ಬಾಪು ನಿನ್ನನ್ನು ಹೇಗೆ ಸ್ಮರಿಸಲಿ?

Update: 2020-01-29 17:56 GMT

ಸದಾ ಕಾಲ ಸಲ್ಲುವ ಒಂದು ಜೀವ ಸಾರ್ವಕಾಲಿಕ ರೂಪಕವಾಗಿ ಬಳಕೆಯಾಗುತ್ತಿದೆ ಎಂದರೆ ಅದು ನಿನ್ನ ಜೀವ ಮಾತ್ರ ಬಾಪು. ಏಕೆಂದು ಕೇಳುವೆಯಾ, ರಾಜಘಾಟದ ಸಮಾಧಿಯೊಳಗಿಂದ ಒಮ್ಮೆ ಇಣುಕಿ ನೋಡು ನಿನಗೇ ಅರಿವಾಗುತ್ತದೆ. ನಿನ್ನ ಸುಟ್ಟ ದೇಹದ ಅಸ್ಥಿಯ ಮೇಲೆ ನಿರ್ಮಿಸಿರುವ ಭವ್ಯ ಸಮಾಧಿಯಲ್ಲಿ ಸಾಕಷ್ಟು ತೂತುಗಳಿವೆ. ಒಳನೋಟವಿದ್ದರೆ ಈ ರಂಧ್ರಗಳಿಂದ ಇಣುಕಿ ನೋಡಲು ಸಾಧ್ಯ ಬಾಪು. ನಿನ್ನ ಸಮಾಧಿಯ ಮುಂದೆ ವರ್ಷದಲ್ಲಿ ಎರಡು ಬಾರಿ ಕೈಕಟ್ಟಿ ಕುಳಿತು ‘‘ವೈಷ್ಣವ ಜನತೋ ....’’ ಹಾಡುವ ಭಕ್ತವೃಂದ ಬಹುಶಃ ದಿನನಿತ್ಯವೂ ನೀ ಹೇಳಿಕೊಟ್ಟ ‘‘ಈಶ್ವರ್ ಅಲ್ಲಾಹ್ ತೇರೋ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’’ ಶ್ಲೋಕವನ್ನು ಹಾಡುತ್ತಿರುತ್ತಾರೆ. ನೀ ಕಂಡ ಕನಸಿನ ಭಾರತದಲ್ಲಿ ಈಶ್ವರನೂ ಇದ್ದಾನೆ, ಅಲ್ಲಾಹುವೂ ಇದ್ದಾನೆ ಎಲ್ಲೆಡೆ, ಎಲ್ಲ ಜನರ ಮನಸಿನಲ್ಲಿ, ಎಲ್ಲ ಗಲ್ಲಿಗಳಲ್ಲಿದ್ದಾರೆ. ಆದರೆ ನೀ ಪೂಜಿಸಿದ ಭಗವಾನ್‌ಸನ್ಮತಿಯನ್ನೇ ಕಸಿದುಕೊಂಡಂತಿದೆ. ಮತಿಹೀನರೊಡನೆ ಬದುಕುತ್ತಿದ್ದೇವೆ ಬಾಪು, ಇನ್ನು ಸನ್ಮತಿಯೆಲ್ಲಿ ಕಂಡೀತು. ನಿನಗೆ 150 ವರ್ಷ ತುಂಬಿತೆಂದು ಇಡೀ ದೇಶದಲ್ಲಿ ತಳಿರು ತೋರಣಗಳೇನಾದರೂ ಕಂಡಿತೇ? ಪಾಪ ನೀನು ಅದೆಷ್ಟು ಕಾತರದಿಂದ ಆ ಸಂಭ್ರಮವನ್ನು ವೀಕ್ಷಿಸಲು ಹಪಹಪಿಸುತ್ತಿದ್ದೆಯೋ? ಹೀಗೆ ಬಂದು ಹಾಗೆ ಹೋಗಿಬಿಟ್ಟಿತು ಅಕ್ಟೋಬರ್ 2.

