ಪೌರತ್ವ ನಿರಾಕರಣೆಯ ಅಪಾಯದ ಜೊತೆಗೆ ಜನಸಾಮಾನ್ಯರ ಉಳಿತಾಯಗಳನ್ನೇ ನುಂಗುವ ಎಫ್‌ಎಸ್‌ಡಿಆರ್ ಮಸೂದೆ ಜಾರಿಗೆ ತಯಾರಿ!?
ಎಫ್‌ಎಸ್‌ಡಿಆರ್ ಮಸೂದೆ ಕಾಯ್ದೆಯಾಗಿ ಜಾರಿಯಾದಲ್ಲಿ ಸಾಂವಿಧಾನಿಕ ಸಂಸ್ಥೆಯಾದ ರಿಸರ್ವ್ ಬ್ಯಾಂಕಿನ ಅಸ್ತಿತ್ವವನ್ನೇ ನಗಣ್ಯಗೊಳಿಸುತ್ತದೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಹಣಕಾಸು ವ್ಯವಸ್ಥೆಯ ನಿಯಂತ್ರಣ ಪ್ರಾಧಿಕಾರವೊಂದನ್ನು ಸ್ಥಾಪಿಸಿ ಆ ಮೂಲಕ ಭಾರೀ ಕಾರ್ಪೊರೇಟು ಪರವಾಗಿ ಜನಸಾಮಾನ್ಯರ ಠೇವಣಿಗಳನ್ನು ಬೇಕೆಂದಾಗ ಉಪಯೋಗಿಸಿಕೊಳ್ಳುವ, ಭಾರೀ ಕಾರ್ಪೊರೇಟುಗಳ ಸಾಲಗಳನ್ನು ಮನ್ನಾ ಮಾಡುವ, ಕಾರ್ಪೊರೇಟುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಬಗೆಹರಿಸುವ ಇತ್ಯಾದಿ ಅಧಿಕಾರವನ್ನು ಪಡೆದುಕೊಳ್ಳಲಾಗುತ್ತದೆ.
ಇಂಡಿಯಾದ ಆರ್ಥಿಕತೆಯ ಬಗ್ಗೆ ಕಳೆದ 2019ರ ನವೆಂಬರ್ ತಿಂಗಳ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವರದಿಯೊಂದು ಹೊರಬಿದ್ದಿದೆ. ಅದರ ಪ್ರಕಾರ ದೇಶದ ಎಂಟು ಕೀಲಕ ಕೈಗಾರಿಕಾ ಉತ್ಪಾದನಾ ರಂಗಗಳ ಒಟ್ಟು ಬೆಳವಣಿಗೆ ಶೇ. -1.5ರಷ್ಟು ನಕಾರಾತ್ಮಕವಾಗಿದೆ. ಕಲ್ಲಿದ್ದಲು ಉತ್ಪಾದನೆಯ ಅಭಿವೃದ್ಧ್ದಿ ಕುಸಿತ ಶೇ. -2.50, ಕಚ್ಚಾ ತೈಲ ಶೇ. -6, ನೈಸರ್ಗಿಕ ಅನಿಲ ಶೇ. -6.40, ಉಕ್ಕು ಶೇ. -3.70, ವಿದ್ಯುತ್ ಶೇ. -5.70, ಸಿಮೆಂಟ್ ಶೇ. 4.10, ರಿಫೈನರಿ ಉತ್ಪನ್ನ ಶೇ. 3.10ರಷ್ಟಿವೆ. ಇವುಗಳಲ್ಲಿ ಸಿಮೆಂಟ್ ಮತ್ತು ರಿಫೈನರಿ ಮಾತ್ರ ಸಕಾರಾತ್ಮಕ ಉಳಿದಂತೆ ಎಲ್ಲವೂ ನಕಾರಾತ್ಮಕ ಬೆಳವಣಿಗೆಗಳೇ ಆಗಿವೆ. ಈ ಎಲ್ಲಾ ರಂಗಗಳು ಒಟ್ಟು ಸೇರಿ ಇಂಡಿಯಾದ ಶೇ. 40 ರಷ್ಟು ಕೈಗಾರಿಕಾ ಉತ್ಪಾದನೆಯನ್ನು ನಿರ್ಧರಿಸುವಂತಹವುಗಳಾಗಿವೆ. ಕೇಂದ್ರ ಸರಕಾರದ ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರವೇ ಕೈಗಾರಿಕಾ ಕ್ಷೇತ್ರ ಶೇ. -4.3ಕ್ಕೆ ಹಾಗೂ ಉತ್ಪಾದನಾ ಕ್ಷೇತ್ರ ಶೇ. -3.9ಕ್ಕೆ ಕುಸಿದಿದೆ. ಅಂದರೆ ದೇಶದ ಒಟ್ಟಾರೆ ನಕಾರಾತ್ಮಕ ಆರ್ಥಿಕ ಬೆಳವಣಿಗೆಯ ಪರಿ ಈ ಮಟ್ಟದಲ್ಲಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಭಾರೀ ಪ್ರಮಾಣದಲ್ಲಿ ಆಗಲಿದೆ.
