'ನಾನು ಪೊಲೀಸ್ ಕಣಪ್ಪ': ಪೊಲೀಸರೇ ಬೆಚ್ಚಿಬಿದ್ದ ಸೈಬರ್ ಪ್ರಕರಣ

Update: 2020-01-07 15:30 GMT
ಫೋಟೊ: PTI

ಬೆಂಗಳೂರು, ಜ.7: ಸಾಮಾಜಿಕ ಜಾಲತಾಣ, ಮೊಬೈಲ್ ಆ್ಯಪ್, ಆನ್‌ಲೈನ್ ಮಾರುಕಟ್ಟೆಗಳನ್ನೇ ಬಂಡವಾಳ ಮಾಡಿಕೊಂಡು, ಸೈನಿಕರ ಹೆಸರಿನಲ್ಲಿ ವಂಚಿಸುತ್ತಿದ್ದ ಸೈಬರ್ ಕಳ್ಳರು, ಪೊಲೀಸರ ಹೆಸರಿನಲ್ಲಿಯೇ ವಂಚನೆಗೆ ಇಳಿದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪೊಲೀಸ್ ಇಲಾಖೆಯ ಅಧಿಕೃತ ಇ-ಮೇಲ್‌ನಂತೆಯೇ ನಕಲಿ ಇಮೇಲ್ ಸೃಷ್ಟಿಸಿದ ಚೋರನೋರ್ವ,ದೂರುದಾರರನ್ನು ಗುರಿಯಾಗಿಸಿಕೊಂಡು, ‘ನಾನು ಪೊಲೀಸ್ ಕಣಪ್ಪ, ಠಾಣೆಗೆ ಬಂದು ಕಳುವಾಗಿರುವ ವಸ್ತು ತೆಗೆದುಕೊಂಡು ಹೋಗು’ ಎಂದು ನಂಬಿಸಿ, ಹಣ ವಸೂಲಿ ಮಾಡಿರುವುದು ಪತ್ತೆಯಾಗಿದೆ. ಹೇಗೆ ವಂಚನೆ?: ಇಲ್ಲಿನ ಶಾಂತಿನಗರದ ನಿವಾಸಿ ಸರಕಾರಿ ನೌಕರ ಮಕ್ಸೂದ್ ಎಂಬುವರು ಜುಲೈನಲ್ಲಿ ತಮ್ಮ ಸ್ಯಾಮ್‌ಸಂಗ್ ಎ50 ಮೊಬೈಲ್ ಅನ್ನು ದುಷ್ಕರ್ಮಿಗಳು ದೋಚಿದ್ದರು. ಈ ಸಂಬಂಧ ಅವರು ಪೊಲೀಸ್ ಇಲಾಖೆ ಪರಿಚಯಿಸಿರುವ ಇ-ಲಾಸ್ಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಿದ್ದರು. ಡಿ.2ರಂದು ಮುಂಬೈನ ಪೊಲೀಸ್ ಠಾಣೆಯೊಂದರಿಂದ ಮಕ್ಸೂದ್ ಅವರಿಗೆ ನೀವು ಕಳೆದುಕೊಂಡಿದ್ದ ಮೊಬೈಲ್ ಪತ್ತೆಯಾಗಿದೆ. ಅದನ್ನು ಪಡೆದುಕೊಳ್ಳಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂಜು ರಾಮನ್ ಅವರನ್ನು ಸಂಪರ್ಕಿಸಿ ಎಂದು ನಮೂದಿಸಿ ಇ-ಮೇಲ್ ಕಳುಹಿಸಿದ್ದರು. ತದನಂತರ ಮಕ್ಸೂದ್ ಅವರು, ಪಿಎಸ್ಸೈ ಸಂಜು ರಾಮನ್ ಎಂಬಾತನಿಗೆ ಕರೆ ಮಾಡಿ ಪತ್ತೆಯಾಗಿರುವ ಮೊಬೈಲ್ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆತ, ನಿಮ್ಮ ಮೊಬೈಲ್ ಅನ್ನು ಶೀಘ್ರದಲ್ಲಿ ಕಳುಹಿಸಿ ಕೊಡುತ್ತೇವೆ. ಕೊರಿಯರ್ ಶುಲ್ಕವನ್ನು ನೀವೇ ಭರಿಸಬೇಕು.