ಏನು ಮಾಡುವುದು ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವ ಮನಸ್ಸುಗಳ ಆಂತರ್ಯದಲ್ಲಿ ನೀ ಬೋಧಿಸಿದ ಭ್ರಾತೃತ್ವ, ಸೌಹಾರ್ದ, ಮಾನವ ಪ್ರೇಮ ಕಾಣುವುದಿಲ್ಲ. ನಿನ್ನ 150ನೆಯ ಹುಟ್ಟುಹಬ್ಬದಂದು ಮನದಾಳದಲ್ಲಿ ಮಡುಗಟ್ಟಿರುವ ಕಲ್ಮಷವನ್ನು, ಮಾಲಿನ್ಯವನ್ನು ಗುಡಿಸಿಹಾಕುವ ಪ್ರತಿಜ್ಞೆ ಸ್ವೀಕರಿಸಬೇಕಿತ್ತು. ಆದರೆ ಎಲ್ಲರೂ ಪೊರಕೆ ಹಿಡಿದುಬಿಟ್ಟರು. ಸ್ವಚ್ಛ ಭಾರತಕ್ಕಾಗಿ. ನಿನಗೆ ಕಾಣಲಿಲ್ಲವೇ ? ನಿನ್ನ ಸಮಾಧಿಯ ಸುತ್ತ ಚುರುಚುರು ಸದ್ದುಮಾಡುತ್ತಾ ಹರಡುತ್ತಿದ್ದ ತರಗೆಲೆಗಳನ್ನು ಗುಡಿಸುವಾಗ ನೀ ಗಮನಿಸಬೇಕಿತ್ತು. ನವ ಯುಗದ ಡಿಜಿಟಲ್ ಸೆಲ್ಫಿಗಳಿಗಾಗಿ ಮಾರುದ್ದದ ಪೊರಕೆ ಹಿಡಿದವರು ಗುಡಿಸಿದ್ದು ತರಗೆಲೆಗಳನ್ನಲ್ಲ. ನಿನ್ನ ನೆನಪುಗಳನ್ನು. ಮತ್ತೊಂದೆಡೆ ದಿನನಿತ್ಯ ತಮ್ಮ ಕೂಳಿಗಾಗಿ, ನಾಳಿಗಾಗಿ ಪೊರಕೆ ಹಿಡಿದು ಗಲ್ಲಿಗಲ್ಲಿಗಳಲ್ಲಿ ಗುಡಿಸುವ ಎಲುಬಿನ ಗೂಡುಗಳಿಗೆ ನಿನ್ನ ನೆನಪೇ ಇರುವುದಿಲ್ಲ. ಅವರು ಗುಡಿಸುವುದು ಸೋದರ ಸೋದರಿಯರು ಬಿಸಾಡಿದ ತ್ಯಾಜ್ಯವನ್ನು. ‘‘ಏ ಕಸಾ...’’ ಎಂದು ಕೂಗಿ ತಮ್ಮ ಮನೆಯ ತ್ಯಾಜ್ಯವನ್ನು ತೊಟ್ಟಿಗೆ ಸುರಿದು ಕೂಡಲೇ ಡೆಟಾಲ್ ಹಾಕಿ ಕೈತೊಳೆಯುವ ಸುಶಿಕ್ಷಿತರಿಗೆ ನಿನ್ನ ನೆನಪಿರುತ್ತದೆ. ಈ ಎರಡು ಧ್ರುವಗಳ ನಡುವೆ ಅರಬೀ ಸಮುದ್ರದಲ್ಲಿರುವ ನೀರಿಗಿಂತಲೂ ಹೆಚ್ಚಿನ ಬೆವರು ಸದ್ದಿಲ್ಲದೆ ಹರಿದುಹೋಗಿದೆ. ತಮ್ಮ ಕೈಗಳನ್ನು ಸ್ವಚ್ಛಗೊಳಿಸಿ, ತಾವು ತಿಂದುಳಿದಿದ್ದನ್ನು ಕಸ ಹೆಕ್ಕುವವರಿಗೆ ನೀಡುತ್ತಾ ಔದಾರ್ಯ ಮೆರೆಯುವ ಮನಸ್ಸುಗಳಿಗೆ ಧನ್ಯತೆಯ ಭಾವ ತುಂಬಿ ತುಳುಕುತ್ತದೆ. ಆದರೆ ಅವರ ಕಣ್ಣುಗಳೇಕೊ ಮಂಜಾಗಿಬಿಟ್ಟಿವೆ ಕಸ ಹೆಕ್ಕುವವನ ಕೈಕಾಲುಗಳತ್ತ ಹಾಯುವುದೇ ಇಲ್ಲ. ನಿತ್ಯ ಕಾಯಕವಲ್ಲವೇ, ದಾಸೋಹದ ಭ್ರಮೆಯಲ್ಲಿ ಆತ್ಮತೃಪ್ತಿಗೆ ಶರಣಾಗಿಬಿಡುತ್ತಾರೆ.

