ವಿಮಾ ನಿಗಮದ ಜೀವವಿಮೆಯ ಕನಸು

Update: 2020-02-11 18:30 GMT

ಭಾಗ-2

 1956ರಲ್ಲಿ ರಾಷ್ಟ್ರೀಕರಣವಾಗಿ ಸ್ಥಾಪನೆಯಾದ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 5 ಕ್ಷೇತ್ರೀಯ ಕಚೇರಿಗಳು, 33 ಪ್ರಾದೇಶಿಕ ಕಚೇರಿಗಳು, 168 ಶಾಖೆಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ವಿಮಾ ಕ್ಷೇತ್ರದ ವೈವಿಧ್ಯಮಯ ಸೇವಾ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲಾಯಿತು. ಕಾಲಕ್ರಮೇಣ ಹೆಚ್ಚಿನ ಶಾಖೆಗಳನ್ನು ತೆರೆಯುವ ಮೂಲಕ ಸೇವಾ ಸೌಲಭ್ಯಗಳನ್ನು ಶಾಖೆಗಳಿಗೆ ವರ್ಗಾಯಿಸಲಾಗಿತ್ತು. 1957ರಲ್ಲಿ ಇನ್ನೂರು ಕೋಟಿ ರೂ. ವಹಿವಾಟಿನಿಂದ ಆರಂಭಿಸಿದ ಎಲ್‌ಐಸಿ 1,000 ಕೋಟಿ ರೂ. ತಲುಪಿದ್ದು 1969-70ರಲ್ಲಿ. ಹತ್ತು ವರ್ಷಗಳ ನಂತರ 1980ರಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ತಲುಪಿತ್ತು. 1980ರ ದಶಕದಲ್ಲಿ ಸಂಸ್ಥೆಯ ಪುನಾರಚನೆಯ ಕಾರ್ಯ ತೀವ್ರತೆ ಪಡೆದ ನಂತರ 1985-86ರ ವೇಳೆಗೆ ಸಂಸ್ಥೆಯ ವಹಿವಾಟು 7,000 ಕೋಟಿ ರೂ. ದಾಟಿತ್ತು. ಇಂದು ದೇಶಾದ್ಯಂತ 2,048 ಗಣಕೀಕೃತ ಶಾಖೆಗಳು, 113 ಪ್ರಾದೇಶಿಕ ಕಚೇರಿಗಳು, 8 ಕ್ಷೇತ್ರೀಯ ಕಚೇರಿಗಳು ಮತ್ತು 1,381 ಉಪ ಕಚೇರಿಗಳನ್ನು ಹೊಂದಿರುವ ಎಲ್‌ಐಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ.