 24 ಗಂಟೆಯಲ್ಲಿ ಮೊಬೈಲ್ ತಲುಪಬೇಕಾದರೆ 900 ರೂ. ಅಥವಾ ಎರಡು ದಿನದಲ್ಲಿ ಆದರೆ 435 ರೂ. ಖರ್ಚಾಗುತ್ತಿದೆ. ಆ ಹಣವನ್ನು ಗೂಗಲ್ ಪೇನಿಂದ ಸಂದಾಯ ಮಾಡುವಂತೆ ಸೂಚಿಸಿದ್ದರು. ಅದನ್ನು ನಂಬಿ ಗೂಗಲ್ ಪೇ ಮೂಲಕ 435 ರೂ. ಸಂದಾಯ ಮಾಡಿದ್ದಾರೆ. ಹಣ ಸಂದಾಯ ಮಾಡಿದ ಎರಡು ದಿನ ಕಳೆದರೂ ದೇಸಾಯಿ ಅವರಿಗೆ ಮೊಬೈಲ್ ತಲುಪಿರಲಿಲ್ಲ. ಹಾಗಾಗಿ ಸಂಜು ರಾಮನ್ ಎಂಬಾತನಿಗೆ ಪುನಃ ತನ್ನ ಮೊಬೈಲ್ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆತ, ನೀವು ಕಳುಹಿಸಿರುವ ಹಣ ಜಮಾ ಆಗಿಲ್ಲ. ನಿಮ್ಮ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ಕೋಡ್ ಕಳುಹಿಸುತ್ತೇನೆ. ಮತ್ತೊಮ್ಮೆ ಹಣ ಕಳುಹಿಸಿ ಎಂದು ಹೇಳಿ ಇಟ್ಟಿದ್ದ. ಆದರೆ, ಈ ಬಾರಿ ಹಣ ಕಳುಹಿಸಿದ ಮಕ್ಸೂದ್ ಅವರು, ಅನುಮಾನ ಖಚಿತಪಡಿಸಿಕೊಳ್ಳುವ ಸಂಬಂಧ ಮುಂಬೈ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಓಶಿವರ್ ಠಾಣೆಯ ಸಂಖ್ಯೆ ಪಡೆದುಕೊಂಡಿದ್ದರು. ಅಲ್ಲಿನ ಠಾಣಾಧಿಕಾರಿಗೆ ಕರೆ ಮಾಡಿ ವಿಚಾರಿಸಿದಾಗ, ನಮ್ಮ ಠಾಣೆಯಲ್ಲಿ ಸಂಜು ರಾಮನ್ ಎಂಬ ಹೆಸರಿನ ಪಿಎಸ್ಸೈ ಇಲ್ಲ. ಠಾಣೆಯ ಅಧಿಕೃತ ಇ-ಮೇಲ್‌ನಿಂದ ಸಂದೇಶ ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ ಮಕ್ಸೂದ್, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ.

ಬೆಚ್ಚಿಬಿದ್ದ ಪೊಲೀಸರು !

ಸರಕಾರಿ ಇಲಾಖೆಯ ಇ-ಮೇಲ್ ಬಳಕೆ ಮಾಡಿ ವಂಚಿಸಿರುವ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದಿದ್ದಾರೆ. ಅಲ್ಲದೆ, ಮಕ್ಸೂದ್ ಅವರಿಗೆ ಕಳುಹಿಸಿದ ಇ-ಮೇಲ್ ಸರಕಾರಿ ಇಲಾಖೆಗಳು ಅಧಿಕೃತವಾಗಿ ಬಳಸುವಂತದ್ದು. ಸರಕಾರಿ ಇಲಾಖೆಗಳು ಹಾಗೂ ಅಧೀನದ ಕಚೇರಿಗಳ ಬಳಕೆಗೆ ಮಾತ್ರ ‘ಡಾಟ್ ಕೋ ಡಾಟ್ ಇನ್ ಇ-ಮೇಲ್ ಬಳಸಲು ಅವಕಾಶವಿದೆ. ಈ ಸಂಬಂಧ ಇಲಾಖೆಯ ಮುಖ್ಯಸ್ಥರು ಎನ್‌ಐಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ)ಗೆ ಪತ್ರ ಬರೆದು ಒಪ್ಪಿಗೆ ಪಡೆಯಬೇಕು. ಡಾಟ್ ಕೋ ಡಾಟ್ ಇನ್ ಇ-ಮೇಲ್ ಅನ್ನು ಎನ್‌ಐಸಿ ಸರ್ವರ್‌ನಲ್ಲಿ ಮಾತ್ರ ತಯಾರಿಸಲು ಸಾಧ್ಯ ಎನ್ನುತ್ತಾರೆ ಸೈಬರ್ ತಜ್ಞರು.

ಹ್ಯಾಕ್ ಮಾಡಿದ ವಂಚಕರು

ಸೈಬರ್ ವಂಚಕರು ದೂರುದಾರರ ಇ-ಮೇಲ್ ಹ್ಯಾಕ್ ಮಾಡಿ, ಅದರಲ್ಲಿನ ಡೇಟಾ ಕದ್ದು ಕೃತ್ಯವೆಸಗಿರುವ ಶಂಕೆಯಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News