ನೀ ಹುಟ್ಟಿದ ದಿನ ಭಾರತದ ಸ್ವಚ್ಛ ರೂಪದ ವಿರಾಟ್ ದರ್ಶನವಾಯಿತೆಂದು ಭಾವಿಸಿದೆಯಾ ಬಾಪು? ಅದಕ್ಕೇ ಹೇಳಿದ್ದು ಒಮ್ಮೆ ಇಣುಕಿ ನೋಡು ಎಂದು. ಬಯಲು ಶೌಚಗಳು ಕಾಣಲಿಕ್ಕಿಲ್ಲ ಆದರೆ ಬಯಲು ಮಸಣಗಳು ಕಾಣುತ್ತವೆ. ಲಕ್ಷಾಂತರ ಜನರ ಮಲ ಮೂತ್ರಗಳ ಕಾಲುವೆಗಳು ಹರಿಯುವ ಭರತ ಭೂಮಿಯ ಗರ್ಭದಲ್ಲಿ ನೂರಾರು ಜೀವಗಳೂ ಉಸಿರುಗಟ್ಟಿ ಸಾಯುತ್ತಿವೆ. ‘‘ಅದು ಅವರ ಕೆಲಸ’’ ಎನ್ನುವವರೇ ಹೆಚ್ಚು, ‘‘ಅವರ ಕರ್ಮ’’ ಎನ್ನುವವರಿಗೂ ಕೊರತೆಯಿಲ್ಲ. ಆದರೂ ಈ ಜೀವಗಳು ನಿನ್ನೆಡೆಗೆ ಪಯಣ ಬೆಳೆಸುತ್ತಲೇ ಇವೆ. ಅಡ್ಡಿಯಿಲ್ಲ ಬಾಪು ನಾವು ಘೋಷಿಸಿರುವುದು ಬಯಲು ಶೌಚ ಮುಕ್ತ ಭಾರತವನ್ನು, ಬಯಲು ಮಸಣ ಮುಕ್ತ ಭಾರತ ಅಲ್ಲ. ಹೆಣಗಳು ಉರುಳುತ್ತಲೇ ಇರುತ್ತವೆ. ಜಾತಿಯೋ, ಧರ್ಮವೋ ಶವಗಳಿಗೆ ಯಾವ ಅಸ್ಮಿತೆ. ಮಲಗುಂಡಿಗಳೊಳಗೆ ಇಳಿದು ಶುಚಿಗೊಳಿಸುವುದು, ಪಾಪ ಅವರ ಜನ್ಮಕ್ಕಂಟಿದ ಕಾಯಕ. ‘‘ಇನ್ನೇನು ನಾವು ಮಾಡೋಕಾಗುತ್ತೇ...’’ ಎನ್ನುವ ಕರ್ಮಠ ಮನಸ್ಸುಗಳಿಗೆ, ಇದೇ ಜನ್ಮಕ್ಕಂಟಿದ ಕಾಯಕ ಮಾಡುತ್ತಿದ್ದ ಉನಾ ಗ್ರಾಮದ ಅಮಾಯಕರು ಮನುಷ್ಯರಾಗಿ ಕಾಣಲೇ ಇಲ್ಲ ಬಾಪು. ಕೆಲವೊಮ್ಮೆ ನಿನ್ನ ಕಣ್ಣುಗಳೂ ಮಂಜಾಗಿಬಿಡುತ್ತವೆ. ದನದ ಚರ್ಮ ಸುಲಿದರೆಂದು ಇವರ ಚರ್ಮವನ್ನೇ ಸುಲಿದುಬಿಟ್ಟರು. ನೀನು ಸತ್ಯಮೇವ ಜಯತೇ ಎನ್ನುತ್ತಿದ್ದೆಯಲ್ಲವೇ, ಇಲ್ಲಿ ಸತ್ಯದ ಸಮಾಧಿಯಾಗಿತ್ತು.