 ತನ್ನ ಆರು ದಶಕಗಳ ಇತಿಹಾಸದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೆದುರಿಸುತ್ತಾ ಆಡಳಿತ ವ್ಯವಸ್ಥೆಯೊಡನೆ ತನ್ನ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಾ ಮುನ್ನಡೆಯುತ್ತಿರುವ ಜೀವ ವಿಮಾ ನಿಗಮದ ಒಟ್ಟು ಆಸ್ತಿ 31.11 ಲಕ್ಷ ಕೋಟಿ ರೂ.ಗಳಷ್ಟಿದೆ. 32 ವಿಮಾ ಯೋಜನೆಗಳನ್ನು ಜಾರಿಯಲ್ಲಿರಿಸಿಕೊಂಡಿರುವ ಎಲ್‌ಐಸಿ ದೇಶದ ವಿಮಾ ಉದ್ಯಮದಲ್ಲಿ ಶೇ. 73.1ರಷ್ಟು ವಹಿವಾಟು ನಡೆಸುತ್ತಿದೆ. 1956ರಲ್ಲಿ ಐದು ಕೋಟಿ ರೂ.ಗಳ ಬಂಡವಾಳದಿಂದ ಆರಂಭವಾದ ಎಲ್‌ಐಸಿ ಇಂದು 31,11,847.28 ಕೋಟಿ ರೂ.ಗಳಷ್ಟು ಆಸ್ತಿಯನ್ನು ಹೊಂದಿದ್ದು ಜೀವ ವಿಮೆಯ ನಿಧಿಯೇ 28,28,320.12 ಕೋಟಿ ರೂ.ಗಳಷ್ಟಿದೆ. 4,851 ಕಚೇರಿಗಳನ್ನು ಸ್ಥಾಪಿಸಿರುವ ಜೀವ ವಿಮಾ ನಿಗಮ 11.79 ಲಕ್ಷ ಏಜೆಂಟರಿಗೆ ಬದುಕು ನೀಡಿದೆ. 1,11,979 ಕಾರ್ಮಿಕರಿಗೆ ಬದುಕು ನೀಡಿದೆ. ಇದರ ಪೈಕಿ 24,510 ಮಹಿಳಾ ನೌಕರರಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯರಿಗಾಗಿ ಒದಗಿಸುವ ಮೂಲ ಸೌಕರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಎಲ್‌ಐಸಿ ತನ್ನದೇ ಆದ ಪಾತ್ರ ವಹಿಸಿದೆ. ಸರಕಾರಕ್ಕೆ ಸಾಲ ಒದಗಿಸುವುದೇ ಅಲ್ಲದೆ ಸಾರ್ವಜನಿಕ ಮೂಲ ಸೌಕರ್ಯಗಳಲ್ಲಿ ಕೋಟ್ಯಂತರ ರೂ.ಗಳ ಬಂಡವಾಳವನ್ನು ಎಲ್‌ಐಸಿ ಹೂಡಿದೆ. ಕೇಂದ್ರ ಸರಕಾರದ ಪಂಚ ವಾರ್ಷಿಕ ಯೋಜನೆಗಳಲ್ಲಿಯೂ ಬಂಡವಾಳ ಹೂಡಿರುವ ಎಲ್‌ಐಸಿ 2017-22ರ ಯೋಜನೆಯಲ್ಲಿ 28,01,483 ಕೋಟಿ ರೂ. ಹೂಡಿದೆ. ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ 184 ಕೋಟಿ ರೂ.ಗಳಿಂದ ಆರಂಭವಾದ ಈ ಪಯಣ ಇಲ್ಲಿಯವರೆಗೂ ಮುಂದುವರಿದಿರುವುದೇ ಜೀವ ವಿಮಾ ನಿಗಮದ ಮತ್ತು ಆ ಕಾರ್ಮಿಕರ ಹೆಗ್ಗಳಿಕೆ.

ನವ ಉದಾರವಾದದ ಪ್ರಹಾರ

ಭಾರತದ ಅರ್ಥ ವ್ಯವಸ್ಥೆಗೆ ಸಾರ್ವಜನಿಕ ಉದ್ದಿಮೆಗಳು ಕಾಮಧೇನುವಿನಂತಾದರೆ ವಿಮೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಕಲ್ಪವೃಕ್ಷವಿದ್ದಂತೆ. ಆದರೆ ಈ ಎರಡೂ ಬೃಹತ್ ಕ್ಷೇತ್ರಗಳನ್ನು ಬರಡು ಮಾಡಲು ಮುಂದಾಗಿರುವುದು ನವ ಉದಾರವಾದಿ ಆರ್ಥಿಕ ನೀತಿ ಮತ್ತು ಹಣಕಾಸು ಬಂಡವಾಳದ ಆಧಿಪತ್ಯ. ವಿಮೆ ಮತ್ತು ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದಕ್ಕೆ ಸರಕಾರದ ಮುಂದೆ ಸಾಕಷ್ಟು ಅಡ್ಡಿ ಆತಂಕಗಳಿದ್ದರೂ ಕಳೆದ ಮೂರು ದಶಕಗಳಲ್ಲಿ, ವಿಶೇಷವಾಗಿ 2001ರ ನಂತರದ ದಿನಗಳಲ್ಲಿ ಖಾಸಗೀಕರಣ ಪ್ರಕ್ರಿಯೆ ವಿಭಿನ್ನ ಆಯಾಮಗಳನ್ನು ಪಡೆದಿದೆ. ವಿಮಾ ಕ್ಷೇತ್ರದಲ್ಲಿ ಖಾಸಗಿ/ವಿದೇಶಿ ಬಂಡವಾಳಕ್ಕೆ ಅವಕಾಶ ನೀಡುವ ಮೂಲಕ ಜೀವ ವಿಮಾ ನಿಗಮದ ವಹಿವಾಟಿಗೆ ಕತ್ತರಿ ಹಾಕಿದ ಕೇಂದ್ರ ಸರಕಾರಗಳು ಕ್ರಮೇಣ ಈ ಬೃಹತ್ ಸಂಸ್ಥೆಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಒಪ್ಪಿಸಲು ಸಿದ್ಧತೆ ನಡೆಸಿದ್ದವು. ಈ ಪ್ರಕ್ರಿಯೆಗೆ ಅಂತಿಮ ಸ್ಪರ್ಶವನ್ನು ಮೋದಿ ಸರಕಾರ ನೀಡುತ್ತಿದೆ. ಜೀವ ವಿಮಾ ನಿಗಮದ ಷೇರುಗಳನ್ನು ಮಾರಾಟ ಮಾಡುವ ಕೇಂದ್ರ ಸರಕಾರದ ಯೋಜನೆ ವಿಮಾ ಕ್ಷೇತ್ರದ ಶವಪೆಟ್ಟಿಗೆಯ ಮೊದಲ ಮೊಳೆಯಾಗಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕೊನೆಯ ಮೊಳೆ ಹೊಡೆಯಲು ಸರಕಾರ ಸಜ್ಜಾಗುತ್ತಿದೆ.

