ಗಾಂಧಿ ತತ್ವ-ಆದರ್ಶಗಳನ್ನು ಅನುಸರಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಕರೆ

Update: 2020-01-30 12:54 GMT

ಬೆಂಗಳೂರು, ಜ. 30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.

ಗುರುವಾರ ಗಾಂಧಿ ಪುಣ್ಯತಿಥಿ ಸಂದರ್ಭ ಆಚರಿಸಲಾಗುತ್ತಿರುವ ಹುತಾತ್ಮ ದಿನ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸತ್ಯ ಅಹಿಂಸೆ ಪ್ರತಿಪಾದಿಸಿದ ಹಾಗೂ ಅದರಂತೆ ಬದುಕಿ ತೋರಿಸಿದ ಮಹಾನ್‌ವ್ಯಕ್ತಿ ಗಾಂಧೀಜಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹಾಗೂ ಸರ್ವ ಜನಾಂಗದ ಏಳ್ಗೆಗಾಗಿ ದುಡಿದದ್ದು ಒಂದು ಇತಿಹಾಸ. ಅವರು ಒಬ್ಬ ವ್ಯಕ್ತಿಯಾಗಿರದೆ ಮಹಾನ್ ಚೇತನವೇ ಆಗಿದ್ದರು. ಜನಸೇವೆ, ಸರಳತೆ, ಸ್ವಚ್ಛತೆ ಅವರ ಜೀವನ ಕ್ರಮವಾಗಿತ್ತು. ಸಮಾನತೆ ಹಾಗೂ ಸಹಿಷ್ಣುತೆಯ ಅಂಶವನ್ನು ಹೊಂದಿದ್ದವರು. ಗ್ರಾಮ ಸ್ವರಾಜ್ ಕನಸು ಕಂಡಿದ್ದ ಅವರು ಗ್ರಾಮೀಣ ಬದುಕಿನ ಉನ್ನತೀಕರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ನಂಬಿದ್ದರು ಎಂದು ಸ್ಮರಿಸಿದರು.

ಗಾಂಧೀಜಿಯವರ ತತ್ವ-ಆದರ್ಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವರ ಕೊಡುಗೆಯನ್ನು ಆಧರಿಸಿ ಅನುಸರಿಸಬೇಕು. ಇಂದು ಗಾಂಧೀಜಿ ನಮ್ಮ ಬದುಕಿನ ಸ್ಫೂರ್ತಿಯಾಗಿದ್ದಾರೆ. ಅವರ ವಿಚಾರಧಾರೆಗಳು ಸಾರ್ವಕಾಲಿಕ ಹಾಗೂ ಪ್ರಸ್ತುತ. ಜಾತ್ಯತೀತ ಹಾಗೂ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ ಅವರ ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಅರಣ್ಯ ಸಚಿವ ಸಿ.ಸಿ.ಪಾಟೀಲ್, ಶಾಸಕ ಚಂದ್ರಪ್ಪ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News