ಈ ಅಂಕಿಅಂಶಗಳು ನಮ್ಮ ದೇಶದ ಪ್ರಸ್ತುತ ಆರ್ಥಿಕ ಹಿಂಜರಿತ ಯಾವ ಮಟ್ಟದಲ್ಲಿದೆ ಎನ್ನುವುದನ್ನು ತೋರಿಸುತ್ತವೆ. ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನೆ ಕುಸಿಯಲು ಪ್ರಧಾನ ಕಾರಣ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮುಚ್ಚುವಿಕೆಗಳ ಮುಂದುವರಿಕೆಯ ಕಾರಣದಿಂದಾಗಿವೆ. ಜೊತೆಗೆ ಭಾರೀ ಕೈಗಾರಿಕೆಗಳು ತಮ್ಮ ಉತ್ಪಾದನೆಗಳನ್ನು ಕಡಿಮೆ ಇಲ್ಲವೇ ಸ್ಥಗಿತಗೊಳಿಸಿರುವ ಕಾರಣವೂ ಸೇರಿವೆ.
ಇಂಡಿಯಾದ ಒಟ್ಟಾರೆ ಆರ್ಥಿಕತೆ ಕುಸಿತಗಳನ್ನು ದಾಖಲಿಸುತ್ತಾ ಈಗ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ. 4ಕ್ಕಿಂತಲೂ ಕೆಳಮಟ್ಟ ತಲುಪಿದೆ ಎಂದು ಅಧಿಕೃತವಾಗಿಯೇ ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಅದಕ್ಕಿಂತಲೂ ಕೆಳಮಟ್ಟದಲ್ಲಿದೆ ಎಂದು ಹಲವು ಸರಕಾರೇತರ ವರದಿಗಳು ಹೇಳುತ್ತಿವೆ. ತಲಾದಾಯದಲ್ಲಿ ಭಾರೀ ಕುಸಿತ ಕಾಣುತ್ತಿದೆ. ನಿರುದ್ಯೋಗ ಕಳೆದ ನಲವತ್ತು ವರ್ಷಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಸರಕಾರಿ ಅಂಕಿಅಂಶಗಳನ್ನೇ ಇಟ್ಟುಕೊಂಡು ನೋಡಿದರೂ ಇದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್, ಭೂತಾನ್‌ಗಳಂತಹ ಬಡ ರಾಷ್ಟ್ರಗಳಿಗಿಂತಲೂ ಕೆಳಮಟ್ಟ ತಲುಪಿದೆ. ಸಾಮಾಜಿಕ ಭದ್ರತೆ ಅತ್ಯಂತ ಕೆಳಮಟ್ಟ ತಲುಪಿದೆ. ಅಪಹರಣ, ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆಗಳು ಯಾವುದೇ ಎಗ್ಗಿಲ್ಲದಂತೆ ಎಲ್ಲೆಡೆಯೂ ನಡೆಯುವುದು ಹೆಚ್ಚಾಗತೊಡಗಿದೆ. ಜಾಗತೀಕರಣ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆ, ಭಾರೀ ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತ ವರ್ಗಗಳ ಬ್ಯಾಂಕ್ ಸಾಲಗಳ ವಿವಿಧ ಹೆಸರುಗಳಲ್ಲಿ ಮನ್ನಾ ಮಾಡುವಿಕೆ ಇನ್ನಿತರ ನೀತಿಗಳು ಹಾಗೂ ಆಡಳಿತಗಳಿಂದಾಗಿ ದೇಶದ ಜನಸಾಮಾನ್ಯರ ಬವಣೆ ಹೇಳತೀರದ ಪ್ರಕ್ಷುಬ್ಧ ಮಟ್ಟ ತಲುಪಿದೆ.