 ಬಾಪು ನಿನಗೆ ಗೊತ್ತೇ, ನಾವೆಷ್ಟು ಪ್ರಬುದ್ಧರಾಗಿದ್ದೇವೆ. ನೀನು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದೆ. ಈಗ ಈ ದೇಶವನ್ನೊಮ್ಮೆ ನೋಡು ಬಾ. ನಿನಗೆ ಎಲ್ಲೆಡೆ ದೇಶದ್ರೋಹಿಗಳೇ ಕಾಣಬಹುದು. ಒಂದು ಕಾಲದಲ್ಲಿ ನೀನು, ಭಗತ್ ಸಿಂಗ್, ನೆಹರೂ, ತಿಲಕ್, ಪಟೇಲ್ ಇನ್ನೂ ಅಸಂಖ್ಯಾತ ಹೋರಾಟಗಾರರು ದೇಶದ್ರೋಹಿ ಪಟ್ಟ ಪಡೆದಿದ್ದರು. ನಿನ್ನ ಪ್ರತಿರೋಧದ ದನಿ ಬ್ರಿಟಿಷರಿಗೆ ಅಪಥ್ಯವಾಗಿತ್ತು. ಇಂದು ಬ್ರಿಟಿಷರಿಲ್ಲ, ವಿಕ್ಟೋರಿಯಾ ರಾಣಿ ಇಲ್ಲ, ಜನರಲ್ ಡೈಯರ್ ಇಲ್ಲ. ಆದರೂ ದೇಶದ್ರೋಹದ ಹಣೆಪಟ್ಟಿ ರೇಷನ್ ಕಾರ್ಡಿನಂತೆ ವಿತರಣೆಯಾಗುತ್ತಿದೆ. ನಾಲ್ಕಕ್ಷರದ ಕವಿತೆ, ಒಂದೆರಡು ಸೌಹಾರ್ದದ ಮಾತು, ಕ್ಷಣ ಮಾತ್ರದ ಪ್ರತಿರೋಧ, ಮೂರು ನಾಲ್ಕು ಸಾಲುಗಳ ಸಂದೇಶ ಇಷ್ಟೇ ಸಾಕು ನಿನ್ನ ಕನಸಿನ ದೇಶದಲ್ಲಿ ದೇಶದ್ರೋಹಿಗಳನ್ನು ಸೃಷ್ಟಿಸಲು. ಅರ್ಥವೇ ಆಗುತ್ತಿಲ್ಲ ಬಾಪು. ನಿನಗೆ ಜಲಿಯನ್ ವಾಲಾಬಾಗ್ ನೆನಪಿದೆಯಲ್ಲವೇ? ಡೈಯರ್ ಹೇಗೆ ಸುಟ್ಟುಹಾಕಿಬಿಟ್ಟ. ಇಂದು ಸ್ವದೇಶಿ ಡೈಯರ್‌ಗಳು ಸುಟ್ಟುಹಾಕುವ ಮಾತುಗಳನ್ನಾಡುತ್ತಿದ್ದಾರೆ. ಅಳಿಸಿಹಾಕುತ್ತೇವೆ ಎನ್ನುತ್ತಾರೆ, ಕ್ಷಣ ಮಾತ್ರದಲ್ಲಿ ಬೂದಿ ಮಾಡುತ್ತೇವೆ ಎನ್ನುತ್ತಾರೆ. ಅವರು ದೇಶಪ್ರೇಮಿಗಳಲ್ಲವೇ? ದೇಶಕ್ಕಾಗಿ ಏನೆಲ್ಲಾ !

