ್ಯಗಳು ಇಂದು ಮತ್ತೊಮ್ಮೆ ಹೊತ್ತಿ ಉರಿಯಲಾರಂಭಿಸಿವೆ. ದಿಲ್ಲಿ, ಉತ್ತರಾಖಂಡ, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಬಿಹಾರ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯಲಾರಂಭಿಸಿವೆ. ದೇಶದ ಈಶಾನ್ಯ ಭಾಗವು ಮೊದಲಿನಿಂದಲೂ ಸೇನೆಯ ಹಿಡಿತದಲ್ಲಿಯೇ ಇದೆ. ಈಗ ಮತ್ತಷ್ಟು ಸೇನಾ ತುಕಡಿಗಳನ್ನು ಈ ಭಾಗಗಳಿಗೆ ರವಾನಿಸಿರುವ ಸುದ್ದಿಯಿದೆ. ಒಟ್ಟಿನಲ್ಲಿ ದೇಶವಿಂದು ಆತಂಕ, ಅನುಮಾನ, ಅಭದ್ರತೆ, ಚರ್ಚೆ, ಭಾರೀ ಹೋರಾಟ, ಪ್ರದರ್ಶನಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸೇರಿದಂತೆ ದಲಿತ ದಮನಿತರು ಸದ್ಯಕ್ಕೆ ಕೋಮುವಾದಿ ಹಾಗೂ ಜಾತಿವಾದಿ ದಾಳಿಗಳ ಜೊತೆಗೆ ದೇಶಭ್ರಷ್ಠತೆಯ ಭಾರೀ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಇಂಡಿಯಾದ ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಗಳು ಅನುಮೋದಿಸಿ ರಾಷ್ಟ್ರಪತಿಗಳ ಅಂಕಿತವೂ ಬಿದ್ದು ‘ಪೌರತ್ವ ತಿದ್ದುಪಡಿ ಮಸೂದೆ 2019’, 12.12.2019ರಿಂದ ಜಾರಿಗೆ ಬಂದಿದೆ. ಸಂಕ್ಷಿಪ್ತವಾಗಿ ಕ್ಯಾಬ್ (ಇಅಆ) ಎಂದು ಇದನ್ನು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ‘ಇಂಡಿಯಾ ಪೌರತ್ವ ಕಾಯ್ದೆ 1955’ ಎಂದು ಇತ್ತು. ಅದರಲ್ಲಿ ಧಾರ್ಮಿಕತೆ ಆಧಾರದಲ್ಲಿ ಪೌರತ್ವ ನೀಡುವ, ನಿರ್ದಿಷ್ಟ ರಾಷ್ಟ್ರಗಳಿಗೆ ಸೇರಿದ ಎನ್ನುವ ಪ್ರಸ್ತಾವಗಳಿರಲಿಲ್ಲ. ಅದನ್ನು ಈಗ ಬದಲಾಯಿಸಲಾಗಿದೆ. ಇದನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ವಲಸಿಗರಾಗಿ 2014ಕ್ಕೂ ಮುಂಚೆ ಇಂಡಿಯಾಕ್ಕೆ ಬಂದಿರುವ ಹಿಂದೂ, ಫಾರ್ಸಿ, ಜೈನ, ಕ್ರಿಶ್ಚಿಯನ್, ಸಿಖ್ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವವನ್ನು ನೀಡುವ ಮಸೂದೆ ಎಂದು ನರೇಂದ್ರ ಮೋದಿ ಸರಕಾರ ಹೇಳುತ್ತಿದೆ. ಅದರಲ್ಲಿ ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟಿರುವ ಮತ್ತು ಧಾರ್ಮಿಕ ಆಧಾರದ ಮೇಲೆ ಪೌರತ್ವ ನೀಡುವ ಮೋದಿಯ ಬಿಜೆಪಿ ಸರಕಾರದ ನಡೆಗಳ ಬಗ್ಗೆ ವ್ಯಾಪಕ ಖಂಡನೆಗಳು ಪ್ರತಿಭಟನೆಗಳು ದಾಖಲಾಗುತ್ತಿವೆ. ಸಹಜವಾಗಿ ಸಂಘಪರಿವಾರ ಇವುಗಳನ್ನು ಮುಕ್ತವಾಗಿ ಬೆಂಬಲಿಸುತ್ತಿದೆ.

ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಮಸೂದೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ. ರಾಷ್ಟ್ರಾದ್ಯಂತ ಜಾರಿಗೊಳಿಸಲು ಹೊರಟಿರುವ ಪೌರತ್ವ ನೋಂದಾವಣೆಗೆ (ಎನ್‌ಆರ್‌ಸಿ) ಪೂರಕವಾಗಿಯೇ ಈ ಮಸೂದೆಯನ್ನು ಜಾರಿಗೆ ತರಲಾಗಿದೆ. ಇದರ ಜೊತೆಗೆ ದೇಶದ ಜನರನ್ನು ಜಾತಿ ಧರ್ಮಗಳ ಆಧಾರಗಳಲ್ಲಿ ಮತ್ತಷ್ಟು ಧ್ರುವೀಕರಣಗೊಳಿಸುವ ಬ್ರಾಹ್ಮಣ ಶಾಹಿ ಫ್ಯಾಶಿಸ್ಟ್ ಹುನ್ನಾರ, ಮುಸ್ಲಿಮರಿಗೆ ಮತ ನೀಡುವ ಹಕ್ಕುಗಳನ್ನು ಶಾಸನಬದ್ಧವಾಗಿ ನಿರಾಕರಿಸುವ, ಬಹುಸಂಖ್ಯಾತ ದಲಿತ, ಆದಿವಾಸಿಗಳನ್ನು ದೇಶಭ್ರಷ್ಠಗೊಳಿಸುವ, ಅವರನ್ನು ಸದಾ ಅತಂತ್ರ ಸ್ಥಿತಿಯಲ್ಲಿಡುವ, ಅವರಿಗೆ ಶಾಸನಬದ್ಧ ಅವಕಾಶಗಳನ್ನು ನಿರಾಕರಿಸುವ, ದಲಿತ ದಮನಿತ ಅಲ್ಪಸಂಖ್ಯಾತರ ಹೋರಾಟದ ಧ್ವನಿಗಳನ್ನು ಶಾಸನಬದ್ಧವಾಗಿ ಅಡಗಿಸುವ, ದೇಶವಿಂದು ಎದುರಿಸುತ್ತಿರುವ ತೀವ್ರತರದ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟು, ನಿರುದ್ಯೋಗ, ತಲಾ ಆದಾಯ ಕುಸಿತ, ಬೆಲೆಯೇರಿಕೆ, ಹಣದುಬ್ಬರ, ಭಾರೀ ಕಾರ್ಪೊರೇಟ್ ಲೂಟಿ, ಸಾಮಾಜಿಕ ಅಭದ್ರತೆ, ಮೀಸಲಾತಿ ಮೊದಲಾದ ಅವಕಾಶ ವಂಚನೆ ಇತ್ಯಾದಿಗಳಿಂದ ಜನಸಾಮಾನ್ಯರ ಗಮನವನ್ನು ದಿಕ್ಕುತಪ್ಪಿಸುವ ಉದ್ದೇಶಗಳು ಈ ನಡೆಗಳ ಹಿಂದೆ ಅಡಗಿರುವುದನ್ನು ಗುರುತಿಸಬೇಕಾಗಿದೆ.