ಕೃಷಿ ಬಿಕ್ಕಟ್ಟಿಗೆ, ರೈತರ ಆತ್ಮಹತ್ಯೆಗಳಿಗೆ ಕೊನೆಯಂತೂ ಇಲ್ಲವಾಗಿದೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಕತೆ ಹಾಗಿರಲಿ ಇದ್ದ ಉದ್ಯೋಗಗಳೇ ಕಣ್ಮರೆಯಾಗುತ್ತಿರುವುದು ಇನ್ನೂ ನಿಂತಿಲ್ಲ. ಹಿಂದೆ ಇದ್ದಂತಹ ದೇಶದ ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳೂ ಕೂಡ ತೀವ್ರ ಕುಸಿತಕ್ಕೊಳಗಾಗುವುದು ಇನ್ನೂ ನಿಂತಿಲ್ಲ. ಆಳುವ ಶಕ್ತಿಗಳ ಜನವಿರೋಧಿ ಹಾಗೂ ದೇಶವಿರೋಧಿ ನೀತಿಗಳ ವಿರುದ್ಧ ದೇಶದ ಜನಸಾಮಾನ್ಯರು ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿ ದ್ದಾರೆ. 1947ರಲ್ಲಿ ಬ್ರಿಟಿಷರು ಇಂಡಿಯಾದಲ್ಲಿದ್ದ ಭಾರೀ ಭೂಮಾಲಕರು ಹಾಗೂ ರಾಜರುಗಳು, ಪಾಳೇಗಾರರು ಮತ್ತು ಪ್ರಧಾನವಾಗಿ ಬ್ರಿಟಿಷರ ದಲ್ಲಾಳಿ ಬಂಡವಾಳಿಗರನ್ನೊಳಗೊಂಡ ಭಾರೀ ಆಸ್ತಿವಂತರಾಗಿದ್ದ ಮೇಲ್ಜಾತಿ ಮೇಲ್ವರ್ಗಗಳಿಗೆ ರಾಜಕೀಯ ಅಧಿಕಾರ ಹಸ್ತಾಂತರ ಮಾಡಿ ಭೌತಿಕವಾಗಿ ಇಂಡಿಯಾ ತೊರೆದು ಹೋದರು. ಅದಾಗಿ ಏಳು ದಶಕಗಳು ಕಳೆದಿವೆ. ಈ ಏಳು ದಶಕಗಳಲ್ಲಿ ಇಂಡಿಯಾ ದೇಶವು ಜಾಗತಿಕ ಭಾರೀ ಕಾರ್ಪೊರೇಟುಗಳ ಹಿಡಿತಗಳಲ್ಲಿ ಸಿಲುಕಿತ್ತು. ಅದು ಈ ದೇಶದ ಜನಸಾಮಾನ್ಯರನ್ನು ಇಂದಿನ ಭಾರೀ ಅಭದ್ರತೆಯತ್ತ ದೂಡಿದೆ. ಅದರ ಪರಿಣಾಮವಾಗಿ ಇಂದು ಈ ದೇಶದಲ್ಲೇ ಹುಟ್ಟಿ ಬೆಳೆದು ಜೀವನ ಕಟ್ಟಿಕೊಂಡಿರುವ ಜನಸಾಮಾನ್ಯರು ದೇಶಭ್ರಷ್ಟರಾಗಿ ಕ್ಯಾಂಪುಗಳಲ್ಲಿ ಬಂಧಿಗಳಾಗಿ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ಇದೀಗ ಸಂವಿಧಾನವನ್ನೇ ಅಪ್ರಸ್ತುತಗೊಳಿಸಿ, ಜನಸಾಮಾನ್ಯರ ಪೌರತ್ವವನ್ನೇ ನಿರಾಕರಿಸುವ ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ಎಂಬ ಕಾಯ್ದೆ ಹಾಗೂ ಯೋಜನೆಗಳ ವಿರುದ್ಧ ಇಡೀ ದೇಶದ ಬಹುಸಂಖ್ಯಾತ ಜನಸಾಮಾನ್ಯರು ಸಿಡಿದೆದ್ದು ನಿಂತಿದ್ದಾರೆ. ಕೇಂದ್ರ ಸರಕಾರದ ನಿರಂಕುಶ ಆಡಳಿತವನ್ನು ತೀವ್ರವಾಗಿ ಪ್ರಶ್ನೆ ಮಾಡತೊಡಗಿದ್ದಾರೆ. ಪ್ರತಿಬಂಧಕಾಜ್ಞೆ, ಕರ್ಫ್ಯೂಗಳನ್ನು ಲೆಕ್ಕಿಸದೆ, ಪ್ರಭುತ್ವದ ಸಶಸ್ತ್ರ ಪಡೆಗಳ ಲಾಠಿ ಚಾರ್ಜ್ ಗುಂಡೇಟಿಗೆ ಎದೆಯೊಡ್ಡಿ, ಪ್ರಾಣಗಳನ್ನೂ ಲೆಕ್ಕಿಸದೆ ಬೀದಿಗಿಳಿದು ಹೋರಾಟಗಳಿಗೆ ಧುಮುಕುತ್ತಿದ್ದಾರೆ. ವಿದ್ಯಾರ್ಥಿ ಸಮೂಹ ಅದರಲ್ಲಿ ಮುಂಚೂಣಿಯಲ್ಲಿದೆ. ಈ ಹೋರಾಟಗಳಲ್ಲಿ ಪೊಲೀಸರ ಗುಂಡುಗಳಿಗೆ ಸುಮಾರು 50ರಷ್ಟು ನಾಗರಿಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಚಿತ್ರಹಿಂಸೆಗಳಿಗೆ ಒಳಗಾಗಿ ಬಂಧನದಲ್ಲಿದ್ದಾರೆ.
ಒಟ್ಟಿನಲ್ಲಿ ದೇಶವಿಂದು ಆತಂಕ, ಅನುಮಾನ, ಅಭದ್ರತೆ, ಚರ್ಚೆ, ಭಾರೀ ಹೋರಾಟ, ಪ್ರದರ್ಶನ, ಮಿತಿಯಿಲ್ಲದ ಪ್ರಭುತ್ವ ಹಿಂಸೆಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸೇರಿದಂತೆ ದಲಿತ, ಆದಿವಾಸಿ, ದಮನಿತರು, ಇನ್ನಿತರ ಬಡವರು ಸದ್ಯಕ್ಕೆ ಕೋಮುವಾದಿ ಹಾಗೂ ಜಾತೀವಾದಿ ದಾಳಿಗಳ ಜೊತೆಗೆ ದೇಶ ಭ್ರಷ್ಟತೆಯ, ಭಾರೀ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ, ಜಾರಿ ಮಾಡ ಹೊರಟಿರುವ ಎನ್‌ಪಿಆರ್ ಹಾಗೂ ಎನ್‌ಆರ್‌ಸಿಯ ಹಿಂದೆ ಹಲವಾರು ಲೆಕ್ಕಾಚಾರಗಳಿವೆ. ಇದರ ಜೊತೆಗೆ ದೇಶದ ಜನರನ್ನು ಜಾತಿ ಧರ್ಮಗಳ ಆಧಾರಗಳಲ್ಲಿ ಮತ್ತಷ್ಟು ಧ್ರುವೀಕರಣಗೊಳಿಸುವ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಹುನ್ನಾರ, ಮುಸ್ಲಿಮರು, ಆದಿವಾಸಿಗಳು ದಲಿತ ದಮನಿತರು, ಹಿಂದುಳಿದ ವರ್ಗಗಳು ಮತ್ತಿತರ ಬಡವರ ಮತ ನೀಡುವ ಹಕ್ಕುಗಳನ್ನು ಶಾಸನಬದ್ಧವಾಗಿ ನಿರಾಕರಿಸುವ, ಬಹುಸಂಖ್ಯಾತ ದಲಿತ, ಆದಿವಾಸಿಗಳನ್ನು ದೇಶಭ್ರಷ್ಟಗೊಳಿಸುವ, ಜನಸಾಮಾನ್ಯರನ್ನು ಸದಾ ಅತಂತ್ರ ಸ್ಥಿತಿಯಲ್ಲಿಡುವ, ಅವರಿಗೆ ಶಾಸನಬದ್ಧ ಅವಕಾಶಗಳನ್ನು ನಿರಾಕರಿಸುವ, ದಲಿತ ದಮನಿತ ಅಲ್ಪಸಂಖ್ಯಾತರ ಹೋರಾಟದ ಧ್ವನಿಗಳನ್ನು ಶಾಸನಬದ್ಧವಾಗಿ ಅಡಗಿಸುವ, ದೇಶವಿಂದು ಎದುರಿಸುತ್ತಿರುವ ತೀವ್ರತರದ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟು, ನಿರುದ್ಯೋಗ, ತಲಾ ಆದಾಯ ಕುಸಿತ, ಬೆಲೆಯೇರಿಕೆ, ಹಣದುಬ್ಬರ, ಭಾರೀ ಕಾರ್ಪೊರೇಟು ಲೂಟಿ, ಸಾಮಾಜಿಕ ಅಭದ್ರತೆ, ಮೀಸಲಾತಿ ಮೊದಲಾದ ಅವಕಾಶ ವಂಚನೆ, ಬ್ಯಾಂಕಿಂಗ್ ವಂಚನೆ, ಸಮಾಜಕಲ್ಯಾಣ ಯೋಜನೆಗಳ ಸ್ಥಗಿತತೆ ಇತ್ಯಾದಿಗಳಿಂದ ಜನಸಾಮಾನ್ಯರ ಗಮನವನ್ನು ದಿಕ್ಕುತಪ್ಪಿಸುವ, ದೇಶದ ಎಲ್ಲಾ ಜನಸಾಮಾನ್ಯರ ಮೇಲೆ ನೇರ ನಿಗಾ ಇಡುವ, ಎಲ್ಲಾ ಪ್ರಜಾತಾಂತ್ರಿಕ ಅವಕಾಶಗಳನ್ನೇ ನಿರಾಕರಿಸುವ ಇತ್ಯಾದಿ ಉದ್ದೇಶಗಳು ಈ ನಡೆಗಳ ಹಿಂದೆ ಅಡಗಿರುವುದನ್ನು ಗುರುತಿಸಬೇಕಾಗಿದೆ. ಯಾಕೆಂದರೆ ಈ ದೇಶದ ಬಹುಸಂಖ್ಯಾತ ಜನರಲ್ಲಿ ಸರಿಯಾಗಿ ಯಾವುದೇ ದಾಖಲೆಗಳು ಈಗಲೂ ಇಲ್ಲ. ಇನ್ನು ಆಧಾರ್ ಕಾರ್ಡ್ ಆಗಲೀ, ಮತದಾರರ ಗುರುತು ಪತ್ರವಾಗಲೀ, ಪಡಿತರ ಚೀಟಿಯಾಗಲೀ, ಶಾಲಾ ದಾಖಲಾತಿಯ ದಾಖಲೆಯಾಗಲೀ, ಮನೆಗಂದಾಯ ಇಲ್ಲವೇ ಭೂಕಂದಾಯ ರಸೀದಿಯಾಗಲೀ, ಆದಾಯ ತೆರಿಗೆ ನೀಡಿದ ದಾಖಲೆಯಾಗಲೀ, ಜನನ/ಮರಣ ಪತ್ರವಾಗಲೀ, ಚಾಲನಾ ಪರವಾನಿಗೆಯಾಗಲೀ, ಪಾಸ್ ಪೋರ್ಟ್ ಆಗಲೀ, ಈ ದೇಶದ ಪೌರತ್ವವನ್ನು ನಿರ್ಧರಿಸುವ ದಾಖಲೆಗಳೆಂದು ಈಗಲೂ ಶಾಸನಬದ್ಧವಾಗಿ ಪರಿಗಣಿಸಲ್ಪಟ್ಟಿಲ್ಲ. ಅದನ್ನು ಗೃಹಮಂತ್ರಿ ಅಮಿತ್ ಶಾ ಕೂಡ ಹಲವು ಬಾರಿ ಪುನರುಚ್ಚರಿಸಿದ್ದಾರೆ.