ಎಲ್‌ಐಸಿ ಭಾರತದ ಜನಸಾಮಾನ್ಯರ ಜೀವನಾಡಿಯಾಗಿ ನಾಡಿನಾದ್ಯಂತ ಪ್ರವಹಿಸಿದೆ. ಲಕ್ಷಾಂತರ ಕುಟುಂಬಗಳು ಈ ಸಂಸ್ಥೆಯ ಫಲಾನುಭವಿಗಳಾಗಿವೆ. ಲಕ್ಷಾಂತರ ಕಾರ್ಮಿಕರು ಈ ಬೃಹತ್ ಸಂಸ್ಥೆಯ ದನಿಯಾಗಿ, ನಾಡಿಯಾಗಿ, ನಾಡಿಮಿಡಿತವಾಗಿ ದೇಶದ ಮೂಲೆ ಮೂಲೆಗಳಿಗೂ ಸಂಚರಿಸಿ ಶ್ರಮಿಕರ ಬದುಕಿಗೆ ಒಂದು ಭರವಸೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 63 ವರ್ಷಗಳ ಸುದೀರ್ಘ ಪಯಣದಲ್ಲಿ ಎಲ್‌ಐಸಿಯ ಸಾಧನೆಯನ್ನು ವಿಮಾ ಕ್ಷೇತ್ರದ ಒಟ್ಟು ಪಾಲಿಸಿಗಳ ಪ್ರಮಾಣದಲ್ಲಿ ಕಾಣಬಹುದು. ಖಾಸಗೀಕರಣ, ವಿದೇಶಿ ಕಂಪೆನಿಗಳ ದಾಂಗುಡಿಯ ನಡುವೆಯೂ ಎಲ್‌ಐಸಿ ದೇಶದ ಒಟ್ಟು ಶೇ. 76ರಷ್ಟು ಪಾಲಿಸಿಗಳನ್ನು ವಿತರಿಸಿದೆ. ಈವರೆಗೂ 2 ಕೋಟಿ 15 ಲಕ್ಷ 58 ಸಾವಿರ ವಿಮೆ ಪಾಲಿಸಿಯನ್ನು ಪಾವತಿಸಿದೆ. ಈ ಪಾವತಿಗೆ ಎಲ್‌ಐಸಿ ನೀಡಿರುವ ಒಟ್ಟು ಹಣಕಾಸು ಮೊತ್ತ 1.13 ಲಕ್ಷ ಕೋಟಿ ರೂ.ಗಳು. ಶೇ. 99.63ರಷ್ಟು ಮರಣೋತ್ತರ ಪಾಲಿಸಿಗಳನ್ನು ಪಾವತಿ ಮಾಡಿದೆ. ಅವಧಿ ಮುಗಿದು ಪಾವತಿಸಿದ ವಿಮಾ ಪಾಲಿಸಿಗಳ ಪ್ರಮಾಣ ಶೇ 98.34ರಷ್ಟಿದೆ. ಪಾಲಿಸಿದಾರರಿಗೆ ಪಾವತಿಸಿರುವ ಹಣದ ಮೊತ್ತ 1.68 ಲಕ್ಷ ಕೋಟಿ ರೂ.ಗಳಷ್ಟಿದೆ.