ಯಾಕೆಂದರೆ ಈ ದೇಶದ ಬಹುಸಂಖ್ಯಾತ ಜನರಲ್ಲಿ ಸರಿಯಾಗಿ ಯಾವುದೇ ದಾಖಲೆಗಳು ಈಗಲೂ ಇಲ್ಲ. ಅದರಲ್ಲೂ ಕೋಟ್ಯಂತರ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಈಗಲೂ ಯಾವುದೇ ದಾಖಲೆಯೂ ಇರುವುದಿಲ್ಲ. ಇನ್ನು ಆಧಾರ್ ಕಾರ್ಡ್ ಆಗಲಿ, ಮತದಾರ ಗುರುತು ಪತ್ರವಾಗಲಿ, ಶಾಲಾ ದಾಖಲಾತಿಯಾಗಲಿ, ಜನನ ಪತ್ರವಾಗಲಿ, ಚಾಲನಾ ಪರವಾನಿಗೆಯಾಗಲೀ, ಪಾಸ್‌ಪೋರ್ಟ್, ಪಾನ್‌ಕಾರ್ಡ್, ಆದಾಯ ತೆರಿಗೆ ಸಂದಾಯ ದಾಖಲೆ ಆಗಲಿ ಈ ದೇಶದ ಪೌರತ್ವವನ್ನು ನಿರ್ಧರಿಸುವ ದಾಖಲೆಗಳೆಂದು ಈಗಲೂ ಶಾಸನಬದ್ಧವಾಗಿ ಪರಿಗಣಿಸಲ್ಪಟ್ಟಿಲ್ಲ. ಅವೆಲ್ಲವೂ ಆಯಾ ಉದ್ದೇಶಗಳಿಗೆ ಮಾತ್ರವೆಂದು ಹೇಳಲ್ಪಟ್ಟಿದೆ. ಅಲ್ಲದೆ ಜನಸಾಮಾನ್ಯರ ಬಳಿ ಇರುವ ದಾಖಲೆಗಳಲ್ಲೂ ನೂರೆಂಟು ಲೋಪಗಳಿರುವ ದೇಶ ನಮ್ಮದು. ಹೀಗಿರುವಾಗ ಜನಸಾಮಾನ್ಯರು ತಮ್ಮ ಪೌರತ್ವವನ್ನು ತಾವೇ ಸಾಬೀತು ಮಾಡಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟರೆ ಕತೆ ಏನಾಗಬಹುದು, ಊಹಿಸಲಾಗದು. ಉದಾಹರಣೆಗೆ ಈಗ ಮೋದಿ ಹಾಗೂ ಶಾ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ 2014 ಡಿಸೆಂಬರ್ 31ಕ್ಕೂ ಮುಂಚಿನಿಂದ ಈ ದೇಶದಲ್ಲಿ ವಾಸವಿರುವ ನಿರ್ದಿಷ್ಟ ರಾಷ್ಟ್ರಗಳ, ನಿರ್ದಿಷ್ಟ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವ ನೀಡಲಾಗುವುದು ಎಂದಿದೆ. ಆದರೆ ಅದನ್ನು ಸಾಬೀತು ಮಾಡಬೇಕಾದ ಜವಾಬ್ದಾರಿ ಆಯಾ ಜನರದೇ ಆಗಿರುತ್ತದೆ. ಅದಕ್ಕಿರುವ ದಾಖಲೆಗಳು ಮಾನದಂಡಗಳು ಭಾರೀ ಗೊಂದಲಕಾರಿಯೇ ಆಗಿದೆ. ಇವೆಲ್ಲದರ ಪರಿಣಾಮ ಊಹಿಸಲು ಕಷ್ಟಕರ. ಅಂದರೆ ಪೌರತ್ವ ತಿದ್ದುಪಡಿ ಮಸೂದೆ ವಾಸ್ತವದಲ್ಲಿ ಈ ದೇಶದ ಬಹುಸಂಖ್ಯಾತ ಜನಸಾಮಾನ್ಯರ ಪೌರತ್ವ ನಿರಾಕರಣೆ ಕಾಯ್ದೆಯಾಗಿಯೇ ಜಾರಿಯಾಗುತ್ತದೆ.!

ಇಂದು ಇಂಡಿಯಾದ ಅತೀ ದೊಡ್ಡ ಭೂಮಾಲಕರು ಈ ಕಾರ್ಪೊರೇಟ್ ಕೂಟಗಳೇ ಆಗಿವೆ ಎನ್ನುವುದು ಆಶ್ಚರ್ಯದ ವಿಚಾರವಲ್ಲ. ಲಕ್ಷಾಂತರ ಹೆಕ್ಟೇರ್ ಭೂಮಿ ಇವರ ಹಿಡಿತದಲ್ಲಿದೆ. ಜೊತೆಗೆ ಈಗ ರೈಲ್ವೇ ಹಾಗೂ ರಕ್ಷಣಾ ಇಲಾಖೆಯ ಭೂಮಿಗಳನ್ನೂ ಈ ಕೂಟಗಳಿಗೆ ನೀಡುವ ಕಾರ್ಯ ಚಾಲ್ತಿಯಲ್ಲಿದೆ. ಈ ಎರಡೂ ಇಲಾಖೆಗಳಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯಿದೆ. ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರೈತಾಪಿಗಳ ಭೂಮಿಗಳನ್ನು ಈ ಎರಡು ಇಲಾಖೆಗಳಿಗಾಗಿ ಸರಕಾರ ವಶಪಡಿಸಿಟ್ಟುಕೊಂಡಿತ್ತು. ಈಗದು ಕಾರ್ಪೊರೇಟುಗಳ ಪಾಲಾಗುವಂತೆ ವ್ಯವಸ್ಥಿತವಾಗಿ ಸರಕಾರವೇ ನೋಡಿಕೊಳ್ಳುತ್ತಿದೆ. ಅದೇ ರೀತಿ ಸಾರ್ವಜನಿಕ ವಲಯದ ಕಂಪೆನಿಗಳನ್ನು ಸಾರಾಸಗಟಾಗಿ ಭಾರೀ ಕಾರ್ಪೊರೇಟುಗಳಿಗೆ ಕೊಡುವ ಕಾರ್ಯ ಹಿಂದೆಂದಿಗಿಂತಲೂ ಬಹಳ ಬಿರುಸಿನಿಂದ ಸಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುವುದು ಹೆಚ್ಚಾಗಿ ಕಾಣದೇ ಹೋಗಿರುವುದು ಕಾಕತಾಳೀಯವೆಂದು ಹೇಳಲಾಗದು.

ಅಂದರೆ ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಭಾರೀ ಚರ್ಚೆ ನಡೆಸಿದ ವಿರೋಧ ಪಕ್ಷಗಳು ಜನಸಾಮಾನ್ಯರ ಪರವಾಗಿ ತಾವೇನೋ ಭಾರೀ ಕಡಿದು ಕಟ್ಟೆ ಹಾಕುತ್ತಿದ್ದೇವೆ ಎನ್ನುವ ಭ್ರಮೆಯನ್ನು ಬಿತ್ತಲು ಪ್ರಯತ್ನಿಸಿವೆ. ವಿರೋಧ ಪಕ್ಷಗಳು ಚುನಾವಣಾ ಭಾಗವಾಗಿ ಮಾಡಿಕೊಳ್ಳುವ ಮೈತ್ರಿಯನ್ನು ಆಡಳಿತ ಪಕ್ಷದ ಇಂತಹ ಗಂಡಾಂತರಗಳನ್ನು ತಡೆಯುವ ವಿಚಾರದಲ್ಲಿ ಮಾಡಿಕೊಳ್ಳಲು ತಯಾರಾಗುವುದು ಕಡಿಮೆ.