ನಮ್ಮ ದೇಶದ ಅನಕ್ಷರಸ್ಥರ ಪ್ರಮಾಣ 2011ರ ಜನಗಣತಿ ಪ್ರಕಾರವೇ ಪುರುಷರಲ್ಲಿ ಸರಾಸರಿ ಶೇ.21, ಮಹಿಳೆಯರಲ್ಲಿ ಶೇ.37ಕ್ಕೂ ಹೆಚ್ಚಿದೆ. ಇಲ್ಲಿ ಅಕ್ಷರಸ್ಥರೆಂದು ಗುರುತಿಸಿರುವುದರಲ್ಲಿ ಕೇವಲ ಸಹಿಯನ್ನು ಮಾಡಲು ಮಾತ್ರ ಬರುವವರು ಸೇರಿದ್ದಾರೆ ಎನ್ನುವುದನ್ನು ಗಮನಿಸಬೇಕು. ಅಂದರೆ ಸ್ವತಂತ್ರವಾಗಿ ಓದಲು ಹಾಗೂ ಬರೆಯಲು, ಅರ್ಥೈಸಿಕೊಳ್ಳಲು ಬರುವವರ ಪ್ರಮಾಣ ಇನ್ನೂ ಬಹಳ ಕಡಿಮೆಯಿದೆ. ಆದಿವಾಸಿ ಗುಡ್ಡಗಾಡು ಜನಸಮುದಾಯ ಸುಮಾರು ಒಟ್ಟು ಜನಸಂಖ್ಯೆಯ ಶೇ. 8.5ರಷ್ಟು ಇದೆ. ದೇಶದಲ್ಲಿ ಭೂಹೀನರ ಸಂಖ್ಯೆಯೇ 30 ಕೋಟಿಗಳಷ್ಟಿದೆ ಎಂದು ಹಿಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಯೇ ಸಂಸತ್ತಿನಲ್ಲಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಭೂಹೀನರ ಸಂಖ್ಯೆ ಅದಕ್ಕಿಂತಲೂ ಹೆಚ್ಚಿದೆ. ವಸತಿ ಹೀನರ ಸಂಖ್ಯೆ 18ಲಕ್ಷಗಳಷ್ಟಿದೆ ಎಂದು 2011ರ ಜನಗಣತಿಯ ವರದಿ ಹೇಳುತ್ತದೆ. ಆದರೆ ಇದೂ ಕೂಡ ವಾಸ್ತವ ವರದಿ ಎನ್ನಲಾಗುವುದಿಲ್ಲ. ಕಳೆದ ವರ್ಷದ ಫೆಬ್ರವರಿ ತಿಂಗಳ 19ರಂದು ಪ್ರಕಟವಾದ ‘ಇಂಡಿಯಾ ಟುಡೆ’ ವೆಬ್ ಪೇಜಿನ ವರದಿಯ ಪ್ರಕಾರ ಇಂಡಿಯಾದ ವಸತಿಹೀನರ ಸಂಖ್ಯೆ 7.8ಕೋಟಿಗಳಷ್ಟಿದೆ. ಇನ್ನೂ ಒಂದೆಡೆಯೂ ನೆಲೆ ಇಲ್ಲದ ಅಲೆಮಾರಿ ಸಮುದಾಯ ಸುಮಾರು ಹತ್ತಾರು ಕೋಟಿಗಳಿಗೂ ಹೆಚ್ಚಿದೆ. ದಲಿತದಮನಿತರು, ಮುಸ್ಲಿಮ್ ಅಲ್ಪಸಂಖ್ಯಾತ ಬಡವರು ಬಹುಪಾಲು ಜನರಿಗೆ ಭೂಮಿ, ಮನೆ ಇತ್ಯಾದಿ ಯಾವುದೇ ಆಸ್ತಿಯೂ ಇಲ್ಲದಿರುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಭಾರೀ ಊಳಿಗಮಾನ್ಯ ಹಿಂದುಳಿದಿರುವಿಕೆಯ ಪರಿಸ್ಥಿತಿಯಲ್ಲಿ ಈ ಜನಸಮುದಾಯಗಳು ತಮ್ಮ ಪೌರತ್ವ ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಸಲು ಸಾಧ್ಯವೇ?! ಅಂತಿಮವಾಗಿ ಈ ಎಲ್ಲವೂ ಸೇರಿ ದೇಶದ ಜನರ ಪೌರತ್ವವನ್ನು ಧರ್ಮ ಮಾತ್ರವಲ್ಲ ಜಾತಿಯ ಆಧಾರದಲ್ಲೂ ನಿರ್ಧರಿಸುವಂತಹ ಪರಿಸ್ಥಿತಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಂದಿಡುತ್ತದೆ.