ಆದರೆ ಅಲ್ಲಿ ನೋಡು ಈ ದೇಶ ನಮ್ಮದೇ ಅನ್ನೋರೆಲ್ಲಾ ದೇಶದ್ರೋಹಿ ಆಗುತ್ತಿದ್ದಾರೆ. ನಿನಗೆ ಅರಿವಾಗದ ಸತ್ಯ ಒಂದಿದೆ ಬಾಪು. ಇಂದು ನೀನೆಣಿಸಿದ ಭಾರತೀಯರೇ ಕಾಣುವುದಿಲ್ಲ. ಅಪ್ಪಂದಿರ, ಅಜ್ಜಂದಿರ ಜಾಡು ಹುಡುಕಲು ಹವಣಿಸುತ್ತಿರುವ ದೊಡ್ಡ ಪಡೆಯೇ ಸಿದ್ಧವಾಗಿಬಿಟ್ಟಿದೆ. ನಿನ್ನನ್ನೂ ಬಿಟ್ಟಿಲ್ಲ. ನೋಡು ನಿನ್ನ ಆಪ್ತ ಶಿಷ್ಯ ಪಟೇಲರನ್ನು ನಿನ್ನ ಪರಮಾಪ್ತ ಶಿಷ್ಯ ನೆಹರೂ ವಿರುದ್ಧ ನಿಲ್ಲಿಸಿಬಿಟ್ಟಿದ್ದಾರೆ. ಪಟೇಲರ ಪ್ರತಿಮೆ ಕಾಣುವುದಲ್ಲವೇ? ನಿನ್ನ ಆಶ್ರಮದ ಸಮೀಪದಲ್ಲೇ ಇದೆ. ನಿನಗೇನೂ ವಿನಾಯಿತಿ ನೀಡಿಲ್ಲ. ನಿನ್ನ ಮತ್ತೊಬ್ಬ ಶಿಷ್ಯ ಲಾಲ್ ಬಹದೂರ್ ಶಾಸ್ತ್ರಿಯನ್ನು ನಿನ್ನ ಪ್ರತಿಸ್ಪರ್ಧಿಯನ್ನಾಗಿ ಅಖಾಡಕ್ಕೆ ಇಳಿಸಿಬಿಟ್ಟಿದ್ದಾರೆ. ಅದಕ್ಕೇ ನಿನ್ನ ಜನ್ಮದಿನದಂದು ರಸ್ತೆಗಳು ಸ್ವಚ್ಛವಾದವು, ಕಲುಷಿತ ಮನಸ್ಸುಗಳು ನಿನ್ನ ಸಮಾಧಿಯ ಮುಂದೆ ಭಜನೆ ಮಾಡುತ್ತಿದ್ದವು. ನಿನ್ನನ್ನು ಸ್ವಾತಂತ್ರ್ಯ ಶಿಲ್ಪಿಎಂದು ಕರೆಯುತ್ತಿದ್ದರಲ್ಲವೇ? ಈಗ ದೂರದ ಕೇರಿಯಲ್ಲಿ ಮಗು ವಾಂತಿ ಭೇದಿ ಮಾಡಿದರೂ ನೀನೇ ಕಾರಣವಾಗಿಬಿಡುತ್ತೀಯ. ಇಲ್ಲವಾದರೆ ನಿನ್ನ ಶಿಷ್ಯ ನೆಹರೂ ಕಾರಣವಾಗಿಬಿಡುತ್ತಾರೆ. ಎಲ್ಲವೂ ಬದಲಾಗಿಬಿಟ್ಟಿದೆ ಬಾಪು. ನೀನು ಕಟ್ಟಿದ ಸಬರಮತಿ ಇಂದು ಮತಿಹೀನರ ವಶದಲ್ಲಿದೆ. ನಿನ್ನ ಚರಕದಲ್ಲಿ ನೂಲು ಕಾಣುತ್ತಿಲ್ಲ. ಚಕ್ರ ತಿರುಗುವಾಗ ನೆತ್ತರು ತೊಟ್ಟಿಕ್ಕುವ ಸದ್ದು ಕೇಳುತ್ತದೆ. ಸರಳತೆಗಾಗಿಯೋ, ತತ್ವಕ್ಕೆ ಬದ್ಧನಾಗಿಯೋ ನೀನು ಬಹುತೇಕ ವಿವಸ್ತ್ರನಾಗಿಬಿಟ್ಟೆ. ಆದರೆ ನೀನು ಹೊದ್ದುಕೊಂಡಿದ್ದ ಮೌಲ್ಯಗಳು ಮಹಾತ್ಮನನ್ನು ಸೃಷ್ಟಿಸಿದ್ದವು. ಇಂದು ನಿನ್ನನ್ನೇ ಬೆತ್ತಲಾಗಿಸುವ ಮಟ್ಟಿಗೆ ಎಲ್ಲವನ್ನೂ ನಿನ್ನ ಸಮಾಧಿಯ ಅಕ್ಕಪಕ್ಕದಲ್ಲೇ ಹುಗಿದುಹಾಕಿಬಿಟ್ಟಿದ್ದಾರೆ.

ನೀ ತೊಟ್ಟಿದ್ದ ಕರಿ ಕೋಟನ್ನು ದೇಶದ ವಿಮೋಚನೆಗಾಗಿ ತ್ಯಾಗ ಮಾಡಿದೆ. ಇಂದೊಮ್ಮೆ ಅಂಗಳಕ್ಕೆ ಬಂದು ನೋಡು ಬಾಪು. ನ್ಯಾಯಾಂಗ ಉಸಿರಾಡುತ್ತಿದೆ ಆದರೆ ನ್ಯಾಯ ಅಂಗಹೀನವಾಗುತ್ತಿದೆ. ನಿನ್ನ ಕರಿ ಕೋಟಿನ ಸಂತತಿಯಲ್ಲೇ ದ್ವೇಷ ಅಸೂಯೆ ಮತ್ಸರ ತಾಂಡವವಾಡುತ್ತಿದೆ. ಆರೋಪಿಯನ್ನು ಅಪರಾಧಿ ಎಂದು ನಿರ್ಧರಿಸುವುದು ನ್ಯಾಯಾಧೀಶರಷ್ಟೇ ಎಂದು ನೀನು ಇನ್ನೂ ಭಾವಿಸಿದ್ದರೆ ಅದು ನಿನ್ನ ಭ್ರಮೆ. ಇಂದು ಕರಿ ಕೋಟು ಧರಿಸಿದವರೇ ನಿರ್ಧರಿಸುತ್ತಾರೆ. ಪ್ರತಿರೋಧ ಅಪರಾಧವಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ, ಆರೋಪಿ ಎನ್ನುವ ಪದವೇ ಇಲ್ಲವಾಗಿದೆ. ನೇರವಾಗಿ ಅಪರಾಧಿಗಳನ್ನೇ ಗುರುತಿಸಲಾಗುತ್ತಿದೆ. ಬಹುಶಃ ನೀನೇ ಇಲ್ಲಿದ್ದಿದ್ದರೂ ಕಟಕಟೆಯಲ್ಲಿ ನಿಂತುಬಿಡುತ್ತಿದ್ದೆ. ಏಕೆಂದರೆ ವಿಕ್ಟೋರಿಯಾ ರಾಣಿಯ ಛಾಯೆ ದಟ್ಟವಾಗುತ್ತಿದೆ. ಜನರಲ್ ಡೈಯರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಧೃತಿಗೆಡಬೇಡ ಬಾಪು, ಭಾರತದ ನೆಲದಲ್ಲಿ ಪ್ರಜಾತಂತ್ರ ಇನ್ನೂ ಉಸಿರಾಡುತ್ತಿದೆ. ನೆಲದಾಳದಲ್ಲಿ ಹುದುಗಿದ್ದ ಭಾವಸ್ಫೂರ್ತಿ ಸಿಡಿದೆದ್ದು ಮೊಳಗುತ್ತಿವೆ. ಈ ದನಿಗಳಿಗೊಂದು ದನಿ ಬೇಕಿದೆ. ಅದು ನಿನ್ನಿಂದಲೇ ಸಾಧ್ಯ. ನಿನ್ನ ಅನುಯಾಯಿಗಳಿಂದ ಸಾಧ್ಯವಾಗದು.