ವಾಸ್ತವದಲ್ಲಿ ಹಿಂದೂ ಸಮುದಾಯಗಳು ಎಂದು ಹೇಳಿಕೊಳ್ಳುವವರು ಸೇರಿದಂತೆ ಎಲ್ಲಾ ಜನಸಾಮಾನ್ಯರ ವಿರುದ್ಧವೇ ಇವರೆಲ್ಲರೂ ಇದ್ದಾರೆ. ಈ ಎರಡೂ ಬಣಗಳು ಮಾಡುತ್ತಿರುವ ಕಾರ್ಯದಲ್ಲಿ ಮೂಲಭೂತ ವ್ಯತ್ಯಾಸವಿಲ್ಲ. ಅದೇನೆಂದರೆ ‘ಹೊಡೆದಂತೆ ಅತ್ತಂತೆ ಮಾಡಿ’ ಕಾರ್ಪೊರೇಟುಗಳ ಪರವಾದ ಸರಕಾರದ ನಡೆಗಳು ಸುಲಲಿತವಾಗಿ ಸಾಗುವಂತೆ ನೋಡಿಕೊಳ್ಳುವುದು. ಅವುಗಳಿಗೆ ಯಾವುದೇ ತಡೆಗಳು ಎದುರಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿಯೇ ಈ ಎಲ್ಲಾ ವಾದ ಪ್ರತಿವಾದ ಆರ್ಭಟಗಳನ್ನು ಚಾಲ್ತಿಯಲ್ಲಿಟ್ಟಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಕೃಷಿ ಬಿಕ್ಕಟ್ಟಿಗೆ, ರೈತರ ಆತ್ಮಹತ್ಯೆಗಳಿಗೆ ಕೊನೆಯಂತೂ ಇಲ್ಲವಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳು ನೆಲಕಚ್ಚುವುದು ಮುಂದುವರಿದಿವೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಕತೆ ಹಾಗಿರಲಿ ಇದ್ದ ಉದ್ಯೋಗಗಳೇ ಕಣ್ಮರೆಯಾಗುತ್ತಿರುವುದು ಇನ್ನೂ ನಿಂತಿಲ್ಲ.

ಕೇಂದ್ರ ಸರಕಾರದ ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರವೇ ಕೈಗಾರಿಕಾ ಕ್ಷೇತ್ರ ಶೇ.4.3ಕ್ಕೆ ಹಾಗೂ ಉತ್ಪಾದನಾ ಕ್ಷೇತ್ರ ಶೇ.3.9ಕ್ಕೆ ಕುಸಿದಿದೆ. ಜಿಡಿಪಿ ದರ 4.5ಕ್ಕೆ ಕುಸಿದಿದೆ. ಆಹಾರ ಧಾನ್ಯಗಳ ಹಣದುಬ್ಬರ ವಿಪರೀತವೆನ್ನುವಷ್ಟು ಏರಿಕೆಯಾಗುತ್ತಿದೆ. ದೇಶದ ಪ್ರಜೆಗಳಿಗೆ ಶಿಕ್ಷಣ ನೀಡುವ ಕತೆ ಹಾಗಿರಲಿ ಇರುವ ಸಾರ್ವಜನಿಕ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳನ್ನೇ ಕಾರ್ಪೊರೇಟುಗಳ ವಶಕ್ಕೆ ನೀಡುವ ಕಾರ್ಯ ಬಿರುಸಾಗಿದೆ. ಜೆಎನ್‌ಯು ಸೇರಿದಂತೆ ದೇಶದ ಹಲವು ವಿಶ್ವವಿದ್ಯಾನಿಲಯಗಳ ಮೇಲೆ ಕೇಂದ್ರ ಸರಕಾರ ಹಿಡಿತ ಸಾಧಿಸುತ್ತಿರುವುದು, ಫೀ ಹೆಚ್ಚಳಗೊಳಿಸುತ್ತಿರುವುದು ಮತ್ತು ವಿದ್ಯಾರ್ಥಿಗಳ ಮೇಲೆ ದಮನಕಾಂಡ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದೇಶದ ಮಧ್ಯಮ ವರ್ಗ ಹಿಂದೆಂದೂ ಇಲ್ಲದಷ್ಟು ಆತಂಕ, ಅಭದ್ರತೆ, ಪ್ರಜಾತಾಂತ್ರಿಕ ಹಕ್ಕು ಹಾಗೂ ಅವಕಾಶಗಳ ನಿರಾಕರಣೆ ಮೊದಲಾದ ದಾಳಿಗಳಿಗೆ ಈಡಾಗಿದೆ.