ಬಹುತೇಕ ಮಹಿಳೆಯರಿಗೆ ಆಸ್ತಿ ಇತ್ಯಾದಿ ದಾಖಲೆಗಳೇನೂ ಇರುವುದಿಲ್ಲ. ಸಾಮಾನ್ಯವಾಗಿ ಅವರ ಹುಟ್ಟು ಹೆಸರುಗಳು ಮದುವೆಯಾದ ನಂತರ ಬದಲಾಗಿರುತ್ತವೆ. ಹಾಗಾಗಿ ಅವರಿಗೆ ಇರುವ ದಾಖಲೆಗಳೂ ಕೂಡ ಬಹಳ ಗೊಂದಲಕಾರಿಯಾಗಿ ಪರಿಣಮಿಸುತ್ತವೆ. ಅಸ್ಸಾಮಿನಲ್ಲಿನ ಉದಾಹರಣೆ ನಮಗೆ ಇದನ್ನು ಸ್ಪಷ್ಟಪಡಿಸುತ್ತದೆ. ಒಂದೇ ಕುಟುಂಬದ ಗಂಡ ಹಾಗೂ ಮಕ್ಕಳನ್ನು ಪೌರರೆಂದು ಪರಿಗಣಿಸಿದಾಗಲೂ ಹೆಂಡತಿ ಹಾಗೂ ತಾಯಿಯನ್ನು ಪೌರರಲ್ಲ ಎಂದು ತೀರ್ಮಾನಿಸಿ ಬಂಧನ ಕೇಂದ್ರಗಳಲ್ಲಿಡುವ ಸಂಗತಿಗಳು ಅಲ್ಲಿ ನಡೆದಿವೆ.
ದೇಶದಲ್ಲಿ ಇಷ್ಟೊಂದು ಗೊಂದಲಕಾರಿ ವಾತಾವರಣ ಸೃಷ್ಟಿಸಿರುವ ಇದೇ ಹೊತ್ತಿನಲ್ಲೇ ಈ ಹಿಂದೆ ಜಾರಿಗೊಳಿಸಲು ಪ್ರಯತ್ನಿಸಿ ಜನರ ಪ್ರತಿರೋಧದಿಂದಾಗಿ ಹಿಂಪಡೆದಿದ್ದ ಎಫ್‌ಆರ್‌ಡಿಐ(ಫೈನಾನ್ಸಿಯಲ್ ರೆಸೆಲ್ಯೂಷನ್ ಆ್ಯಂಡ್ ಡೆಪಾಸಿಟ್ ಇನ್ಸೂರೆನ್ಸ್ ಬಿಲ್ 2017) ಅನ್ನು ಹೊಸ ರೂಪದಲ್ಲಿ ಜಾರಿಗೊಳಿಸುವ ಕಾರ್ಯ ಬಿರುಸಾಗಿದೆ. ಅದನ್ನು ಈಗ ಎಫ್‌ಎಸ್‌ಡಿಆರ್( ಫೈನಾನ್ಸಿಯಲ್ ಸೆಕ್ಟರ್ ಡೆವಲಪ್‌ಮೆಂಟ್ ಆ್ಯಂಡ್ ರೆಗ್ಯುಲೇಷನ್ ಬಿಲ್ 2019) ಮಸೂದೆ 2019 ಎಂದು ಕರೆಯಲಾಗಿದೆ. ಈ ಮಸೂದೆ ಲೋಕ ಸಭೆಯ ಕಳೆದ ಅಧಿವೇಶನದ ಕೊನೆಯಲ್ಲಿ ಮಂಡಿತವಾಗಿ ಈಗಾಗಲೇ ಲೋಕಸಭೆಯ ಆಯ್ಕೆ ಸಮಿತಿಗೆ ಕಳಿಸಲ್ಪಟ್ಟಿದೆ ಎಂದು ಸಣ್ಣ ಮಟ್ಟದಲ್ಲಿ ವರದಿಯಾಗಿತ್ತು. ಈ ಮಸೂದೆ ಕಾಯ್ದೆಯಾಗಿ ಜಾರಿಯಾದಲ್ಲಿ ಸಾಂವಿಧಾನಿಕ ಸಂಸ್ಥೆಯಾದ ರಿಸರ್ವ್ ಬ್ಯಾಂಕಿನ ಅಸ್ತಿತ್ವವನ್ನೇ ನಗಣ್ಯಗೊಳಿಸುತ್ತದೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಹಣಕಾಸು ವ್ಯವಸ್ಥೆಯ ನಿಯಂತ್ರಣ ಪ್ರಾಧಿಕಾರವೊಂದನ್ನು ಸ್ಥಾಪಿಸಿ ಆ ಮೂಲಕ ಭಾರೀ ಕಾರ್ಪೊರೇಟು ಪರವಾಗಿ ಜನಸಾಮಾನ್ಯರ ಠೇವಣಿಗಳನ್ನು ಬೇಕೆಂದಾಗ ಉಪಯೋಗಿಸಿಕೊಳ್ಳುವ, ಭಾರೀ ಕಾರ್ಪೊರೇಟುಗಳ ಸಾಲಗಳನ್ನು ಮನ್ನಾ ಮಾಡುವ, ಕಾರ್ಪೊರೇಟುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಬಗೆಹರಿಸುವ ಇತ್ಯಾದಿ ಅಧಿಕಾರವನ್ನು ಪಡೆದುಕೊಳ್ಳಲಾಗುತ್ತದೆ. ಖಾಸಗಿಯೂ ಸೇರಿದಂತೆ ಯಾವುದೇ ಹಣಕಾಸು ಸಂಸ್ಥೆಗಳನ್ನು, ಅವುಗಳ ಸಾರ್ವಜನಿಕ ಠೇವಣಿಗಳನ್ನು ವಶಕ್ಕೆ ಪಡೆಯುವ, ವಿಲೀನಗೊಳಿಸುವ, ಮಾರುವ, ಮುಚ್ಚುವ ಇತ್ಯಾದಿ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡುತ್ತದೆ ಎಂದು ಬ್ಯಾಂಕುಗಳ ಮೂಲಗಳು ಹೇಳುತ್ತಿವೆ. ಇದನ್ನು ಇಂಡಿಯನ್ ಫೈನಾನ್ಸಿಯಲ್ ರೆಸೆಲ್ಯೂಷನ್ ಅಥಾರಿಟಿ ಎಂದು ಕರೆಯಲಾಗುತ್ತದೆ. ಆದರೆ ಇದು ಹೆಚ್ಚು ಸುದ್ದಿಯಾಗಿಲ್ಲ.
ಇದು ಮುಂದೆ ಇಂಡಿಯಾದ ಜನಸಾಮಾನ್ಯರನ್ನು ಅದರಲ್ಲೂ ಮಧ್ಯಮ, ಮೇಲ್ ಮಧ್ಯಮ ವರ್ಗದ ಜನರನ್ನು ಇನ್ನಿಲ್ಲದಂತೆ ಬರ್ಬಾದು ಮಾಡುವ ಭಾರೀ ಅಪಾಯಕಾರಿ ನಡೆಯಾಗಿದೆ. ಇದರ ವಿರುದ್ಧವೂ ಸಿಎಎ, ಎನ್‌ಪಿ ಆರ್, ಎನ್‌ಆರ್‌ಸಿ ಜೊತೆಗೆ ಒಟ್ಟುಗೂಡಿಸಿಕೊಂಡು ಜನಸಾಮಾನ್ಯರು ಗಟ್ಟಿಯಾದ ದನಿಯೆತ್ತಬೇಕಾಗಿದೆ.
ಮಿಂಚಂಚೆ: nandakumarnandana67@gmail.com