ರಾಜಘಾಟದಲ್ಲಿ ಹುದುಗಿರುವ ನಿನ್ನ ಅಸ್ಥಿ ಮೇಲೆದ್ದು ಬರಲಾರದು. ನೀನು ಸಮಾಧಿಯ ರಂಧ್ರಗಳಿಂದ ಇಣುಕಿ ನೋಡುವೆಯೋ ಇಲ್ಲವೋ ತಿಳಿಯದು. ಆದರೂ ನಿನ್ನ ಅಸ್ಥಿಯ ಕಣಕಣಗಳಲ್ಲಿ ಅಡಗಿರುವ ಮಾನವತೆಯ ಮೌಲ್ಯಗಳನ್ನಾದರೂ ಹೊರಹಾಕಿಬಿಡು. ಗಾಳಿಯಲ್ಲಿ ಹಾರುವಂತೆ ಎಸೆದುಬಿಡು. ರಸ್ತೆಯಲ್ಲಿ ಬಿದ್ದರೆ ಸ್ವಚ್ಛ ಭಾರತದ ಪೊರಕೆಗಳು ಅವನ್ನೂ ಗುಡಿಸಿಹಾಕಿಬಿಡುತ್ತವೆ. ಆ ಮೌಲ್ಯದ ತುಣುಕುಗಳನ್ನು ಮುಷ್ಟಿಯೊಳಗೆ ಹಿಡಿದಿಟ್ಟುಕೊಳ್ಳಲು ಸಹಸ್ರಾರು ಕೈಗಳು ಮುಂದಾಗುತ್ತವೆ. ಈ ಕೈಗಳಿಗೆ ಕೋಳ ಬೀಳುವ ಮುನ್ನ ಎಸೆದುಬಿಡು. ಕಡಲ ಪಾಲಾಗುವುದು ಬೇಡ. ನಿನ್ನ ಕನಸಿನ ಭಾರತ ನೀನೆಣಿಸಿದಂತಿರಬೇಕಲ್ಲವೇ? ನಿನ್ನ ಹಂತಕನೂ ಪೂಜನೀಯವಾಗಿರುವ ಸಂದರ್ಭದಲ್ಲಿ ನಿನ್ನನ್ನು ಹೇಗೆ ಸ್ಮರಿಸಲಿ ಬಾಪು? ನಿನ್ನ ಹತ್ಯೆ ನಡೆಯುತ್ತಲೇ ಇದೆ, ನಿತ್ಯ ನಿರಂತರವಾಗಿ. ಎಲ್ಲ ಹಂತಕರೂ ಪೂಜನೀಯವಾಗಿಬಿಡುತ್ತಾರೆ. ನೀನು ಜನಮಾನಸದ ಸ್ಮರಣೆಯಲ್ಲಿ ಅಡಗಿ ಕುಳಿತುಬಿಡು. ರಾಜಘಾಟವೂ ಇಲ್ಲವಾಗಬಹುದು. ನಿನ್ನ ನೆನಪು ಹಸಿರಾಗಿಯೇ ಇರುತ್ತದೆ. ನಮಸ್ತೆ ಬಾಪು !

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News