ಮೋದಿಯ ಬಿಜೆಪಿ ಸರಕಾರ ಅಸ್ಸಾಮಿನಲ್ಲಿ ಭಾರೀ ಪ್ರಚಾರ ಕೊಟ್ಟು ಪೌರತ್ವ ನೊಂದಾವಣೆ (ಎನ್‌ಆರ್‌ಸಿ) ಕಾರ್ಯ ಮಾಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಕೈ ಹಾಕಿತ್ತು. ಮೂರೂವರೆ ಕೋಟಿಯಷ್ಟು ಜನಸಂಖ್ಯೆಯಿರುವ ಅಸ್ಸಾಮಿನ ಸುಮಾರು ಹತ್ತೊಂಬತ್ತು ಲಕ್ಷದಷ್ಟು ಜನರು ಇಂಡಿಯಾದ ಪೌರರಲ್ಲವೆಂದು ತೀರ್ಮಾನಿಸಲಾಯಿತು. ಯಾಕೆಂದರೆ ಸರಕಾರದ ಪ್ರಕಾರ ಅವರಲ್ಲಿ ಸರಿಯಾದ ದಾಖಲೆಗಳು ಇರಲಿಲ್ಲ. ಅದರಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ಸುಮಾರು ಏಳು ಲಕ್ಷಗಳಷ್ಟು ಮಾತ್ರವಾಗಿತ್ತು. ಉಳಿದ ಸುಮಾರು ಹನ್ನೆರಡು ಲಕ್ಷಗಳಷ್ಟು ಜನರು ಬಂಗಾಳಿ ಮತ್ತು ಹಿಂದಿ ಮಾತನಾಡುವ ವಿವಿಧ ಜಾತಿಗಳಿಗೆ ಸೇರಿದ ಹಿಂದೂ ಸಮುದಾಯಕ್ಕೆ ಸೇರಿದವರೆಂದು ಗುರುತಿಸಲಾಯಿತು. ಇದಕ್ಕಾಗಿ ಸುಮಾರು 15,000 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಲಾಗಿತ್ತು. ಆಶ್ಚರ್ಯವೆಂದರೆ ಇಂಡಿಯಾದ ಮಾಜಿ ರಾಷ್ಟ್ರಪತಿಗಳ ಕುಟುಂಬಸ್ಥರು, ಸೇನೆಯಲ್ಲಿ, ಸರಕಾರಿ ನೌಕರಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರೂ ಕೂಡ ಇಂಡಿಯಾದ ಪೌರರಲ್ಲವೆಂದು ತೀರ್ಮಾನಿಸಿ ಅವರನ್ನು ಶಿಬಿರಗಳಲ್ಲಿ ಬಂಧಿಸಿಡುವ ಕಾರ್ಯ ಮಾಡಲಾಯಿತು. ಅದರಲ್ಲಿ ಹಿಂದೂ ಹಾಗೂ ಮುಸ್ಲಿಮ್ ಸಮುದಾಯಗಳೆಂದು ಗುರುತಿಸಿಕೊಂಡವರೂ ಇದ್ದರು. ಇದು ಕೇಂದ್ರದ ಮೋದಿ ಸರಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಅದನ್ನು ಮರೆಮಾಚಲು ಮುಸ್ಲಿಮೇತರರಿಗೆ ಇಂಡಿಯಾದ ಪೌರತ್ವ ನೀಡಲೆಂದೇ ಈ ತಿದ್ದುಪಡಿ ಮಸೂದೆಯನ್ನು ತರಲಾಗಿದೆ ಎಂದು ದೊಡ್ಡ ಸುಳ್ಳನ್ನು ಬಿತ್ತಲು ಶ್ರಮಿಸುತ್ತಿದೆ.
ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019 ಹಾಗೂ ರಾಷ್ಟ್ರೀಯ ಪೌರತ್ವ ನೋಂದಾವಣೆ ಕಾರ್ಯಕ್ರಮ ಹಾಗೂ ಇದೆಲ್ಲದರ ಮೂಲವಾಗಿರುವ ‘ಪೌರತ್ವ ತಿದ್ದುಪಡಿ ಮಸೂದೆ 2003’ರ ಪ್ರಧಾನ ಗುರಿ ಈ ದೇಶದ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಅಲ್ಪಸಂಖ್ಯಾತರು, ದಲಿತ ದಮನಿತ ಆದಿವಾಸಿ ಸಮುದಾಯಗಳು, ಇನ್ನಿತರ ಬಡಜನರೇ ಆಗಿದ್ದಾರೆ. ವಾಜಪೇಯಿ ಸರಕಾರ ಜಾರಿಗೊಳಿಸಿದ ‘ಪೌರತ್ವ ತಿದ್ದುಪಡಿ ಮಸೂದೆ 2003’, ರಾಜ್ಯಸರಕಾರಗಳು ಇವನ್ನು ಜಾರಿಗೊಳಿಸುವುದನ್ನು ಕಡ್ಡಾಯಗೊಳಿಸಿದೆ.

 ಈಗದು ಮುಸ್ಲಿಮರನ್ನು ಇತರ ಸಮುದಾಯಗಳಿಂದ ಪ್ರತ್ಯೇಕಿಸಲು ಬಳಸಲಾಗುತ್ತಿದ್ದರೂ ನಂತರ ಅದು ಈ ದೇಶದ ದಲಿತ ದಮನಿತ, ಹಿಂದುಳಿದ, ಅಲ್ಪಸಂಖ್ಯಾತ ಧಾರ್ಮಿಕ ಜನಸಮುದಾಯಗಳಿಗೆ ಸೇರಿದ ಬಹುಸಂಖ್ಯಾತ ಜನಸಾಮಾನ್ಯರನ್ನು ನೇರವಾಗಿ ಗುರಿ ಮಾಡುವ ಅಸ್ತ್ರವಾಗಿಯೇ ಬಳಸಲ್ಪಡುತ್ತದೆ. ಈ ಬಹುಸಂಖ್ಯಾತರು ತಮ್ಮ ಹಾಗೂ ದೇಶದ ಮೇಲೆ ಆಗುತ್ತಿರುವ ಭಾರೀ ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತರ ಹಾಗೂ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ದಾಳಿಗಳ ಬಗ್ಗೆ ಉಸಿರೆತ್ತದಂತೆ ತಡೆಯುವ ಸ್ಪಷ್ಟ ಉದ್ದೇಶ ಅಲ್ಲಿದೆ. ಸರಕಾರದ ಮಾತನ್ನು ನಂಬಿ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆ, ನಮಗೇನಿಲ್ಲ ಎಂದು ಉಳಿದವರು ಸುಮ್ಮನೆ ಕುಳಿತರೆ ಮುಂದೆ ಭಾರೀ ಕಂಟಕ ತಪ್ಪಿದ್ದಲ್ಲ. ಮುಸ್ಲಿಮರನ್ನು ತಮ್ಮಿಂದಿಗೆ ಸೇರಿಸಿಕೊಂಡು ಐಕ್ಯ ಹೋರಾಟಗಳನ್ನು ರೂಪಿಸಬೇಕಾದುದು ಇಂದು ಅತ್ಯಗತ್ಯ

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News