ಈ ವಿರಾಟ್ ಸಾಧನೆ ಮತ್ತು ಶಿಖರಪ್ರಾಯ ಮುನ್ನಡೆಗೆ ಕಾರಣ ಈ ಸಂಸ್ಥೆಗಾಗಿ ಅಹರ್ನಿಶಿ ದುಡಿದಿರುವ ಲಕ್ಷಾಂತರ ಕಾರ್ಮಿಕರು ಮತ್ತು ಏಜೆಂಟರು. ಕೆಂಬಾವುಟ ಹಿಡಿದು ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುವ ಕಾರ್ಮಿಕರನ್ನು ಸಾರ್ವಜನಿಕ ಉದ್ದಿಮೆಗಳ ವಿನಾಶಕರಂತೆ ಕಾಣುವವರಿಗೆ ಈ ಸಾಧನೆಗಳು ಕಾಣುವುದಿಲ್ಲ ಎಂದರೆ ಅದು ದೃಷ್ಟಿದೋಷವಷ್ಟೇ. ಇಂದು ಇದೇ ಕಾರ್ಮಿಕರು ತಮ್ಮ ಭವಿಷ್ಯಕ್ಕಾಗಿ ಹೋರಾಡಲು ಸಜ್ಜಾಗುತ್ತಿದ್ದಾರೆ. ಏಕೆಂದರೆ ಕೇಂದ್ರ ಸರಕಾರ ವಿಮಾ ನಿಗಮವನ್ನು ಕಾರ್ಪೊರೇಟ್ ಮಡಿಲಿಗೆ ಒಪ್ಪಿಸುತ್ತಿದೆ. ಷೇರು ಮಾರಾಟ ಎಂದರೆ ಹಣಕಾಸು ಪರಿಭಾಷೆಯಲ್ಲಿ ಸಂಸ್ಥೆಯ ಸಮಾಧಿಗೆ ಭೂಮಿಪೂಜೆ ಎಂದೇ ಅರ್ಥ. ಸಾರ್ವಜನಿಕ ಬ್ಯಾಂಕುಗಳ ಷೇರುಗಳನ್ನು ಮಾರಾಟ ಮಾಡುವ ಮುಖಾಂತರ ಈ ವಿಲೀನ ಪ್ರಕ್ರಿಯೆಯ ಮೂಲಕ ಕ್ರಮೇಣ ಖಾಸಗೀಕರಣದತ್ತ ಸಾಗುತ್ತಿರುವುದನ್ನು ನೋಡಿದರೆ ವಿಮಾ ಕ್ಷೇತ್ರವೂ ಇದೇ ಮಾರ್ಗದಲ್ಲಿ ಹೋಗುವುದು ನಿಶ್ಚಿತವಾಗುತ್ತದೆ. ಇಲ್ಲಿ ಪ್ರಶ್ನೆ ಇರುವುದು ‘‘ಯೋಗಕ್ಷೇಮಂ ವಹಾಮ್ಯಹಂ’’ ಎಂಬ ಘೋಷವಾಕ್ಯದ ಮೂಲಕ ಆರು ದಶಕಗಳಿಗೂ ಹೆಚ್ಚು ಕಾಲ ಜನಸಾಮಾನ್ಯರ ಬದುಕಿಗೆ ಭರವಸೆ ನೀಡಿರುವ ಜೀವ ವಿಮಾ ನಿಗಮ ಇಂದು ಸ್ವತಃ ಅಸ್ತಂಗತವಾಗುವತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ ಈ ಸಂಸ್ಥೆಯ ಉಳಿವಿಗಾಗಿ ಹೋರಾಡುವುದು ಕೇವಲ ಕೆಂಬಾವುಟ ಹೊತ್ತ ವಿಮಾ ಕಾರ್ಮಿಕರ ಹೊಣೆಯೋ ಅಥವಾ ಕೆಂಪು ನೆತ್ತರಿನ ಸಾರ್ವಜನಿಕರ ಹೊಣೆಯೋ? ಇದು ಪ್ರಜ್ಞೆಗೆ ಬಿಟ್ಟ ವಿಚಾರ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